ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಮನಾಬಾದ್‌ | ಸಮಸ್ಯೆಗಳ ಆಗರ: ಮೂಲಸೌಕರ್ಯಗಳ ಕೊರತೆಗೆ ಬೇಸತ್ತ ಸಾರ್ವಜನಿಕರು

ಗುಂಡು ಅತಿವಾಳ
Published 18 ಮೇ 2024, 7:01 IST
Last Updated 18 ಮೇ 2024, 7:01 IST
ಅಕ್ಷರ ಗಾತ್ರ

ಹುಮನಾಬಾದ್: ಪಟ್ಟಣದಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಸ್ಥಳೀಯ ಆಡಳಿತದ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ಬೇಸರಗೊಂಡಿದ್ದಾರೆ. ಪಟ್ಟಣದಲ್ಲಿ ಒಟ್ಟು 27 ವಾರ್ಡ್‌ಗಳು ಇವೆ. ಹಲವು ಸೌಕರ್ಯಗಳ ಕೊರತೆ ಇಂದಿಗೂ ನಾಗರಿಕರನ್ನು ಕಾಡುತ್ತಿದೆ.

ಇಲ್ಲಿಯ ಟೀಚರ್ಸ್ ಕಾಲೊನಿಯಲ್ಲಿ ಈವರೆಗೂ ಸೂಕ್ತ ಚರಂಡಿ ವ್ಯವಸ್ಥೆಯಾಗಿಲ್ಲ. ಅಲ್ಲದೇ ಪುರಸಭೆ ಸಿಬ್ಬಂದಿ, ಅಧಿಕಾರಿಗಳು ಚರಂಡಿಯಲ್ಲಿನ ತ್ಯಾಜ್ಯ ವಿಲೇವಾರಿಗೆ ಕ್ರಮಕೈಗೊಂಡಿಲ್ಲ. ಹೀಗಾಗಿ ಕೊಳಚೆ ನೀರು ಹರಿಯಲು ಸೂಕ್ತ ವ್ಯವಸ್ಥೆಯಿಲ್ಲದೇ ರಸ್ತೆ ಮೇಲೆಯೇ ಹರಿಯುತ್ತಿದೆ. ಕೊಳಚೆ ನೀರು ಖಾಲಿ ನಿವೇಶನಗಳಲ್ಲಿ ಸಂಗ್ರಹಗೊಂಡು ಸೊಳ್ಳೆಗಳ ಉತ್ಪತ್ತಿ ತಾಣವಾಗುತ್ತಿವೆ. ಸೊಳ್ಳೆಗಳಿಂದಾಗಿ ಕಾಲೊನಿಯ ನಿವಾಸಿಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಶೀಘ್ರದಲ್ಲೇ ಚರಂಡಿಗಳಲ್ಲಿ ನೀರು ಹರಿಯುವಂತೆ ಕ್ರಮಕೈಗೊಳ್ಳಬೇಕು ಎಂದು ಇಲ್ಲಿಯ ಸಾರ್ವಜನಿಕರು ಅಗ್ರಹಿಸಿದ್ದಾರೆ.

ಸಾರ್ವಜನಿಕ ಶೌಲಚಾಯ ಕೊರತೆ: ಪಟ್ಟಣದಲ್ಲಿ ಶೌಚಾಲಯದ ಸಮಸ್ಯೆ ಬಹುದಿನಗಳಿಂದ ಇದ್ದು 3-4 ಕಡೆಗಳಲ್ಲಿ ಸಾರ್ವಜನಿಕ ಶೌಚಾಲಯವಿದ್ದರೂ ಬಳಕೆ ಬಾರದ ಸ್ಥಿತಿಯಲ್ಲಿ ಇವೆ. ಪುರಸಭೆಯವರು ಸ್ವಚ್ಛತೆಗೆ ಮುಂದಾಗಿಲ್ಲ.

ಪುರಸಭೆ ಆವರಣದಲ್ಲಿ ಇರುವ ಶೌಚಾಲಯ ಸ್ವಚ್ಛತೆಯಿಂದ ದೂರ ಉಳಿದಿದೆ. ಹಲವು ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರು ಬಯಲು ಶೌಚಕ್ಕೆ ಮೊರೆ ಹೋಗುವಂತಾಗಿದೆ. ತಾಲ್ಲೂಕು ಕಚೇರಿ, ನ್ಯಾಯಾಲಯ, ಸರ್ಕಾರಿ ಕಚೇರಿಗಳಿಗೆ ಬರುವ ಸಾರ್ವಜನಿಕರಿಗೂ ಅನುಕೂಲವಾಗುವ ಶೌಚಾಲಯ ಇಲ್ಲ.

ಪುಟ್‌ಪಾತ್ ಸಮಸ್ಯೆ: ಪಾದಚಾರಿಗಳಿಗೆ ಅನುಕೂಲವಾಗಲಿ ಎಂದು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಫುಟ್‍ಪಾತ್ ನಿರ್ಮಾಣ ಮಾಡಿದ್ದರೂ ಕೆಲವೆಡೆ ಅದರ ಬಳಕೆ ಇಲ್ಲದಂತಾಗಿದೆ. ಫುಟ್‍ಪಾತ್‍ಗಳಲ್ಲಿ ಕೆಲ ಅಂಗಡಿಗಳ ನಿರ್ಮಾಣವಾಗಿದ್ದು ಸಾರ್ವಜನಿಕರು ಓಡಾಡಲು ತೊಂದರೆ ಆಗುತ್ತಿದೆ. ಪಟ್ಟಣಕ್ಕೆ ದಿನನಿತ್ಯ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಬಂದು ಹೋಗುತ್ತಾರೆ.ದಿನವೂ ಸಾವಿರಾರು ವಾಹನಗಳ ಓಡಾಟವಿದೆ. ಇದರಿಂದಾಗಿ ವಿದ್ಯಾರ್ಥಿಗಳು, ಪಾದಚಾರಿಗಳು ರಸ್ತೆಯ ಮೇಲೆ ನಡೆದು ಹೋಗುವಂತಹ ಅನಿವಾರ್ಯತೆ ಎದುರಾಗಿದೆ ಎಂದು ನಿವಾಸಿ ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಬಹುತೇಕ ಬಡಾವಣೆಗಳಲ್ಲಿ ಚರಂಡಿಗಳು ಸ್ವಚ್ಛತೆ ಇಲ್ಲದ ಕಾರಣ ಗಬ್ಬು ನಾರುತ್ತಿವೆ. ಕೊಳಚೆ ನೀರು ನಿಂತಲ್ಲೇ ನಿಂತು. ಸೊಳ್ಳೆಗಳ ಉತ್ಪತ್ತಿಯ ಕೇಂದ್ರಗಳಾಗಿವೆ. ಈ ಚರಂಡಿಯಲ್ಲಿ ಹಂದಿಗಳು ಬಂದು, ಮತ್ತಷ್ಟು ವಾತಾವರಣ ಕೆಡಿಸುತ್ತಿದ್ದು,  ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ ಎಂಂದು ನಿವಾಸಿ ಸತೀಶ್ ಬೇ‌ಸರ ವ್ಯಕ್ತಪಡಿಸುತ್ತಾರೆ.

ಪಟ್ಟಣದ ಟೀಚರ್ಸ್ ಕಾಲೊನಿಯಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ ಮಾಡಬೇಕು. ಸಂಬಂಧಪಟ್ಟ ಅಧಿಕಾರಿಗಳು ಫುಟ್‌ಪಾತ್‌ ಒತ್ತುವರಿ ತೆರವು ಕಾರ್ಯಾಚರಣೆ ಮಾಡಬೇಕು.
ಗಣಪತಿ ಅಷ್ಟೋರೆ, ದಲಿತ ಮುಖಂಡ
ಟೀಚರ್ಸ್ ಬಡಾವಣೆಯಲ್ಲಿ ಕೊಳಚೆ ನೀರು ಮನೆಯ ಮುಂದೆ ನಿಲ್ಲುತ್ತಿದೆ.ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕು.
ಶಾಂತವೀರ,ಟೀಚರ್ಸ್ ಕಾಲೊನಿ ನಿವಾಸಿ
ಈಗಾಗಲೇ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಚರಂಡಿ ಸ್ವಚ್ಛತೆ ಕಾರ್ಯ ನಡೆಯುತ್ತಿದೆ. ಟೀಚರ್ಸ್ ಕಾಲೊನಿಯಲ್ಲಿಯೂ ಸ್ವಚ್ಚತೆ ಮಾಡಲಾಗುವುದು.
ಮೀನಾಕುಮಾರಿ ಬೋರಳಕರ್, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT