ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಂಗಣ ಕಾಮಗಾರಿ ವಿಳಂಬ: ಸಚಿವ ಡಾ.ನಾರಾಯಣಗೌಡ ಅಸಮಾಧಾನ

Last Updated 25 ಅಕ್ಟೋಬರ್ 2021, 13:56 IST
ಅಕ್ಷರ ಗಾತ್ರ

ಬೀದರ್: ನೆಹರೂ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಗ್ಯಾಲರಿ ನಿರ್ಮಿಸುವ ಕಾರ್ಯ ನಿಧಾನಗತಿಯಲ್ಲಿ ಸಾಗಿದೆ. ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಕಾಮಗಾರಿ ವಹಿಸಿಕೊಂಡಿರುವ ಏಜೆನ್ಸಿಯನ್ನೇ ರದ್ದುಪಡಿಸಬೇಕು’ ಎಂದು ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಡಾ.ನಾರಾಯಣಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ರೇಷ್ಮೆ ಇಲಾಖೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

‘ಕೆಆರ್‌ಐಡಿಎಲ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವ ದೂರುಗಳು ಎಲ್ಲ ಜಿಲ್ಲೆಗಳಲ್ಲೂ ಇವೆ. ಸರ್ಕಾರದಿಂದ ಹಣ ಪಡೆದುಕೊಂಡ ಮೇಲೆ ಕಾಮಗಾರಿ ವಿಳಂಬ ಮಾಡುವುದು ಸರಿಯಲ್ಲ’ ಎಂದು ಎಚ್ಚರಿಸಿದರು.

‘ಕೆಆರ್‌ಐಡಿಎಲ್‌ಗೆ ಗ್ಯಾಲರಿ ನಿರ್ಮಾಣ ಕಾಮಗಾರಿ ಗುತ್ತಿಗೆ ನೀಡಲಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಸರಿಯಾಗಿ ಕೆಲಸ ಮಾಡದಿದ್ದರೆ ಕೆಆರ್‌ಐಡಿಎಲ್‌ ಅನ್ನೇ ಬ್ಲ್ಯಾಕ್ ಲಿಸ್ಟ್‌ಗೆ ಸೇರಿಸಲು ಪತ್ರ ಬರೆಯಲಾಗುವುದು. ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸದಿದ್ದರೆ ಟೆಂಡರ್ ರದ್ದು ಮಾಡಿ, ಬೇರೆಯವರಿಗೆ ಕೊಡಲಾಗುವುದು’ ಎಂದು ಹೇಳಿದರು.

‘ಕೆಆರ್‌ಐಡಿಎಲ್‌ಗೆ ಈಗಾಗಲೇ ₹ 75 ಲಕ್ಷ ಪಾವತಿಸಲಾಗಿದೆ. ಇನ್ನೂ ₹ 25 ಲಕ್ಷ ಬಿಡುಗಡೆಯಾಗಬೇಕಿದೆ’ ಎಂದು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಜಿ.ನಾಡಿಗೇರ ತಿಳಿಸಿದರು.

‘ಬೀದರ್‌ನಲ್ಲಿ ಫುಟ್ಬಾಲ್ ಆಟಗಾರರು ಹೆಚ್ಚಿದ್ದಾರೆ. ಒಂದು ಫುಟ್ಬಾಲ್ ಕ್ರೀಡಾಂಗಣ ಅಗತ್ಯವಿದೆ. ಸಿಂಥೆಟಿಕ್ ಟ್ರ್ಯಾಕ್ ಸಹ ನಿರ್ಮಾಣ ಆಗಬೇಕಿದೆ’ ಎಂದರು.

’ಭಾಲ್ಕಿಯಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗ ಇಲ್ಲ. ಅಗತ್ಯ ಜಾಗವನ್ನು ಗುರುತಿಸಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಮೂರು ಹೊಸ ತಾಲ್ಲೂಕುಗಳಲ್ಲೂ ಕ್ರೀಡಾಂಗಣಕ್ಕೆ ತಲಾ 5 ಎಕರೆ ಜಾಗ ಗುರುತಿಸಬೇಕು’ ಎಂದು ಸಚಿವರು ನಿರ್ದೇಶನ ನೀಡಿದರು.

ಬೀದರ್‌ ತಾಲ್ಲೂಕಿನ ಗೋರನಳ್ಳಿಯಲ್ಲಿ ಸೈಕ್ಲಿಂಗ್ ವೆಲೊಡ್ರಮ್‌ ನಿರ್ಮಿಸಲು ಜಾಗ ಗುರುತಿಸಲಾಗಿತ್ತು. ಅದಕ್ಕೆ ಕ್ರೀಡಾ ಪ್ರಾಧಿಕಾರ ಸಹ ಒಪ್ಪಿಗೆ ಸೂಚಿಸಿತ್ತು. ಜಿಲ್ಲೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಸೈಕ್ಲಿಸ್ಟ್‌ಗಳು ಇದ್ದಾರೆ. ಸೈಕ್ಲಿಂಗ್ ವೆಲೊಡ್ರಮ್‌ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಸೈಕ್ಲಿಸ್ಟ್ ಡಿ. ಶಿವರಾಜ್‌ ಸಚಿವರಿಗೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT