ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಂಜಾ ಸಂತ್ರಸ್ತರಿಗೆ ಪರಿಹಾರ ಘೋಷಿಸದಿದ್ದರೆ ಪ್ರತಿಭಟನೆ ತೀವ್ರ: ಚಂದ್ರಶೇಖರ

ಎಕರೆಗೆ ₹ 20 ಲಕ್ಷ ಪರಿಹಾರ ನೀಡಲು ಒತ್ತಾಯ
Last Updated 20 ಸೆಪ್ಟೆಂಬರ್ 2018, 12:16 IST
ಅಕ್ಷರ ಗಾತ್ರ

ಬೀದರ್‌: ‘ಕಾರಂಜಾ ಯೋಜನೆಯಲ್ಲಿ ಕೃಷಿ ಭೂಮಿ ಹಾಗೂ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಒಂದು ವಾರದಲ್ಲಿ ಪರಿಹಾರ ಕಲ್ಪಿಸಲು ಕ್ರಮಕೈಗೊಳ್ಳದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು’ ಎಂದು ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಪಾಟೀಲ ಎಚ್ಚರಿಸಿದರು.

‘ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪುರ ಅವರು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಬಳಿ ಮುಖಂಡರ ನಿಯೋಗ ಒಯ್ದು ಸಂತ್ರಸ್ತರ ಸಮಸ್ಯೆಗಳನ್ನು ಅವರ ಗಮನಕ್ಕೆ ತರಲು ಪ್ರಯತ್ನಿಸಿದ್ದಾರೆ. ನಿಯೋಗದಲ್ಲಿ ಕೇವಲ ಐದು ಜನ ಮಾತ್ರ ಇದ್ದ ಕಾರಣ ನಮ್ಮೆಲ್ಲರ ಅಳಲು ತೋಡಿಕೊಳ್ಳಲು ಸಾಧ್ಯವಾಗಿಲ್ಲ’ ಎಂದು ನಗರದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪುರ ಹಾಗೂ ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ ಅವರು ಮುಖ್ಯಮಂತ್ರಿಯೊಂದಿಗೆ ಮುಖಾಮುಖಿ ಮಾತನಾಡಿಸಿರುವುದು ಸಂತಸದ ಸಂಗತಿಯಾಗಿದೆ. ಆದರೆ, ಸರ್ಕಾರದಿಂದ ಯಾವುದೇ ಭರವಸೆ ದೊರೆತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರಂಜಾ ಸಂತ್ರಸ್ತರು ಬೀದರ್‌ನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ 43 ದಿನಗಳಿಂದ ಅನಿರ್ದಿಷ್ಟಾವಧಿಯ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸರ್ಕಾರ ನಮ್ಮ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹೀಗಾಗಿ ಪತ್ರಲೇಖನ ಚಳವಳಿ, ಪಂಜಿನ ಮೆರವಣಿಗೆ, ಅರೆಬೆತ್ತಲೆ ಮೆರವಣಿಗೆ, ಕಪ್ಪುಪಟ್ಟಿ ಧರಿಸುವುದು ಹಾಗೂ ಧರಣಿ ಸ್ಥಳದಲ್ಲಿ ಕೇಶ ಮುಂಡನೆ ಮಾಡಿಕೊಳ್ಳುವ ಮೂಲಕ ಪ್ರತಿಭಟನೆ ಮುಂದುವರಿಸಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

‘ಧರಣಿ ನಂತರವೂ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ರೈಲು, ಹೆದ್ದಾರಿ ತಡೆ ನಡೆಸಲಾಗುವುದು. ಜಲಾಶಯದ ಕಾಲುವೆ ಕಾಮಗಾರಿಗಳಿಗೆ ತಡೆ ಒಡ್ಡಲಾಗುವುದು. ಕಾರಂಜಾ ಜಲಾಶಯಕ್ಕೆ ಮುತ್ತಿಗೆ ಹಾಕಿ ಜಲಾಶಯದ ನೀರು ಖಾಲಿ ಮಾಡಿ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.

‘ಕಾರಂಜಾ ಯೋಜನೆಯಲ್ಲಿ 28 ಗ್ರಾಮಗಳ 14,550 ಎಕರೆ ಕೃಷಿ ಭೂಮಿ ಮುಳುಗಡೆಯಾಗಿದೆ. ಒಂಬತ್ತು ಹಳ್ಳಿಗಳು ಪೂರ್ತಿಯಾಗಿ ಮುಳುಗಿವೆ. ಸಂತ್ರಸ್ತರಿಗೆ ಪ್ರತಿ ಎಕರೆಗೆ ₹ 2,900 ರಿಂದ ₹ 6,000 ಪರಿಹಾರ ನೀಡಲಾಗಿದೆ. ನ್ಯಾಯಾಲಯದ ಮೊರೆ ಹೋದವರಿಗೆ ಹೆಚ್ಚು ಪರಿಹಾರ ದೊರೆತಿದೆ’ ಎಂದು ತಿಳಿಸಿದರು.

‘ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಕಾರಂಜಾ ಸಂತ್ರಸ್ತರ ದುಸ್ಥಿತಿಗೆ ಕಾರಣವಾಗಿದೆ. ರೈತನ ನೈಜಸ್ಥಿತಿ ಅರಿತು ಹೆಚ್ಚಿನ ಪರಿಹಾರ ಕೊಡಬೇಕು. ಕೃಷಿ ಭೂಮಿ ಕಳೆದುಕೊಂಡ ರೈತರಿಗೆ ಒಂದು ಎಕರೆಗೆ ₹ 20 ಲಕ್ಷ ಪರಿಹಾರ ಕೊಡಬೇಕು’ ಎಂದು ಒತ್ತಾಯಿಸಿದರು.

ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯ ಕಾರ್ಯಾಧ್ಯಕ್ಷ ಜಿಲಾನಿ ಪಟೇಲ್ ಹಿಲಾಲಪುರ, ಪ್ರಧಾನ ಕಾರ್ಯದರ್ಶಿ ನಾಗಶೆಟ್ಟೆಪ್ಪ ಹಚ್ಚಿ, ಶಿವಶರಣಪ್ಪ ಪಾಟೀಲ, ಜಂಟಿ ಕಾರ್ಯದರ್ಶಿ ದತ್ತಾತ್ರಿರಾವ್‌ ಕುಲಕರ್ಣಿ ಬಾವಗಿ, ವೀರಭದ್ರಪ್ಪ ಉಪ್ಪಿನ, ವಿಜಯಕುಮಾರ ಕುಲಕರ್ಣಿ, ಶಂಕರರಾವ್‌ ದೇವಣ್ಣ, ವೈಜಿನಾಥ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT