ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷತ್ತಿನ ಚುನಾವಣೆಗೆ ಮುಳೆ ಅಭ್ಯರ್ಥಿ: ಮರಾಠರ ಬೇಡಿಕೆಗೆ ಬಿಜೆಪಿ ಸ್ಪಂದನೆ

Published 2 ಜೂನ್ 2024, 15:39 IST
Last Updated 2 ಜೂನ್ 2024, 15:39 IST
ಅಕ್ಷರ ಗಾತ್ರ

ಬೀದರ್‌: ಜೂನ್‌ 13ರಂದು ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯಲಿರುವ ಚುನಾವಣೆಯಲ್ಲಿ ಮರಾಠ ಸಮಾಜದ ಮುಖಂಡ ಎಂ.ಜಿ. ಮುಳೆ ಅವರನ್ನು ಅಭ್ಯರ್ಥಿ ಮಾಡುವ ಮೂಲಕ ಬಿಜೆಪಿ ಜಿಲ್ಲೆಯ ಮರಾಠ ಸಮುದಾಯದ ಬೇಡಿಕೆಗೆ ಸ್ಪಂದಿಸಿದೆ.

ಲೋಕಸಭಾ ಚುನಾವಣೆಯಲ್ಲಿ ಮರಾಠ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂಬ ಹಕ್ಕೊತ್ತಾಯ ಆ ಸಮಾಜದಿಂದ ಕೇಳಿ ಬಂದಿತ್ತು. ‘ಮರಾಠರು ಬಿಜೆಪಿಗೆ ಮತ ಚಲಾವಣೆಗಷ್ಟೇ ಸೀಮಿತರಾಗಿದ್ದಾರೆ. ಯಾವುದೇ ಪ್ರಾತಿನಿಧ್ಯ ನೀಡುತ್ತಿಲ್ಲ. ಕಡೆಗಣಿಸಲಾಗುತ್ತಿದೆ’ ಎಂಬ ಆರೋಪಗಳು ಕೇಳಿ ಬಂದಿದ್ದವು. ಚುನಾವಣೆ ನಂತರ ಸಮಾಜಕ್ಕೆ ಸೂಕ್ತ ಸ್ಥಾನಮಾನ ಕೊಡುವ ಭರವಸೆ ಬಿಜೆಪಿ ಮುಖಂಡರು ಕೊಟ್ಟಿದ್ದರು. ಆದರೆ, ಅದಕ್ಕೆ ಬೆಲೆ ಕೊಟ್ಟಿರಲಿಲ್ಲ. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪದ್ಮಾಕರ ಪಾಟೀಲ ಅವರು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷ ತೊರೆದಿದ್ದರು. ಮರಾಠ ಸಮುದಾಯದ ಡಾ. ದಿನಕರ್‌ ಮೋರೆ ಅವರು ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ಈಗ ವಿಧಾನ ಪರಿಷತ್ತಿನ ಚುನಾವಣೆಗೆ ಎಂ.ಜಿ. ಮುಳೆ ಅವರನ್ನು ಅಭ್ಯರ್ಥಿಯನ್ನಾಗಿಸಿ ಮಾತು ಉಳಿಸಿಕೊಂಡಿದೆ. ಬಿಜೆಪಿ ಈ ನಿರ್ಧಾರವನ್ನು ಮರಾಠ ಸಮಾಜದ ಮುಖಂಡರು, ಪಕ್ಷದ ಪ್ರಮುಖರು ಸ್ವಾಗತಿಸಿದ್ದಾರೆ.

‘ಕೊಟ್ಟ ಮಾತು ಉಳಿಸಿಕೊಂಡರು’

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಚುನಾವಣೆ ಸಂದರ್ಭದಲ್ಲಿ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಮರಾಠ ಸಮುದಾಯದ ಹಿರಿಯ ಮುಖಂಡ ಎಂ.ಜಿ. ಮುಳೆ ಅವರು ಕರ್ನಾಟಕ ಮರಾಠ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ, ಬಸವಕಲ್ಯಾಣದ ಶಾಸಕರಾಗಿ ಕೆಲಸ ನಿರ್ವಹಿಸಿದ್ದಾರೆ. ವಿಧಾನ ಪರಿಷತ್ತಿನ ಚುನಾವಣೆಗೆ ಅವರನ್ನು ಅಭ್ಯರ್ಥಿ ಮಾಡಿರುವುದು ಜಿಲ್ಲೆಯ ಜನರಿಗೆ ಸಂತಸ ತಂದಿದೆ ಎಂದು ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ತಿಳಿಸಿದ್ದಾರೆ.

ಡಾ. ಶೈಲೇಂದ್ರ ಬೆಲ್ದಾಳೆ
ಡಾ. ಶೈಲೇಂದ್ರ ಬೆಲ್ದಾಳೆ

ಖೂಬಾ ಮೇಲೆ ಗೌರವ ಹೆಚ್ಚಿದೆ:

ರಾಜ್ಯದಲ್ಲಿ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೇಂದ್ರ ಸಚಿವ ಭಗವಂತ ಖೂಬಾ ಅವರು ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಮರಾಠ ಸಮುದಾಯದ ಮುಖಂಡ ಎಂ.ಜಿ. ಮುಳೆ ಅವರನ್ನು ಅಭ್ಯರ್ಥಿಯನ್ನಾಗಿಸಿರುವುದು ಅವರ ಮೇಲಿನ ಗೌರವ ಹೆಚ್ಚಿಸಿದೆ ಎಂದು ಮರಾಠ ಸಮಾಜದ ಮುಖಂಡ ದೀಪಕ್ ಪಾಟೀಲ ಚಾಂದೋರಿ ತಿಳಿಸಿದ್ದಾರೆ.

ದೀಪಕ್ ಪಾಟೀಲ ಚಾಂದೂರಿ
ದೀಪಕ್ ಪಾಟೀಲ ಚಾಂದೂರಿ

‘ಸಾಮಾಜಿಕ ನ್ಯಾಯ ಕಲ್ಪಿಸಿಕೊಟ್ಟ ಬಿಜೆಪಿ’:

‘ಚಿಂತಕರ ಚಾವಡಿ ಎಂದೇ ಕರೆಯಿಸಿಕೊಳ್ಳುವ ವಿಧಾನ ಪರಿಷತ್ತಿನ ಚುನಾವಣೆಗೆ ಬಸವಭೂಮಿ ಬಸವಕಲ್ಯಾಣದ ಮಾಜಿ ಶಾಸಕ, ಮರಾಠ ಸಮಾಜದ ಹಿರಿಯ ನಾಯಕ ಎಂ.ಜಿ.ಮುಳೆ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡುವ‌ ಮೂಲಕ ಪಕ್ಷದ ವರಿಷ್ಠರು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದಿದ್ದಾರೆ. ಮುಳೆ ಅವರು ಅನುಭವಿ ರಾಜಕಾರಣಿ, ಶಿಕ್ಷಣ ತಜ್ಞರು, ಜನಪರ ಕಾಳಜಿಯುಳ್ಳ ಚಿಂತಕರು ಹಾಗೂ ಸಮಾಜಪರ ಹೋರಾಟಗಾರರೂ ಆಗಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಜೋಶಿ ತಿಳಿಸಿದ್ದಾರೆ.

ಸದಾನಂದ ಜೋಶಿ
ಸದಾನಂದ ಜೋಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT