ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರ್ಗೆ ಬಣ್ಣದ ಬಗ್ಗೆ ಜ್ಞಾನೇಂದ್ರರಿಂದ ಜಾತಿ ದುರಹಂಕಾರದ ಮಾತು: ಅರವಿಂದಕುಮಾರ ಅರಳಿ

Published 2 ಆಗಸ್ಟ್ 2023, 16:12 IST
Last Updated 2 ಆಗಸ್ಟ್ 2023, 16:12 IST
ಅಕ್ಷರ ಗಾತ್ರ

ಬೀದರ್‌: ‌‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಪ್ಪು ವರ್ಣದವರೆಂದು ಅವಮಾನಿಸಿ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಅವರ ಅಕ್ಷಮ್ಯ ಎಸಗಿದ್ದಾರೆ. ಅವರ ಹೇಳಿಕೆ ಖಂಡನಾರ್ಹ. ಮೇಲು, ಕೀಳು ಎಂದು ಜಾತಿ ದುರಹಂಕಾರದ ಮಾತುಗಳನ್ನು ಆಡಿದ್ದಾರೆ’ ಎಂದು ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಟೀಕಿಸಿದ್ದಾರೆ.

‘ಖರ್ಗೆಯವರು ಕಪ್ಪು ಬಣ್ಣದವರು, ಅವರಿಗೆ ತಲೆ ಕೂದಲಿನಿಂದಾಗಿ ಅಲ್ಪಸ್ವಲ್ಪ ಕಾಣುವಂತಿದ್ದಾರೆ’ ಎಂದು ಜ್ಞಾನೇಂದ್ರ ಮಾತಾಡಿರುವುದು ಹೀನಾಯ ಪ್ರವೃತ್ತಿಯ ಲಕ್ಷಣ. ಕಪ್ಪು ಬಣ್ಣದವರು ಎಂದರೆ ದಲಿತ/ಆದಿವಾಸಿ ಜಾತಿಯವರು, ಬಿಳಿ ಬಣ್ಣದವರೆಂದರೆ ಮೇಲು ಜಾತಿಯವರು ಎನ್ನುವ ಕೀಳು ಮನೋಭಾವ ಎದ್ದು ಕಾಣುತ್ತಿದೆ ಎಂದು ಕಿಡಿಕಾರಿದ್ದಾರೆ.

ಆರಗ ಜ್ಞಾನೇಂದ್ರ ಸೇರಿದಂತೆ ಅನೇಕರು ಪೂಜಿಸುವ ಉಡುಪಿಯ ಕೃಷ್ಣನ ಬಣ್ಣ ಕಪ್ಪಲ್ಲವೇ? ಅವರ ಊರಾದ ತೀರ್ಥಹಳ್ಳಿಯ ಶ್ರೀ ರಾಮೇಶ್ವರ ಮಂದಿರದ ಶಿವಲಿಂಗ ಕಪ್ಪು ಬಣ್ಣದ್ದಲ್ಲವೇ? ಭಾರತದ ಹವಾಮಾನದ ಕಾರಣದಿಂದಾಗಿ ಇಲ್ಲಿ ಸಹಜವಾಗಿಯೇ ಬಹುಸಂಖ್ಯಾತ ಜನರ ಬಣ್ಣ ಕಪ್ಪು. ಮಾಜಿ ಸಚಿವರ ಈ ರೀತಿಯ ಕ್ಷುಲ್ಲಕ ಹೇಳಿಕೆಯಿಂದ ಅಸಂಖ್ಯ ಜನರಿಗೆ ಅಪಮಾನವಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕಸ್ತೂರಿ ರಂಗನ್‌ ಪರಿಸರ ತಜ್ಞ ಅಲ್ಲ: ಶಾಸಕ ಆರಗ ಜ್ಞಾನೇಂದ್ರ ಆರೋಪ

ಕಸ್ತೂರಿರಂಗನ್ ವರದಿ ಇರುವುದು ಇಡೀ ವಿಶ್ವದಲ್ಲಿಯೇ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟದ ಅರಣ್ಯ ಉಳಿಸಲು. ಇದು ಈ ದೇಶದ ಸರ್ವ ಸಮುದಾಯದ ಸಂಪತ್ತೇ ಹೊರತು ಯಾವುದೇ ಒಂದು ಜಿಲ್ಲೆಯ, ಪ್ರದೇಶದವರ ಖಾಸಗಿ ಆಸ್ತಿ ಅಲ್ಲ. ಇದನ್ನು ಉಳಿಸುವುದು ಈ ದೇಶದ ಎಲ್ಲ ನಾಗರಿಕರ ಮೂಲಭೂತ ಕರ್ತವ್ಯಗಳಲ್ಲಿ ಒಂದು. ಈ ವರದಿಯ ಬಗ್ಗೆ ವಿರೋಧ ಮಾಡುತ್ತಿರುವ ಆರಗ ಜ್ಞಾನೇಂದ್ರ ಅವರು ಪರಿಸರ ನಾಶದ ಮಾತು ಆಡಿದ್ದಾರೆ. ಅಂದರೆ ಅವರು ಸಂವಿಧಾನ ವಿರೋಧಿ ಮಾತುಗಳನ್ನು ಆಡಿದ್ದಾರೆ. ಈ ಹಿನ್ನೆಲೆಯಲ್ಲಿ ವರ್ಣಭೇದ ಮಾಡಿ, ಜನರಲ್ಲಿ ಅಶಾಂತಿ ಸೃಷ್ಟಿಸಲು ಕಾರಣರಾಗಿದ್ದಾರೆ. ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇದಕ್ಕಾಗಿ ಅವರು ಬಹಿರಂಗ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.

ಈ ಹಿಂದೆ ಗೃಹಸಚಿವರಾಗಿ ಕೆಲಸ ಮಾಡಿರುವ ಆರಗ ಜ್ಞಾನೇಂದ್ರ ಅವರು ಈ ರೀತಿ ಮಾತನಾಡುತ್ತಾರೆ ಎಂದರೆ ಅದು ಅವರ ತಿಳಿವಳಿಕೆಯ ಕೊರತೆಯೋ ಅಥವಾ ಉತ್ತರ ಕರ್ನಾಟಕದ ಜನರ ಬಗ್ಗೆ ಅವರಿಗಿರುವ ಅಸಡ್ಡೆಯೋ ತಿಳಿಯುತ್ತಿಲ್ಲ. ತಾವು ಮಲೆನಾಡಿನ ಜನ ತುಂಬ ಶ್ರೇಷ್ಠರೂ, ಉತ್ತರ ಕರ್ನಾಟಕದವರು ಅಥವಾ ಕಲ್ಯಾಣ ಕರ್ನಾಟಕದವರು ದಡ್ಡರೂ ಎನ್ನುವ ಮನಃಸ್ಥಿತಿ ಅವರಿಗೆ ಇರಬಹುದು. ಇದು ಮಾನವೀಯತೆಗೆ ವಿರುದ್ಧವಾದ ನಡೆ ಎಂದು ಟೀಕಿಸಿದ್ದಾರೆ.

ಉತ್ತರ ಕರ್ನಾಟಕದವರಿಗೆ ಕಾಡು, ಗಿಡ-ಮರ ಎಂದರೆ ಗೊತ್ತಿಲ್ಲ ಎನ್ನುವುದು ಸರಿಯಲ್ಲ. ರಾಜ್ಯದಲ್ಲಿ ಅತಿ ದೊಡ್ಡ ಅರಣ್ಯ ಪ್ರದೇಶಗಳು, ವನ್ಯಜೀವಿ ಪ್ರದೇಶಗಳು ಉತ್ತರ ಕರ್ನಾಟಕ ಭಾಗದಲ್ಲಿವೆ. ಉತ್ತರ ಕನ್ನಡ, ಧಾರವಾಡದಲ್ಲಿ ಹರಡಿ ಪಶ್ಚಿಮ ಘಟ್ಟದ ಉತ್ತರ ತುದಿ ಮುಕ್ತಾಯವಾಗುವುದು ಬೆಳಗಾವಿ ಜಿಲ್ಲೆಯಲ್ಲಿ. ಇಡೀ ದೇಶದಲ್ಲಿ ಅಪರೂಪದ ಔಷಧೀಯ ಸಸ್ಯಗಳ ಸುರಕ್ಷಿತ ಅರಣ್ಯ ಕಲಬುರಗಿ ಜಿಲ್ಲೆಯ ಚಿಂಚೋಳಿ ಅರಣ್ಯ ಪ್ರದೇಶ ಹಾಗೂ ಬೀದರ್‌ನ ಹುಮನಾಬಾದ್‌ ಅರಣ್ಯ ಪ್ರದೇಶಗಳಲ್ಲಿವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಆರಗ ಜ್ಞಾನೇಂದ್ರ ಹೇಳಿಕೆಗೆ ಪೋತೆ ಖಂಡನೆ

ಮೈಸೂರು ನಂತರ ಅತಿ ದೊಡ್ಡ ಶ್ರೀಗಂಧದ ಅರಣ್ಯ ಪ್ರವೇಶವಿರುವುದು ಬೀದರ್ ಜಿಲ್ಲೆಯಲ್ಲಿ. ಇದರ ರಕ್ಷಣೆಗೆ ಜಪಾನ್ ಬ್ಯಾಂಕ್‍ನವರು 80ರ ದಶಕದಲ್ಲಿ ಭಾರತ ಸರ್ಕಾರದ ಜೊತೆ ಜಂಟಿ ಸರ್ವೇ ನಡೆಸಿ ಧನ ಸಹಾಯ ನೀಡಿದ್ದರು. ಇದುವರೆಗೂ ಅದು ಸುರಕ್ಷಿತವಾಗಿ ಉಳಿದುಕೊಂಡಿದೆ. ಚಿರತೆ, ಕಾಡು ಎಮ್ಮೆ, ಕೃಷ್ಣಮೃಗ ಹಾಗೂ ಅತಿ ಅಪರೂಪದ ಕಪ್ಪು ಜೇರಡೋಣ ‘ಬ್ಯಾಬಲರ್’ ಹಾಗೂ 'ದೆಮೊಸೆಲ್ ಕ್ರೇನ್’ ಮುಂತಾದ ಪಕ್ಷಿಗಳ ಪ್ರಭೇದಗಳು ಬೀದರ್ ಜಿಲ್ಲೆಯಲ್ಲಿ ಸಿಗುತ್ತವೆ. ಮಲ್ಲಿಕಾರ್ಜುನ ಖರ್ಗೆ ಹಾಗೂ ಅರಣ್ಯ, ಪರಿಸರ ಸಚಿವ ಈಶ್ವರ ಖಂಡ್ರೆಯವರು ಮೂಲತಃ ಬೀದರ್‌ ಜಿಲ್ಲೆಯವರು. ಒಬ್ಬ ವ್ಯಕ್ತಿಯ ವ್ಯಕ್ತಿತ್ವ, ಸಾಧನೆ ಅವರ ಕೆಲಸ, ಗುಣಗಳಿಂದ ನಿರ್ಧರಿಸಲಾಗುತ್ತದೆ ಹೊರತು ಬಣ್ಣದಿಂದಲ್ಲ. ಯಾವ ಪ್ರದೇಶದವರು ಎನ್ನುವುದರಿಂದಲೂ ಅಲ್ಲ. ಖಂಡ್ರೆ ಅವರು ಅರಣ್ಯ ಸಚಿವರಾದ ನಂತರ ರಾಜ್ಯದ ಅರಣ್ಯ ಹಾಗೂ ವನ್ಯ ಸಂಪತ್ತು ಉಳಿಸುವ ಕೆಲಸ ಮಾಡುತ್ತಿದ್ದಾರೆಯೇ ಹೊರತು ನಾಶಪಡಿಸುವ ಕೆಲಸ ಮಾಡುತ್ತಿಲ್ಲ. ಇದು ಜ್ಞಾನೇಂದ್ರ ಅವರಿಗೆ ಅರ್ಥವಾಗಬೇಕು ಎಂದು ಟೀಕಿಸಿದ್ದಾರೆ.

ಖರ್ಗೆಯವರು 50 ವರ್ಷಗಳ ಸುದೀರ್ಘ ಸಾರ್ವಜನಿಕ ಜೀವನದಲ್ಲಿ ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ. ಲಕ್ಷಾಂತರ ಜನರಿಗೆ ಅನುಕೂಲವಾಗಿದೆ. ಈ ಪ್ರದೇಶ, ರಾಜ್ಯ ಹಾಗೂ ದೇಶದ ಜನರಿಗೆ ಗೊತ್ತಿದೆ. ಅದನ್ನು ಅರಿಯದೆ ಮಾತನಾಡುವ ತಪ್ಪು ಯಾರೂ ಮಾಡಬಾರದು. ಅದನ್ನು ಜನಸಾಮಾನ್ಯರು ನಂಬುವುದಿಲ್ಲ. ಇನ್ನು, ಮಲೆನಾಡಿನ ಮೂಲದವರು ಮಾತ್ರ ಅರಣ್ಯ ಉಳಿಸ ಬಲ್ಲರೇ? ಕಡಿಮೆ ಮಳೆ ಬೀಳುವ ಪ್ರದೇಶದವರು ಅದೇ ಕೆಲಸ ಮಾಡಿದರೆ ಅದಕ್ಕೆ ಮಾನ್ಯತೆ ಇಲ್ಲವೇ? ಒಂದು ವೇಳೆ ಬರಗಾಲದ ಪ್ರದೇಶದವರು ಅರಣ್ಯ ಉಳಿಸುವ ಕೆಲಸ ಮಾಡಿದರೆ, ಅದಕ್ಕೆ ವಿರುದ್ಧವಾಗಿ ಮಲೆನಾಡು ಮೂಲದ ಮಾಜಿ ಸಚಿವರಾದ ಆರಗ ಜ್ಞಾನೇಂದ್ರ ಅವರಂತಹ ನಾಯಕರು ಅರಣ್ಯ ನಾಶ ಮಾಡಿದರೆ ಈ ದೇಶದ ಜನ, ಕಾನೂನು, ನ್ಯಾಯಾಲಯಗಳು ಸುಮ್ಮನೆ ಕಣ್ಣು ಮುಚ್ಚಿಕೊಂಡು ಇರಬೇಕೇ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಖರ್ಗೆ ಮೈಬಣ್ಣದ ಬಗ್ಗೆ ಅವಹೇಳನ: ಜ್ಞಾನೇಂದ್ರ ಕ್ಷಮೆಯಾಚಿಸುವಂತೆ ಕಾಂಗ್ರೆಸ್ ಆಗ್ರಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT