ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ | 371(ಜೆ) ಕಾಯ್ದೆ ವಿರುದ್ಧ ಅಪಸ್ವರಕ್ಕೆ ಆಕ್ರೋಶ: 29ರಂದು ಪ್ರತಿಭಟನೆ

Published 27 ಜೂನ್ 2024, 16:12 IST
Last Updated 27 ಜೂನ್ 2024, 16:12 IST
ಅಕ್ಷರ ಗಾತ್ರ

ಬೀದರ್‌: ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿರುವ ಸಂವಿಧಾನದ 371(ಜೆ) ವಿರುದ್ಧ ಅಪಸ್ವರ ಎತ್ತಿರುವ ಬೆಂಗಳೂರಿನ ಹಸಿರು ಪ್ರತಿಷ್ಠಾನ ವೇದಿಕೆಯ ವಿರುದ್ಧ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ (ಜೂ.29) ನಗರದಲ್ಲಿ ಪ್ರತಿಭಟನಾ ರ್‍ಯಾಲಿ ಹಾಗೂ ಸಭೆ ಆಯೋಜಿಸಿ ತಮ್ಮ ವಿರೋಧ ದಾಖಲಿಸಲು ನಿರ್ಧರಿಸಿದ್ದಾರೆ. ಜಿಲ್ಲೆಯ ಎಲ್ಲ ಸಂಘಟನೆಗಳು, ಶಿಕ್ಷಣ ಸಂಸ್ಥೆಗಳ ಪ್ರಮುಖರು, ಯುವಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿ ಅಧ್ಯಕ್ಷ ಡಾ. ರಜನೀಶ ವಾಲಿ, ಪ್ರಧಾನ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ, ಸಹ ಸಂಚಾಲಕ ವಿನಯ್‌ ಮಾಳಗೆ, ‘ಕಲ್ಯಾಣ ಕರ್ನಾಟಕ ಭಾಗ ಮೊದಲಿನಿಂದಲೂ ಅನ್ಯಾಯಕ್ಕೆ ಒಳಗಾಗುತ್ತ ಬಂದಿದೆ. ಈ ಭಾಗಕ್ಕೆ ಸ್ವಾತಂತ್ರ್ಯ ಕೂಡ ಒಂದು ವರ್ಷ ತಡವಾಗಿ ಲಭಿಸಿತು. ವೈಜನಾಥ ಪಾಟೀಲ ಸೇರಿದಂತೆ ಅನೇಕರ ಹೋರಾಟದ ಪ್ರತಿಫಲವಾಗಿ 2013ರಲ್ಲಿ ಅಂದಿನ ಕಾಂಗ್ರೆಸ್‌ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ಮಾಡಿ ಕಲ್ಯಾಣ ಕರ್ನಾಟಕಕ್ಕೆ 371(ಜೆ) ಪ್ರಕಾರ ವಿಶೇಷ ಸ್ಥಾನಮಾನ ಕಲ್ಪಿಸಿದೆ. ಈಗಷ್ಟೇ ಇದು ಅನುಷ್ಠಾನಕ್ಕೆ ಬರುತ್ತಿದೆ. ಅಷ್ಟರಲ್ಲಾಗಲೇ ಅದರ ವಿರುದ್ಧ ಪಟ್ಟಭದ್ರ ಹಿತಾಸಕ್ತಿಗಳು ಧ್ವನಿ ಎತ್ತುತ್ತಿವೆ. ರಾಜ್ಯದ 24 ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದೆ ಎಂದು ಅಪಪ್ರಚಾರ ಮಾಡುತ್ತಿವೆ. ಜನವಿರೋಧಿ ಶಕ್ತಿಗಳಿಗೆ ಪ್ರತ್ಯುತ್ತರ ನೀಡಲು ಪ್ರತಿಭಟನೆ ಹಮ್ಮಿಕೊಂಡಿದ್ದು, ಪ್ರತಿಯೊಬ್ಬರೂ ಭಾಗವಹಿಸಿ ಒಗ್ಗಟ್ಟು ತೋರಬೇಕು ಎಂದು ಮನವಿ ಮಾಡಿದರು.

‘ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರ ನೇತೃತ್ವದಲ್ಲಿ ಹೋರಾಟ ನಡೆಸಲಾಗುತ್ತಿದೆ. ಇದು ಪಕ್ಷಾತೀತ ಹೋರಾಟ. ಈ ಭಾಗದ ಎಲ್ಲ ಜನಪ್ರತಿನಿಧಿಗಳಿ ಅದರಲ್ಲಿ ಭಾಗವಹಿಸಬೇಕು. 371(ಜೆ) ವಿರುದ್ಧ ಮಾತನಾಡುವುದನ್ನು ನಿಲ್ಲಿಸದಿದ್ದರೆ ಬರುವ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಬಂದ್‌ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘371(ಜೆ) ಜಾರಿಗೆ ನಂತರ ಶಿಕ್ಷಣ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಈ ಭಾಗದವರಿಗೆ ಕೆಲವು ಅನುಕೂಲಗಳಾಗಿವೆ. ಆದರೆ, ದೊಡ್ಡ ಮಟ್ಟದಲ್ಲಿ ಬದಲಾವಣೆಗಳು ಆಗಿಲ್ಲ. 371(ಜೆ) ಜಾರಿಗೆ ಬಂದಿರುವುದರಿಂದ ರಾಜ್ಯದ 24 ಜಿಲ್ಲೆಗಳಿಗೆ ಅನ್ಯಾಯವಾಗಿದೆ ಎಂದು ಹೇಳುತ್ತಿರುವುದು ಶುದ್ಧ ಸುಳ್ಳು. ದೇಶದ ಅನೇಕ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ. ಹಿಂದುಳಿದ ಪ್ರದೇಶವನ್ನು ಮುಖ್ಯವಾಹಿನಿಗೆ ತರಬೇಕೆನ್ನುವುದು ಅದರ ಉದ್ದೇಶ. ಅದನ್ನು ಅರ್ಥ ಮಾಡಿಕೊಳ್ಳದೇ ವಿರೋಧಿಸುತ್ತಿರುವುದು ಸರಿಯಲ್ಲ’ ಎಂದು ಹೇಳಿದರು.

‘ಕಳೆದ ಹತ್ತು ವರ್ಷಗಳಲ್ಲಿ ಯಾವುದೇ ನೇಮಕಾತಿಗಳು ಈ ಭಾಗದಲ್ಲಿ ನಡೆದಿಲ್ಲ. ಆದರೆ, ಎಲ್ಲ ರೀತಿಯ ಆಯ್ಕೆ ಪ್ರಕ್ರಿಯೆಗಳನ್ನು ನಿಲ್ಲಿಸಬೇಕೆಂದು ಸಚಿವ ಎಚ್‌.ಕೆ. ಪಾಟೀಲ ಅವರು ಹೇಳಿರುವುದು ಖಂಡನಾರ್ಹ. 371(ಜೆ)ಗೆ ಕೈ ಹಾಕಿದರೆ ರಕ್ತಕ್ರಾಂತಿ ಆಗುತ್ತದೆ. ಕೆಲವರು ದಕ್ಷಿಣದವರು, ಉತ್ತರದವರು ಎಂದು ಹುಳಿ ಹಿಂಡುತ್ತಿದ್ದಾರೆ. ಉತ್ತರದವರು ಮಲಗಿದರೆ ಕುಂಭಕರ್ಣ, ಎದ್ದರೆ ವೀರಭದ್ರ ಎನ್ನುವುದನ್ನು ಮರೆಯಬಾರದು’ ಎಂದು ಎಚ್ಚರಿಕೆ ನೀಡಿದರು.

‘371(ಜೆ) ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ರಚಿಸಬೇಕು. ನೇಮಕಾತಿಯಲ್ಲಿ ಕೃಪಾಂಕ ಮತ್ತು ವಯೋಮಿತಿ ಸಡಿಲಿಸಬೇಕು. ವ್ಯಾಜ್ಯಗಳ ನಿವಾರಣೆಗೆ ಪ್ರತ್ಯೇಕ ಟ್ರಿಬ್ಯುನಲ್‌ ರಚಿಸಬೇಕು. ಎಲ್ಲ ನೇಮಕಾತಿಗಳಿಗೆ ಮೆರಿಟ್‌ ಮೀಸಲಾತಿ ಘೋಷಿಸಬೇಕು. ಖಾಲಿ ಇರುವ ಎಲ್ಲ ಹುದ್ದೆಗಳನ್ನು ತುಂಬಬೇಕು. 371(ಜೆ) ಅನುಷ್ಠಾನಕ್ಕೆ ಸಲಹಾ ಸಮಿತಿ ರಚಿಸಬೇಕು’ ಎಂದು ಒತ್ತಾಯಿಸಿದರು.

ಹೋರಾಟ ಸಮಿತಿ ಪ್ರಧಾನ ಸಂಚಾಲಕ ಸುರೇಶ ಚನಶೆಟ್ಟಿ, ಪ್ರಮುಖರಾದ ರಾಜೇಂದ್ರಕುಮಾರ ವಣಗೇರಿ, ಚಂದ್ರಶೇಖರ ಪಾಟೀಲ, ಶಿವಶಂಕರ ಟೋಕರೆ ಹಾಜರಿದ್ದರು.

ಸಂವಿಧಾನದ 371(ಜೆ) ಕಲಂ ತಿದ್ದುಪಡಿ ವಿರೋಧಿಸುವುದು ಸಂವಿಧಾನವನ್ನು ವಿರೋಧಿಸುವುದು ಎರಡೂ ಒಂದೇ.
ರೇವಣಸಿದ್ದಪ್ಪ ಜಲಾದೆ ಪ್ರಧಾನ ಕಾರ್ಯದರ್ಶಿ ಕಕ ಹೋರಾಟ ಸಮಿತಿ
ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಎಲ್ಲ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಲ್ಲಿ ಮನವಿ ಮಾಡಲಾಗಿದ್ದು ಉತ್ತಮ ಬೆಂಬಲ ಸಿಕ್ಕಿದೆ.
ವಿನಯ ಮಾಳಗೆ ಸಹ ಸಂಚಾಲಕ ಕಕ ಹೋರಾಟ ಸಮಿತಿ
ಜೂನ್‌ 29ರಂದು ಎಲ್ಲ ವ್ಯಾಪಾರಿಗಳು ಕನಿಷ್ಠ ಎರಡು ತಾಸು ಮಳಿಗೆಗಳನ್ನು ಬಂದ್‌ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಬೇಕು.
ಬಿ.ಜಿ. ಶೆಟಕಾರ ಮುಖಂಡ ಕಕ ಹೋರಾಟ ಸಮಿತಿ
ಈಗಷ್ಟೇ 371(ಜೆ) ಸ್ಥಾನಮಾನದ ಫಲವನ್ನು ಕಲ್ಯಾಣ ಕರ್ನಾಟಕದವರು ಉಣ್ಣುತ್ತಿದ್ದಾರೆ. ಅದಕ್ಕೆ ಅಡ್ಡಗಾಲು ಸರಿಯಲ್ಲ
ಡಾ. ರಜನೀಶ್‌ ವಾಲಿ ಅಧ್ಯಕ್ಷ ಕಕ ಹೋರಾಟ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT