ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಇಲಾಖೆ ಜಂಟಿ ನಿರ್ದೇಶಕಿ ವಿರುದ್ಧ ಆಕ್ರೋಶ: ಅಧಿಕಾರಿಗಳಿಂದ ಸಾಮೂಹಿಕ ರಜೆ

ಕೃಷಿ ಇಲಾಖೆ ಜಂಟಿ ನಿರ್ದೇಶಕಿ ವಿರುದ್ಧ ಆಕ್ರೋಶ, ಪ್ರತಿಭಟನೆ
Last Updated 24 ಜೂನ್ 2021, 16:25 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯಲ್ಲಿ ಬಿತ್ತನೆ ಬೀಜ ಕೊರತೆಯಾಗಿ ರೈತರು ಬೀಜಕ್ಕಾಗಿ ಪರದಾಡುತ್ತಿದ್ದರೆ, ಕೃಷಿ ಇಲಾಖೆಯ ಅಧಿಕಾರಿಗಳು ಪರಸ್ಪರ ಕಚ್ಚಾಟದಲ್ಲಿ ಮುಳುಗಿದ್ದಾರೆ. ಜಂಟಿ ನಿರ್ದೇಶಕಿ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಆಂತರಿಕ ಜಗಳ ಇದೀಗ ಬೀದಿಗೆ ಬಂದಿದೆ.

ಸಮರ್ಪಕ ಕೆಲಸ ಮಾಡದ ಅಧಿಕಾರಿಗಳನ್ನು ವಿಚಾರಿಸುವುದು ತಪ್ಪೇ ಎಂದು ಜಂಟಿ ನಿರ್ದೇಶಕಿ ಪ್ರಶ್ನಿಸಿದರೆ, ಕೆಳ ಹಂತದ ಅಧಿಕಾರಿಗಳು ಹಾಗೂ ಕಚೇರಿ ಸಿಬ್ಬಂದಿಗೆ ಜಂಟಿ ನಿರ್ದೇಶಕಿ ಕಿರುಕಳ ನೀಡುತ್ತಿದ್ದು, ಕೆಳ ಹಂತದ ಸಿಬ್ಬಂದಿಯನ್ನು ಗುಲಾಮರಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಕೃಷಿ ಅಧಿಕಾರಿಗಳು ಆರೋಪಿಸಿದ್ದಾರೆ.

ಗುರುವಾರ ತಾಲ್ಲೂಕು ಮಟ್ಟದ ಕೃಷಿ ಅಧಿಕಾರಿಗಳು ದಿಢೀರ್ ಜಂಟಿ ನಿರ್ದೇಶಕರ ಕಚೇರಿಗೆ ಬಂದು ಅಧಿಕಾರಿಯ ವಿರುದ್ಧ ಪ್ರತಿಭಟನೆ ನಡೆಸಿದರು. ಜಿಲ್ಲೆಯ ಎಲ್ಲ ತಾಲ್ಲೂಕುಗಳ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಕೃಷಿ ಅಧಿಕಾರಿಗಳು ಸಾಮೂಹಿಕ ರಜೆ ಹಾಕಿ ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಾತನಾಡಿ, ‘ತಾರಾಮಣಿ ಅವರು ಜಿಲ್ಲೆಗೆ ಜಂಟಿ ನಿರ್ದೇಶಕರಾಗಿ ಬಂದ ನಂತರ ಕೃಷಿ ಇಲಾಖೆಯಲ್ಲಿ ಒಂದಿಲ್ಲೊಂದು ಸಮಸ್ಯೆ ಉದ್ಭವಿಸುತ್ತಿದೆ. 45 ದಿನಗಳ ಅವಧಿಯಲ್ಲಿ ಸಮಸ್ಯೆ ಗಂಭೀರ ಸ್ವರೂಪ ಪಡೆದಿದೆ’ ಎಂದರು.

‘ನೌಕರರು ಜಿಲ್ಲಾ ಸಂಘಕ್ಕೆ ದೂರು ನೀಡಿದ್ದಾರೆ. ಒಂದು ತಿಂಗಳ ಹಿಂದೆ ಕೃಷಿ ಇಲಾಖೆಯ ಕಾರ್ಯದರ್ಶಿ, ಆಯುಕ್ತರು, ಹಾಗೂ ಕೃಷಿ ಸಚಿವರಿಗೂ ದೂರು ಕೊಡಲಾಗಿದೆ. ಹಿರಿಯ ಅಧಿಕಾರಿಗಳು ಗೂಗಲ್‌ಝೂಮ್‌ನಲ್ಲಿ ಸಭೆ ಮಾಡಿ ತಿಳಿವಳಿಕೆ ನೀಡಿದ್ದಾರೆ. ಆದರೆ, ಅಧಿಕಾರಿಯ ಕಾರ್ಯ ವೈಖರಿಯಲ್ಲಿ ಬದಲಾವಣೆ ಕಂಡುಬಂದಿಲ್ಲ’ ಎಂದು ಹೇಳಿದರು.

‘ಜಂಟಿ ನಿರ್ದೇಶಕರನ್ನು ತಕ್ಷಣದಿಂದ ಬೇರೆ ಕಡೆಗೆ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿ ಕೃಷಿ ಇಲಾಖೆಯ ಹಲವು ಅಧಿಕಾರಿಗಳು ಸಾಮೂಹಿಕ ರಜೆ ಹಾಕಿದ್ದಾರೆ. ಆದ್ದರಿಂದ ಕೃಷಿ ಇಲಾಖೆಯ ಅಧಿಕಾರಿಗಳು ತ್ವರಿತ ಕ್ರಮ ಕೈಗೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು’ ಎಂದು ಒತ್ತಾಯಿಸಿದರು.

‘ಜಿಲ್ಲೆಯಲ್ಲಿ ಸೋಯಾ ಬಿತ್ತನೆ ಬೀಜ ಕೊರತೆ ಉಂಟಾಗಲು ಜಂಟಿ ನಿರ್ದೇಶಕಿ ತಾರಾಮಣಿ ಅವರು ಕೈಗೊಂಡ ತಪ್ಪು ನಿರ್ಧಾರಗಳೇ ಕಾರಣ’ ಎಂದು ಹುಮನಾಬಾದ್‌ನ ಸಹಾಯಕ ಕೃಷಿ ನಿರ್ದೇಶಕ ಮಲ್ಲಿಕಾರ್ಜುನ ದೂರಿದರು.

ಬೆಳೆ ವಿಮೆ ಯೋಜನೆಯಲ್ಲಿ ಬೀದರ್‌ ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಈ ಹಿಂದೆ ಕಾರ್ಯನಿರ್ವಹಿಸಿದ ಏಳು ಜಂಟಿ ನಿರ್ದೇಶಕರ ಅವಧಿಯಲ್ಲಿ ಜಿಲ್ಲೆಯಲ್ಲಿ ಒಂದೇ ಒಂದು ಸಮಸ್ಯೆ ಕಂಡು ಬಂದಿಲ್ಲ. ತಾರಾಮಣಿ ಅವರು ಬಂದ ನಂತರ ಇಲಾಖೆಯಲ್ಲಿ ಸಮಸ್ಯೆಗಳು ಹೆಚ್ಚಾಗಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರತಿಯೊಂದಕ್ಕೂ ವರದಿ ಕೇಳುತ್ತಿದ್ದಾರೆ. ಕಚೇರಿ ಸಮಯಕ್ಕಿಂತ ಮೊದಲೇ ಬರಬೇಕು. ರಾತ್ರಿ 8 ಗಂಟೆಯ ವರೆಗೂ ಕಚೇರಿಯಲ್ಲಿದ್ದು ಕೆಲಸ ಮಾಡಬೇಕು ಎಂದು ಸಿಬ್ಬಂದಿ ಮೇಲೆ ಒತ್ತಡ ಹಾಕುತ್ತಿದ್ದಾರೆ. ಅನಾರೋಗ್ಯದಿಂದ ಮಲಗಿದರೂ ಮಲಗಿಕೊಂಡೇ ವರದಿ ಕೊಡುವಂತೆ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದರು.

ಹೊಸದಾಗಿ ನೇಮಕಗೊಂಡಿರುವ ಪ್ರೊಬೆಷನರಿ ಡಿಕ್ಲೇರೇಷನ್‌ಗೆ ಅನಗತ್ಯವಾಗಿ ವಿಳಂಬ ಮಾಡುತ್ತಿದ್ದಾರೆ. ಹೇಳಿದ ಕೆಲಸ ಮಾಡದಿದ್ದರೆ ಪ್ರಮೋಷನ್‌ಗಳನ್ನು ತಡೆ ಹಿಡಿಯುವುದಾಗಿ ಹಾಗೂ ದಾಖಲೆ ಪುಸ್ತಕದಲ್ಲಿ ಕಾರ್ಯನಿರ್ವಹಣೆಯಲ್ಲಿ ವಿಫಲ ಎಂದು ಬರೆಯುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದರು.

ಸಹಾಯಕ ಕೃಷಿ ನಿರ್ದೇಶಕರಾದ ರಮೇಶ ಮಸ್ಕಲೆ, ಪಿ.ಎಂ.ಮಲ್ಲಿಕಾರ್ಜುನ, ಅಬ್ದುಲ್‌ ಮಾಜೀದ್, ಧೂಳಪ್ಪ, ವೀರಶೆಟ್ಟಿ, ಕೃಷಿ ಅಧಿಕಾರಿ ಗಳಾದ ಶಿವಕುಮಾರ, ಅರುಣ ಕುಮಾರ, ವಿಶಾಲಕುಮಾರ, ನೀಲಾಂಬಿಕಾ, ಭುವನೇಶ್ವರಿ, ಕೃಷ್ಣರಡ್ಡಿ, ಸತೀಶಕುಮಾರ, ಮಾರ್ಥಂಡ, ರಾಜಕುಮಾರ ಪ್ರವೀಣ ಮೊದಲಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT