ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯು ಪರೀಕ್ಷೆ: ಬೀದರ್ ಜಿಲ್ಲೆಗೆ 30ನೇ ಸ್ಥಾನ, ಫಲಿತಾಂಶದಲ್ಲಿ ಕೊಂಚ ಸುಧಾರಣೆ

Last Updated 15 ಏಪ್ರಿಲ್ 2019, 12:56 IST
ಅಕ್ಷರ ಗಾತ್ರ

ಬೀದರ್: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬೀದರ್್ ರಾಜ್ಯದ ಜಿಲ್ಲೆಗಳಲ್ಲಿ 30ನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷದ ಫಲಿತಾಂಶ ಶೇಕಡ 3.15 ರಷ್ಟುಹೆಚ್ಚಳವಾಗಿದೆ. ಕಳೆದ ವರ್ಷ ಜಿಲ್ಲೆ ಶೇಕಡ 52.63 ರಷ್ಟು ಫಲಿತಾಂಶ ಪಡೆದಿದ್ದರೆ, ಈ ವರ್ಷ ಶೇಕಡ 55.78 ರಷ್ಟು ಫಲಿತಾಂಶ ಗಳಿಸಿದೆ. ಹಾಗೆ ನೋಡಿದರೆ ನಿರೀಕ್ಷೆಯ ಮಟ್ಟದಲ್ಲಿ ಫಲಿತಾಂಶದಲ್ಲಿ ಸುಧಾರಣೆ ಕಂಡು ಬಂದಿಲ್ಲ.

ಪದವಿ ಪೂರ್ವ ಶಿಕ್ಷಣ ಇಲಾಖೆಯು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಹೆಚ್ಚುವರಿ ತರಗತಿಗಳನ್ನು ನಡೆಸಿದೆ. ರಜಾ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡಿದೆ. ಆದರೂ ವಿದ್ಯಾರ್ಥಿಗಳ ಓದಿದು ಹಾಗೂ ಫಲಿತಾಂಶದಲ್ಲಿ ಸುಧಾರಣೆ ಕಂಡು ಬಂದಿಲ್ಲ. ಹಿಂದಿನ ವರ್ಷ 31ನೇ ಸ್ಥಾನದಲ್ಲಿ ಇದ್ದ ಜಿಲ್ಲೆ 30 ಸ್ಥಾನಕ್ಕೆ ಏರಿದೆ ಎನ್ನುವುದೊಂದೇ ಸಮಾಧಾನ ತಂದಿದೆ.

‘ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ಜಿಲ್ಲೆಯ ಅನೇಕ ಕಾಲೇಜುಗಳಲ್ಲಿ
ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ. ಕಳೆದ ವರ್ಷ ಜೂನ್‌ನಲ್ಲಿ ತರಗತಿಗಳು ಆರಂಭವಾದರೂ ಸೆಪ್ಟೆಂಬರ್‌ ವರೆಗೂ ಅತಿಥಿ ಉಪನ್ಯಾಸಕರ ನೇಮಕವಾಗಲಿಲ್ಲ. ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಸರಿಯಾಗಿ ಪಾಠ ಬೋಧನೆಯಾಗದ ಕಾರಣ ಫಲಿತಾಂಶ ಕುಂಠಿತಗೊಂಡಿತು’ ಎಂದು ಸರ್ಕಾರಿ ಕಾಲೇಜೊಂದರ ಪ್ರಾಚಾರ್ಯ ಹೇಳುತ್ತಾರೆ.

ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲೇ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ವಿದ್ಯಾರ್ಥಿಗಳಿಗೆ ತಕ್ಷಣಕ್ಕೆ ಹೊಸ ಅಧ್ಯಯನ ವ್ಯವಸ್ಥೆಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಂವಹನ ಕೊರತೆಯೂ ಮುಖ್ಯ ಕಾರಣವಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಜಿಲ್ಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎನ್ನುವ ಕಾರಣಕ್ಕೆ ಶ್ರೀಮಂತರು ಹಾಗೂ ಮಧ್ಯಮ ವರ್ಗದವರು ತಮ್ಮ ಮಕ್ಕಳನ್ನು ಬೆಂಗಳೂರು, ದಾವಣಗೆರೆ, ಧಾರವಾಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕಾಲೇಜುಗಳಿಗೆ ಕಳಿಸುತ್ತಿದ್ದಾರೆ. ಬಡ , ಕೃಷಿಕರ, ಕೃಷಿ ಕೂಲಿ ಕಾರ್ಮಿಕರ ಮಕ್ಕಳು ಮಾತ್ರ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪಡೆದಿದ್ದಾರೆ. ಕೆಲ ಸರ್ಕಾರಿ ಕಾಲೇಜುಗಳ ಉಪನ್ಯಾಸಕರು ಅನುದಾನ ರಹಿತ ಕಾಲೇಜುಗಳಲ್ಲಿ ಪಾಠ ಮಾಡುತ್ತಿದ್ದು , ಸರ್ಕಾರಿ ಕಾಲೇಜಿನಲ್ಲಿ ಹೆಚ್ಚಿನ ಸಮಯ ಕೊಡುತ್ತಿಲ್ಲ. ಹೀಗಾಗಿ ಫಲಿತಾಂಶದಲ್ಲಿ ಹೆಚ್ಚಿನ ಸುಧಾರಣೆ ಕಂಡು ಬರುತ್ತಿಲ್ಲ’ ಎನ್ನುತ್ತಾರೆ.

‘ಗಣಿತ ಹಾಗೂ ಇಂಗ್ಲಿಷ್‌ನಲ್ಲಿ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಎರಡು ದಿನಗಳಲ್ಲಿ ಸ್ಪಷ್ಟವಾದ ಮಾಹಿತಿ ಲಭ್ಯವಾಗಲಿದೆ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಭಾರ ಉಪ ನಿರ್ದೇಶಕ ಮಲ್ಲಿಕಾರ್ಜುನ ಹೇಳುತ್ತಾರೆ.

ಶೈಕ್ಷಣಿಕ ವರ್ಷ ಫಲಿತಾಂಶ
2014 ಶೇ 44.95
2015 ಶೇ 54.04
2016 ಶೇ 52.07
2017 ಶೇ 42.05
2018 ಶೇ 52.63
2019 ಶೇ 55.78

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT