ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಶ್ರ ಬೇಸಾಯ ಪದ್ಧತಿ: ಶುಂಠಿ, ಪಪ್ಪಾಯಿ ಬೆಳೆ

Last Updated 7 ಆಗಸ್ಟ್ 2021, 2:29 IST
ಅಕ್ಷರ ಗಾತ್ರ

ಖಟಕಚಿಂಚೋಳಿ: ಸಮೀಪದ ಸುಲ್ತಾನಬಾದ್ ವಾಡಿ ಗ್ರಾಮದ ವಕೀಲರಾಗಿರುವ ಪದವೀಧರ ಬಲವಂತ ಉಪ್ಪಾರ ಅವರು ಮಿಶ್ರ ಬೆಳೆ ಪದ್ಧತಿ ಅಳವಡಿಸಿಕೊಂಡು ತಮ್ಮ ತೋಟದಲ್ಲಿ ಪಪ್ಪಾಯಿ ಬೆಳೆದು ₹ 5 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ.

ಎರಡೂವರೆ ಎಕರೆಯಲ್ಲಿ ಪಪ್ಪಾಯಿ ಬೆಳೆ ಬೆಳೆಸಿದ್ದಾರೆ. ಪ್ರತಿ ಎಕರೆಗೆ 900 ಸಸಿಗಳಂತೆ ಸುಮಾರು 2,400 ಸಸಿಗಳನ್ನು ತಂದು ಹೊಲದಲ್ಲಿ ನೆಟ್ಟಿದ್ದಾರೆ. ಭೂಮಿಗೆ ಸಾಕಷ್ಟು ಕೊಟ್ಟಿಗೆ ಗೊಬ್ಬರ ನೀಡಿ, ಮಣ್ಣು ಹದಗೊಳಿಸಿ ನಾಟಿಗೆ ಸಿದ್ಧಪಡಿಸಿಕೊಂಡು, 6-8 ಅಡಿ ಅಂತರದಲ್ಲಿ ಸಸಿ ನಾಟಿ ಮಾಡಿದ್ದಾರೆ.

ಬೆಳೆಗೆ ಹೆಚ್ಚಿನ ಪ್ರಮಾಣದಲ್ಲಿ ಕ್ರಿಮಿನಾಶಕ, ರಾಸಾಯನಿಕ ಗೊಬ್ಬರ ಬಳಕೆಯ ಬದಲು, ಸಾವಯವ ಗೊಬ್ಬರ, ಜೀವಾಮೃತ, ಕೃಪಾಮೃತ ಬಳಸಿರುವುದರಿಂದ ಖರ್ಚಿನ ಪ್ರಮಾಣವೂ ಕಡಿಮೆಯಾಯಿತು ಹಾಗೂ ಗುಣಮಟ್ಟದ ಇಳುವರಿ ಬರುತ್ತಿದೆ ಎನ್ನುತ್ತಾರೆ ರೈತ ಬಲವಂತ.

ಪ್ರಾರಂಭಿಕ ಹಂತದಿಂದ ಇಲ್ಲಿಯವರೆಗೆ ಪಪ್ಪಾಯಿ ಬೆಳೆಗೆ ₹60 ರಿಂದ ₹ 70 ಸಾವಿರ ಖರ್ಚು ವೆಚ್ಚ ಮಾಡಲಾಗಿದೆ. ಪ್ರತಿ ಕಾಯಿಯು 2 ರಿಂದ 3 ಕೆಜಿ ತೂಕ ಹೊಂದಿದೆ. ಈಗಾಗಲೇ ಪ್ರತಿ ಕೆಜಿಗೆ ₹11 ರಂತೆ ಮಾರಾಟ ಮಾಡಲಾಗಿದೆ. ಸದ್ಯ ಎರಡು ಬಾರಿ ಕಟಾವು ಮಾಡಿದ್ದು ₹ 1 ಲಕ್ಷ ಆದಾಯ ಬಂದಿದೆ. ಮುಂದೆ ಇನ್ನೂ 5-6 ಬಾರಿ ಕಟಾವು ಮಾಡಲಾಗುವುದು. ಇದರಿಂದ ಸುಮಾರು ₹ 5 ಲಕ್ಷ ಆದಾಯ ಬರುವ ನಿರೀಕ್ಷೆ ಇದೆ ಎಂದು ಅವರು ’ಪ್ರಜಾವಾಣಿ‘ಗೆ ತಿಳಿಸಿದರು.

’ರೈತರು ಮಿಶ್ರ ಬೆಳೆಗೆ ಪ್ರಥಮ ಆದ್ಯತೆ ನೀಡಬೇಕು. ಕೃಷಿಯಲ್ಲಿ ಪ್ರಾಮಾಣಿಕತೆ, ಬೆಳೆದ ಬೆಳೆಗಳ ಬಗ್ಗೆ ನಂಬಿಕೆ ಮುಖ್ಯವಾಗಿದೆ. ಪೂರ್ಣ ಪ್ರಮಾಣದಲ್ಲಿ ಕೃಷಿಯಲ್ಲಿ ತೊಡಗಿದಾಗ ಲಾಭ ಗಳಿಸಲು ಸಾಧ್ಯವಿದೆ’ ಎನ್ನುತ್ತಾರೆ ರೈತ ಬಲವಂತ ಉಪ್ಪಾರ.

ಪಪ್ಪಾಯಿ ಗಿಡಗಳ ನಡುವೆ 6 ಅಡಿ ಉದ್ದ ಹಾಗೂ 7 ಅಡಿ ಅಗಲ ಅಂತರವಿದೆ. ಈ ಜಾಗದಲ್ಲಿ ಮಿಶ್ರ ಬೆಳೆಯನ್ನೂ ಬಲವಂತ ಬೆಳೆಯುತ್ತಿದ್ದಾರೆ. ಈಗಾಗಲೇ ಶುಂಠಿ ಬೆಳೆ ತೆಗೆಯಲಾಗಿದೆ. ಆದರೆ ಮಾರುಕಟ್ಟೆಯಲ್ಲಿ ಶುಂಠಿ ಬೆಲೆ ಕುಸಿದಿರುವುದರಿಂದ ಲಾಭ ಅಷ್ಟಕಷ್ಟೇ. ಮುಂದೆ ಪಪ್ಪಾಯಿ ಮಾರಾಟದಿಂದ ಬರುವ ಹಣ ಅವರಿಗೆ ಲಾಭದ್ದಾಗಿರುತ್ತದೆ ಎಂದು ರೈತ ಮಲ್ಲಿಕಾರ್ಜುನ ಪಾಟೀಲ ತಿಳಿಸುತ್ತಾರೆ.

‘ನಿಜವಾಗಿಯೂ ಪಪ್ಪಾಯಿ ಹಣ್ಣು ಲಾಭ ತಂದುಕೊಟ್ಟಿದೆ. ಮಿಶ್ರ ಬೇಸಾಯ ಮಾಡಿದ್ದು ಕೂಡ ಅನುಕೂಲವಾಗಿದೆ. ಎಲ್ಲ ಬೆಳೆಗಳಿಂದಲೂ ಆದಾಯ ಬಂದಿದೆ. ಕಬ್ಬು, ಇನ್ನಿತರ ಬೆಳೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬೇಕಾಗುತ್ತದೆ. ಆದರೆ, ಪಪ್ಪಾಯಿಗೆ ಹೆಚ್ಚಿನ ನೀರು ಬೇಕಾಗುವುದಿಲ್ಲ ಎನ್ನುವುದು ನನ್ನ ಅನುಭವದ ಮಾತು ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT