ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Budget 2024 | ಬೀದರ್‌: ನಿರೀಕ್ಷೆ ಭರಪೂರ, ಸಿಕ್ಕಿದ್ದು ಸಮಾಧಾನಕರ

ಬೀದರ್‌–ಬೆಂಗಳೂರು ಆರ್ಥಿಕ ಕಾರಿಡಾರ್‌; ಕಾರಂಜಾ ಸಂತ್ರಸ್ತರಿಗೆ ಸಿಗದ ವಿಶೇಷ ಪ್ಯಾಕೇಜ್‌
Published 17 ಫೆಬ್ರುವರಿ 2024, 8:21 IST
Last Updated 17 ಫೆಬ್ರುವರಿ 2024, 8:21 IST
ಅಕ್ಷರ ಗಾತ್ರ

ಬೀದರ್‌: ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ಬೀದರ್‌ ಜಿಲ್ಲೆಗೆ ಹೆಚ್ಚಿನ ಯೋಜನೆ, ಅನುದಾನಗಳು ಸಿಗಬಹುದು ಎಂಬ ಭರಪೂರ ನಿರೀಕ್ಷೆಗಳಿದ್ದವು. ಆದರೆ, ಸಮಾಧಾನಕರ ಬಹುಮಾನ ಎಂಬಂತೆ ಕೆಲವು ಯೋಜನೆಗಳನ್ನು ಜಿಲ್ಲೆಗೆ ಘೋಷಿಸಲಾಗಿದೆ.

ಇದರಲ್ಲಿ ಪ್ರಮುಖವಾದುದು ಬೀದರ್‌–ಬೆಂಗಳೂರು ಆರ್ಥಿಕ ಕಾರಿಡಾರ್‌. ಉದ್ಯೋಗಾವಕಾಶಗಳನ್ನು ಸೃಷ್ಟಿಸಿ, ಗ್ರಾಮೀಣ ಆರ್ಥಿಕತೆ ಬಲಪಡಿಸುವ ಉದ್ದೇಶ ಈ ಯೋಜನೆ ಹೊಂದಿದೆ. ಆದರೆ, ನಿರ್ದಿಷ್ಟ ಗಡುವಿನೊಳಗೆ ಪರಿಣಾಮಕಾರಿ ಅನುಷ್ಠಾನದ ಅಗತ್ಯವಿದೆ. ಇದರ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಬರೀ ಘೋಷಣೆಗೆ ಸೀಮಿತವಾಗದಿರಲಿ ಎಂಬುದು ಜನರ ಒತ್ತಾಸೆ.

ಇನ್ನೊಂದು ಪ್ರಮುಖ ಘೋಷಣೆ. ಔರಾದ್‌ ತಾಲ್ಲೂಕಿನಲ್ಲಿ ಕೆರೆ ತುಂಬಿಸುವುದು. ಔರಾದ್ ತಾಲ್ಲೂಕಿನ ಬಹುತೇಕ ಹಳ್ಳಿಗಳು ಮಹಾರಾಷ್ಟ್ರ, ತೆಲಂಗಾಣದೊಂದಿಗೆ ಗಡಿ ಹಂಚಿಕೊಂಡಿವೆ. ಹೆಚ್ಚಿನ ಭಾಗಗಳು ಮಳೆಯನ್ನೇ ಆಶ್ರಯಿಸಿವೆ. ಕೆರೆ ತುಂಬಿಸುವ ಯೋಜನೆ ಸಮರ್ಪಕವಾಗಿ ಜಾರಿಯಾದರೆ ಅಂತರ್ಜಲ ಮಟ್ಟ ಹೆಚ್ಚಾಗಬಹುದು. ಕೃಷಿ ಚಟುವಟಿಕೆಗಳಿಗೂ ಪೂರಕವಾಗಬಹುದು.

ಬೀದರ್‌–ಭಾಲ್ಕಿ ರಸ್ತೆಯಲ್ಲಿರುವ ಹೊನ್ನಿಕೇರಿ ಮೀಸಲು ಅರಣ್ಯ ಪ್ರದೇಶದಲ್ಲಿ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳುವುದಾಗಿ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದರು. ಈಗ ಅದಕ್ಕೆ ಬಜೆಟ್‌ನಲ್ಲಿ ₹15 ಕೋಟಿ ಅನುದಾನ ನೀಡಲಾಗಿದೆ. ನಿಂತು ಹೋಗಿದ್ದ ‘ಕರೇಜ್‌’ ಪುನಶ್ಚೇತನ ಕಾರ್ಯಕ್ಕೂ ಚಾಲನೆ ನೀಡಲು ಮುಂದಾಗಿರುವುದು ಮಹತ್ವದ ಕೆಲಸ. ಬೀದರ್‌ ಹಾಗೂ ವಿಜಯಪುರ ಜಿಲ್ಲೆಯಲ್ಲಿ ‘ಕರೇಜ್‌’ ಪುನಶ್ಚೇತನಕ್ಕೆ ₹15 ಕೋಟಿ ಅನುದಾನ ಮೀಸಲಿಡಲಾಗಿದೆ. ಇಷ್ಟೇ ಅಲ್ಲ, ನುರಿತ ಸಂಸ್ಥೆಗಳ ತಾಂತ್ರಿಕ ನೆರವಿನೊಂದಿಗೆ ಕೆಲಸ ಮಾಡಲು ನಿರ್ಧರಿಸುವುದು ವಿಶೇಷ. ಈ ಕುರಿತು ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ಅದಾದ ಬಳಿಕ ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ ಅವರು ಖುದ್ದು ಸ್ಥಳಕ್ಕೆ ಭೇಟಿ ನೀಡಿದ್ದರು. ಇದಕ್ಕಾಗಿ ಸತತ ಶ್ರಮಿಸುತ್ತಿರುವ ‘ಟೀಮ್‌ ಯುವ’ ತಂಡಕ್ಕೂ ಸಮಾಧಾನ ಸಿಕ್ಕಂತಾಗಿದೆ.

ಬೀದರ್‌ನಲ್ಲಿ ಜಿಲ್ಲಾಡಳಿತ ಭವನ ನಿರ್ಮಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ. ಆದರೆ, ಈಗಾಗಲೇ ಸಚಿವ ಖಂಡ್ರೆಯವರು ಅದರ ಬಗ್ಗೆ ಹೇಳಿರುವುದರಿಂದ ಅದರಲ್ಲಿ ವಿಶೇಷವೇನೂ ಇಲ್ಲ.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ವಿಶ್ವವಿದ್ಯಾಲಯಗಳ ಘಟಕ/ಕಾಲೇಜು ಅಗತ್ಯ ಇರುವ ಕಡೆಗಳಲ್ಲಿ ಸ್ಥಾಪಿಸುವುದು, 2025–26ನೇ ಸಾಲಿನಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಸ್ಥಾಪಿಸಿ, ಕಡಿಮೆ ದರದಲ್ಲಿ ಸೌಲಭ್ಯ ಕಲ್ಪಿಸುವುದು, ಬೀದರ್‌ ಗುರುದ್ವಾರ ಅಭಿವೃದ್ಧಿಗೆ ₹1 ಕೋಟಿ ಅನುದಾನ ಮೀಸಲು, ಸಾರಿಗೆ ಇಲಾಖೆಯಲ್ಲಿ ನೋಂದಣಿಯಾಗಿರುವ ಎಲ್ಲಾ ವಾಹನಗಳ ದಾಖಲಾತಿಗಳ ಡಿಜಿಟಲೀಕರಣ ಯೋಜನೆ ಪ್ರಾಯೋಗಿಕ ಜಾರಿಗೆ ಭಾಲ್ಕಿ ಆಯ್ಕೆ ಮಾಡಿರುವುದು ಬಜೆಟ್‌ನಲ್ಲಿ ಜಿಲ್ಲೆಗೆ ಒಲಿದ ಯೋಜನೆಗಳು.

ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳಿಗೆ ಅನುದಾನ, ಕಾರಂಜಾ ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್‌, ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ ಸಿಗಬಹುದು ಎಂಬ ನಿರೀಕ್ಷೆಗಳಿದ್ದವು. ಆದರೆ, ಅದೆಲ್ಲ ಹುಸಿಯಾಗಿದೆ. ಇಷ್ಟೇ ಅಲ್ಲ, ಹೋದ ಸಾಲಿನ ಬಜೆಟ್‌ನಲ್ಲಿ ಬೀದರ್‌ ಮಹಾನಗರ ಪಾಲಿಕೆ ಘೋಷಿಸುವ ಪ್ರಸ್ತಾವ ಇಡಲಾಗಿತ್ತು. ಜಿಲ್ಲೆಯವರೇ ಆದ ಪೌರಾಡಳಿತ ಸಚಿವ ರಹೀಂ ಖಾನ್‌ ಅವರು ಸಂಪುಟ ದರ್ಜೆ ಸಚಿವರಾಗಿದ್ದರೂ ಈ ಬಜೆಟ್‌ನಲ್ಲಿ ಅದರ ಬಗ್ಗೆ ಸಿ.ಎಂ. ಚಕಾರ ಎತ್ತಿಲ್ಲ. ಬೀದರ್‌ ನಗರ ಬಹಳ ವೇಗವಾಗಿ ಬೆಳೆಯುತ್ತಿದ್ದು, ಮೂಲಸೌಕರ್ಯಗಳು ಬೇಕಿವೆ. ಆದರೆ, ಆ ನಿಟ್ಟಿನಲ್ಲಿ ಗಮನ ಹರಿಸಿಲ್ಲ. ಹಿಂದೆ ಘೋಷಿಸಿದ ಹೊಸ ತಾಲ್ಲೂಕುಗಳ ಅಭಿವೃದ್ಧಿಗೂ ಒತ್ತು ಕೊಟ್ಟಿಲ್ಲ.

ಜಿಲ್ಲೆಯ ಇಬ್ಬರು ಸಚಿವರಿದ್ದರೂ ಜಿಲ್ಲೆಗೆ ಸಿಗಬೇಕಾದ ಯೋಜನೆಗಳು ಸಿಕ್ಕಿಲ್ಲ ಎಂಬ ಕೊರಗು ಸಾರ್ವಜನಿಕರದ್ದಾಗಿದೆ. 600ಕ್ಕೂ ಹೆಚ್ಚು ದಿನಗಳಿಂದ ಕಾರಂಜಾ ಸಂತ್ರಸ್ತರು ವಿಶೇಷ ಪ್ಯಾಕೇಜ್‌ ಘೋಷಿಸಬೇಕೆಂದು ಧರಣಿ ನಡೆಸುತ್ತಿದ್ದಾರೆ. ಅದಕ್ಕೂ ಬಜೆಟ್‌ನಲ್ಲಿ ಸ್ಪಂದನೆ ಸಿಕ್ಕಿಲ್ಲ. ಇನ್ನು, ಅಂತರರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವಾಗಿ ರೂಪಿಸಲು ಬಸವಕಲ್ಯಾಣಕ್ಕೆ ವಿಶೇಷ ಅನುದಾನ ಕೊಡಬೇಕು. ವಚನ ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂಬ ಬೇಡಿಕೆಗೂ ಮಣೆ ಹಾಕಿಲ್ಲ.

ಸಹಜವಾಗಿಯೇ ಬಜೆಟ್‌ ಬಗ್ಗೆ ಆಡಳಿತರೂಢ ಪಕ್ಷದ ಮುಖಂಡರು ಮೆಚ್ಚುಗೆಯ ಮಾತುಗಳನ್ನು ಆಡಿದರೆ, ವಿರೋಧ ಪಕ್ಷದವರು ಟೀಕಿಸಿದ್ದಾರೆ. 

ಬೀದರ್‌ನ ‘ಕರೇಜ್‌’ ಅಭಿವೃದ್ಧಿಗೆ ರಾಜ್ಯ ಸರ್ಕಾರ ₹15 ಕೋಟಿ ಅನುದಾನ ಮೀಸಲಿಟ್ಟಿದೆ. ಸ್ವಚ್ಛತೆಯಲ್ಲಿ ತೊಡಗಿರುವ ‘ಟೀಮ್‌ ಯುವ’ ಸದಸ್ಯರು. 
ಬೀದರ್‌ನ ‘ಕರೇಜ್‌’ ಅಭಿವೃದ್ಧಿಗೆ ರಾಜ್ಯ ಸರ್ಕಾರ ₹15 ಕೋಟಿ ಅನುದಾನ ಮೀಸಲಿಟ್ಟಿದೆ. ಸ್ವಚ್ಛತೆಯಲ್ಲಿ ತೊಡಗಿರುವ ‘ಟೀಮ್‌ ಯುವ’ ಸದಸ್ಯರು. 

ಬಜೆಟ್‌ನಲ್ಲಿ ಜಿಲ್ಲೆಗೆ ಹಲವು ಕೊಡುಗೆ ಕೊಟ್ಟಿದ್ದಾರೆ. ಆದರೆ ಕೆಲ ವಿಷಯಗಳಲ್ಲಿ ನಿರ್ಲಕ್ಷಿಸಲಾಗಿದೆ. ನಾಯಕರ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ.

–ವಿಠಲದಾಸ ಪ್ಯಾಗೆ ಸಾಮಾಜಿಕ ಹೋರಾಟಗಾರ

ಜಿಲ್ಲಾಡಳಿತ ಭವನ ಘೋಷಿಸಿರುವುದು ಸ್ವಾಗತಾರ್ಹ. ಆದರೆ ಅದಕ್ಕೆ ಅನುದಾನ ಘೋಷಿಸಿಲ್ಲ.ಮೂಲಸೌಕರ್ಯಕ್ಕೂ ಒತ್ತು ಕೊಟ್ಟಿಲ್ಲ. ನಿರಾಸೆ ಮೂಡಿಸಿದೆ.

–ಬಿ.ಜಿ. ಶೆಟಕಾರ ಅಧ್ಯಕ್ಷ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ

ಬೀದರ್ ಜಿಲ್ಲೆಗೆ ಸಿಕ್ಕಿದ್ದೇನು?

* ಬೀದರ್‌–ಬೆಂಗಳೂರು ಆರ್ಥಿಕ ಕಾರಿಡಾರ್‌

* ಬೀದರ್‌ ಕರೇಜ್‌ ಪುನಶ್ಚೇತನ. ₹15 ಕೋಟಿಯಲ್ಲಿ ನುರಿತ ಸಂಸ್ಥೆಗಳ ತಾಂತ್ರಿಕ ನೆರವಿನೊಂದಿಗೆ ಕೆಲಸ

* ಬೀದರ್‌ ಗುರುದ್ವಾರ ಅಭಿವೃದ್ಧಿಗೆ ₹1 ಕೋಟಿ

* ಬೀದರ್‌ ಜಿಲ್ಲಾಡಳಿತ ಭವನ ನಿರ್ಮಾಣ

* ಹೊನ್ನಿಕೇರಿ ಮೀಸಲು ಅರಣ್ಯ ಪ್ರದೇಶದಲ್ಲಿ ಪರಿಸರ ಪ್ರವಾಸೋದ್ಯಮ ₹15 ಕೋಟಿ ಅನುದಾನ

* ಔರಾದ್‌ ತಾಲ್ಲೂಕಿನಲ್ಲಿ ಕೆರೆ ತುಂಬಿಸುವ ಯೋಜನೆ ಅನುಷ್ಠಾನ

* ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ವಿಶ್ವವಿದ್ಯಾಲಯಗಳ ಘಟಕ/ಕಾಲೇಜು ಅಗತ್ಯ ಇರುವ ಕಡೆಗಳಲ್ಲಿ ಸ್ಥಾಪನೆ

* 2025–26ನೇ ಸಾಲಿನಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಸ್ಥಾಪನೆ. ಕಡಿಮೆ ದರದಲ್ಲಿ ಸೌಲಭ್ಯ

* ಸಾರಿಗೆ ಇಲಾಖೆಯಲ್ಲಿ ನೋಂದಣಿಯಾಗಿರುವ ಎಲ್ಲಾ ವಾಹನಗಳ ದಾಖಲಾತಿಗಳ ಡಿಜಿಟಲೀಕರಣ ಯೋಜನೆ ಪ್ರಾಯೋಗಿಕ ಜಾರಿಗೆ ಭಾಲ್ಕಿ ಆಯ್ಕೆ

ನಿರೀಕ್ಷೆ ಏನಿತ್ತು?

* ಮಹಾನಗರ ಪಾಲಿಕೆ ಘೋಷಣೆ

* ನೀರಾವರಿ ಯೋಜನೆಗಳಿಗೆ ಅನುದಾನ

* ಕಾರಂಜಾ ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್‌

* ಬಸವಕಲ್ಯಾಣಕ್ಕೆ ಹೆಚ್ಚಿನ ಅನುದಾನ

* ವಚನ ವಿಶ್ವವಿದ್ಯಾಲಯ ಸ್ಥಾಪನೆ

* ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT