ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ | ವೈಯಕ್ತಿಕ ಬದುಕಿಗಿಂತ ಜನಸೇವೆ ಮುಖ್ಯ: ನರ್ಸ್ ರೂಪಾವತಿ

ಶುಶ್ರೂಷಾ ಅಧಿಕಾರಿ ರೂಪಾವತಿ ಅಭಿಮತ
Last Updated 6 ಜೂನ್ 2020, 3:14 IST
ಅಕ್ಷರ ಗಾತ್ರ

ಬೀದರ್‌: ‘ವಿಶ್ವ ಶುಶ್ರೂಷಕರ ದಿನಾಚರಣೆ ಪ್ರಯುಕ್ತ ಮನೆಯಲ್ಲಿ ಮಕ್ಕಳು ಕೇಕ್ ಕತ್ತರಿಸಿ ಮಕ್ಕಳೆಲ್ಲ ಅಭಿನಂದಿಸಿದರು. ಹಿಂದೆಂದಿಗಿಂತಲೂ ಹೆಚ್ಚು ಹೆಮ್ಮೆ, ಖುಷಿ ಮತ್ತು ತೃಪ್ತಿ ತಂದಿತು. ರೋಗಿಗಳ ಸೇವೆ ಮಾಡಲು ಇನ್ನಷ್ಟು ಉತ್ಸಾಹ ದೊರೆಯಿತು.’

ಹೀಗೆಂದು ಕೊರೊನಾ ವಾರಿಯರ್‌ಗಳಂತೆ ಕಾರ್ಯ ನಿರ್ವಹಿಸುತ್ತಿರುವ ಶುಶ್ರೂಷಾ ಅಧಿಕಾರಿ ರೂಪಾವತಿ ಮಚ್ಚೆ ಅವರು ಬ್ರಿಮ್ಸ್‌ ಆಸ್ಪತ್ರೆಯಲ್ಲಿ ಕೊರೊನಾ ನಿಯಂತ್ರಣದ ಕಾರ್ಯಗಳನ್ನು ಮಾಡುವಾಗ ಉಂಟಾದ ಅನುಭವಗಳನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

ನಿತ್ಯ ಕರ್ತವ್ಯಕ್ಕೆ ತೆರಳುವಾಗ ಆತಂಕ, ದುಗುಡ ಮತ್ತು ಭಯ ಎನಿಸುತ್ತಿತ್ತು. ಯಾವಾಗ ಏನಾಗುತ್ತದೋ ಏನೋ ಎನ್ನುವ ಚಿಂತೆ ಕಾಡುತ್ತಿತ್ತು.ನಾನು ಮನೆಯಲ್ಲಿದ್ದರೂ ಸುಮಾರು ಒಂದೂವರೆ ತಿಂಗಳಿನಿಂದ ಸುರಕ್ಷಿತ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರುತ್ತಿದ್ದೇನೆ. ನಾನು ನನ್ನ ಮಗ ಹಾಗೂ ಮಗಳನ್ನು ಮುಟ್ಟಿ ಮಾತಾಡಿದ್ದು ನೆನಪೇ ಇಲ್ಲ ಎಂದು ಹೇಳಿದರು.

‘ನಾನು ನಿತ್ಯ ಸಾಯಂಕಾಲ ಕೆಲಸ ಮುಗಿಸಿ ಮನೆಗೆ ಬಂದಾಗ ನನ್ನ ಮಗ ಓಡಿ ಬಂದು ಮುತ್ತು ಕೊಡುತ್ತಿದ್ದ. ಈಗ ದೂರದಿಂದ ನಿಂತು ಪಿಳಿ ಪಿಳಿ ಕಣ್ಣು ಬಿಡುತ್ತ ನೋಡುತ್ತಿರುತ್ತಾನೆ. ಸ್ನಾನ ಮಾಡಿದ ನಂತರ ಮಗನೊಂದಿಗೆ ದೂರದಿಂದಲೇ ಮಾತಾಡುವಂತಹ ಪರಿಸ್ಥಿತಿ ಬಂದಿದೆ. ಹಾಗಂತ ಧೈರ್ಯ ಕಳೆದುಕೊಂಡಿಲ್ಲ’ ಎಂದು ತಿಳಿಸಿದರು.

‘ಕೋವಿಡ್ 19 ಸೋಂಕು ಹರಡಿದಾಗಿನಿಂದ ಒಂದೂ ರಜೆ ಪಡೆಯದೆ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ವೈಯಕ್ತಿಕ ಬದುಕಿಗಿಂತ ಜನಸೇವೆ ಮುಖ್ಯವೆಂದು ಭಾವಿಸಿದ್ದೇನೆ’ ಎಂದು ಹೇಳಿದರು.

‘ನಿರಂತರ ಗ್ಲೌಸ್ ಬಳಸಿ ಬಳಸಿ ಕೈ ಕೆಂಪಗಾಗಿ ಕಪ್ಪು ಬಣ್ಣಕ್ಕೆ ತಿರುಗಿವೆ. ಮಾಸ್ಕ್ ಬಳಸಿದಷ್ಟು ಮುಖ ಬೆಳ್ಳಗಿದ್ದು ಉಳಿದ ಭಾಗ ಕಪ್ಪಾಗಿ ಮುಖ ಎರಡೆರಡು ರೀತಿಯಾಗಿ ಕಾಣುತ್ತಿದೆ. ಆದರೆ ನಾವು ನಿಯಮ ಪಾಲಿಸಲೇ ಬೇಕಿದೆ. ನಮ್ಮನ್ನು ಸಂರಕ್ಷಿಸಿಕೊಂಡು ಪ್ರತಿಯೊಬ್ಬರನ್ನು ಉಳಿಸಿಕೊಳ್ಳಬೇಕಿದೆ. ಮಾನವೀಯತೆಯ ಮಾರ್ಗದಲ್ಲಿ ಸಾಗಬೇಕಿದೆ’ ಎಂದು ಕರ್ತವ್ಯನಿಷ್ಠೆಯನ್ನು ಮೆರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT