ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಪರೀಕ್ಷೆ ಮಾಡಿಕೊಳ್ಳದವರಿಗೆ ಪ್ರವೇಶ ನಿರ್ಬಂಧ

ಮಹಾರಾಷ್ಟ್ರ ಗಡಿಯಲ್ಲಿ ಕಟ್ಟೆಚ್ಚರ: ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ
Last Updated 23 ಫೆಬ್ರುವರಿ 2021, 12:48 IST
ಅಕ್ಷರ ಗಾತ್ರ

ಬೀದರ್‌: ಮಹಾರಾಷ್ಟ್ರದಲ್ಲಿ ಮತ್ತೆ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಜಿಲ್ಲೆಯ ನಾಲ್ಕು ಗಡಿಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಆರಂಭಿಸಿ ತಪಾಸಣೆ ಬಿಗಿಗೊಳಿಸಲಾಗಿದೆ. ರೈಲಿನಲ್ಲಿ ಜಿಲ್ಲೆಗೆ ಬರುವ ಪ್ರಯಾಣಿಕರ ತಪಾಸಣೆಗೂ ಎರಡು ತಂಡಗಳನ್ನು ರಚಿಸಲಾಗಿದೆ.

ಗಡಿ ಆಚೆ ಹಾಗೂ ಈಚೆ ಅನೇಕ ಹಳ್ಳಿಗಳು ಇರುವ ಕಾರಣ ಗ್ರಾಮಸ್ಥರು ಆಟೊರಿಕ್ಷಾಗಳಲ್ಲಿ ಊರಿಗೆ ಹೋಗಿ ಬರುತ್ತಿದ್ದಾರೆ. ಚೆಕ್‌ಪೋಸ್ಟ್‌ ಸಿಬ್ಬಂದಿ ಆಟೊ, ಕಾರು ಹಾಗೂ ಬಸ್‌ ತಡೆದು ಥರ್ಮಲ್‌ ಸ್ಕ್ರೀನಿಂಗ್ ಮಾಡುತ್ತಿದ್ದಾರೆ. ಮುಂಬೈ ಹಾಗೂ ಪುಣೆಯಿಂದ ಬರುತ್ತಿರುವ ಪ್ರಯಾಣಿಕರನ್ನು ತೀವ್ರ ತಪಾಸಣೆಗೆ ಒಳಪಡಿಸುತ್ತಿದ್ದಾರೆ. ಕೋವಿಡ್‌ ಪರೀಕ್ಷೆ ಮಾಡಿಕೊಳ್ಳದ ಹಾಗೂ ತಪಾಸಣೆ ಮಾಡಿಸಿ ಕೊಂಡರೂ ದಾಖಲೆಗಳನ್ನು ತರದ ವ್ಯಕ್ತಿಗಳನ್ನು ಮರಳಿ ಕಳಿಸುತ್ತಿದ್ದಾರೆ.

ಬಸವಕಲ್ಯಾಣ ತಾಲ್ಲೂಕಿನ ಚಂಡಕಾಪುರ ಚೆಕ್‌ಪೋಸ್ಟ್‌ ಬಳಿ ತಪಾಸಣೆ ತೀವ್ರಗೊಳಿಸಲಾಗಿದೆ. ಬಸವಕಲ್ಯಾಣ ತಹಶೀಲ್ದಾರ್ ಸಾವಿತ್ರಿ ಸಲಗರ ರಾತ್ರಿ ವೇಳೆಯಲ್ಲೂ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆರೋಗ್ಯ ಇಲಾಖೆಯ ಸಿಬ್ಬಂದಿ ಪ್ರತಿಯೊಬ್ಬ ಪ್ರಯಾಣಿಕನ ತಪಾಸಣೆ ನಡೆಸಿದ ನಂತರವೇ ಗಡಿಯೊಳಗೆ ಪ್ರವೇಶ ನೀಡುತ್ತಿದ್ದಾರೆ. ಚಂಡಕಾಪುರ ಚೆಕ್‌ಪೋಸ್ಟ್‌ವೊಂದರಲ್ಲೇ ಮಂಗಳವಾರ 250 ಜನರ ತಪಾಸಣೆ ಮಾಡಲಾಗಿದೆ.

ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಔರಾದ್ ತಾಲ್ಲೂಕಿನ ವನಮಾರಪಳ್ಳಿ ಹಾಗೂ ಕಮಲನಗರ ಚೆಕ್ ಪೋಸ್ಟ್‌ಗಳಲ್ಲಿ ಸಹ 200 ಜನರ ಆರೋಗ್ಯ ತಪಾಸಣೆ ಮಾಡಲಾಗಿದೆ. ತಪಾಸಣೆ ವೇಳೆ ಪಾಸಿಟಿವ್‌ ಪ್ರಕರಣಗಳು ಕಂಡು ಬಂದಿಲ್ಲ ಎಂದು ಔರಾದ್ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ,ಶರಣಯ್ಯ ಸ್ವಾಮಿ ತಿಳಿಸಿದ್ದಾರೆ.

15 ಬಸ್‌ಗಳ ತಪಾಸಣೆ ನಡೆಸಿದಾಗ ಮುಂಬೈನಿಂದ ಇಬ್ಬರು ಹಾಗೂ ಲಾತೂರ್‌ನಿಂದ ಒಬ್ಬರು ಬಂದಿರುವುದು ಗೊತ್ತಾಯಿತು. ಹೆಚ್ಚು ಬಿಸಿಲು ಇರುವ ಕಾರಣ ಥರ್ಮಲ್‌ ಸ್ಕ್ರೀನಿಂಗ್ ಸಂದರ್ಭದಲ್ಲಿ ದೇಹದ ಉಷ್ಣಾಂಶ ಹೆಚ್ಚು ತೋರಿಸುತ್ತಿದೆ. ಸ್ವಲ್ಪ ಹೊತ್ತು ಕೂರಿಸಿ ತಪಾಸಣೆ ನಡೆಸಿದರೆ ಸಾಮಾನ್ಯ ಉಷ್ಣಾಂಶ ತೋರಿಸುತ್ತಿದೆ. ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದ ನಂತರವೇ ಜಿಲ್ಲೆಯ ಗಡಿಯೊಳಗೆ ಪ್ರವೇಶ ನೀಡಲಾಗುತ್ತಿದೆ.

ಮಹಾರಾಷ್ಟ್ರದ ಗಡಿ ಔರಾದ್‌(ಶಾ) ಮಾರ್ಗವಾಗಿ ಜಿಲ್ಲೆಗೆ ಬರುತ್ತಿರುವ ಜನರನ್ನು ಹುಲಸೂರು ಬಳಿ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಹುಲಸೂರು ತಹಶೀಲ್ದಾರ್ ಶಿವಾನಂದ ಮೇತ್ರೆ, ಕಂದಾಯ ನಿರೀಕ್ಷಕ
ಮೌನೇಶ್ವರ ಸ್ವಾಮಿ, ಡಾ.ಪ್ರತಾಪ ಬಿರಾದಾರ ಹಾಗೂ ಹುಲಸೂರ ಠಾಣೆಯ ಪೊಲೀಸರು ತಂಡ ರಚಿಸಿಕೊಂಡು ಪ್ರಯಾಣಿಕರ ಮೇಲೆ ನಿಗಾ ಇಟ್ಟಿದ್ದಾರೆ.

‘ಕೋವಿಡ್‌ ಪರೀಕ್ಷೆ ಮಾಡಿಕೊಳ್ಳದವರಿಗೆ ಜಿಲ್ಲೆಯೊಳಗೆ ಪ್ರವೇಶ ನಿರ್ಬಂಧಿಸಲಾಗಿದೆ. ಮುಂಬೈ, ಪುಣೆಯಿಂದ ಬರುತ್ತಿರುವವರ ಕಡ್ಡಾಯ ತಪಾಸಣೆ ನಡೆಸಲಾಗುತ್ತಿದೆ. ದಾಖಲೆಗಳು ಇಲ್ಲದಿದ್ದರೆ ಮರಳಿ ಕಳಿಸಲಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ವಿ.ಜಿ.ರೆಡ್ಡಿ ತಿಳಿಸಿದ್ದಾರೆ.

‘ಲಾತೂರ್‌– ಯಶವಂತಪುರ, ಔರಂಗಾಬಾದ್‌–ಹೈದರಾಬಾದ್, ನಾಂದೇಡ್–ಬೆಂಗಳೂರು, ಮುಂಬೈ–ಬೀದರ್ ರೈಲುಗಳು ಬೀದರ್‌ ಮಾರ್ಗವಾಗಿ ಸಂಚರಿಸುತ್ತಿವೆ. ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಆರೋಗ್ಯ ತಪಾಸಣೆಗೆ ಎರಡು ತಂಡಗಳಲ್ಲಿ ವೈದ್ಯಕೀಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕೃಷ್ಣಾರೆಡ್ಡಿ ತಿಳಿಸಿದ್ದಾರೆ.

ರೈಲು ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್‌ ಧರಿಸುವಂತೆ ಸೂಚನೆ ನೀಡಲಾಗುತ್ತಿದೆ. ರೈಲ್ವೆ ಪೊಲೀಸರು ಹಾಗೂ ನಾಗರಿಕ ಪೊಲೀಸರ ನೆರವು ಪಡೆಯಲಾಗುತ್ತಿದೆ’ ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT