ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಟಕಚಿಂಚೋಳಿ | ಸಿದ್ದಪ್ಪನ ಕೈಹಿಡಿದ ‘ಸೇವಂತಿ’: ಅರ್ಧ ಎಕರೆಗೆ ₹75 ಸಾವಿರ ಆದಾಯ

Published 9 ಫೆಬ್ರುವರಿ 2024, 4:48 IST
Last Updated 9 ಫೆಬ್ರುವರಿ 2024, 4:48 IST
ಅಕ್ಷರ ಗಾತ್ರ

ಖಟಕಚಿಂಚೋಳಿ: ಇಲ್ಲಿನ ರೈತ ಸಿದ್ಧಪ್ಪ ಬೆಳಕೇರಿ ತಮ್ಮ ಅರ್ಧ ಎಕರೆಯಲ್ಲಿ ಬೆಳೆದ 'ಬಿಜಲಿ ತಳಿಯ ಸೇವಂತಿ ಹೂವು ಉತ್ತಮ ಆದಾಯ ನೀಡುವುದರೊಂದಿಗೆ ಕೃಷಿಯಲ್ಲಿ ಸಕ್ರಿಯವಾಗಿ ತೊಡಗುವಂತೆ ಪ್ರೇರೇಪಿಸಿದೆ.

ಸಿದ್ಧಪ್ಪ ಅವರು ತಮ್ಮ ಎರಡು ಎಕರೆ ಪ್ರದೇಶದಲ್ಲಿ ಸೇವಂತಿ ಹೂವು, ಟೊಮೆಟೊ, ಮೆಣಸಿನಕಾಯಿ, ಪಪ್ಪಾಯಿ ಸೇರಿದಂತೆ ಕಾಲಕಾಲಕ್ಕೆ ವಿವಿಧ ಬಗೆಯ ತರಕಾರಿಗಳನ್ನು ಬೆಳೆಯುತ್ತಾರೆ. ಸದ್ಯ ಸೇವಂತಿಗೆ ಬೆಳೆಯಿಂದ ಆದಾಯ ಪಡೆಯುತ್ತಿದ್ದಾರೆ. ಹೀಗೆ ಅವರು ಒಂದಿಲ್ಲೊಂದು ಬೆಳೆಯಲ್ಲಿ ಆದಾಯ ಕಾಣುತ್ತಿದ್ದಾರೆ.

‘ಕೇವಲ 60 ದಿನಗಳಲ್ಲಿ ಕಟಾವಿಗೆ ಬರುವ ಸೇವಂತಿ ಸಸಿಗಳ ಬೆಲೆ, ಗೊಬ್ಬರ, ರಾಸಾಯನಿಕ ಔಷಧಿ ಸಿಂಪಡಣೆ ಸೇರಿ ಸುಮಾರು ₹ 20 ಸಾವಿರ ವೆಚ್ಚವಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಸೇವಂತಿಗೆ ಪ್ರತಿ ಕೆಜಿಗೆ ₹ 50 ರಂತೆ ಮಾರಾಟವಾಗುತ್ತಿದೆ. ಹೀಗೆ ವಾರಕ್ಕೆ ಎರಡು ಬಾರಿ ಕಟಾವು ಮಾಡುತ್ತಿದ್ದೇವೆ. ಪ್ರತಿ ಬಾರಿ 20-25 ಕೆಜಿ ಇಳುವರಿ ಬರುತ್ತಿದೆ. ಸದ್ಯ ₹ 65 ಸಾವಿರ ಆದಾಯ ಬಂದಿದೆ. ಮತ್ತೆರಡು ತಿಂಗಳಲ್ಲಿ ಇನ್ನಷ್ಟು ಆದಾಯ ಬರುವ ನಿರೀಕ್ಷೆಯಲ್ಲಿದ್ದೇನೆ’ ಎನ್ನುತ್ತಾರೆ ರೈತ.

‘ಇದೇ ಮೊದಲ ಬಾರಿಗೆ ಹೊಸ ಪ್ರಯತ್ನ ಎನ್ನುವಂತೆ ಪರಿಚಯಸ್ಥರ ಹತ್ತಿರ ಒಂದು ರೂಪಾಯಿಗೆ ಒಂದು ಸಸಿಯಂತೆ ಸಾವಿರ ಸಸಿಗಳನ್ನು ತಂದು ನಾಟಿ ಮಾಡಿದ್ದೇನೆ. ಇದಕ್ಕೆ ಯಾವುದೇ ರೀತಿಯ ಹೆಚ್ಚಿನ ಖರ್ಚು ಬಂದಿಲ್ಲ . ಮುಂದಿನ ದಿನಗಳಲ್ಲಿ ಎರಡು ಎಕರೆಯಲ್ಲಿ ಸೇವಂತಿಗೆ ಬೆಳೆಯುವ ಆಸೆ ನನ್ನದಾಗಿದೆ' ಎಂದು ಹುಮ್ಮಸ್ಸಿನಿಂದ ಹೇಳುತ್ತಾರೆ.

ಹೂಗಳಲ್ಲಿ ಸೇವಂತಿ ಬೆಳೆಯುವುದು ಅತ್ಯಧಿಕ ಲಾಭದಾಯಕ ಕೃಷಿಯಾಗಿದೆ. ಕಡಿಮೆ ಖರ್ಚಿನಲ್ಲಿ ಕೆಲವೇ ತಿಂಗಳುಗಳ ಅಂತರದಲ್ಲಿ ಅಧಿಕ ಇಳುವರಿಯನ್ನು ಸೇವಂತಿ ನೀಡುತ್ತದೆ' ಎಂದು ರೈತ ಸಂತಸ ವ್ಯಕ್ತಪಡಿಸುತ್ತಾರೆ.

ಜಿಲ್ಲೆಯಲ್ಲಿ ಹೂವು ಮಾರುಕಟ್ಟೆ ಇದ್ದಿದ್ದರೆ ನಮ್ಮಲ್ಲಿನ ಸೇವಂತಿಗೆ ಇನ್ನೂ ಹೆಚ್ಚಿನ ಬೆಲೆ ದೊರೆಯುತ್ತಿತ್ತು. ಆದರೆ ಇಲ್ಲಿ ಸೂಕ್ತ ಹೂವಿನ ಮಾರುಕಟ್ಟೆ ಸಿಗುತ್ತಿಲ್ಲ. ಹೀಗಾಗಿ ನೆರೆಯ ರಾಜ್ಯ ಹೈದರಾಬಾದ್ ಮಾರುಕಟ್ಟೆಗೆ ಕಳುಹಿಸಿದರೆ ಉತ್ತಮ ಬೆಲೆ ಸಿಗುತ್ತದೆ. ಸದ್ಯ ಬೆಲೆ ಕಡಿಮೆ ಇದೆ. ಹಬ್ಬ, ಹರಿದಿನಗಳು ಬಂದ ವೇಳೆ ದರ ಹೆಚ್ಚಾಗುತ್ತದೆ' ಎಂದು ರೈತ ಸಿದ್ಧಪ್ಪ ತಿಳಿಸುತ್ತಾರೆ.

 ಅರ್ಧ ಎಕರೆ ಸೇವಂತಿ: ವಾರಕ್ಕೆ 60 ಕೆಜಿ ಇಳುವರಿ  ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ  ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು ಸಲಹೆ

ರೈತರು ಒಂದೇ ಬೆಳೆಯ ಮೇಲೆ ಅವಲಂಬಿತವಾಗದೆ ಭಿನ್ನವಾಗಿ ಯೋಚಿಸಿ ಬೆಳೆ ಪರಿವರ್ತನೆಗೆ ಮುಂದಾದರೆ ಕೈ ತುಂಬಾ ಹಣ ಗಳಿಸಬಹುದು.
ಸಿದ್ಧಪ್ಪ ಬೆಳಕೇರಿ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT