ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದತ್ತಗಿರಿ ಶಾಲೆ: ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ

ಗಮನ ಸೆಳೆಯುತ್ತಿರುವ ಕಲಾ, ವಿಜ್ಞಾನ ಮಾದರಿಗಳು
Last Updated 29 ನವೆಂಬರ್ 2019, 15:21 IST
ಅಕ್ಷರ ಗಾತ್ರ

ಬೀದರ್: ಇಲ್ಲಿಯ ಬಸವನಗರ ಕಾಲೊನಿಯ ದತ್ತಗಿರಿ ಮಹಾರಾಜ್ ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆಯಲ್ಲಿ ಎರಡು ದಿನಗಳ ಕಲಾ, ವಿಜ್ಞಾನ ವಸ್ತು ಪ್ರದರ್ಶನ ಶುಕ್ರವಾರ ಆರಂಭಗೊಂಡಿತು.

ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಒದಗಿಸಲು ಹಾಗೂ ಸೃಜನಶೀಲತೆ ಬೆಳೆಸಲು ಆಯೋಜಿಸಿರುವ ಪ್ರದರ್ಶನಕ್ಕೆ ಮಕ್ಕಳು ಹಾಗೂ ಪಾಲಕರಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಯಿತು.

ಮೊದಲ ದಿನ ಸಾವಿರಕ್ಕೂ ಅಧಿಕ ಮಕ್ಕಳು ಹಾಗೂ ಪಾಲಕರು ಪ್ರದರ್ಶನಕ್ಕೆ ಭೇಟಿ ನೀಡಿ ಮಕ್ಕಳು ತಯಾರಿಸಿದ ವಿವಿಧ ಮಾದರಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರದರ್ಶನದಲ್ಲಿ ತಾವು ಸ್ವತಃ ಸಿದ್ಧಪಡಿಸಿ ಇಟ್ಟಿರುವ 30ಕ್ಕೂ ಹೆಚ್ಚು ಕಲೆ ಹಾಗೂ ವಿಜ್ಞಾನಕ್ಕೆ ಸಂಬಂಧಿಸಿದ ಮಾದರಿಗಳ ಬಗ್ಗೆ ಮಕ್ಕಳು ಅರಳು ಹುರಿದಂತೆ ಪಟಪಟನೆ ವಿವರಣೆ ನೀಡಿದರು.

ಜಲ ವಿದ್ಯುತ್ ಉತ್ಪಾದನೆ, ಕೃಷಿಯಲ್ಲಿ ಸೌರಶಕ್ತಿ ಬಳಕೆ, ಮಳೆ ನೀರು ಸಂಗ್ರಹಣೆ ವಿಧಾನ, ಪರಿಸರ ಮಾಲಿನ್ಯದ ದುಷ್ಪರಿಣಾಮ, ರಸ್ತೆ ಸುರಕ್ಷತಾ ನಿಯಮಗಳು, ರೋಪ್ ವೇ, ಸುರಕ್ಷಿತ ಮನೆ, ಹಣ್ಣು ತರಕಾರಿಗಳು, ಸಿರಿಧಾನ್ಯಗಳು, ನೀರಿನ ಹಿತ ಮಿತ ಬಳಕೆ, ಐತಿಹಾಸಿಕ ಸ್ಮಾರಕಗಳು, ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್ ನಿಲ್ದಾಣಗಳು ಮೊದಲಾದ ಮಾದರಿಗಳ ಬಗ್ಗೆ ನಿರರ್ಗಳವಾಗಿ ಮಾಹಿತಿ ನೀಡಿ ಪ್ರಶಂಶೆಗೆ ಪಾತ್ರರಾದರು.

ಪ್ರದರ್ಶನದಲ್ಲಿ ಮಕ್ಕಳು ಖುದ್ದು ಕ್ಯಾಂಟೀನ್ ಕೂಡ ಇಟ್ಟಿದ್ದಾರೆ. ಅದರಲ್ಲಿ ಚಹಾ, ಸುಸಲಾ, ಪಾನಿಪುರಿ ಮೊದಲಾದ ತಿನಿಸುಗಳು ಇವೆ. ಇನ್ನು ಮಕ್ಕಳ ಮನೋರಂಜನೆಗಾಗಿ ಜಂಪಿಂಗ್ ಜಪಾಂಗ್, ಕುದುರೆ ಸವಾರಿ ಹಾಗೂ ತಂಬೋಲಾ ಆಟಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.

ಮಕ್ಕಳು ಪ್ರದರ್ಶನ ವೀಕ್ಷಣೆಯ ಜತೆಗೆ ವಿವಿಧ ಆಟಗಳನ್ನು ಕೂಡ ಆಡಿ ಸಂಭ್ರಮಿಸುತ್ತಿದ್ದಾರೆ. ಒಟ್ಟಾರೆ ಪ್ರದರ್ಶನವು ಶಾಲೆಯಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿದೆ. ಶನಿವಾರವೂ ಪ್ರದರ್ಶನ ಇರಲಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಭಾರ ಉಪ ನಿರ್ದೇಶಕ ಶಿವಕುಮಾರ ಸ್ವಾಮಿ, ದತ್ತಗಿರಿ ಮಹಾರಾಜ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅವಧೂತಗಿರಿ ಮಹಾರಾಜ, ಸಂಸ್ಥೆಯ ಕಾರ್ಯದರ್ಶಿ ಶಿವರಾಜ ಪಾಟೀಲ, ಜಂಟಿ ಕಾರ್ಯದರ್ಶಿ ರಮೇಶ ಜಿ. ದುಕಾನದಾರ್ ಅವರು ವಿವಿಧ ಮಾದರಿಗಳ ಪ್ರದರ್ಶನವನ್ನು ಉದ್ಘಾಟಿಸಿದರು.

ಶಿವಕುಮಾರ ಸ್ವಾಮಿ ಮಾತನಾಡಿ, ‘ಮಕ್ಕಳಲ್ಲಿ ಸೃಜನಶೀಲತೆಯನ್ನು ಹೆಚ್ಚಿಸಲು ವಸ್ತು ಪ್ರದರ್ಶನಗಳು ಸಹಕಾರಿಯಾಗಿವೆ’ ಎಂದು ಹೇಳಿದರು.

ಪ್ರಾಚಾರ್ಯೆ ಮಹಾದೇವಿ ಬೀದೆ ಮಾತನಾಡಿ, ‘ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ವಸ್ತು ಪ್ರದರ್ಶನ ಆಯೋಜಿಸಲಾಗಿದೆ. ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ತಾವೇ ಸಿದ್ಧಪಡಿಸಿದ ವಿಭಿನ್ನ ಮಾದರಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಈ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಎಲ್‌ಕೆಜಿಯಿಂದ 10ನೇ ವರೆಗಿನ 600ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇದರಲ್ಲಿ ಭಾಗಿಯಾಗಿದ್ದಾರೆ’ ಎಂದು ತಿಳಿಸಿದರು.

‘ವಸ್ತು ಪ್ರದರ್ಶನವು ಮಕ್ಕಳಿಗೆ ಹೊಸ ಹೊಸ ಸಂಗತಿಗಳನ್ನು ಅರಿಯಲು ನೆರವಾಗಲಿದೆ. ಅವರ ಜ್ಞಾನಮಟ್ಟವನ್ನು ಹೆಚ್ಚಿಸಲು ಪೂರಕವಾಗಲಿದೆ. ವಿದ್ಯಾರ್ಥಿಗಳು ಹಾಗೂ ಪಾಲಕರು ಪ್ರದರ್ಶನದ ಲಾಭ ಪಡೆಯಬೇಕು’ ಎಂದು ಹೇಳಿದರು.
ಬಿಆರ್‌ಸಿ ವಿಜಯಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT