ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ರೈತರಿಗಿಲ್ಲ ಉಳಿಗಾಲ: ಬಡಗಲಪುರ ನಾಗೇಂದ್ರ

Published 30 ಏಪ್ರಿಲ್ 2024, 9:22 IST
Last Updated 30 ಏಪ್ರಿಲ್ 2024, 9:22 IST
ಅಕ್ಷರ ಗಾತ್ರ

ಬೀದರ್‌: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ರೈತರಿಗೆ ಉಳಿಗಾಲವಿಲ್ಲ’ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

ಹತ್ತು ವರ್ಷಗಳ ಹಿಂದೆ ಮೋದಿಯವರು ಏನೆಲ್ಲ ಭರವಸೆಗಳನ್ನು ಕೊಟ್ಟಿದ್ದರು. ಅದರಲ್ಲಿ ಯಾವುದೂ ಈಡೇರಿಸಿಲ್ಲ. ಬದಲಾಗಿ ರೈತ ವಿರೋಧಿ ನೀತಿಗಳನ್ನು ಜಾರಿಗೆ ತಂದಿದ್ದಾರೆ. ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪುನಃ ಅವರ ನೇತೃತ್ವದ ಸರ್ಕಾರ ಬಂದರೆ ಉಳಿಗಾಲವಿಲ್ಲ. ಹೀಗಾಗಿಯೇ ರಾಜ್ಯದಾದ್ಯಂತ ಜನಜಾಗೃತಿ ಆಂದೋಲನ ನಡೆಸಲಾಗುತ್ತಿದೆ. ಕರಪತ್ರಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರೈತ ಚಳವಳಿ ಹುಟ್ಟಿಕೊಂಡು 44 ವರ್ಷಗಳಾಗಿವೆ. 70ರ ದಶಕದಲ್ಲಿ ಕಾಂಗ್ರೆಸ್‌ ಸರ್ಕಾರದ ನೀತಿಗಳ ವಿರುದ್ಧವೂ ಹೋರಾಟ ನಡೆಸಿದ್ದೆವು. ಗುಂಡೂರಾವ್‌ ಅವರ ಅವಧಿಯಲ್ಲಿ 130 ರೈತರಿಗೆ ಗುಂಡಿಟ್ಟು ಸಾಯಿಸಲಾಗಿತ್ತು. ಗುಂಡಿಕ್ಕಿರುವ ಸರ್ಕಾರಕ್ಕೆ ಮತವಿಲ್ಲ ಎಂಬ ಘೋಷವಾಕ್ಯದಡಿ ಜಾಗೃತಿ ಮೂಡಿಸಲಾಗಿತ್ತು. ಇದರ ಪರಿಣಾಮ ಗುಂಡೂರಾವ್‌ ಸರ್ಕಾರ ಪುನಃ ಅಧಿಕಾರಕ್ಕೆ ಬರಲಿಲ್ಲ. ಅದೇ ಮಾದರಿಯಲ್ಲಿ ಈಗ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಗುಂಡೂರಾವ್‌ ಕಾಲಕ್ಕಿಂತ ಕೆಟ್ಟ ಕಾಲ ಮೋದಿಯವರ ಆಡಳಿತದಲ್ಲಿ ರೈತರು ನೋಡಿದ್ದಾರೆ. ಹತ್ತು ವರ್ಷಗಳಲ್ಲಿ ಮೋದಿಯವರು ರೈತರಿಗಾಗಿ ಏನೂ ಮಾಡಿಲ್ಲ. 2014ರ ಚುನಾವಣೆಗೂ ಮುನ್ನ, ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ಕೊಟ್ಟಿದ್ದರು. ಸ್ವಾಮಿನಾಥನ್‌ ಆಯೋಗದ ವರದಿ ಯಥಾವತ್‌ ಜಾರಿಗೊಳಿಸಿ ರೈತರಿಗೆ ಬೆಂಬಲ ಬೆಲೆ ಕೊಡುವುದಾಗಿ ಹೇಳಿದ್ದರು. ಆದರೆ, ರೈತರ ಸಾಲ ಮನ್ನಾ ಮಾಡಿಲ್ಲ. ಬದಲಾಗಿ ಕಾರ್ಪೊರೇಟ್‌ನವರ ₹20 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಸ್ವಾಮಿನಾಥನ್‌ ಆಯೋಗದ ವರದಿ ಜಾರಿಗೆ ತರುವುದಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ಕೇಂದ್ರ ಸರ್ಕಾರ ಪ್ರಮಾಣ ಪತ್ರ ಸಲ್ಲಿಸಿದೆ. ಹೀಗಿರುವಾಗ ಇಂತಹ ಸರ್ಕಾರವನ್ನು ರೈತರೇಕೇ ಬೆಂಬಲಿಸಬೇಕು ಎಂದು ಪ್ರಶ್ನಿಸಿದರು.

ರೈತ ಸಂಘದ ಗೌರವ ಅಧ್ಯಕ್ಷ ಚಾಮರಸ ಮಾಲಿಪಾಟೀಲ ಮಾತನಾಡಿ, ಬೆಳೆ ನಷ್ಟವಾದರೆ ಫಸಲ್‌ ಬಿಮಾ ಯೋಜನೆ ಮೂಲಕ ರೈತರಿಗೆ ಪರಿಹಾರ ಕಲ್ಪಿಸುವುದಾಗಿ ಮೋದಿ ಹೇಳಿದ್ದರು. ಆದರೆ, ಅದರಲ್ಲಿ ಕಾರ್ಪೊರೇಟ್‌ನವರನ್ನು ಏಜೆಂಟ್‌ರಾಗಿ ಮಾಡಿ ಅವರಿಗೆ ಅನುಕೂಲ ಮಾಡಿದರು. ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಪರಿಹಾರ ಕೊಟ್ಟಿಲ್ಲ. ಕೃಷಿ ವಿರೋಧಿ ಕಾನೂನುಗಳನ್ನು ಜಾರಿಗೆ ತಂದರು. ರೈತರು ದೆಹಲಿಯಲ್ಲಿ ಸತತ ಒಂದು ವರ್ಷಕ್ಕೂ ಹೆಚ್ಚು ಕಾಲ ಹೋರಾಟ ನಡೆಸಿದ್ದರಿಂದ ಹಿಂದೆ ಸರಿದರು. 750ಕ್ಕೂ ಹೆಚ್ಚು ರೈತ ಹೋರಾಟಗಾರರು ಮರಣ ಹೊಂದಿದ್ದಾರೆ. ರೈತ ಕುಲಕ್ಕೆ ಅನ್ಯಾಯ ಮಾಡಿರುವ ಬಿಜೆಪಿ ಹಾಗೂ ಮಿತ್ರ ಪಕ್ಷಗಳಿಗೆ ಈ ಚುನಾವಣೆಯಲ್ಲಿ ರೈತರು ಮತ ಹಾಕಬಾರದು ಎಂದು ಮನವಿ ಮಾಡಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಮುಖಂಡರಾದ ಕೊಂಡ್ರಿಬಾ ಪಾಂಡ್ರೆ, ನಾಗಶೆಟ್ಟೆಪ್ಪ ಲಂಜವಾಡೆ, ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಾಂತಮ್ಮ ಮೂಲಗೆ, ಕರಿಬಸಪ್ಪ ಹುಡಗೆ, ಖಾನ್‌ ಸಾಬ್‌, ವೀರಾರೆಡ್ಡಿ ಪಾಟೀಲ, ಷಣ್ಮುಖಪ್ಪ ಆಣದೂರ, ವಿಠ್ಠಲರೆಡ್ಡಿ ಆಣದೂರ, ವಿಜಯಕುಮಾರ, ರುದ್ರಸ್ವಾಮಿ, ಸೋಮನಾಥ ಹಾಜರಿದ್ದರು.

‘2028ರಲ್ಲಿ ಪರ್ಯಾಯ ರಾಜಕಾರಣ’

‘ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸರ್ವೋದಯ ಕರ್ನಾಟಕ ಪಕ್ಷದಿಂದ ಎಂಟು ಕಡೆ ಅಭ್ಯರ್ಥಿಗಳನ್ನು ನಿಲ್ಲಿಸಿದ್ದೆವು. ಅದರಲ್ಲಿ ಒಂದು ಕಡೆ ಗೆಲುವು ಸಾಧಿಸಿದ್ದೇವು. 2028ರಲ್ಲಿ ಪರ್ಯಾಯ ರಾಜಕಾರಣ ಕಟ್ಟುತ್ತೇವೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು. ಬರಲಿರುವ ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಸ್ಪರ್ಧಿಸಿ ತಳಮಟ್ಟದಿಂದ ರೈತರ ಹಿತಾಸಕ್ತಿಗಾಗಿ ಕೆಲಸ ಮಾಡುವ ಸರ್ವೋದಯ ಪಕ್ಷವನ್ನು ಕಟ್ಟುತ್ತೇವೆ. ಲೋಕಸಭೆ ಚುನಾವಣೆ ವ್ಯಾಪ್ತಿ ಹೆಚ್ಚು ವಿಸ್ತಾರ ಆಗಿರುವುದರಿಂದ ಸ್ಪರ್ಧಿಸಲಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT