ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರ ಸೇವೆಗೆ ಯುವಕರ ಸಜ್ಜುಗೊಳಿಸಲು ಯೋಜನೆ: ಬಸವರಾಜ ಪಾಟೀಲ

ಸೇನಾ ಭರ್ತಿ ಪೂರ್ವ ಸಿದ್ಧತಾ ತರಬೇತಿಗೆ ಚಾಲನೆ
Last Updated 26 ಸೆಪ್ಟೆಂಬರ್ 2022, 13:04 IST
ಅಕ್ಷರ ಗಾತ್ರ

ಜನವಾಡ (ಬೀದರ್): ಕಲ್ಯಾಣ ಕರ್ನಾಟಕ ಭಾಗದ ಯುವಕರನ್ನು ರಾಷ್ಟ್ರ ಸೇವೆಗೆ ಸಜ್ಜುಗೊಳಿಸಲು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ ಯೋಜನೆ ಹಾಕಿಕೊಂಡಿದೆ ಎಂದು ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ನುಡಿದರು.


ಬೀದರ್ ತಾಲ್ಲೂಕಿನ ಕೊಳಾರ (ಕೆ) ಕೈಗಾರಿಕಾ ಪ್ರದೇಶದ ಮಿಲಿಟರಿ ಕ್ಯಾಂಪ್‍ನಲ್ಲಿ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳ 250 ಅಭ್ಯರ್ಥಿಗಳ 90 ದಿನಗಳ ವಸತಿ ಸಹಿತ ಸೇನಾ ಭರ್ತಿ ಪೂರ್ವ ಸಿದ್ಧತಾ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


ಈಗಾಗಲೇ ಸಂಘದ ಪ್ರಾಯೋಜಕತ್ವದಲ್ಲಿ ಮೊದಲ ತಂಡದ ಸೇನಾ ಭರ್ತಿ ಪೂರ್ವ ಸಿದ್ಧತಾ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಈಗ ಎರಡನೇ ತಂಡ ತರಬೇತಿ ಆರಂಭಿಸಲಾಗಿದೆ ಎಂದು ಹೇಳಿದರು.


ದೇಶ ಸೇವೆ ಅವಕಾಶ ದೊರಕುವುದೇ ದೊಡ್ಡ ಸೌಭಾಗ್ಯ. ಹೀಗಾಗಿ ಯುವಕರು ದೇಶ ಸೇವೆಗೆ ಸದಾ ಸಿದ್ಧರಿರಬೇಕು. ತರಬೇತಿಯ ಸದುಪಯೋಗ ಪಡೆದು ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರ್ಪಡೆಯಾಗಲು ಪ್ರಯತ್ನಿಸಬೇಕು ಎಂದು ತಿಳಿಸಿದರು.


ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಯೇ ಸಂಘದ ಗುರಿಯಾಗಿದೆ. ಈ ದಿಸೆಯಲ್ಲಿ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ತಿಳಿಸಿದರು.


ಡಿಸೆಂಬರ್‌ನಲ್ಲಿ ಬೀದರ್ ನಗರದಲ್ಲಿ ಸೇನಾ ಭರ್ತಿ ರ್‍ಯಾಲಿ ನಡೆಯಲಿದೆ. ಜಿಲ್ಲೆಯ ಅಭ್ಯರ್ಥಿಗಳು ಇದರ ಲಾಭ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹೇಳಿದರು.


ಈ ಭಾಗದ ಅಭ್ಯರ್ಥಿಗಳಿಗೆ ಗುಣಮಟ್ಟದ ತರಬೇತಿ ನೀಡಿ, ದೇಶ ಸೇವೆಗೆ ಅಣಿಗೊಳಿಸುವುದೇ ಗ್ಲೊಬಲ್ ಸೈನಿಕ ಅಕಾಡೆಮಿಯ ಧ್ಯೇಯವಾಗಿದೆ. ಕೆಕೆಎಚ್‍ಆರ್‍ಎಸಿಎಸ್ ಬೆಂಬಲದ ಕಾರಣ ಅಕಾಡೆಮಿ ಇನ್ನಷ್ಟು ಉತ್ಸಾಹದಿಂದ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಗ್ಲೊಬಲ್ ಸೈನಿಕ ಅಕಾಡೆಮಿಯ ಮುಖ್ಯಸ್ಥ, ನಿವೃತ್ತ ಕರ್ನಲ್ ಶರಣಪ್ಪ ಸಿಕೇನಪುರೆ ತಿಳಿಸಿದರು.


ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳು ಸಶಸ್ತ್ರ ಪಡೆ ಹಾಗೂ ಅರೆ ಸಶಸ್ತ್ರ ಪಡೆಗಳ ಪೂರ್ವ ಸಿದ್ಧತಾ ತರಬೇತಿ ನೀಡಲಿದ್ದಾರೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ ಹೇಳಿದರು.


ಬೀದರ್ ವಾಯುಪಡೆ ತರಬೇತಿ ಕೇಂದ್ರದ ಮುಖ್ಯ ಆಡಳಿತಾತ್ಮಕ ಅಧಿಕಾರಿ ಗ್ರುಪ್ ಕ್ಯಾಪ್ಟನ್ ರಿತೇಶ್ ಶರ್ಮಾ ಅವರು ಅಗ್ನಿವೀರ ಯೋಜನೆಯ ವಿಸ್ತ್ರೃತ ಮಾಹಿತಿ ನೀಡಿದರು.


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕ ಕಿಶೋರಬಾಬು, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ, ಬೀದರ್ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಬಿ.ಜಿ. ಶೆಟಕಾರ್, ಉದ್ಯಮಿ ಬಸವರಾಜ ಧನ್ನೂರ, ಮುಖಂಡರಾದ ರಮೇಶ ಪಾಟೀಲ ಸೋಲಪುರ, ಬಿ.ಎಸ್. ಕುದರೆ, ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಇದ್ದರು.

ಕಾರ್ಯಕ್ರಮದ ಆರಂಭದಲ್ಲಿ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು. ಕಾರಂಜಿ ಸ್ವಾಮಿ ನಿರೂಪಿಸಿದರು. ಇವಲಿನ್ ಜಾರ್ಜ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT