ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ ಲೋಕಸಭಾ ಚುನಾವಣೆ: ಸಾಗರ್‌ ‘ಅಲೆ’ಯಲ್ಲಿ ಕೊಚ್ಚಿ ಹೋದ ಭಗವಂತ ಖೂಬಾ

ಮೊದಲ ಚುನಾವಣೆಯಲ್ಲೇ ಕೇಂದ್ರ ಸಚಿವರ ವಿರುದ್ಧ ಭಾರಿ ಮತಗಳ ಅಂತರದ ಜಯ: ಅಪ್ಪನ ಸೋಲಿನ ಸೇಡು ತೀರಿಸಿಕೊಂಡ ಮಗ
Published 5 ಜೂನ್ 2024, 7:03 IST
Last Updated 5 ಜೂನ್ 2024, 7:03 IST
ಅಕ್ಷರ ಗಾತ್ರ

ಬೀದರ್‌: ಬೀದರ್‌ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಾಗರ್‌ ಖಂಡ್ರೆಯವರ ‘ಅಲೆ’ಯಲ್ಲಿ ಕೇಂದ್ರ ಸಚಿವರೂ ಆದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರು ಮಂಗಳವಾರ ಅಕ್ಷರಶಃ ಕೊಚ್ಚಿ ಹೋದರು.

ಆ ಅಲೆಗಳು ಎಷ್ಟು ಪ್ರಬಲವಾಗಿದ್ದವು ಎಂದರೆ ಮೊದಲ ಸುತ್ತಿನಿಂದ 20ನೇ ಸುತ್ತಿನ ವರೆಗೆ ಖೂಬಾ ಅವರು ಮೇಲೇಳಲು ಸಾಧ್ಯವಾಗಲೇ ಇಲ್ಲ.

ಮಂಗಳವಾರ ನಗರದ ಬಿ.ವಿ. ಭೂಮರಡ್ಡಿ ಕಾಲೇಜಿನಲ್ಲಿ ಮೊದಲಿಗೆ ಅಂಚೆ ಮತಪತ್ರಗಳ ಎಣಿಕೆ ಕಾರ್ಯ ನಡೆಯಿತು. ಇದರಲ್ಲಿ ಭಗವಂತ ಖೂಬಾ ಅವರು ಸಾಗರ್‌ ಖಂಡ್ರೆ ಅವರಿಗಿಂತ ಹೆಚ್ಚಿಗೆ ಮತಗಳನ್ನು ಪಡೆದು, ಶುಭಾರಂಭ ಮಾಡಿದ್ದರು. ವಿದ್ಯುನ್ಮಾನ ಮತಯಂತ್ರಗಳ ಮತ ಎಣಿಕೆಯಲ್ಲೂ ಇದೇ ರೀತಿ ಆಗಬಹುದು ಎಂಬ ಸಹಜ ನಿರೀಕ್ಷೆ ಖೂಬಾ ಹಾಗೂ ಬಿಜೆಪಿ ಏಜೆಂಟರಲ್ಲಿತ್ತು. ಆದರೆ, ಎಲ್ಲ 20 ಸುತ್ತುಗಳ ಮತ ಎಣಿಕೆ ಪೂರ್ಣಗೊಳ್ಳುವವರೆಗೆ ಅವರು ಸಾಗರ್‌ ಖಂಡ್ರೆಯವರನ್ನು ಹಿಂದಿಕ್ಕಿ ಮೇಲೆ ಬರಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಸಾಗರ್‌ ಖಂಡ್ರೆಯವರು ದೊಡ್ಡ ಅಂತರದೊಂದಿಗೆ ಗೆಲುವಿನ ದಡ ಸೇರಿದರು. 2019ರ ಚುನಾವಣೆಯಲ್ಲಿ ತನ್ನ ತಂದೆ ಈಶ್ವರ ಬಿ. ಖಂಡ್ರೆಯವರನ್ನು ಸೋಲಿಸಿದ್ದ ಖೂಬಾ ಅವರನ್ನು ಈ ಚುನಾವಣೆಯಲ್ಲಿ ಮಣಿಸಿ ತಂದೆಯ ಸೋಲಿನ ಸೇಡು ಸಾಗರ್‌ ತೀರಿಸಿಕೊಂಡರು.

ಪ್ರತಿಷ್ಠೆಯ ಕಣವಾಗಿದ್ದ ಚುನಾವಣೆ: ಈ ಸಲದ ಚುನಾವಣೆ ಕಾಂಗ್ರೆಸ್‌–ಬಿಜೆಪಿ ನಡುವಿನ ಸ್ಪರ್ಧೆಗಿಂತ ಭಗವಂತ ಖೂಬಾ ಹಾಗೂ ಈಶ್ವರ ಬಿ. ಖಂಡ್ರೆಯವರ ನಡುವಿನ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿತ್ತು. ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಇಬ್ಬರೂ ಮುಖಂಡರು ಪರಸ್ಪರ ವೈಯಕ್ತಿಕ ಟೀಕೆ, ಟಿಪ್ಪಣಿಗೆ ಇಳಿದಿದ್ದರು.

‘2019ರ ಚುನಾವಣೆಯಲ್ಲಿ ಅಪ್ಪನಿಗೆ ಸೋಲಿನ ರುಚಿ ತೋರಿಸಿದ್ದು, ಈ ಸಲ ಮಗನಿಗೆ ತೋರಿಸುವೆ’ ಎಂದು ಭಗವಂತ ಖೂಬಾ ಹೇಳಿದ್ದರು. ಆದರೆ, ಈಶ್ವರ ಬಿ. ಖಂಡ್ರೆಯವರು ಅದನ್ನು ಸವಾಲಾಗಿ ಸ್ವೀಕರಿಸಿ, ತಳಮಟ್ಟದಲ್ಲಿ ರಣತಂತ್ರ ರೂಪಿಸಿ ಅನುಷ್ಠಾನಕ್ಕೆ ತಂದರು. ಜಿಲ್ಲೆಯ ಎಲ್ಲ ಹಿರಿಯ–ಕಿರಿಯ ಕಾಂಗ್ರೆಸ್‌ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸಿದರು. ಅದರ ಪರಿಣಾಮ ನಮ್ಮೆಲ್ಲರ ಮುಂದಿದೆ.

ಕಾಂಗ್ರೆಸ್‌ ಸಂಘಟಿತ ಹೋರಾಟಕ್ಕೆ ಜಯ: 2014ರ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಹಾಗೂ 2019ರ ಚುನಾವಣೆಯಲ್ಲಿ ಸಚಿವ ಈಶ್ವರ ಬಿ. ಖಂಡ್ರೆಯವರಿಗೆ ಸೋಲಿನ ರುಚಿ ತೋರಿಸಿದ್ದ ಭಗವಂತ ಖೂಬಾ ಅವರು ಈ ಸಲದ ಚುನಾವಣೆಯಲ್ಲೂ ಸುಲಭವಾಗಿ ಜಯ ಗಳಿಸುವ ವಿಶ್ವಾಸ ಹೊಂದಿದ್ದರು.

ಈ ಹಿಂದಿನ ಎರಡೂ ಚುನಾವಣೆಗಳಲ್ಲಿ ಖೂಬಾ ಅವರು ಮೋದಿ ಅವರ ಅಲೆಯಲ್ಲಿ ಗೆದ್ದು ಬಂದಿದ್ದರು. ಎರಡು ಸಲ ಸಂಸದ, ಒಂದು ಸಲ ಕೇಂದ್ರ ಸಚಿವರಾದರೂ ಕ್ಷೇತ್ರದಲ್ಲಿ ವೈಯಕ್ತಿಕ ವರ್ಚಸ್ಸು ಬೆಳೆಸಿಕೊಳ್ಳಲು ಅವರಿಗೆ ಸಾಧ್ಯವಾಗಿರಲಿಲ್ಲ. ಹಾಗಾಗಿಯೇ ಈ ಸಲವೂ ಮೋದಿ ಅಲೆ ದಡ ಸೇರಿಸುತ್ತದೆ ಎಂದು ನಿರೀಕ್ಷಿಸಿದ್ದರು. ಆದರೆ, ಕ್ಷೇತ್ರದಲ್ಲಿ ಎಲ್ಲೂ ಮೋದಿ ಅಲೆ ಕಾಣಿಸಲಿಲ್ಲ. ಸ್ಥಳೀಯ ವಿಚಾರಗಳ ಕುರಿತಾಗಿಯೇ ಚುನಾವಣೆ ನಡೆಯಿತು. ಅಂತಿಮವಾಗಿ ಮತದಾರರು ಸಾಗರ್‌ ಖಂಡ್ರೆ ‘ಕೈ’ ಹಿಡಿದರು.

ಸೂರ್ಯವಂಶಿ ದಾಖಲೆ ಮುರಿದ ಸಾಗರ್‌

ಬೀದರ್‌ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಗೆದ್ದು ಬೀಗಿರುವ ‌ಸಾಗರ್‌ ಖಂಡ್ರೆಯವರು ಅವರದೇ ಪಕ್ಷದ ಮಾಜಿ ಸಂಸದ ನರಸಿಂಗ್‌ರಾವ್‌ ಸೂರ್ಯವಂಶಿ ಅವರ ದಾಖಲೆಯನ್ನು ಮುರಿದಿದ್ದಾರೆ.

1984ರಲ್ಲಿ ನಡೆದ ಬೀದರ್‌ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸೂರ್ಯವಂಶಿ ಅವರಿಗೆ ಆಗ 27 ವರ್ಷ ವಯಸ್ಸು. ಸಾಗರ್‌ ಖಂಡ್ರೆಯವರು 1997ರ ಡಿಸೆಂಬರ್‌ 29ರಂದು ಜನಿಸಿದ್ದು 26ನೇ ವಯಸ್ಸಿನಲ್ಲಿ ಸಂಸತ್ತು ಪ್ರವೇಶಿಸಿ ಅವರ ದಾಖಲೆ ಮುರಿದಿದ್ದಾರೆ. ಈ ಸಲದ ಚುನಾವಣೆಯಲ್ಲಿ ಸಂಸತ್ತು ಪ್ರವೇಶಿಸಿರುವ ದೇಶದ ಅತಿ ಕಿರಿಯ ವಯಸ್ಸಿನ ಸಂಸದನೆಂಬ ಹಿರಿಮೆಗೂ ಪಾತ್ರರಾಗಿದ್ದಾರೆ.

13 ಅಭ್ಯರ್ಥಿಗಳಿಗೆ ನೋಟಾಕ್ಕಿಂತ ಕಡಿಮೆ ಮತ

ಚುನಾವಣೆಗೆ ಸ್ಪರ್ಧಿಸಿದ ಒಟ್ಟು 18 ಅಭ್ಯರ್ಥಿಗಳಲ್ಲಿ 13 ಜನ ನೋಟಾಕ್ಕಿಂತ ಕಡಿಮೆ ಮತಗಳನ್ನು ಗಳಿಸಿದ್ದಾರೆ. ಒಟ್ಟು 4686 ಮತದಾರರು ನೋಟಾ ಬಟನ್‌ ಒತ್ತುವುದರ ಮೂಲಕ ಚುನಾವಣೆಗೆ ಸ್ಪರ್ಧಿಸಿರುವ 18 ಅಭ್ಯರ್ಥಿಗಳಲ್ಲಿ ತಮಗೆ ಯಾರಿಗೂ ಮತ ಚಲಾಯಿಸಲು ಇಷ್ಟವಿಲ್ಲ ಎಂದು ಆ ಮೂಲಕ ಎಲ್ಲರನ್ನೂ ತಿರಸ್ಕರಿಸಿದ್ದಾರೆ. ಒಟ್ಟು 1237636 ಜನ ಹಕ್ಕು ಚಲಾಯಿಸಿದ್ದು ಇದರಲ್ಲಿ 735 ಮತದಾರರ ಮತಗಳು ತಿರಸ್ಕೃತಗೊಂಡಿವೆ.

ಎಲ್ಲ ಸುತ್ತುಗಳಲ್ಲಿ ಸಾಗರ್‌ ಖಂಡ್ರೆ ಪಾರಮ್ಯ

ಒಟ್ಟು 20 ಸುತ್ತುಗಳಲ್ಲಿ ಮಂಗಳವಾರ ಮತ ಎಣಿಕೆ ನಡೆಯಿತು. ಎಲ್ಲ ಸುತ್ತುಗಳಲ್ಲೂ ಸಾಗರ್‌ ಖಂಡ್ರೆಯವರು ಮುನ್ನಡೆ ಕಾಯ್ದುಕೊಂಡು ಪಾರಮ್ಯ ಮೆರೆದರು. ಮೊದಲಿಗೆ ನಡೆದ ಅಂಚೆ ಮತಪತ್ರಗಳ ಎಣಿಕೆಯಲ್ಲಿ ಮಾತ್ರ ಭಗವಂತ ಖೂಬಾ ಅವರು ಸಾಗರ್‌ ಖಂಡ್ರೆಗಿಂತ ಅಧಿಕ ಮತಗಳನ್ನು ಪಡೆದರು. ಆದರೆ ಆನಂತರ 20 ಸುತ್ತುಗಳಲ್ಲಿ ನಡೆದ ವಿದ್ಯುನ್ಮಾನ ಮತಯಂತ್ರಗಳ ಮತ ಎಣಿಕೆಯ ಯಾವುದೇ ಸುತ್ತಿನಲ್ಲೂ ಸಾಗರ್‌ ಖಂಡ್ರೆಯವರನ್ನು ಮೀರಿಸಿ ಮೇಲೆ ಬರಲು ಖೂಬಾ ಅವರಿಗೆ ಸಾಧ್ಯವಾಗಲಿಲ್ಲ. ಖೂಬಾ ಅವರು 1676 ಅಂಚೆ ಮತ ಪಡೆದರೆ ಸಾಗರ್‌ 1155 ಮತಗಳನ್ನು ಗಳಿಸಿದರು.

ಮತ ಎಣಿಕೆ ಮಧ್ಯದಲ್ಲೇ ನಿರ್ಗಮಿಸಿದ ಖೂಬಾ

ಬೀದರ್‌ ಲೋಕಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆಯ ಮಧ್ಯದಲ್ಲೇ ಭಗವಂತ ಖೂಬಾ ಅವರು ಮತ ಎಣಿಕೆ ಕೇಂದ್ರದಿಂದ ನಿರ್ಗಮಿಸಿದರು. ಮತ ಎಣಿಕೆಯ ಆರನೇ ಸುತ್ತಿಗೆ ಬಂದಿದ್ದ ಅವರು 12ನೇ ಸುತ್ತಿನ ಎಣಿಕೆ ನಡೆಯುತ್ತಿದ್ದಾಗ ಅಲ್ಲಿಂದ ನಿರ್ಗಮಿಸಿದರು. ಈ ಸುತ್ತಿನಲ್ಲಿ ಸಾಗರ್‌ ಖಂಡ್ರೆಯವರು ಸುಮಾರು 80 ಸಾವಿರದಿಂದ ಒಂದು ಲಕ್ಷ ಮತಗಳ ಅಂತರದೊಂದಿಗೆ ಭಾರಿ ಮುನ್ನಡೆ ಕಾಯ್ದುಕೊಂಡಿದ್ದರು. ಯಾರೊಂದಿಗೂ ಹೆಚ್ಚು ಮಾತನಾಡದೆ ಜೆಡಿಎಸ್‌ ಜಿಲ್ಲಾಧ್ಯಕ್ಷ ರಮೇಶ ಪಾಟೀಲ ಸೋಲಪೂರೆ ಅವರೊಂದಿಗೆ ಹೆಜ್ಜೆ ಹಾಕುತ್ತ ಕೇಂದ್ರದಿಂದ ಹೊರನಡೆದರು.

ಉತ್ಸಾಹದಿಂದ ಬಂದರು ನಿರುತ್ಸಾಹದಿಂದ ಹೋದರು

ಬಿಜೆಪಿ ಏಜೆಂಟರು ಮಂಗಳವಾರ ಬೆಳಿಗ್ಗೆ ಮತ ಎಣಿಕೆ ಕೇಂದ್ರಕ್ಕೆ ಬಹಳ ಉತ್ಸಾಹದಿಂದ ಬಂದಿದ್ದರು. ಎಲ್ಲರೂ ಶ್ವೇತ ವರ್ಣದ ಬಟ್ಟೆಗಳನ್ನು ಧರಿಸಿ ಕೇಸರಿ ಶಾಲು ಹಾಕಿಕೊಂಡು ಆಗಮಿಸಿದ್ದರು. ಎಲ್ಲರಲ್ಲೂ ಗೆಲುವಿನ ಭರವಸೆ ಉತ್ಸಾಹ ಕಂಡು ಬಂತು. ಆದರೆ ಹತ್ತು ಸುತ್ತುಗಳ ಮತ ಎಣಿಕೆ ಮುಗಿಯುತ್ತಿದ್ದಂತೆ ‘ಕೇಸರಿ ಕಲಿ’ಗಳು ಒಬ್ಬೊಬ್ಬರಾಗಿ ಅಲ್ಲಿಂದ ನಿರ್ಗಮಿಸಲು ಆರಂಭಿಸಿದರು. ಉತ್ಸಾಹದಿಂದ ಬಂದವರಲ್ಲಿ ನಿರುತ್ಸಾಹ ಎದ್ದು ಕಾಣಿಸಿತು. ಮುಖಗಳು ಬಾಡಿ ಹೋಗಿದ್ದವು. ಲವಲವಿಕೆ ಕಂಡು ಬರಲಿಲ್ಲ. ಭಗವಂತ ಖೂಬಾ ಅವರನ್ನು ಹೊರತುಪಡಿಸಿದರೆ ಬಿಜೆಪಿಯ ಪ್ರಮುಖ ಮುಖಂಡರು ಮತ ಎಣಿಕೆ ಕೇಂದ್ರದತ್ತ ಸುಳಿಯಲಿಲ್ಲ.

ಖೂಬಾ ಸೋಲಿಗೆ ಕಾರಣಗಳೇನು?

* ನರೇಂದ್ರ ಮೋದಿ ಅಲೆಯ ಅತಿಯಾದ ಆತ್ಮವಿಶ್ವಾಸ

* ಶಾಸಕರು ಮುಖಂಡರು ಕಾರ್ಯಕರ್ತರ ಕಡೆಗಣನೆ

* ಒರಟು ಮಾತು ಒರಟು ಸ್ವಭಾವದವರು ಎಂಬ ಆರೋಪ

* ಖೂಬಾ ಪರ ಕೆಲಸ ಮಾಡದ ಶಾಸಕರು ಮುಖಂಡರು

ಆಳಂದದಲ್ಲಷ್ಟೇ ಖೂಬಾಗೆ ಮುನ್ನಡೆ

ಬೀದರ್‌ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಭಗವಂತ ಖೂಬಾ ಅವರು ಆಳಂದ ಕ್ಷೇತ್ರದಲ್ಲಷ್ಟೇ ಮುನ್ನಡೆ ಕಾಪಾಡಿಕೊಂಡರು. ಮಿಕ್ಕುಳಿದ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಸಾಗರ್‌ ಖಂಡ್ರೆ ಅವರು ಖೂಬಾ ಅವರಿಗಿಂತ ಹೆಚ್ಚಿನ ಮತಗಳನ್ನು ಪಡೆದರು.

ಸಾಗರ್ ಖಂಡ್ರೆ ಮೆರವಣಿಗೆ, ವಿಜಯೋತ್ಸವ

ಸಾಗರ್‌ ಖಂಡ್ರೆಯವರು ದೊಡ್ಡ ಅಂತರದಿಂದ ಜಯ ಗಳಿಸಿದ ನಂತರ ಅವರನ್ನು ತೆರೆದ ವಾಹನದಲ್ಲಿ ನಗರದಲ್ಲಿ ಮೆರವಣಿಗೆ ಮಾಡಲಾಯಿತು. ಇನ್ನು 20 ಸುತ್ತುಗಳಲ್ಲಿ 15 ಸುತ್ತುಗಳ ಮತ ಎಣಿಕೆ ಪೂರ್ಣಗೊಂಡಾಗ ಸಾಗರ್‌ 1 ಲಕ್ಷಕ್ಕೂ ಹೆಚ್ಚು ಮತಗಳ ಮುನ್ನಡೆ ಕಾಯ್ದುಕೊಂಡಿದ್ದರು. ಆಗಲೇ ಕಾರ್ಯಕರ್ತರು ನಗರದ ಪ್ರಮುಖ ವೃತ್ತಗಳಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಸಾಗರ್‌ ಪರ ಜಯಘೋಷ ಹಾಕಿದರು.

ಮತ ಎಣಿಕೆ ಕೇಂದ್ರದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಗೋವಿಂದ ರೆಡ್ಡಿ ಅವರಿಂದ ಪ್ರಮಾಣ ಪತ್ರ ಸ್ವೀಕರಿಸಿದರು. ಅದಾದ ನಂತರ ಈಶ್ವರ ಬಿ. ಖಂಡ್ರೆಯವರು ಶುಭ ಕೋರಿ ಅಲ್ಲಿಂದ ನಿರ್ಗಮಿಸಿದರು. ತೆರೆದ ವಾಹನದಲ್ಲಿ ಭೂಮರಡ್ಡಿ ಕಾಲೇಜು ಮೈಲೂರ್‌ ಕ್ರಾಸ್‌ ಬೊಮ್ಮಗೊಂಡೇಶ್ವರ ವೃತ್ತ ಬಸವೇಶ್ವರ ವೃತ್ತ ಡಾ. ಬಿ.ಆರ್‌. ಅಂಬೇಡ್ಕರ್‌ ವೃತ್ತದ ಮೂಲಕ ಅಕ್ಕಮಹಾದೇವಿ ಕಾಲೇಜಿನ ವರೆಗೆ ಮೆರವಣಿಗೆ ನಡೆಯಿತು.

ಸಚಿವ ರಹೀಂ ಖಾನ್‌ ನಗರಸಭೆ ಸದಸ್ಯ ಮೊಹಮ್ಮದ್‌ ಗೌಸ್‌ ಬುಡಾ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಮೃತರಾವ್ ಚಿಮಕೋಡೆ ಮುಖಂಡರಾದ ಬಸವರಾಜ ಧನ್ನೂರ ಅರವಿಂದ ಅರಳಿ ಸೇರಿದಂತೆ ಮತ್ತಿತರರು ಹಾಜರಿದ್ದರು.

ಎಲ್ಲರ ಶ್ರಮದಿಂದ ಗೆದ್ದಿರುವೆ–ಸಾಗರ್‌

ಕಾಂಗ್ರೆಸ್‌ ಪಕ್ಷದ ಎಲ್ಲ ಮುಖಂಡರು ಕಾರ್ಯಕರ್ತರ ಶ್ರಮದಿಂದ ಚುನಾವಣೆಯಲ್ಲಿ ಗೆದ್ದಿರುವೆ. ನನ್ನ ಮೇಲೆ ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡು ಮತದಾರರು ನನಗೆ ಆಶೀರ್ವದಿಸಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಪ್ರಯತ್ನಿಸುವೆ. –ಸಾಗರ್‌ ಖಂಡ್ರೆ ಬೀದರ್‌ ಸಂಸದ

ಮತದಾರರ ತೀರ್ಪು ಸ್ವಾಗತಿಸುವೆ–ಖೂಬಾ

ನನಗೆ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳಿಂದ ತೃಪ್ತಿಯಿದೆ. ಮತದಾರರ ಋಣ ತಿರಿಸಿದ್ದೇನೆ ಎಂಬ ಭಾವನೆ ನನಗಿದೆ. ಆದರೆ ಚುನಾವಣೆಯಲ್ಲಿ ಮತದಾರರು ನೀಡಿರುವ ತೀರ್ಪು ಸ್ವಾಗತಿಸುತ್ತೇನೆ. ಭಗವಂತ ಖೂಬಾ ಬಿಜೆಪಿ ಪರಾಜಿತ ಅಭ್ಯರ್ಥಿ

ಅಚ್ಚುಕಟ್ಟಾಗಿ ನಡೆದ ಮತ ಎಣಿಕೆ

ನಗರದ ಬಿ.ವಿ. ಭೂಮರಡ್ಡಿ ಕಾಲೇಜಿನಲ್ಲಿ ಮಂಗಳವಾರ ಮತ ಎಣಿಕೆ ಕಾರ್ಯ ಬಹಳ ಅಚ್ಚುಕಟ್ಟಾಗಿ ನಡೆಯಿತು. ನಿಗದಿತ ಸಮಯಕ್ಕೆ ಬೆಳಿಗ್ಗೆ 7.15ಕ್ಕೆ ಸ್ಟ್ರಾಂಗ್‌ ರೂಮ್‌ಗಳನ್ನು ತೆರೆಯಲಾಯಿತು. ಜಿಲ್ಲಾ ಚುನಾವಣಾಧಿಕಾರಿ ಗೋವಿಂದ ರೆಡ್ಡಿ ವೀಕ್ಷಕ ದೀಪಾಂಕರ ಮೊಹಪಾತ್ರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ಅವರ ಸಮ್ಮುಖದಲ್ಲಿ ಸೀಲ್‌ ಮಾಡಿದ್ದ ಕೊಠಡಿಗಳನ್ನು ತೆರೆಯಲಾಯಿತು. ಯಾವುದೇ ಅಡೆತಡೆ ಸಮಸ್ಯೆಯಿಲ್ಲದೆ ಎಲ್ಲ 20 ಸುತ್ತಿನ ಮತ ಎಣಿಕೆ ಕಾರ್ಯ ಶಾಂತಿಯುತವಾಗಿ ನಡೆಯಿತು. ಮತ ಎಣಿಕೆ ಕೇಂದ್ರಕ್ಕೆ ಪೊಲೀಸ್‌ ಸರ್ಪಗಾವಲು ಹಾಕಲಾಗಿತ್ತು.

ಮತ ಎಣಿಕೆ ಸಿಬ್ಬಂದಿ ಅಭ್ಯರ್ಥಿಗಳು ರಾಜಕೀಯ ಪಕ್ಷಗಳ ಏಜೆಂಟರು ಹಾಗೂ ಪತ್ರಕರ್ತರನ್ನು ಹೊರತುಪಡಿಸಿ ಬೇರೆ ಯಾರಿಗೂ ಪ್ರವೇಶ ಇರಲಿಲ್ಲ. ಕೇಂದ್ರದೊಳಗೆ ಉಪಾಹಾರ ಮಧ್ಯಾಹ್ನಕ್ಕೆ ಊಟ ಶುದ್ಧ ಕುಡಿಯುವ ನೀರು ಶೌಚಾಲಯ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿತ್ತು. ನಗರದಲ್ಲಿ ಇಡೀ ದಿನ ಪೊಲೀಸರು ಗಸ್ತು ತಿರುಗಿ ಜನ ಗುಂಪುಗೂಡದಂತೆ ಎಚ್ಚರ ವಹಿಸಿದರು. ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಿದ್ದರು. ಶಾಂತಿಯುತವಾಗಿ ಮತ ಎಣಿಕೆ ಪ್ರಕ್ರಿಯೆ ಕೊನೆಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT