ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ | ‘ಪೀಕ್‌ ಅವರ್‌’ನಲ್ಲಿ ಕೈಕೊಡುವ ಸರ್ವರ್‌

Published 24 ಸೆಪ್ಟೆಂಬರ್ 2023, 4:39 IST
Last Updated 24 ಸೆಪ್ಟೆಂಬರ್ 2023, 4:39 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯ ಐದು ತಾಲ್ಲೂಕು ಕೇಂದ್ರಗಳಲ್ಲಿ ಆಸ್ತಿ ನೋಂದಣಿಗೆ ಉಪ ನೋಂದಣಾಧಿಕಾರಿ ಕಚೇರಿಗಳು ಕೆಲಸ ನಿರ್ವಹಿಸುತ್ತಿದ್ದು, ‘ಪೀಕ್‌ ಅವರ್‌’ನಲ್ಲಿ ಸರ್ವರ್‌ ಕೈಕೊಡುವುದರಿಂದ ಜನಸಾಮಾನ್ಯರು ಸಮಸ್ಯೆ ಎದುರಿಸುವಂತಾಗಿದೆ.

ಆಸ್ತಿ ನೋಂದಣಿಗೆ ಕಂದಾಯ ಇಲಾಖೆಯ ಒಂದೇ ಸರ್ವರ್‌ ಅಡಿ ಎಲ್ಲಾ ನೋಂದಣಿ ಪ್ರಕ್ರಿಯೆ ನಡೆಯುತ್ತದೆ. ಬೆಳಿಗ್ಗೆ 11ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆಗಳು ನಡೆಯುತ್ತವೆ. ಹೀಗೆ ಒಟ್ಟಿಗೆ ಎಲ್ಲರೂ ಒಂದೇ ಸಮಯಕ್ಕೆ ನೋಂದಣಿ ಮಾಡುವುದರಿಂದ ಬಹುತೇಕ ಸಂದರ್ಭಗಳಲ್ಲಿ ‘ಸಿಸ್ಟಂ ಹ್ಯಾಂಗ್‌’ ಆಗುತ್ತದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಅರ್ಧಕ್ಕೆ ನಿಂತು ಹೋಗುತ್ತದೆ. ಕೆಲವೊಮ್ಮೆ ಇಡೀ ಪ್ರಕ್ರಿಯೆ ಮುಗಿದು, ಇನ್ನೇನು ಮುಗಿಯುವ ಹಂತದಲ್ಲಿ ನಿಂತು ಬಿಡುತ್ತದೆ. ಸರ್ವರ್‌ ಸಮಸ್ಯೆ ಬಗೆಹರಿಯುವವರೆಗೆ ಅವರು ಅಲ್ಲಿಯೇ ಕಾದು ಕೂರಬೇಕು. ಇನ್ನು, ಸರತಿಯಲ್ಲಿ ಕುಳಿತವರು ನಮ್ಮ ಪಾಳಿ ಯಾವಾಗ ಎಂಬ ನಿರೀಕ್ಷೆಯಲ್ಲಿ ಕಾಲ ಕಳೆಯಬೇಕಾದ ಅನಿವಾರ್ಯತೆ ನಿರ್ಮಾಣವಾಗುತ್ತದೆ. ಈ ಕುರಿತು ಹಲವು ಸಲ ವಿಷಯ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸಾರ್ವಜನಿಕರು.

ಬೀದರ್‌ ಜಿಲ್ಲಾ ಕೇಂದ್ರದಲ್ಲಿರುವ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನಿತ್ಯ ಕನಿಷ್ಠ 50ರಿಂದ 70ರ ವರೆಗೆ ಆಸ್ತಿ ನೋಂದಣಿ ಆಗುತ್ತದೆ. ಸರ್ವರ್‌ ಸಮಸ್ಯೆ ಇಲ್ಲದಿದ್ದಾಗ 100 ರಿಂದ 115ರ ವರೆಗೆ ನೋಂದಣಿ ಮಾಡಿದ ನಿದರ್ಶನಗಳಿವೆ. ಇನ್ನು, ತಾಲ್ಲೂಕು ಕೇಂದ್ರಗಳಾದ ಹುಮನಾಬಾದ್‌, ಬಸವಕಲ್ಯಾಣ, ಭಾಲ್ಕಿ ಹಾಗೂ ಔರಾದ್‌ನಲ್ಲಿ ನಿತ್ಯ ಕನಿಷ್ಠ 25ರಿಂದ 30 ಮಂದಿ ಆಸ್ತಿ ನೋಂದಣಿ ಮಾಡಿಸಿಕೊಳ್ಳುತ್ತಾರೆ. ಅತಿ ವೇಗದ ಇಂಟರ್‌ನೆಟ್‌ ವ್ಯವಸ್ಥೆ ಇಲ್ಲದಿರುವುದು ಕೂಡ ನೋಂದಣಿ ಪ್ರಕ್ರಿಯೆ ನಿಧಾನಕ್ಕೆ ಕಾರಣವೆಂದು ಗೊತ್ತಾಗಿದೆ. ಇತ್ತೀಚೆಗೆ ಹುಮನಾಬಾದ್‌ ಉಪ ನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಕೂಡ ಈ ಕುರಿತು ವಿಷಯ ಪ್ರಸ್ತಾಪಿಸಿದ್ದರು. ಇಂತಹದ್ದೆಲ್ಲ ನಿಮ್ಮ ಹಂತದಲ್ಲಿಯೇ ಸರಿಪಡಿಸಿಕೊಳ್ಳಬೇಕು. ಎಲ್ಲದಕ್ಕೂ ಸರ್ವರ್‌ ಸಮಸ್ಯೆ ಇದೆ ಎಂದು ಹೇಳಿ ಜನರನ್ನು ಸತಾಯಿಸಬಾರದು ಎಂದು ತಾಕೀತು ಮಾಡಿರುವುದೇ ತಾಜಾ ನಿದರ್ಶನ.

ಬೀದರ್‌ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಸರ್ವರ್‌ ಸಮಸ್ಯೆ ಇಲ್ಲ. ಮಧ್ಯವರ್ತಿಗಳ ಕಾಟವೂ ಇಲ್ಲ
ಸುಭಾಷ ಹೊಸಳ್ಳಿ, ಉಪ ನೋಂದಣಾಧಿಕಾರಿ, ಬೀದರ್‌

ಇನ್ನು, ಉಪನೋಂದಣಾಧಿಕಾರಿಗಳ ಕಚೇರಿಯೊಳಗೆ ಹಾಗೂ ಹೊರಗೆ ಮಧ್ಯವರ್ತಿಗಳು ಸದಾ ಬೀಡು ಬಿಟ್ಟಿರುತ್ತಾರೆ. ಅವರನ್ನು ಕಚೇರಿ ಸುತ್ತಮುತ್ತ ಸುಳಿಯಲು ಬಿಡಬಾರದು ಎನ್ನುತ್ತಾರೆ ಸಾರ್ವಜನಿಕರು.

‘ಜಿಲ್ಲೆಯ ಕೆಲವು ಉಪ ನೋಂದಣಾಧಿಕಾರಿಗಳ ಕಚೇರಿಯ ಸಿಬ್ಬಂದಿ ಹಾಗೂ ಮಧ್ಯವರ್ತಿಗಳು ಸೇರಿಕೊಂಡು ಆಸ್ತಿ ನೋಂದಣಿ ಮಾಡಿಸಿಕೊಡುತ್ತಾರೆ. ಇದಕ್ಕಾಗಿ ಸಾರ್ವಜನಿಕರಿಂದ ಬೇಕಾಬಿಟ್ಟಿ ಹಣ ಪಡೆಯುತ್ತಾರೆ. ಹಣ ಇಲ್ಲವೆಂದು ಹೇಳಿದರೆ ಕೆಲಸ ಮಾಡಿಸಿಕೊಡಲು ನೂರಾರು ಸಬೂಬು ಹೇಳಿ ವಿಳಂಬ ಮಾಡುತ್ತಾರೆ. ಮೊದಲು ಇದು ತಪ್ಪಬೇಕು. ನೆಟ್‌ ವರ್ಕ್‌ ಸಮಸ್ಯೆ ಸರಿಪಡಿಸಬೇಕು’ ಎನ್ನುತ್ತಾರೆ ಸಮಾಜ ಸೇವಕ ರಾಜಶೇಖರ ಪಾಟೀಲ, ಜನರ ಧ್ವನಿ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಅಂಕುಶ್‌ ಗೋಖಲೆ.

ನೆಟ್‌ವರ್ಕ್‌ ಸಮಸ್ಯೆಯಿಂದ ಜನ ನಿತ್ಯ ಕಚೇರಿ ಅಲೆದಾಡುವಂತಹ ಪರಿಸ್ಥಿತಿ ಇದೆ. ಅದು ಬದಲಾಗಬೇಕು. 
ಅಂಕುಶ್ ಗೋಖಲೆ, ಸಂಸ್ಥಾಪಕ ಅಧ್ಯಕ್ಷ, ‘ಜನರ ಧ್ವನಿ’ ಸಂಘಟನೆ

ಬದಲಾಗಿದೆ ಸಮಯ

‘ಬರುವ ಅಕ್ಟೋಬರ್‌ ಒಂದರಿಂದ ಆಸ್ತಿ ನೋಂದಣಿ ಮಾರ್ಗಸೂಚಿ ದರದಲ್ಲಿ ಬದಲಾವಣೆ ಆಗಲಿದೆ. ದರ ಹೆಚ್ಚಾಗಬಹುದು. ಹೀಗಾಗಿ ಹೆಚ್ಚಿನ ನೋಂದಣಿಗಳು ಆಗಬಹುದು. ಅದಕ್ಕಾಗಿ ಬೆಳಿಗ್ಗೆ 8ರಿಂದ ರಾತ್ರಿ 8ರ ವರೆಗೆ ನೋಂದಣಿ ಮಾಡಲಾಗುತ್ತಿದೆ. ಸಾರ್ವಜನಿಕರು ಗರಿಷ್ಠ ಸಂಖ್ಯೆಯಲ್ಲಿ ನೋಂದಣಿ ಮಾಡಿಸಿಕೊಳ್ಳಲಿ ಎನ್ನುವ ಉದ್ದೇಶವಿದೆ’ ಎಂದು ಬೀದರ್‌ ಉಪ ನೋಂದಣಾಧಿಕಾರಿ ಸುಭಾಷ ಹೊಸಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

’ಈ ಹಿಂದೆ ಬೆಳಿಗ್ಗೆ 10ರಿಂದ ಸಂಜೆ 6ರ ವರೆಗೆ ನೋಂದಣಿ ನಡೆಯುತ್ತಿತ್ತು. ಅದಾದ ನಂತರ ಬೆಳಿಗ್ಗೆ 8ರಿಂದ ಸಂಜೆ 6ರ ವರೆಗೆ ಸಮಯ ನಿಗದಿಪಡಿಸಲಾಗಿತ್ತು. ಈಗ ಬೆಳಿಗ್ಗೆ 8ರಿಂದ ರಾತ್ರಿ 8ರ ವರೆಗೆ ಸತತ 12 ಗಂಟೆ ನೋಂದಣಿಗೆ ಅವಕಾಶ ಇದೆ. ಕೋವಿಡ್‌ ಬಂದದ್ದರಿಂದ ಮೂರ್ನಾಲ್ಕು ವರ್ಷಗಳಿಂದ ಆಸ್ತಿ ಮಾರ್ಗಸೂಚಿ ದರದಲ್ಲಿ ಬದಲಾವಣೆ ಆಗಿಲ್ಲ. ಈ ವರ್ಷ ಆಗುತ್ತಿದೆ’ ಎಂದು ಹೇಳಿದರು.

‘ಜಿಲ್ಲೆಯ ಎಲ್ಲಾ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಸುಗಮವಾಗಿ ಆಸ್ತಿ ನೋಂದಣಿ ಮಾಡಲಾಗುತ್ತಿದೆ. ಯಾವುದೇ ಆಸ್ತಿ ಖರೀದಿಸಬೇಕಾದರೆ ಕನಿಷ್ಠ ಆರು ತಿಂಗಳು ಮೊದಲಿನಿಂದಲೂ ಪ್ಲ್ಯಾನ್‌ ಮಾಡುತ್ತಾರೆ. ಇದು ‘ಡೇಲಿ ಗೂಡ್ಸ್‌’ ತರಹ ಇರುವುದಿಲ್ಲ. ಹಾಗಾಗಿ ಸದಾ ದಟ್ಟಣೆ ಇರುವುದಿಲ್ಲ. ಬೆಳಿಗ್ಗೆ 11ರಿಂದ ಮಧ್ಯಾಹ್ನ 2ರ ವರೆಗೆ ರಾಜ್ಯದಲ್ಲಿ ಏಕಕಾಲಕ್ಕೆ ಹೆಚ್ಚಿನ ನೋಂದಣಿಗಳು ನಡೆಯುವುದರಿಂದ ಕೆಲವೊಮ್ಮೆ ಅರ್ಜಿ ಹಾಕುವಾಗ ಸರ್ವರ್‌ ನಿಧಾನವಾಗುತ್ತದೆ. ಇನ್ನುಳಿದಂತೆ ಯಾವುದೇ ಸಮಸ್ಯೆ ಇಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT