ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್: ಪತ್ರಿಕೆಗಳ ಜೀವಾಳ ಪತ್ರಿಕಾ ವಿತರಕರು

Published : 4 ಸೆಪ್ಟೆಂಬರ್ 2024, 4:55 IST
Last Updated : 4 ಸೆಪ್ಟೆಂಬರ್ 2024, 4:55 IST
ಫಾಲೋ ಮಾಡಿ
Comments

ಬೀದರ್‌: ದಿನಪತ್ರಿಕೆಗಳ ಜೀವಾಳ ಪತ್ರಿಕಾ ವಿತರಕರು, ಏಜೆಂಟರು ಅಂದರೆ ತಪ್ಪಾಗಲಾರದು.

ಸುದ್ದಿ ಮನೆಯಲ್ಲಿ ಸುದ್ದಿ ಸಂಗ್ರಹಿಸಿ, ಅಂದ ಚೆಂದದಿ ಪುಟ ವಿನ್ಯಾಸಗೊಳಿಸಿ ಮುದ್ರಣಕ್ಕೆ ಕಳಿಸಿಕೊಡಲಾಗುತ್ತದೆ. ಆದರೆ, ಆ ಪತ್ರಿಕೆ ಮುದ್ರಣಗೊಂಡ ನಂತರ ಓದುಗರ ಮನೆಬಾಗಿಲಿಗೆ ಸಕಾಲಕ್ಕೆ ತಲುಪಿಸುವ ದೊಡ್ಡ ಹೊಣೆಗಾರಿಕೆ ಇರುವುದು ಪತ್ರಿಕಾ ವಿತರಕರ ಮೇಲೆ. ಒಂದು ವೇಳೆ ಅವರು ಪತ್ರಿಕೆಗಳನ್ನು ಜನರಿಗೆ ತಲುಪಿಸದಿದ್ದರೆ ಸುದ್ದಿ ಮನೆಯಲ್ಲಿ ಮಾಡಿದ ಕೆಲಸವೆಲ್ಲ ವ್ಯರ್ಥವಾಗುತ್ತದೆ. ಹೀಗಾಗಿಯೇ ಪತ್ರಿಕಾ ವಿತರಕರು, ಏಜೆಂಟರ ಕೆಲಸ ಬಹಳ ದೊಡ್ಡದು.

ದೇಶದ ಗಡಿಭಾಗದಲ್ಲಿ ಸೈನಿಕರು ವರ್ಷದ 365 ದಿನವೂ ಬಿಸಿಲು, ಗಾಳಿ, ಮಳೆ ಲೆಕ್ಕಿಸದೆ ಪಹರೆ ಇರುತ್ತಾರೆ. ಎಂತಹುದೇ ಪ್ರತಿಕೂಲ ಸಂದರ್ಭ ಬಂದರೂ ಅದಕ್ಕೆ ಎದೆಗುಂದುವುದಿಲ್ಲ. ಸೈನಿಕರೆಂದರೆ ಶಿಸ್ತು, ಬದ್ಧತೆಗೆ ಹೆಸರು. ಅದೇ ರೀತಿಯ ಬದ್ಧತೆ, ಶಿಸ್ತು ಪತ್ರಿಕಾ ವಿತರಕರಲ್ಲೂ ಕಾಣಬಹುದು.

ಇನ್ನೂ ಸೂರ್ಯ ಹುಟ್ಟಿರಲಾರ ಅದಕ್ಕೂ ಮುಂಚೆ ನಮ್ಮ ಮನೆ ಹೊಸ್ತಿಲಲ್ಲಿ ದಿನಪತ್ರಿಕೆಗಳು ಬಂದಿರುತ್ತವೆ. ನಮ್ಮ ಮನೆಗಳಿಗೆಲ್ಲ ಆರು ಗಂಟೆಗೆ ಪತ್ರಿಕೆಗಳು ಬಂದು ತಲುಪುತ್ತವೆ. ಆದರೆ, ಏಜೆಂಟರು, ಪತ್ರಿಕಾ ವಿತರಕರ ಕೆಲಸ ತಡರಾತ್ರಿ ಎರಡು ಗಂಟೆಗೆಲ್ಲ ಆರಂಭವಾಗುತ್ತದೆ. ವ್ಯಾನ್‌ಗಳಲ್ಲಿ ಬಂಡಲ್‌ಗಳಲ್ಲಿ ಬರುವ ಪತ್ರಿಕೆಗಳನ್ನು ಸರಿಯಾಗಿ ಜೋಡಿಸಿಕೊಂಡು, ಆಯಾ ಭಾಗಕ್ಕೆ ಎಷ್ಟು ಪತ್ರಿಕೆಗಳು ಬೇಕೋ ಆ ಸಂಖ್ಯೆಗೆ ತಕ್ಕಂತೆ ಹೊಂದಿಸಿಕೊಂಡು, ವಿತರಕರ ಮೂಲಕ ಕಳಿಸಿಕೊಡುತ್ತಾರೆ. ಬೈಸಿಕಲ್‌, ಬೈಕುಗಳ ಮೇಲೆ ಪ್ರತಿಯೊಂದು ಬಡಾವಣೆಗಳಿಗೆ ತೆರಳಿ ನಿರ್ದಿಷ್ಟವಾದ ಮನೆಗಳಿಗೆ ಪತ್ರಿಕೆ ತಲುಪಿಸುತ್ತಾರೆ. ಇಡೀ ಜಗತ್ತಿನಲ್ಲಿ ನಡೆಯುತ್ತಿರುವ ವಿದ್ಯಮಾನವನ್ನು ಇವರ ಶ್ರಮದಿಂದ ಜನರು ಮನೆಯಲ್ಲಿಯೇ ಕುಳಿತು ತಿಳಿಯಲು ಸಾಧ್ಯವಾಗುತ್ತಿದೆ.

ಬೀದರ್‌ನಲ್ಲಿ ನಿತ್ಯ ಬೈಸಿಕಲ್‌ ಮೇಲೆ ತೆರಳಿ ಮನೆ ಮನೆಗೆ ಪತ್ರಿಕೆ ತಲುಪಿಸುವ ಬೀದರ್‌ನ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದ ಏಜೆಂಟ್‌ ವೈಜಿನಾಥ ಬಿರಾದಾರ
ಬೀದರ್‌ನಲ್ಲಿ ನಿತ್ಯ ಬೈಸಿಕಲ್‌ ಮೇಲೆ ತೆರಳಿ ಮನೆ ಮನೆಗೆ ಪತ್ರಿಕೆ ತಲುಪಿಸುವ ಬೀದರ್‌ನ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದ ಏಜೆಂಟ್‌ ವೈಜಿನಾಥ ಬಿರಾದಾರ

ಪತ್ರಿಕಾ ವಿತರಕರ ಬದ್ಧತೆ ಎಷ್ಟಿದೆಯೆಂದರೆ ಅದನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ. ಇದಕ್ಕೆ ತಾಜಾ ನಿದರ್ಶನ ಕೋವಿಡ್‌ ಸಂದರ್ಭ. ಲಾಕ್‌ಡೌನ್‌ನಿಂದ ಇಡೀ ದೇಶದ ಜನ ಅವರ ಕುಟುಂಬದ ಸದಸ್ಯರೊಂದಿಗೆ ಮನೆಯಲ್ಲಿ ಸುರಕ್ಷಿತವಾಗಿದ್ದರು. ಆದರೆ, ಅಂತಹ ಸನ್ನಿವೇಶದಲ್ಲೂ ಪತ್ರಿಕಾ ವಿತರಕರು ತಮ್ಮ ಕಾಯಕಕ್ಕೆ ಮೊದಲ ಆದ್ಯತೆ ಕೊಟ್ಟಿದ್ದರು. ಜೀವದ ಹಂಗು ತೊರೆದು ಕೆಲಸ ಮಾಡಿದ್ದರು. ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಅವರಿಗೆ ನಿಜವಾದ ಕೊರೊನಾ ವಾರಿಯರ್ಸ್‌ಗಳೆಂದು ಕರೆದು ಮೆಚ್ಚುಗೆ ಸೂಚಿಸಿದ್ದವು.

ಕೆಲ ಪತ್ರಿಕಾ ವಿತರಕರು ಇದನ್ನೇ ವೃತ್ತಿ ಮಾಡಿಕೊಂಡು ಉಪಜೀವನಕ್ಕೆ ಮಾರ್ಗ ಕಂಡುಕೊಂಡಿದ್ದಾರೆ. ಇನ್ನು, ಕೆಲವರು ಇದನ್ನು ಇತರೆ ಕಾಯಕಗಳೊಂದಿಗೆ ಮಾಡುತ್ತಾರೆ. ಮನೆ ಮನೆಗೆ ಪತ್ರಿಕೆಗಳನ್ನು ಹಾಕುವ ಬಹುತೇಕ ಯುವಕರಂತೂ ಅವರ ಓದಿನ ಖರ್ಚಿಗಾಗಿ ಈ ಕೆಲಸ ನೆಚ್ಚಿಕೊಂಡಿದ್ದಾರೆ. ಬೆಳಿಗ್ಗೆ 5ರಿಂದ 8ರವರೆಗೆ ಕೆಲಸ ಮುಗಿಯುವುದರಿಂದ ಬೆಳಿಗ್ಗೆ ಬೈಸಿಕಲ್‌ ಓಡಿಸುವುದರಿಂದ ವ್ಯಾಯಾಮವಾದಂತೆ ಆಗುತ್ತದೆ. ಜೊತೆಗೆ ಓದಿನ ಖರ್ಚಿಗೂ ಅನುಕೂಲವಾಗುತ್ತದೆ. ಈ ಕಾಯಕ ಮಾಡಿದ ಅನೇಕರು ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ.

ಪತ್ರಿಕೆ ಮಾರಾಟದ ಕಾಯಕದಲ್ಲಿ ತೊಡಗಿರುವ ಬೀದರ್‌ ತಾಲ್ಲೂಕಿನ ಚಿಕ್ಕಪೇಟೆ ‘ಪ್ರಜಾವಾಣಿ’ ಏಜೆಂಟ್‌ ಆಕಾಶ ಜೀರ್ಗೆ
ಪತ್ರಿಕೆ ಮಾರಾಟದ ಕಾಯಕದಲ್ಲಿ ತೊಡಗಿರುವ ಬೀದರ್‌ ತಾಲ್ಲೂಕಿನ ಚಿಕ್ಕಪೇಟೆ ‘ಪ್ರಜಾವಾಣಿ’ ಏಜೆಂಟ್‌ ಆಕಾಶ ಜೀರ್ಗೆ

‘ನಾನು ಸೇರಿದಂತೆ ಅನೇಕರು ಅನೇಕ ವರ್ಷಗಳಿಂದ ಈ ವೃತ್ತಿಯಲ್ಲಿ ಕೆಲಸ ಮಾಡುತ್ತ ಇದ್ದೇವೆ. ಇದರ ಮೂಲಕವೇ ಬದುಕು ಕಟ್ಟಿಕೊಂಡಿದ್ದೇವೆ. ಹಲವು ವರ್ಷಗಳಿಂದ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಪತ್ರಿಕಾ ವಿತರಕರಿಗೆ ಸರ್ಕಾರದಿಂದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ಆರೋಗ್ಯ ವಿಮೆ ನೀಡಬೇಕು. ಪತ್ರಿಕಾ ವಿತರಕರು ನಾವು ಅಸಂಘಟಿತ ವಲಯದಲ್ಲಿ ಬರುತ್ತೇವೆ. ಸರ್ಕಾರ ನಮ್ಮ ಕಡೆಗೂ ಗಮನಹರಿಸಬೇಕು’ ಎನ್ನುತ್ತಾರೆ ಏಜೆಂಟರಾದ ಸುನಿಲ್‌ ಕಮಠಾಣೆ, ವೈಜಿನಾಥ ಬಿರಾದಾರ, ಆಕಾಶ ಜೀರ್ಗೆ.

ಬೆಲೆ ಏರಿಕೆಯ ಇಂದಿನ ದಿನಮಾನಗಳಲ್ಲಿ ಅಲ್ಪ ಆದಾಯದಲ್ಲಿ ಬದುಕು ಸಾಗಿಸುವುದು ಕಷ್ಟ. ಪತ್ರಿಕಾ ಏಜೆಂಟರಿಗೆ ಜೀವ ವಿಮೆ ಉಚಿತ ವೈದ್ಯಕೀಯ ಸೌಲಭ್ಯ ಏಜೆಂಟರ ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸಬೇಕು
ಶಿವಕುಮಾರ ಕಾಶೆಂಪುರ, ಸಂಗೋಳಗಿ ಏಜೆಂಟ್
ಇಡೀ ಜಗತ್ತಿನಲ್ಲಿ ಆಗುತ್ತಿರುವ ಮಾಹಿತಿಯನ್ನು ಪತ್ರಿಕೆಗಳ ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಸರ್ಕಾರ ನಮ್ಮ ಕಲ್ಯಾಣಕ್ಕೆ ಯೋಜನೆ ರೂಪಿಸಬೇಕು
ಗುರುನಾಥ ಸ್ವಾಮಿ, ಏಜೆಂಟ್‌ ನೌಬಾದ್‌ ಬೀದರ್‌

ಬೇಸರಗೊಂಡರೆ ತಲುಪದು ಪತ್ರಿಕೆ ಮಾಣಿಕ ಆರ್.ಭುರೆ

ಬಸವಕಲ್ಯಾಣ: ಪತ್ರಿಕಾ ವಿತರಕರು ಒಂದು ದಿನ ಬೇಸರಗೊಂಡರೂ ಮನೆಗೆ ಪತ್ರಿಕೆ ತಲುಪದೆ ಲೋಕದ ಸಮಾಚಾರದಿಂದ ವಂಚಿತರಾಗಬೇಕಾಗುತ್ತದೆ. ಆದರೆ ಇವರು ಎಂದೂ ಬೇಸರಗೊಳ್ಳುವುದಿಲ್ಲ. ಕಾಯಕವನ್ನು ಹೆಚ್ಚು ಪ್ರೀತಿಸುವವರು. ಇಂಥ ಪರಿಶ್ರಮಜೀವಿ ಪತ್ರಿಕಾ ವಿತರಕರಿಗಾಗಿಯೇ ಸೆ. 4ರಂದು ಪ್ರತಿ ವರ್ಷ ಪತ್ರಿಕಾ ವಿತರಕರ ದಿನವಾಗಿ ಆಚರಿಸಲಾಗುತ್ತದೆ. ಮಳೆ‌ಗಾಳಿ ಚಳಿಯನ್ನು ಲೆಕ್ಕಿಸದೆ ಅಲ್ಪ ಲಾಭದಲ್ಲಿ ಜನರ ಓದುವ ಹಸಿವು‌ ತಣಿಸುತ್ತಾರೆ‌. ಜೊತೆಯಲ್ಲಿಯೇ ಪತ್ರಿಕಾ ಸಂಸ್ಥೆ ಬೆಳೆಸುವ ಮುಖ್ಯ ಆಧಾರ ಸ್ತಂಭಗಳಾಗಿಯೂ ಕೆಲಸ ಮಾಡುತ್ತಾರೆ. ‘ಪತ್ರಿಕೆಗಳು ಬೆಂಗಳೂರು ಮತ್ತು ಧಾರವಾಡಗಳಲ್ಲಿ ಮುದ್ರಣಗೊಳ್ಳುವ ಕಾಲದಲ್ಲಿ ಬಸವಕಲ್ಯಾಣದಂಥ ರಾಜ್ಯದ ಗಡಿ‌ ಭಾಗದ ನಗರಕ್ಕೆ ಅವುಗಳ ಬಂಡಲ್‌ಗಳು ಬಸ್‌ಗಳಲ್ಲಿ ಮಧ್ಯಾಹ್ನ ತಲುಪುತ್ತಿದ್ದವು. ಆ ಸಮಯಕ್ಕೂ ಸೈಕಲ್ ಮೇಲೆ ಅವುಗಳನ್ನು ಹೊತ್ತು ಸಾವಿರಾರು ಪ್ರತಿಗಳನ್ನು ಅಂಗಡಿ ಮತ್ತು ಮನೆಗಳಿಗೆ ಮುಟ್ಟಿಸುತ್ತಿದ್ದೇವು’ ಎಂದು ಅನೇಕ ವರ್ಷಗಳಿಂದ ಪತ್ರಿಕೆ ವಿತರಣಾ ಕಾರ್ಯದಲ್ಲಿ ನಿರತರಾಗಿರುವ ಬಸವಕಲ್ಯಾಣದ ಸಂಜೀವ ಮುದಗಡೆ ಅನುಭವ ಹಂಚಿಕೊಂಡರು.

‘ಕೋವಿಡ್ ಕಾಲದಲ್ಲಿ ಲಾಕ್‌ಡೌನ್ ಇದ್ದಾಗಲೂ ಯಾವುದೇ ಪರಿವೆ ಇಲ್ಲದೆ ಪತ್ರಿಕೆಗಳನ್ನು ವಿತರಿಸಿದ್ದೇವೆ' ಎಂದು ರಾಜೇಶ್ವರದ ಪತ್ರಿಕಾ ವಿತರಕ ಕಾರ್ತಿಕಸ್ವಾಮಿ ತಿಳಿಸಿದ್ದಾರೆ. ‘ಪತ್ರಿಕಾ ವಿತರಣೆ ಕೆಲ ಗಂಟೆಗಳಲ್ಲಿಯೇ ಮಾಡಿ ಮುಗಿಸಬಹುದಾದ ಕೆಲಸ ಆದರೂ ಬೆಳಿಗ್ಗೆ ಎದ್ದಕೂಡಲೇ ಪತ್ರಿಕೆ ಎದುರಿಗೆ ಇರಬೇಕೆಂದು ಜನ ಬಯಸುತ್ತಾರೆ. ಹಳ್ಳಿಗಾಡಿನಲ್ಲಿ ಇದಕ್ಕಾಗಿ ಬಹಳಷ್ಟು ಕಷ್ಟಪಡಬೇಕಾಗುತ್ತದೆ' ಎಂದು ಕೊಹಿನೂರ ಗ್ರಾಮದ ವಿತರಕ ಮಧುಕರ ಸೋಮವಂಶಿ ಹೇಳುತ್ತಾರೆ.

ಪತ್ರಿಕಾ ವಿತರಕರಿಗೂ ಸರ್ಕಾರ ವಿವಿಧ ಸೌಲಭ್ಯ ಒದಗಿಸಬೇಕೆಂಬ ಬೇಡಿಕೆ ಇತ್ತು. ಅಸಂಘಟಿತ ಕಾರ್ಮಿಕರ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕು ಎಂದು ಅನೇಕರು ಆಗ್ರಹಿಸಿದ್ದರು. ಅದರಲ್ಲಿ ಕೆಲವು ಸಮಸ್ಯೆ ಈಡೇರಿವೆ. ಸರ್ಕಾರ ಇವರಿಗೂ ಇ- ಶ್ರಮ ಕಾರ್ಡ್ ಕೊಡುತ್ತಿದೆ. ಬೆಂಗಳೂರಿನ ಪ್ರಜಾವಾಣಿ ಕಚೇರಿಯಲ್ಲಿ ಈ ವರ್ಷದ ಫೆಬ್ರವರಿಯಲ್ಲಿ 1 ಕ್ಕೆ ಕಾರ್ಮಿಕ ಸಚಿವ ಸಂತೋಷ ಲಾಡ ಸ್ವತಃ ಬಂದು ವಿತರಕರಿಗೆ ಇ–ಶ್ರಮ ಕಾರ್ಡ್ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿರುವುದು ಎಲ್ಲರಿಗೂ ಗೊತ್ತಿದೆ. ನಂತರ ಇತರೆ ಜಿಲ್ಲೆ ತಾಲ್ಲೂಕುಗಳಲ್ಲಿ ಕಾರ್ಡ್‌ ವಿತರಣೆ ಮಾಡಲಾಗಿದೆ. ಇದರಿಂದ ವಿವಿಧ ಸಾಮಾಜಿಕ ಭದ್ರತಾ ಸೇವೆಗಳು ಮತ್ತು ಕಲ್ಯಾಣ ಯೋಜನೆಗಳ ಲಾಭ ಇವರಿಗೆ ಮುಟ್ಟಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT