ಬೀದರ್: ವಿದ್ಯಾರ್ಥಿಗಳಿಂದ ಆನ್‍ಲೈನ್ ತರಗತಿ ಬಹಿಷ್ಕಾರ

ಬೀದರ್: ಒಂದೇ ತಿಂಗಳಲ್ಲಿ ಎರಡು ಸೆಮಿಸ್ಟರ್‌ಗಳ ಪರೀಕ್ಷೆ ನಡೆಸುವುದನ್ನು ವಿರೋಧಿಸಿ ಸ್ನಾತಕ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್, ಡಿಪ್ಲೊಮಾ ಹಾಗೂ ಫಾರ್ಮಸಿ ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಶನಿವಾರ ಆನ್‍ಲೈನ್ ತರಗತಿ ಬಹಿಷ್ಕರಿಸಿದರು.
ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‍ಒ) ಕರೆ ಮೇರೆಗೆ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಬಿ.ವಿ.ಬಿ ಪದವಿ ಕಾಲೇಜು, ನೌಬಾದ್‍ನ ಸರ್ಕಾರಿ ಪದವಿ ಕಾಲೇಜು, ಸರ್ಕಾರಿ ಡಿಪ್ಲೊಮಾ, ಔರಾದ್, ಬಸವಕಲ್ಯಾಣ, ಹುಮನಾಬಾದ್, ಭಾಲ್ಕಿ, ಹುಲಸೂರು, ಚಿಟಗುಪ್ಪ ಹಾಗೂ ಕಮಲನಗರ ತಾಲ್ಲೂಕುಗಳಲ್ಲಿ ವಿದ್ಯಾರ್ಥಿಗಳು ಆನ್‍ಲೈನ್ ತರಗತಿಗಳಿಂದ ದೂರ ಉಳಿದರು.
‘ಹಿಂದಿನ ಸೆಮಿಸ್ಟರ್ ಪರೀಕ್ಷೆ ಕೈಬಿಡಬೇಕು ಹಾಗೂ ಕೋವಿಡ್ ಲಸಿಕೆಯ ಎರಡೂ ಡೋಸ್ ಕೊಡುವವರೆಗೆ ಆಫ್‍ಲೈನ್ ತರಗತಿ ಅಥವಾ ಪರೀಕ್ಷೆಗಳನ್ನು ನಡೆಸಬಾರದು ಎನ್ನುವ ಕೂಗಿಗೆ ಜಿಲ್ಲೆಯ ವಿದ್ಯಾರ್ಥಿಗಳು ದನಿಗೂಡಿಸಿದ್ದಾರೆ. ಸ್ವಯಂ ಪ್ರೇರಣೆಯಿಂದ ಆನ್‍ಲೈನ್ ತರಗತಿಗಳನ್ನು ಬಹಿಷ್ಕರಿಸಿದ್ದಾರೆ. ಪಾಲಕರು ಕೂಡ ಬೆಂಬಲ ನೀಡಿದ್ದಾರೆ’ ಎಂದು ಎಐಡಿಎಸ್‍ಒ ಜಿಲ್ಲಾ ಘಟಕದ ಸಂಚಾಲಕ ಹಣಮಂತ ಎಸ್.ಎಚ್ ತಿಳಿಸಿದರು.
‘ಗೂಗಲ್ ಫಾರ್ಮ್ ನಡೆಸಿದ ಸಮೀಕ್ಷೆಯಲ್ಲಿ 40 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಳೆದ ಸೆಮಿಸ್ಟರ್‌ನೊಂದಿಗೆ ಸದ್ಯದ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಬಾರದೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಜಾಸತ್ತಾತ್ಮಕ ಚರ್ಚೆಯ ನಂತರವೇ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ಬೇಡಿಕೆ ಮಂಡಿಸಿದ್ದಾರೆ’ ಎಂದು ಹೇಳಿದರು.
‘ಈಗಾಗಲೇ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಪ್ರತ್ಯೇಕ ಮನವಿ ಪತ್ರ ಸಲ್ಲಿಸಿದ್ದಾರೆ’ ಎಂದು ತಿಳಿಸಿದರು.
‘ಸ್ನಾತಕ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳ ಕಳೆದ ಸೆಮಿಸ್ಟರ್ ಪರೀಕ್ಷೆ ನಡೆಸುವುದು ಅವೈಜ್ಞಾನಿಕ ಹಾಗೂ ಅತಾರ್ಕಿಕ. ಹೀಗಾಗಿ ಸರ್ಕಾರ ಕೂಡಲೇ ತನ್ನ ನಿರ್ಧಾರ ಬದಲಿಸಬೇಕು. ಸಂಬಂಧಪಟ್ಟವರ ಅಭಿಪ್ರಾಯ ಪಡೆಯದೆ ಏಕಪಕ್ಷೀಯವಾಗಿ ತೀರ್ಮಾನ ಕೈಗೊಳ್ಳುವುದನ್ನು ನಿಲ್ಲಿಸಬೇಕು. ವಿದ್ಯಾರ್ಥಿ ಸಮೂಹದ ಮೇಲೆ ಅತ್ಯಧಿಕ ಹೊರೆ ಹೇರಬಾರದು. ಆಫ್‍ಲೈನ್ ತರಗತಿಗಳನ್ನು ಆರಂಭಿಸುವ ಮುನ್ನ ಎಲ್ಲ ವಿದ್ಯಾರ್ಥಿಗಳಿಗೂ ಕೋವಿಡ್ ಲಸಿಕೆ ನೀಡಬೇಕು’ ಎಂದು ಆಗ್ರಹಿಸಿದರು.
‘ಸರ್ಕಾರ ಹಾಗೂ ವಿಶ್ವವಿದ್ಯಾಲಯಗಳು ಕೂಡಲೇ ವಿದ್ಯಾರ್ಥಿಗಳ ಬೇಡಿಕೆಗಳಿಗೆ ಸ್ಪಂದಿಸಬೇಕು. ಇಲ್ಲವಾದಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.