ಬೀದರ್: ನಗರದ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಒ) ಕಚೇರಿಯಲ್ಲಿ ಬುಧವಾರ ಕೆಲಸ ನಿರ್ವಹಿಸುತ್ತಿದ್ದ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಸಿಬ್ಬಂದಿ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ನಗರದ ಚೌಬಾರ ಹತ್ತಿರದ ನಿವಾಸಿ ಅಹಮ್ಮದ್ (50) ಮೃತ ವ್ಯಕ್ತಿ. ಬೆಳಿಗ್ಗೆ ಎಂದಿನಂತೆ ಕಚೇರಿಗೆ ಬಂದು ಕೆಲ ಹೊತ್ತು ಕೆಲಸ ಮಾಡಿ ಆನಂತರ ಚಹಾ ಸೇವಿಸಿ ಮತ್ತೆ ಕೆಲಸ ಮಾಡಲು ಕುರ್ಚಿ ಮೇಲೆ ಕುಳಿತಾಗ ಎದೆಯಲ್ಲಿ ನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣ ನಗರದ ಬ್ರಿಮ್ಸ್‌ಗೆ ಸಾಗಿಸುತ್ತಿದ್ದಾಗ ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಡಿತರ ಅಕ್ಕಿ ವಶ; ಇಬ್ಬರ ಬಂಧನ
ಬೀದರ್: ಕಾಳಸಂತೆಯಲ್ಲಿ ಮಾರಾಟ ಮಾಡಲು ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 27.50 ಕ್ವಿಂಟಲ್ ಪಡಿತರ ಅಕ್ಕಿಯನ್ನು ನಗರದಲ್ಲಿ ಬುಧವಾರ ವಶಪಡಿಸಿಕೊಂಡಿರುವ ಮಾರ್ಕೆಟ್ ಠಾಣೆ ಪೊಲೀಸರು, ಇಬ್ಬರನ್ನು ಬಂಧಿಸಿದ್ದಾರೆ.
ನಗರದ ಫೈಜಪುರದ ಗೂಡ್ಸ್ ವಾಹನದ ಮಾಲೀಕ ಎಂ.ಕೆ. ಶಾರುಕೊದ್ದೀನ್ ಎಂ.ಕೆ. ಹಬಿಬೊದ್ದಿನ್ ಹಾಗೂ ಅಷ್ಟೂರ ಗ್ರಾಮದ ಚಾಲಕ ಸೀಮನ್ ಮಂಗೆನೋರ ಬಂಧಿತರು.
ಖಚಿತ ಮಾಹಿತಿ ಮೇರೆಗೆ ಫೈಜಪುರದಲ್ಲಿ ದಾಳಿ ನಡೆಸಿ, ತಲಾ 50 ಕೆ.ಜಿ.ಯ ಒಟ್ಟು 55 ಚೀಲಗಳಲ್ಲಿದ್ದ ₹93.50 ಸಾವಿರ ಮೌಲ್ಯದ ಪಡಿತರ ಅಕ್ಕಿ ಹಾಗೂ ಗೂಡ್ಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಪಡಿತರ ಆಹಾರ ಧಾನ್ಯ ಅಕ್ರಮ ಸಾಗಣೆ ಅಥವಾ ಇತರ ಅಕ್ರಮ ಚಟುವಟಿಕೆಗಳು ಕಂಡು ಬಂದಲ್ಲಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಮನವಿ ಮಾಡಿದ್ದಾರೆ.