ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಟಕಚಿಂಚೋಳಿ | ಮಿಶ್ರ ಬೇಸಾಯ: ಅಧಿಕ ಲಾಭದ ನಿರೀಕ್ಷೆ

Published 18 ಡಿಸೆಂಬರ್ 2023, 5:36 IST
Last Updated 18 ಡಿಸೆಂಬರ್ 2023, 5:36 IST
ಅಕ್ಷರ ಗಾತ್ರ

ಖಟಕಚಿಂಚೋಳಿ: ಸಮೀಪದ ಡಾವರಗಾಂವ್ ಗ್ರಾಮದ ರೈತ ಪಂಢರಿನಾಥ್ ಶೆಡೋಳೆ ತಮ್ಮ ಮೂರೂವರೆ ಎಕರೆ ಪ್ರದೇಶದಲ್ಲಿ ಶುಂಠಿ, ಪಪ್ಪಾಯ, ಮೆಣಸಿನಕಾಯಿ ಮಿಶ್ರ ಬೆಳೆ ಬೆಳೆದು ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿದ್ದಾರೆ.

ಹಿರಿಯರಿಂದ ಬಳುವಳಿಯಾಗಿ ಬಂದ ಭೂಮಿಯಲ್ಲಿ 4*4 ಅಡಿ ಅಂತರದಲ್ಲಿ ಶುಂಠಿ ಬೆಳೆದಿದ್ದಾರೆ. ಅದರ ಮಧ್ಯದಲ್ಲಿ ಹಸಿ ಮೆಣಸಿನಕಾಯಿ ಹಾಗೂ ಪಪ್ಪಾಯ ಬೆಳೆ ಹಾಕಿದ್ದಾರೆ. ಬೆಳೆ ಹುಲುಸಾಗಿ ಬೆಳೆದು ನಿಂತಿದೆ.

‘ಈಗಾಗಲೇ ಮೆಣಸಿನಕಾಯಿ ಕಟಾವು ಮಾಡಿ ಮಾರಾಟ ಮಾಡಿದ್ದೇನೆ. ಪ್ರತಿ ಕ್ವಿಂಟಲ್‌ಗೆ ₹2500 ರಂತೆ 30 ಕ್ವಿಂಟಲ್ ಮಾರಾಟ ಮಾಡಿದ್ದೇನೆ. ಶುಂಠಿ ಬೆಳೆಯಲು ಭೂಮಿ ಹದ, ಬಿತ್ತನೆ, ಕೂಲಿಯಾಳುಗಳ ಕೂಲಿ, ಔಷಧಿ ಸಿಂಪಡಣೆ ಇನ್ನಿತರ ಖರ್ಚು ಸೇರಿ ₹2 ಲಕ್ಷ ವೆಚ್ಚವಾಗಿದೆ. ಈಗಾಗಲೇ ಮಾರಾಟ ಮಾಡಿದ ಮೆಣಸಿನಕಾಯಿಯಿಂದ ಅರ್ಧದಷ್ಟು ಆದಾಯ ದೊರಕಿದೆ. ಮುಂದಿನ ದಿನಗಳಲ್ಲಿ ಪಪ್ಪಾಯ ಹಾಗೂ ಶುಂಠಿಯಿಂದ ಎರಡರಷ್ಟು ಲಾಭ ಸಿಗಲಿದೆ’ ಎಂದು ರೈತ ಪಂಢರಿನಾಥ್ ಶೆಡೋಳೆ ಖುಷಿಯಿಂದ ಹೇಳುತ್ತಾರೆ.

‘ಹೊಲದಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ತರಕಾರಿ ಜೊತೆಗೆ ಕಾಲಕ್ಕೆ ತಕ್ಕಂತೆ ವಿವಿಧ ಬಗೆಯ ಬೆಳೆಗಳನ್ನು ಬೆಳೆಯುತ್ತಿದ್ದೇನೆ. ಇದರಿಂದ ಒಂದು ಬೆಳೆಯಿಂದ ನಷ್ಟವಾದರೆ ಇನ್ನೊಂದು ಬೆಳೆಯಿಂದ ಲಾಭವಾಗುತ್ತದೆ’ ಎನ್ನುತ್ತಾರೆ ಅವರು.

‘ಮಳೆಗಾಲ, ಚಳಿಗಾಲದಲ್ಲಿ ಪಪ್ಪಾಯ ಹಣ್ಣಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಪೋಷಕಾಂಶಗಳ ಆಹಾರವಾಗಿರುವ ಈ ಹಣ್ಣು ಆರೋಗ್ಯಕ್ಕೆ ಉತ್ತಮವಾಗಿದೆ. ವಿಟಮಿನ್ ಸಿ ಜೊತೆಗೆ ಅಧಿಕ ಕಾರ್ಬೋ ಹೈಡ್ರೇಟ್ ಹಾಗೂ ಔಷಧೀಯ ಗುಣ ಹೊಂದಿರುವ ಪಪ್ಪಾಯ ಆರೋಗ್ಯಕ್ಕೂ ಉತ್ತಮ. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಸಂಪಾದಿಸಬಹುದಾದ ಬೆಳೆ ಇದಾಗಿದೆ. ಹೀಗಾಗಿ ಶುಂಠಿ ಬೆಳೆಯ ಸಾಲಿನಲ್ಲಿ ನಾಟಿ ಮಾಡಲಾಗಿದೆ. ಇದರಿಂದ ಶುಂಠಿ ಬೆಳೆಗೂ ನೆರಳು ಸಿಗುತ್ತದೆ’ ಎಂದು ತಿಳಿಸುತ್ತಾರೆ.

ಕುಟುಂಬದ ಸದಸ್ಯರೆಲ್ಲರೂ ಸಾವಯವ ಕೃಷಿ ಪದ್ಧತಿಯನ್ನೇ ನಂಬಿ ವರ್ಷಪೂರ್ತಿ ಶ್ರಮವಹಿಸಿ ಕೃಷಿ ಆದಾಯದಿಂದ ಜೀವನ ನಡೆಸುತ್ತಿದ್ದಾರೆ. ದುಡಿಮೆಗೆ ತಕ್ಕಂತೆ ಆದಾಯವೂ ಲಭಿಸುತ್ತಿದೆ. ನೆಮ್ಮದಿಯ ಜೀವನಕ್ಕೆ ಮಿಶ್ರ ಬೇಸಾಯ ಪದ್ಧತಿ ನೆರವಾಗಿದೆ.

‘ರೈತರು ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿಗಳನ್ನು ಅನುಸರಿಸಬೇಕು. ಅದಕ್ಕೆ ಪೂರಕವಾಗಿ ರೈತ ಸಂಪರ್ಕ ಕೇಂದ್ರದಿಂದ ಅಗತ್ಯ ಮಾಹಿತಿ ಪಡೆಯಬೇಕು. ಇದರಿಂದ ಕಡಿಮೆ ಭೂಮಿ, ಕಡಿಮೆ ಸಮಯದಲ್ಲಿ ಹೆಚ್ಚಿನ ಆದಾಯ ಪಡೆಯಬಹುದು’ ಎಂದು ತಿಳಿಸುತ್ತಾರೆ ಪಂಢರಿನಾಥ್.

ರೈತ ಶೆಡೋಳೆ ತಮ್ಮ ಕಡಿಮೆ ಭೂಮಿಯಲ್ಲಿ ಮಿಶ್ರ ಬೇಸಾಯ ಮಾಡುವ ಮೂಲಕ ಹೆಚ್ಚಿನ ಲಾಭ ಪಡೆಯುತ್ತಿದ್ದು ಇತರೆ ರೈತರಿಗೆ ಮಾದರಿಯಾಗಿದ್ದಾರೆ.
ರಾಜಶೇಖರ ಶೇರಿಕಾರ ರೈತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT