ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಟೋಬರ್‌ ಮೊದಲ ವಾರದಲ್ಲಿ ಜನಸ್ಪಂದನ: ಬಂಡೆಪ್ಪ ಕಾಶೆಂಪೂರ

Last Updated 6 ಸೆಪ್ಟೆಂಬರ್ 2018, 15:25 IST
ಅಕ್ಷರ ಗಾತ್ರ

ಬೀದರ್: ‘ಅಕ್ಟೋಬರ್‌ ಮೊದಲ ವಾರದಲ್ಲಿ ಜಿಲ್ಲಾ ಕೇಂದ್ರದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪುರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಪ್ರವಾಸಿ ಮಂದಿರದ ಆವರಣದಲ್ಲಿ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.

‘ಶಾಸಕರೊಂದಿಗೆ ಸಮಾಲೋಚನೆ ನಡೆಸಿ ಆಯಾ ತಾಲ್ಲೂಕಿನಲ್ಲೂ ಜನಸ್ಪಂದನ ಕಾರ್ಯಕ್ರಮ ನಡೆಸಲಾಗುವುದು. ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ದೂರದ ಬೆಂಗಳೂರಿಗೆ ಹೋಗುವ ಅಗತ್ಯವಿಲ್ಲ. ತಾಲ್ಲೂಕು ಮಟ್ಟದಲ್ಲೇ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲಾಗುವುದು’ ಎಂದು ಹೇಳಿದರು.

‘ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲೇ ನನ್ನ ಕಚೇರಿ ಆರಂಭಿಸಿದ್ದೇನೆ. ಇದಕ್ಕಾಗಿ ಒಂದು ಪೈಸೆ ಖರ್ಚು ಮಾಡಿಲ್ಲ. ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುವ ಯೋಜನೆಗಳಿಗೆ ಸಂಬಂಧಿಸಿದ ಪತ್ರ ವ್ಯವಹಾರ ನಡೆಸಲು ಒಬ್ಬ ವಿಶೇಷ ಅಧಿಕಾರಿ, ಕಂಪ್ಯೂಟರ್‌ ಅಪರೇಟರ್‌ ಹಾಗೂ ಸಿಬ್ಬಂದಿಯನ್ನು ನೇಮಕ ಮಾಡಲಾಗುವುದು’ ಎಂದು ತಿಳಿಸಿದರು.

‘ಪ್ರವಾಸೋದ್ಯಮ, ಶಿಕ್ಷಣ, ನೀರಾವರಿ, ಕೃಷಿ ಹಾಗೂ ತೋಟಗಾರಿಕೆಗೆ ಸಂಬಂಧಿಸಿದ ಯೋಜನೆಗಳನ್ನು ಸಕಾಲದಲ್ಲಿ ಅನುಷ್ಠಾನಗೊಳ್ಳುವಂತೆ ಮಾಡಲಾಗುವುದು’ ಎಂದರು.

ಹೆಸರು ಖರೀದಿ ಕೇಂದ್ರ
‘ಬೀದರ್‌ ಜಿಲ್ಲೆಯಲ್ಲಿ ಹೆಸರು, ತೊಗರಿ 172 ಖರೀದಿ ಕೇಂದ್ರಗಳನ್ನು ತೆರೆಯುವಂತೆ ಜಿಲ್ಲಾಧಿಕಾರಿ ಕೇಂದ್ರಕ್ಕೆ ಪ್ರಸ್ತಾವ ಕಳಿಸಿದ್ದರು. ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟದ(ನಾಫೇಡ್‌) ಅಧಿಕಾರಿಗಳು ನೇರವಾಗಿ ನನ್ನನ್ನು ಸಂಪರ್ಕ ಮಾಡುವ ಮೂಲಕ ಖರೀದಿ ಕೇಂದ್ರಗಳನ್ನು 40ಕ್ಕೆ ಇಳಿಸುವಂತೆ ಮನವಿ ಮಾಡಿದ್ದಾರೆ’ ಎಂದು ತಿಳಿಸಿದರು.

‘ನೋಂದಣಿ ಮಾಡಿಕೊಂಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(ಪಿಕೆಪಿಎಸ್‌)ಗಳಲ್ಲಿ 15 ದಿನಗಳಲ್ಲಿ ಹೆಸರು ಖರೀದಿ ಕೇಂದ್ರಗಳನ್ನು ತೆರೆಯುವಂತೆ ಸೂಚಿಸಲಾಗಿದೆ’ ಎಂದು ಹೇಳಿದರು.

‘ನಬಾರ್ಡ್‌ ಕೃಷಿ ಸಾಲವನ್ನು ಶೇಕಡ 40ರಿಂದ 75ಕ್ಕೆ ಹೆಚ್ಚಿಸುವಂತೆ ಒತ್ತಾಯಿಸಿ ಶೀಘ್ರದಲ್ಲೇ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಅವರು ನೇತೃತ್ವದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಳಿ ನಿಯೋಗ ಒಯ್ಯಲಾಗುವುದು’ ಎಂದು ತಿಳಿಸಿದರು

ಶಾಸಕ ರಹೀಂ ಖಾನ್‌, ನಗರಸಭೆ ಅಧ್ಯಕ್ಷೆ ಶಾಲಿನಿ ಚಿಂತಾಮಣಿ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ, ಮುಖಂಡ ರಾಜು ಚಿಂತಾಮಣಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾ ಚಿದ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT