ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯ ಕೊರತೆ: ಬೆಳೆ ಹಾನಿ ಭೀತಿ

ಬಸವಕಲ್ಯಾಣ: ಹಲವೆಡೆ ಬಾವಿ, ಟ್ಯಾಂಕರ್ ನೀರಿಗೆ ಮೊರೆಹೋದ ರೈತರು
Last Updated 18 ಆಗಸ್ಟ್ 2021, 5:17 IST
ಅಕ್ಷರ ಗಾತ್ರ

ಬಸವಕಲ್ಯಾಣ: ಇದುವರೆಗಿನ ಮಳೆ ಪ್ರಮಾಣ ಕಡಿಮೆಯೇ ಆಗಿದೆ. ಇಂಥದರಲ್ಲಿ ಜುಲೈ- ಅಗಸ್ಟ್ ತಿಂಗಳಲ್ಲಿ ಸರಾಸರಿಗಿಂತ ಅತಿ ಕಡಿಮೆ ಮಳೆ ಸುರಿದ ಕಾರಣ ಅನೇಕ ಕಡೆ ಬೆಳೆಗಳಿಗೆ ಹಾನಿಯಾಗಿದೆ. ಎಲೆಗಳು ಬಾಡಿ ಹಳದಿ ಬಣ್ಣಕ್ಕೆ ತಿರುಗಿದ್ದರಿಂದ ರೈತರು ಚಿಂತೆಯಲ್ಲಿದ್ದಾರೆ.

ಎರಡು ದಿನಗಳಿಂದ ಅಲ್ಪಸ್ವಲ್ಪ ಮಳೆ ಆಗಿದ್ದು ಎಲ್ಲೆಡೆ ಮೋಡಕವಿದ ವಾತಾವರಣವಿದೆ. ಕೆಲ ಭಾಗದಲ್ಲಿ ಜಮೀನಿನಲ್ಲಿ ಕೆಸರು ಆಗುವಷ್ಟು ಮಳೆ ಸುರಿದಿದ್ದು ಬೆಳೆಗಳಿಗೆ ಅನುಕೂಲ ಆಗಿದೆ ಎನ್ನಲಾಗುತ್ತಿದೆ. ಶಾಸಕ ಶರಣು ಸಲಗರ ಅವರು ಇಂಥ ಸ್ಥಳಗಳಲ್ಲಿನ ಹೊಲಗಳಿಗೆ ಭೇಟಿನೀಡಿದ್ದಾರೆ. ಹಾಗೆ ನೋಡಿದರೆ, ಇತ್ತಿಚಿನ ವರ್ಷಗಳಲ್ಲಿ ರೈತರಿಗೆ ಯಾವುದಾದರೊಂದು ಪ್ರಕಾರದಲ್ಲಿ ಹಾನಿ ಆಗುತ್ತಲೇ ಇದೆ.

ಎರಡು ವರ್ಷಗಳಿಂದ ಅತಿವೃಷ್ಟಿ ಕಾಡಿತ್ತು. ಈ ಸಲ ಅನಾವೃಷ್ಟಿಯಿಂದ ಸಂಕಟ ಎದುರಾಗಿದೆ. ಮುಖ್ಯವೆಂದರೆ, ತಾಲ್ಲೂಕಿನ ಬೆಳೆ ಪದ್ಧತಿಯಲ್ಲಿ ಅಮೂಲಾಗ್ರ ಬದಲಾವಣೆ ಆಗಿದೆ. ಸಜ್ಜೆ, ತೊಗರಿ, ಹೈಬ್ರಿಡ್ ಜೋಳ ಬೆಳೆಯುತ್ತಿದ್ದವರು ನಂತರದಲ್ಲಿ ಉದ್ದು, ಹೆಸರು ಬೆಳೆಯುವುದಕ್ಕೆ ಮಹತ್ವ ನೀಡಿದರು. ಈಗ ಎಲ್ಲಿ ನೋಡಿದರಲ್ಲಿ ಬರೀ ಸೋಯಾಬಿನ್ ಕಾಣುತ್ತಿದೆ.

ಈ ಸಲ ಕೆಲ ರೈತರು ಎಳ್ಳು ಕೂಡ ಬಿತ್ತಿದ್ದಾರೆ. ಇದಲ್ಲದೆ, ವಾಡಿಕೆಯಂತೆ ತೊಗರಿ, ಸಜ್ಜೆಯೂ ಬೆಳೆದಿದ್ದಾರೆ. ಅವುಗಳಿಗೆ ಮಳೆ ಕೊರತೆ ಆಗಿದೆ. ಜಮೀನಿನಲ್ಲಿ ತೇವಾಂಶ ಇಲ್ಲದ್ದರಿಂದ ಎಳ್ಳು, ತೊಗರಿಗೆ ಹಾನಿಯಾಗಿದೆ. ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಉದುರುತ್ತಿವೆ. ಕಾಯಿ ಕಟ್ಟುವ ಪ್ರಕ್ರಿಯೆಯೂ ವಿಳಂಬ ಗತಿಯಲ್ಲಿ ನಡೆಯುತ್ತಿದೆ. ಆದ್ದರಿಂದ ಬಾವಿ, ಕೊಳವೆ ಬಾವಿ ಸೌಲಭ್ಯ ಇರುವವರು ಬೆಳೆಗಳಿಗೆ ನೀರು ಹರಿಸುತ್ತಿದ್ದಾರೆ. ಕೆಲವರು ಟ್ಯಾಂಕರ್ ಮೂಲಕವೂ ಜಮೀನಿಗೆ ನೀರು ಉಣಿಸುತ್ತಿರುವುದು ಕಾಣುತ್ತಿದೆ. ಸಸ್ತಾಪುರದ ರೈತ ಭಗವಾನ ಅವರ ಹೊಲದಲ್ಲಿನ ಎಳ್ಳು ಒಣಗುತ್ತಿದ್ದ ಕಾರಣ ಟ್ಯಾಂಕರ್ ನಿಂದ ನೀರು ಹರಿಸಲಾಗಿದೆ ಎಂದು ರೈತ ಸಂಘದ ಮಂಠಾಳ ಹೋಬಳಿ ಘಟಕದ ಅಧ್ಯಕ್ಷ ಅನಿಲ ಮರ್ಪಳ್ಳೆ ಹೇಳಿದ್ದಾರೆ.

ಹುಲಸೂರ ಹಾಗೂ ರಾಜೇಶ್ವರ ಹೋಬಳಿ ವ್ಯಾಪ್ತಿಗಳ ಕೆಲವೆಡೆ ಬೆಳೆ ಬಾಡುತ್ತಿರುವ ಕಾರಣ ಹನಿ ನೀರಾವರಿ ಕೈಗೊಳ್ಳಲು ಸಲಹೆ ನೀಡಲಾಗಿದೆ. ಆಗಸ್ಟ್ ತಿಂಗಳಲ್ಲಿ 27 ಮೀ.ಮೀ ಮಳೆ ಆಗಬೇಕಾಗಿತ್ತು. ಆದರೆ ಬರೀ 3 ಮೀ.ಮೀ ಮಳೆ ಬಂದಿದೆ. ಅಲ್ಲದೆ ಕೆಲ ದಿನ ಬರೀ ಬಿಸಿಲು ಇತ್ತು. ಎರಡು ದಿನಗಳಿಂದ ಜಿಟಿ ಜಿಟಿ ಮಳೆ ಬಂದಿದ್ದರೂ ಸಮರ್ಪಕ ಮಳೆ ಸುರಿದಿಲ್ಲ ಎಂದು ಕೃಷಿ ಸಹಾಯಕ ನಿರ್ದೇಶಕ ಮಾರ್ತಂಡ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT