ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್: ಮಹಿಳೆಯರ ಬದುಕಿಗೆ ಆಸರೆಯಾದ ಖಡಕ್ ರೊಟ್ಟಿ

Last Updated 5 ಡಿಸೆಂಬರ್ 2021, 5:54 IST
ಅಕ್ಷರ ಗಾತ್ರ

ಔರಾದ್: ಇಲ್ಲಿಯ ಸ್ವಸಹಾಯ ಗುಂಪಿನ ಮಹಿಳೆಯರಿಗೆ ಖಡಕ್ ರೊಟ್ಟಿ ವ್ಯಾಪಾರ ಸ್ವಾಲಂಬಿ ಬದುಕಿಗೆ ಆಸರೆಯಾಗಿದೆ.

ಕನಕ ಗಲ್ಲಿಯಲ್ಲಿ ಇರುವ ಜ್ಞಾನೋದಯ ಸ್ವಸಹಾಯ ಸಂಘದ ಮಹಿಳೆಯರು ಹೆಚ್ಚಿನ ಶಿಕ್ಷಣ ಪ‍ಡೆದವರಲ್ಲ. ನಿತ್ಯ ಖಡಕ್ ರೊಟ್ಟಿ ತಯಾರಿಸಿ ಅವುಗಳನ್ನು ಖಾನಾವಳಿ, ಹೋಟೆಲ್‌, ಶುಭ ಸಮಾರಂಭಗಳಿಗೆ ಪೂರೈಸಿ ಆರ್ಥಿಕ ಸ್ವಾಲಂಬನೆ ಸಾಧಿಸಿದ್ದಾರೆ. ಚಪಾತಿಗೆ ಬೇಡಿಕೆ ಬಂದರೂ ಅವುಗಳನ್ನು ಸಿದ್ಧಪಡಿಸಿ ರವಾನಿಸುತ್ತಾರೆ.

8 ವರ್ಷಗಳ ಹಿಂದೆ ವಾರಕ್ಕೆ ₹20 ಸಂಗ್ರಹಿಸುತ್ತಿದ್ದ ಮಹಿಳಾ ಸಂಘ, ಈಗ ₹15 ಲಕ್ಷದಷ್ಟು ವಹಿವಾಟು ನಡೆಸುತ್ತಿದ್ದಾರೆ. ಈ ಮೂಲಕ ತಮ್ಮ ಸಂಘದ ವ್ಯವಹಾರಿಕ ಸಾಮರ್ಥ ಸಮಾಜಕ್ಕೆ ತೋರಿಸಿದ್ದಾರೆ.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನೆರವಿನಿಂದ ₹1.20 ಲಕ್ಷದಲ್ಲಿ ರೊಟ್ಟಿ ಯಂತ್ರ ಖರೀದಿಸಿದ್ದರು. 4 ವರ್ಷ ಶ್ರಮಪಟ್ಟು ಸಂಸ್ಥೆಯ ಸಾಲ ಪಾವತಿಸಿ, ಮತ್ತೆ ಸಾಲ ₹1 ಲಕ್ಷ ಸಾಲ ಸ್ವೀಕರಿಸಿದ್ದಾರೆ. ಸಂಘದ ಖಾತೆಯಲ್ಲಿ ₹1 ಲಕ್ಷ ಉಳಿಸಿಕೊಂಡಿದ್ದಾರೆ.

ಕೋವಿಡ್ ಸಂಕಷ್ಟದ ಅವಧಿಯಲ್ಲೂ ವರ್ಷಕ್ಕೆ ₹2ಲಕ್ಷ ವಹಿವಾಟು ನಡೆಯುತ್ತಿದೆ. ರೊಟ್ಟಿ ಜತೆಗೆ ಇವರು ತಯಾರಿಸುವ ಧಪಾಟಿ, ಶೇಂಗಾ ಹೋಳಿಗೆ, ಶೇಂಗಾ ಚಟ್ನಿ, ಅಗಸಿ ಚಟ್ನಿಗೂ ಒಳ್ಳೆಯ ಬೇಡಿಕೆ ಇದೆ. ಬೀದರ್, ಜಹಿರಾಬಾದ್, ಉದಗೀರ್, ಲಾತೂರ್ ಸೇರಿದಂತೆ ಇತರೆ ಕಡೆಗೂ ಮಾರಾಟ ಆಗುತ್ತಿದೆ.

‘ಜೋಳದ ರೊಟ್ಟಿಗೆ ರಾಜ್ಯದ ಹೊರಗೂ ಬೇಡಿಕೆ ಬರುತ್ತಿದೆ. ದೂರವಾಣಿ ಕರೆ ಮಾಡಿ, ವಿಳಾಸ ನೀಡುವ ಗ್ರಾಹಕರಿಗೆ ತಲುಪಿಸುತ್ತಿದ್ದೇವೆ. ಹೆಚ್ಚಿನ ಬೇಡಿಕೆ ಬಂದರೂ ಅದನ್ನು ಪೂರೈಸುವ ವ್ಯವಸ್ಥೆಯನ್ನು ಮಾಡಿಕೊಂಡಿದ್ದೇವೆ’ ಎನ್ನುತ್ತಾರೆ ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ.

‘ನಮಗೆ ಸಂಘ ಎಂಬುದರ ಬಗ್ಗೆ ತಿಳಿದಿರಲಿಲ್ಲ. ಆ ಬಗ್ಗೆ ಸ್ಪಷ್ಟ ಮಾಹಿತಿ ಕೊಟ್ಟವರು ಧರ್ಮಸ್ಥಳ ಸಂಸ್ಥೆಯವರು. ಅವರ ನೆರವಿನಿಂದಾಗಿ ನಾವು ಈಗ ಆರ್ಥಿಕ ಸದೃಢತೆ ಪಡೆದಿದ್ದೇವೆ. ನಮ್ಮ ಸ್ವಂತ ಬಲದ ಮೇಲೆ ಬದುಕಬಹುದು ಎಂಬ ವಿಶ್ವಾಸ ಮೂಡಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವಷ್ಟು ಆರ್ಥಿಕ ಶಕ್ತಿಯೂ ಬಂದಿದೆ’ ಎಂದು ಸಂಘದ ಸದಸ್ಯೆ ಮಹಾನಂದಾ ಮಜಗೆ, ರೇಷ್ಮಾ ಮುಳೆ ಅವರು ನುಡಿದರು.

‘ಅತ್ಯಂತ ಕ್ರಿಯಾಶೀಲವಾದ ಜ್ಞಾನೋದಯ ಸಂಘವು, ಹಣ ಗಳಿಕೆಯ ಜತೆಗೆ ಅತ್ಯುತ್ತಮ ಸಂವಹನ ಕಲೆಯನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಉತ್ಪನ್ನಗಳ ಪ್ರಚಾರ ಮಾಡುತ್ತಾರೆ. ದೂರದ ಊರುಗಳಿಗೂ ಉತ್ಪನ್ನಗಳನ್ನು ತಲುಪಿಸುವ ಇವರ ಜಾಣತನ ಪ್ರಶಂಸನೀಯ’ ಎಂದು ಸಂಘದ ಮೇಲ್ವಿಚಾರಕ ಲೋಕೇಶ್ ಭಾಲ್ಕೆ ವರ್ಣಿಸಿದರು.

ಸಂಸ್ಥೆಯಿಂದ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ತಾಲ್ಲೂಕಿನಲ್ಲಿ 2500ಕ್ಕೂ ಹೆಚ್ಚು ಸಂಘಗಳಿದ್ದು, 25 ಸಾವಿರ ಸದಸ್ಯರಿದ್ದಾರೆ. ಅವರಲ್ಲಿ ಬಹುತೇಕರು ಆರ್ಥಿಕ ಸ್ವಾವಲಂಬಿಯಾಗಿ ತಮ್ಮ ಕುಟುಂಬದ ನಿರ್ವಹಣೆ ಮಾಡುತ್ತಿದ್ದಾರೆ. ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಕೆರೆ ನಿರ್ಮಾಣ ಸಹ ಮಾಡಲಾಗುತ್ತಿದೆ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ತಾಲ್ಲೂಕು ಯೋಜನಾಧಿಕಾರಿ ಮಸ್ತಪ್ಪ ಭೋವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

*ಗ್ರಾಮೀಣ ಭಾಗದ ಬಡ ಮಹಿಳೆಯರನ್ನು ಸ್ವಾವಲಂಬಿ ಆಗಿಸುವುದು ಸಂಸ್ಥೆಯ ಉದ್ದೇಶ. ತಾಲ್ಲೂಕಿನ 25 ಸಾವಿರ ಮಹಿಳೆಯರು ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ

-ಮಸ್ತಪ್ಪ ಬೋವಿ,ತಾಲ್ಲೂಕು ಯೋಜನಾಧಿಕಾರಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT