ಭಾನುವಾರ, ಮೇ 16, 2021
24 °C

ರಾಜಕೀಯ ಚಟುವಟಿಕೆಗಳಿಗೆ ತೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ: ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ಶಾಂತಿಯುತ ಮತದಾನ ನಡೆಯುವ ಮೂಲಕ ಒಂದು ತಿಂಗಳಿಂದ ರಂಗೇರಿದ್ದ ರಾಜಕೀಯ ಚಟುವಟಿಕೆಗಳಿಗೆ ತೆರೆ ಬಿದ್ದಿತು.

ರಾಜ್ಯದ ಮುಖ್ಯಮಂತ್ರಿ ಹಾಗೂ ವಿವಿಧ ಪಕ್ಷಗಳ ರಾಷ್ಟ್ರ, ರಾಜ್ಯಮಟ್ಟದ ಘಟಾನುಘಟಿ ನಾಯಕರು ಪ್ರಚಾರದಲ್ಲಿ ಪಾಲ್ಗೊಂಡಿದ್ದರಿಂದ ಬೇಸಿಗೆಯ ಬಿಸಿಲಿನ ಜತೆಗೆ ಉಪ ಚುನಾವಣೆಯ ಕಾವೂ ಹೆಚ್ಚಿತ್ತು. ಆದರೆ, ಇನ್ನು ಮುಂದೆ ಮೇ 2ರ ಮತ ಎಣಿಕೆಯ ದಿನದ ವರೆಗೆ ರಾಜಕೀಯ ಸ್ತಬ್ಧತೆ ಆವರಿಸಲಿದೆ.

ಮಧ್ಯಾಹ್ನದವರೆಗೆ ಮತಗಟ್ಟೆಗಳಲ್ಲಿ ನಿರುತ್ಸಾಹದ ವಾತಾವರಣ ಇತ್ತಾದರೂ ಆಯಾ ಪಕ್ಷಗಳ ಅಭ್ಯರ್ಥಿಗಳು ಮಾತ್ರ ಬೆಳಿಗ್ಗೆಯೇ ತಮ್ಮ ತಮ್ಮ ವಾರ್ಡ್ ಗಳಲ್ಲಿ ಕುಟುಂಬ ಹಾಗೂ ಬೆಂಬಲಿಗರೊಂದಿಗೆ ಬಂದು ಮತ ಚಲಾಯಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಮಾಲಾ ಬಿ.ನಾರಾಯಣರಾವ್ ಅವರು ನಗರದ ತ್ರಿಪುರಾಂತ ಓಣಿಯ 21 ನೇ ವಾರ್ಡ್ ನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಪುತ್ರ ಗೌತಮ ಹಾಗೂ ನಗರಸಭೆ ಮಾಜಿ ಅಧ್ಯಕ್ಷೆ ಕಮಲಾಬಾಯಿ ಬೊಕ್ಕೆ ಮತ್ತಿತರರು ಜತೆಯಲ್ಲಿದ್ದರು. ಬಿಜೆಪಿ ಅಭ್ಯರ್ಥಿ ಶರಣು ಸಲಗರ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ 7.30 ಕ್ಕೆ ರೈತ ಭವನದ 17 ನೇ ವಾರ್ಡ್ ನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಜೆಡಿಎಸ್ ಅಭ್ಯರ್ಥಿ ಯಸ್ರಬ್ ಅಲಿ ಖಾದ್ರಿ ಅವರು ಕೆಇಬಿ ಹತ್ತಿರದ 26 ನೇ ವಾರ್ಡ್ ನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆಯಲ್ಲಿ ತಾಯಿಯೊಂದಿಗೆ ಬಂದು ಮತ ಚಲಾಯಿಸಿದರು. ನಗರಸಭೆ ಮಾಜಿ ಉಪಾಧ್ಯಕ್ಷ ಸಂಜೀವ ಶ್ರೀವಾಸ್ತವ ಇತರರು ಇದ್ದರು.

ಪಕ್ಷೇತರರಾಗಿ ಸ್ಪರ್ಧಿಸಿರುವ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ತ್ರಿಪುರಾಂತ ಓಣಿಯಲ್ಲಿನ 20 ನೇ ವಾರ್ಡ್ ನ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಬೆಂಬಲಿಗರು ಜತೆಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.