ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ದನದ ಡಾಕ್ಟರ್ ಎಂದವರೇ ಬೆನ್ನು ತಟ್ಟಿದರು..

ಅಶ್ವಿನಿಗೆ 11 ಚಿನ್ನದ ಪದಕ
Last Updated 29 ಆಗಸ್ಟ್ 2018, 20:07 IST
ಅಕ್ಷರ ಗಾತ್ರ

ಬೀದರ್‌: ‘ಪಶು ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ಪಡೆದಾಗ ಪರಿಚಯದ ಬಹಳಷ್ಟು ಜನ ‘ದನದ ಡಾಕ್ಟರ್’ ಎಂದು ಹೀಯಾಳಿಸಿದರು. ಈಗ ಪದವಿಯಲ್ಲಿ 11 ಚಿನ್ನದ ಪದಕ ಬಂದಿರುವುದು ಕೇಳಿ ಬೆನ್ನು ಚಪ್ಪರಿಸುತ್ತಿದ್ದಾರೆ...’

ಹಾಸನದ ಪಶು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಹಬ್ಬನಕುಪ್ಪೆ ಗ್ರಾಮದ ಅಶ್ವಿನಿ ಅಶೋಕ ಹೀಗೆ ಖುಷಿಯಿಂದಲೇ ಮಾತು ಆರಂಭಿಸಿದರು.

‘ನನ್ನ ತಂದೆ ಅಶೋಕ ಬಿಎಸ್ಸಿ ಪದವಿ ಪಡೆದಿದ್ದರೂ ವೃತ್ತಿಯಲ್ಲಿ ಕೃಷಿಕರು. ತಾಯಿ ಕಸ್ತೂರಿ ಮನೆ ಕೆಲಸ ಮಾಡುತ್ತಾರೆ. ಕನ್ನಡ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ನಾನು ಶಿಕ್ಷಕರ ಪ್ರೋತ್ಸಾಹ ಹಾಗೂ ಪಾಲಕರ ಬೆಂಬಲದಿಂದಾಗಿಯೇ ಪದವಿಯಲ್ಲಿ 11 ಚಿನ್ನದ ಪದಕಗಳನ್ನು ಪಡೆಯಲು ಸಾಧ್ಯವಾಗಿದೆ’ ಎಂದು ಕೃತಜ್ಞತಾ ಭಾವ ವ್ಯಕ್ತಪಡಿಸಿದರು.

‘ವೈದ್ಯಳಾಗ ಬಯಸಿದ್ದೆ. ಮೆರಿಟ್‌ನಲ್ಲಿ ಪಶು ವೈದ್ಯಕೀಯ ಕೋರ್ಸ್‌ನಲ್ಲಿ ಪ್ರವೇಶ ದೊರೆತ ಕಾರಣ ಪಶು ವೈದ್ಯಕೀಯ ಕೋರ್ಸ್‌ ಪೂರ್ಣಗೊಳಿಸಿದೆ. ಪ್ರಸ್ತುತ ಕೇರಳದ ಪಶು ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ’ ಎಂದರು.

‘ರಾಜ್ಯ, ಅಂತರ ವಿಶ್ವವಿದ್ಯಾಲಯ ಹಾಗೂ ಕಾಲೇಜು ಮಟ್ಟದ ಕ್ರೀಡಾಕೂಟ, ನಾಟಕ, ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದೇನೆ. ಯಾವುದೇ ಸ್ಪರ್ಧೆ ಇದ್ದರೂ ಅದರಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದೆ. ಪಠ್ಯೇತರ ಚಟುವಟಿಕೆಗಳಲ್ಲೂ ಸಾಧನೆ ತೋರಿದ ಹೆಮ್ಮೆ ನನ್ನದಾಗಿದೆ’ ಎಂದು ಆತ್ಮವಿಶ್ವಾಸದಿಂದ ಬೀಗಿದರು.

‘ಹಿಡಿದ ಕೆಲಸವನ್ನು ಪೂರ್ತಿ ಮಾಡುತ್ತೇನೆ. ಸ್ಪರ್ಧೆಗಳು ಇದ್ದಾಗ ನಾನೇ ಯೋಜನೆ ಹಾಕಿಕೊಳ್ಳುತ್ತಿದ್ದೆ. ಕಡಿಮೆ ಅವಧಿಯ ಯೋಜನೆಗೆ ಮೊದಲ ಆದ್ಯತೆ ನೀಡುತ್ತಿದ್ದೆ. ಪದವಿ ಪೂರ್ಣಗೊಳ್ಳುವ ವರೆಗೂ ನಾನು ವಾಟ್ಸ್‌ಆ್ಯಪ್‌ ಬಳಸಿರಲಿಲ್ಲ. ಸಾಮಾಜಿಕ ಜಾಲ ತಾಣಗಳಲ್ಲೂ ಸಮಯ ಕಳೆಯಲಿಲ್ಲ. ಸಮಯದ ವ್ಯವಸ್ಥಾಪನೆ ಮಾಡಿಕೊಂಡು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ಪಠ್ಯ ವಿಷಯಗಳನ್ನು ಓದಿಕೊಳ್ಳುತ್ತಿದ್ದೆ’ ಎಂದು ತಿಳಿಸಿದರು.

‘ಪಿಯುಸಿಯಲ್ಲಿ ತಾಲ್ಲೂಕಿಗೆ ಮೊದಲ ಸ್ಥಾನ ಪಡೆದಿದ್ದೆ. ಕಾಲೇಜುಗಳಲ್ಲಿ ಮೊದಲ ಬೆಂಚ್‌ನಲ್ಲಿ ಕುಳಿತುಕೊಂಡು ಪಾಠ ಆಲಿಸುತ್ತಿದ್ದರಿಂದ ಗೆಳತಿಯರು ‘ಫಸ್ಟ್‌ಬೆಂಚ್’ ಎಂದು ಪೀಡಿಸುತ್ತಿದ್ದರು. ಏಕಾಗ್ರತೆಯಿಂದ ಪಾಠ ಕೇಳುತ್ತಿದ್ದರಿಂದ ಓದು ಕಷ್ಟವಾಗಲಿಲ್ಲ’ ಎಂದರು.

‘ಸ್ಮಾರ್ಟ್‌ಫೋನ್‌ ಬಳಕೆ ತಪ್ಪಲ್ಲ. 50 ಜನ ಸೇರಿ ವಾಟ್ಸ್‌ಆ್ಯಪ್‌ ಗ್ರುಪ್ ಮಾಡಿಕೊಂಡು ವಿಷಯಗಳನ್ನು ಹಂಚಿಕೊಳ್ಳಬಹುದು. ಸಾಧನೆ ಮಾಡಲು ಕೆಲ ವಿಷಯಗಳಲ್ಲಿ ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕು’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

‘ಅಪ್ಪ– ಅಮ್ಮ ನಮಗಾಗಿ ಏನು ಮಾಡುತ್ತಿದ್ದಾರೆ ಎನ್ನುವ ಅರಿವು ನಮಗೆ ಇರಬೇಕು. ನಮ್ಮ ಸಾಧನೆಯ ಮೂಲಕ ಸಮಾಜವನ್ನು ಮೇಲ್ದರ್ಜೆಗೇರಿಸಲು ಸಾಧ್ಯವಿರುವ ಪ್ರಯತ್ನ ಮಾಡಬೇಕು’ ಎಂದು ಹೇಳಿದರು.

‘ನಮ್ಮ ಮನೆಯಲ್ಲಿ 10 ಹಸುಗಳಿವೆ. ಡೇರಿಗೆ ನಿತ್ಯ 40 ಲೀಟರ್‌ ಹಾಲು ಕೊಡುತ್ತೇವೆ. ಸಾಕು ಪ್ರಾಣಿಗಳ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಪ್ರಾಣಿಗಳ ಆರೋಗ್ಯ ಕಾಪಾಡಿದರೆ ರೈತನ ಆದಾಯದಲ್ಲಿ ಹೆಚ್ಚಳವಾಗುತ್ತದೆ. ಹಳ್ಳಿಗಳು ಅಭಿವೃದ್ಧಿ ಆಗುತ್ತವೆ. ಗ್ರಾಮಾಭಿವೃದ್ಧಿಯಲ್ಲಿ ಪಶು ವೈದ್ಯರ ಪಾತ್ರವೂ ಮಹತ್ವದ್ದಾಗಿದೆ’ ಎಂದರು.

‘ಐಎಎಸ್‌ ಅಧಿಕಾರಿಯಾಗುವ ಗುರಿ ಇಟ್ಟುಕೊಂಡು ಸಿದ್ಧತೆ ನಡೆಸಿದ್ದೇನೆ. ಭಾರತೀಯ ಆಡಳಿತ ಸೇವೆಯ ಮೂಲಕ ಗ್ರಾಮೀಣಾಭಿವೃದ್ಧಿಗೆ ಶ್ರಮಿಸುವುದು ನನ್ನ ಧ್ಯೇಯವಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT