ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌: ನೆಲದಾಳದ ವಿಸ್ಮಯ ರಕ್ಷಣೆಗೆ ಬಂತು ಕಾಲ

‘ಕರೇಜ್’ ‘ಬಫರ್‌ ಜೋನ್‌’ ಗುರುತಿಸಿ ಹದ್ದು ಬಸ್ತು ಮಾಡುವ ಕೆಲಸ ಆರಂಭ
Published 28 ಆಗಸ್ಟ್ 2024, 4:45 IST
Last Updated 28 ಆಗಸ್ಟ್ 2024, 4:45 IST
ಅಕ್ಷರ ಗಾತ್ರ

ಬೀದರ್‌: ನೆಲದಾಳದ ವಿಸ್ಮಯವೆಂದೆ ಕರೆಸಿಕೊಳ್ಳುವ ನಗರದಲ್ಲಿನ ‘ಕರೇಜ್‌’ ಸಂರಕ್ಷಣಾ ಕಾರ್ಯಕ್ಕೆ ಕೊನೆಗೂ ಕಾಲ ಕೂಡಿ ಬಂದಿದೆ.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರ ಸೂಚನೆ ಮೇರೆಗೆ ‘ಕರೇಜ್‌’ ‘ಬಫರ್‌ ಜೋನ್‌’ ಗುರುತಿಸಿ ಅದನ್ನು ಹದ್ದು ಬಸ್ತು ಮಾಡುವ ಕೆಲಸಕ್ಕೆ ಮಂಗಳವಾರ ವಿದ್ಯುಕ್ತ ಚಾಲನೆ ನೀಡಲಾಗಿದೆ.

ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶ್ರೀಕಾಂತ ಚಿಮಕೋಡೆ, ಎಂಜಿನಿಯರ್‌ ಚಂದ್ರಕಾಂತ ರೆಡ್ಡಿ, ನಿರ್ಮಿತಿ ಕೇಂದ್ರದ ಎಂಜಿನಿಯರ್‌ ಓಂಕಾರ ಕೆ., ನಗರಸಭೆ ಕಿರಿಯ ಎಂಜಿನಿಯರ್‌ ಫಹಿಮುದ್ದೀನ್‌, ‘ಟೀಮ್‌’ ಯುವ ಸಂಯೋಜಕ ವಿನಯ್‌ ಮಾಳಗೆ, ಹರ್ಷವರ್ಧನ್‌ ರಾಠೋಡ್‌, ಎಂ.ಎ. ಸಮದ್‌ ಅವರನ್ನು ಒಳಗೊಂಡ ತಂಡ ಮಂಗಳವಾರ ಕೆಲಸ ಆರಂಭಿಸಿದೆ.

ನಗರದ ಅಲಿಯಾಬಾದ್‌ ಸಮೀಪದ ಸಿದ್ದೇಶ್ವರ ದೇವಸ್ಥಾನದಿಂದ 11ನೇ ತೆರೆದ ಬಾವಿ (ವೆಂಟ್‌) ಇರುವ ಪ್ರದೇಶದ ಎರಡೂ ಕಡೆಗಳಲ್ಲಿ ಸರ್ವೇ ಮಾಡಿ ಮಾರ್ಕ್‌ಔಟ್‌ ಮಾಡಲಾಯಿತು. ‘ಮೊದಲ ದಿನ ಶೇ 50ರಷ್ಟು ಕೆಲಸವಾಗಿದೆ. ಇನ್ನುಳಿದ ಕೆಲಸ ಶೀಘ್ರದಲ್ಲೇ ಕೊನೆಗೊಳ್ಳಲಿದೆ. ಬಫರ್‌ ಜೋನ್‌ ಮಧ್ಯದಿಂದ ಎರಡೂ ಕಡೆ ಹತ್ತು ಮೀಟರ್‌ ವರೆಗೆ ಜಾಗ ಮೀಸಲಿಟ್ಟು, ಗುರುತಿನ ಕಲ್ಲುಗಳನ್ನು ನೆಟ್ಟು ಹದ್ದು ಬಸ್ತು ಮಾಡಲಾಗಿದೆ. ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜಂಟಿಯಾಗಿ ಕೆಲಸ ಮಾಡಲಾಗುತ್ತಿದೆ’ ಎಂದು ಎಂಜಿನಿಯರ್‌ಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಕರೇಜ್‌ ಸಂರಕ್ಷಣ ಕಾರ್ಯ ನಡೆಯಬೇಕೆಂಬ ನಮ್ಮ ಹಲವು ವರ್ಷಗಳ ಬೇಡಿಕೆಗೆ ಸ್ಪಂದನೆ ದೊರೆತಿದೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ನಮ್ಮೊಂದಿಗೆ ಸಭೆ ನಡೆಸಿದ ನಂತರ ಕೆಲಸಕ್ಕೆ ಚಾಲನೆ ಕೊಡಿಸಿದ್ದಾರೆ. ತಡವಾಗಿಯಾದರೂ ಕೆಲಸ ಆರಂಭಗೊಂಡಿರುವುದು ಸಂತಸದ ಸಂಗತಿ. ತಜ್ಞರ ಅಭಿಪ್ರಾಯ ಪಡೆದು ಅದಕ್ಕೆ ಪೂರಕವಾದ ಕೆಲಸಗಳನ್ನು ಕೈಗೆತ್ತಿಕೊಳ್ಳುವುದು ಸೂಕ್ತ’ ಎಂದು ‘ಟೀಮ್‌ ಯುವ’ ಸಂಯೋಜಕ ವಿನಯ್‌ ಮಾಳಗೆ ಪ್ರತಿಕ್ರಿಯಿಸಿದ್ದಾರೆ.

‘ಕರೇಜ್‌’ ಹಾದು ಹೋಗಿರುವ ಪ್ರದೇಶದ 100 ಮೀಟರ್‌ನೊಳಗೆ ಎಗ್ಗಿಲ್ಲದೆ ನಿರ್ಮಾಣ ಚಟುವಟಿಕೆಗಳು ನಡೆಯುತ್ತಿವೆ. ಈಗಾಗಲೇ ಗುರುತಿಸಿ ಅಭಿವೃದ್ಧಿಪಡಿಸಿದ್ದ ಏಳು ‘ವೆಂಟ್ಸ್‌’ಗಳಲ್ಲಿ ಜನ ತ್ಯಾಜ್ಯ ತಂದು ಸುರಿಯುತ್ತಿದ್ದಾರೆ. ಯಾರೂ ಕೂಡ ಅದನ್ನು ತಡೆಯುವ ಕೆಲಸ ಮಾಡುತ್ತಿಲ್ಲ. ಇನ್ನು, ಅಲಿಯಾಬಾದ್‌ ಸಮೀಪದ ‘ಕರೇಜ್‌’ ಒಳಹೋಗುವ ಮಾರ್ಗದಲ್ಲೆಲ್ಲಾ ಸಾಕಷ್ಟು ಪೊದೆ ಬೆಳೆದು ನಿಂತಿದೆ. ಅನೇಕ ವಿಷ ಜಂತುಗಳು ಅದರೊಳಗೆ ಸೇರಿಕೊಳ್ಳುತ್ತಿವೆ. ಆದರೆ, ಅದನ್ನು ಸಂರಕ್ಷಿಸುವ ಕೆಲಸವಾಗುತ್ತಿಲ್ಲ. ‘ಕರೇಜ್‌ ವಿಸ್ಮಯ; ಮಣ್ಣಲ್ಲಿ ಮಣ್ಣಾಗದಿರಲಿ’ ಶೀರ್ಷಿಕೆ ಅಡಿ ‘ಪ್ರಜಾವಾಣಿ’ 2023ರ ಜುಲೈ 30ರಂದು ವರದಿ ಪ್ರಕಟಿಸಿತ್ತು. ಇರಾನ್‌ ಬಿಟ್ಟರೆ ಕರೇಜ್‌ ಇರುವುದು ಬೀದರ್‌ನಲ್ಲಷ್ಟೇ. ಈ ಕಾರಣದಿಂದ ಇದು ಸಾಕಷ್ಟು ಮಹತ್ವ ಪಡೆದಿದೆ.

ಕರೇಜ್‌ ಹದ್ದು ಬಸ್ತು ಮಾಡುತ್ತಿರುವುದು ಉತ್ತಮ ಕೆಲಸ. ಶೀಘ್ರದಲ್ಲೇ ಅಧಿಕಾರಿಗಳ ತಂಡ ರಚಿಸಿ ತಜ್ಞರ ಸಲಹೆ ಪಡೆದು ಮುಂದುವರಿಯಬೇಕು
ವಿನಯ್‌ ಮಾಳಗೆ ಸಂಯೋಜಕ ‘ಟೀಮ್‌ ಯುವ’

ಎಂಟು ವರ್ಷಗಳ ನಂತರ...

15ನೇ ಶತಮಾನದಲ್ಲಿ ಬಹಮನಿ ಅರಸರ ಕಾಲದಲ್ಲಿ ನಿರ್ಮಾಣಗೊಂಡ ‘ಕರೇಜ್‌’ 3 ಕಿ.ಮೀ ಪ್ರದೇಶದಲ್ಲಿ ವ್ಯಾಪಿಸಿಕೊಂಡಿದೆ. ಇದರ ನಿರ್ವಹಣೆಗೆ ಹಾಗೂ ಗಾಳಿ ಬೆಳಕಿನ ವ್ಯವಸ್ಥೆಗೆ 27 ತೆರೆದ ಬಾವಿಗಳನ್ನು (ವೆಂಟ್ಸ್‌) ಕಟ್ಟಿಸಿದ್ದರು. ಈ ಪೈಕಿ ಏಳು ‘ವೆಂಟ್ಸ್‌’ಗಳನ್ನು ಗುರುತಿಸಲಾಗಿದೆ. ಜೊತೆಗೆ ಈ ‘ವೆಂಟ್ಸ್‌’ ಹಾಗೂ ‘ಕರೇಜ್‌’ ಹಾದು ಹೋಗಿರುವ 100 ಮೀಟರ್‌ ಸುತ್ತಮುತ್ತಲಿನ ಪ್ರದೇಶವನ್ನು ‘ಬಫರ್‌ ಜೋನ್‌’ ಎಂದು ಗುರುತಿಸಿ ಕಲ್ಲುಗಳನ್ನು ನೆಡಲಾಗಿತ್ತು. ಎಲ್ಲ ರೀತಿಯ ನಿರ್ಮಾಣ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿತ್ತು. ಅಂದಿನ ಜಿಲ್ಲಾಧಿಕಾರಿ ಅನುರಾಗ ತಿವಾರಿ ಅವರು ವಿಶೇಷ ಆಸಕ್ತಿ ವಹಿಸಿ ಈ ಕೆಲಸಕ್ಕೆ ಪ್ರೋತ್ಸಾಹ ಕೊಟ್ಟಿದ್ದರು. ಆದರೆ 2017ರ ನಂತರ ಬಂದ ಜಿಲ್ಲಾಧಿಕಾರಿಗಳು ಇದರ ಬಗ್ಗೆ ಹೆಚ್ಚಿನ ಕಾಳಜಿ ತೋರಿಸಲಿಲ್ಲ. ಈಗ ಎಂಟು ವರ್ಷಗಳ ತರುವಾಯ ಪುನಃ ಅದರ ಸಂರಕ್ಷಣೆಯ ನಿಟ್ಟಿನಲ್ಲಿ ಕೆಲಸಗಳು ಆರಂಭಗೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT