ಮಂಗಳವಾರ, ನವೆಂಬರ್ 24, 2020
22 °C

ಸಂಸದ ಸ್ಥಾನದ ಘನತೆ ಕಾಪಾಡಲಿ: ಬೀದರ್ ಶಾಸಕ ರಹಿಂ ಖಾನ್ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಸಂಸದ ಭಗವಂತ ಖೂಬಾ ಅವರು ಸ್ವಾತಂತ್ರ್ಯ ಹೋರಾಟಗಾರರಾದ, ಮಾಜಿ ಸಚಿವ ಭೀಮಣ್ಣ ಖಂಡ್ರೆ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರ ಕುರಿತು ವೈಯಕ್ತಿಕ ಟೀಕೆ ಮಾಡಿರುವುದು ಸರಿಯಲ್ಲ. ಅವರು ತಮ್ಮ ಸ್ಥಾನದ ಘನತೆ ಕಾಪಾಡಬೇಕು’ ಎಂದು ಬೀದರ್ ಶಾಸಕ ರಹಿಂ ಖಾನ್ ಹೇಳಿದ್ದಾರೆ.

‘ರಾಜಕೀಯವು ಅಭಿವೃದ್ಧಿ ಹಾಗೂ ಜನ ಹಿತಕ್ಕೆ ಬಳಕೆಯಾಗಬೇಕೇ ಹೊರತು, ಟೀಕೆ ಮತ್ತು ಟಿಪ್ಪಣಿಗಳಿಗೆ ವೇದಿಕೆಯಾಗಬಾರದು’ ಎಂದು ಖಾನ್ ಸಲಹೆ ನೀಡಿದ್ದಾರೆ.

‘ಭೀಮಣ್ಣ ಖಂಡ್ರೆ ಅವರು ಬೀದರ್ ಜಿಲ್ಲೆ ಹಾಗೂ ರಾಜ್ಯಕ್ಕೆ ನೀಡಿರುವ ಕೊಡುಗೆಯನ್ನು ಮರೆಯಲಾಗದು. ಅವರು ಲಿಂಗಾಯತರು ಸೇರಿದಂತೆ ರಾಜ್ಯದ ಸರ್ವ ಸಮುದಾಯಗಳ ಏಳಿಗೆಗೆ ಶ್ರಮಿಸಿದ್ದರು. ಅವರ ಕಾರ್ಯಗಳನ್ನು ರಾಜ್ಯದ ಜನ ಇಂದಿಗೂ ಸ್ಮರಿಸುತ್ತಾರೆ’ ಎಂದು ತಿಳಿಸಿದ್ದಾರೆ.

‘ಸಂಸದ ಖೂಬಾ ಅವರು ಅಭಿವೃದ್ಧಿಯ ವಿಷಯದಲ್ಲಿ ಪೈಪೋಟಿ ನಡೆಸಲಿ. ವಿರೋಧ ಮಾಡಬೇಕೆಂದೇ ವಿರೋಧ ಮಾಡುವುದು ಸರಿಯಲ್ಲ’ ಎಂದು ಹೇಳಿದ್ದಾರೆ.

‘ಭಾಲ್ಕಿ ವಸತಿ ಯೋಜನೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಈಶ್ವರ ಖಂಡ್ರೆ ಅವರು ಸಾವಿರಾರು ಮನೆ ಇಲ್ಲದವರಿಗೆ ಮನೆ ಮಂಜೂರು ಮಾಡಿಸಿ ನೆರವಾಗಿದ್ದಾರೆ. ಜಿಲ್ಲೆಯ ಇತರೆ ತಾಲ್ಲೂಕುಗಳಲ್ಲೂ ಮನೆ ಮಂಜೂರಾಗಿವೆ. ಆದರೆ, ಸಂಸದರು ಕೇವಲ ಭಾಲ್ಕಿಯ ವಸತಿ ಯೋಜನೆ ಕುರಿತು ಪದೇ ಪದೇ ದೂರು ಸಲ್ಲಿಸಿ, ಅನುದಾನ ತಡೆಗೆ ಕಾರಣರಾಗಿ, ಬಡ ಫಲಾನುಭವಿಗಳಿಗೆ ತೊಂದರೆ ಉಂಟು ಮಾಡುತ್ತಿರುವುದು ಸೂಕ್ತವಲ್ಲ’ ಎಂದು ತಿಳಿಸಿದ್ದಾರೆ.

‘ಈಶ್ವರ ಖಂಡ್ರೆ ಅವರು ಸಚಿವರಾಗಿದ್ದಾಗ ಬೀದರ್ ಜಿಲ್ಲೆ ಹಾಗೂ ರಾಜ್ಯದಲ್ಲಿ ಹಲವಾರು ಅಭಿವೃದ್ಧಿಯ ಕಾರ್ಯಗಳನ್ನು ಕೈಗೊಂಡಿದ್ದಾರೆ. ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಿದ್ದಾರೆ. ಸಂಸದ ಖೂಬಾ ಅವರು ಎರಡನೇ ಅವಧಿಗೆ ಸಂಸದರಾಗಿದ್ದಾರೆ. ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇದೆ. ಅವರು ಮತದಾರರ ಋಣ ತೀರಿಸಲು ಕೇಂದ್ರದ ಯೋಜನೆಗಳನ್ನು ತರುವ ಬಗ್ಗೆ ಹೆಚ್ಚಿನ ಗಮನ ಕೊಡುವುದು ಒಳ್ಳೆಯದು’ ಎಂದು ರಹಿಂ ಖಾನ್ ಸಲಹೆ ನೀಡಿದ್ದಾರೆ.

‘ಅಭಿವೃದ್ಧಿ ಕೆಲಸಗಳಿಗೆ ನಮ್ಮ ಸಹಕಾರ ಎಂದಿಗೂ ಇದ್ದೇ ಇರುತ್ತದೆ. ವೈಯಕ್ತಿಕ ಹಗೆತನ, ದ್ವೇಷದ ರಾಜಕಾರಣ ಬಿಟ್ಟು ಜನರ ಸಮಸ್ಯೆಗೆ ಸ್ಪಂದಿಸಬೇಕು’ ಎಂದು ಸಂಸದರಿಗೆ ಕಿವಿಮಾತು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.