ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಮಲನಗರ: ಅನ್ನದಾತನಿಗೆ ಆರ್ಥಿಕ ಬಲ ನೀಡಿದ ರೇಷ್ಮೆ

ಶೆಡ್ ನಿರ್ಮಾಣಕ್ಕೆ ರೇಷ್ಮೆ ಇಲಾಖೆಯಿಂದ ₹1 ಲಕ್ಷ ಸಹಾಯಧನ
ಗಣಪತಿ ಕುರನ್ನಾಳೆ
Published : 20 ಸೆಪ್ಟೆಂಬರ್ 2024, 6:09 IST
Last Updated : 20 ಸೆಪ್ಟೆಂಬರ್ 2024, 6:09 IST
ಫಾಲೋ ಮಾಡಿ
Comments

ಕಮಲನಗರ: ನರೇಗಾ ಯೋಜನೆಯಡಿ ತಾಲ್ಲೂಕಿನ ತೋರಣಾ ಗ್ರಾಮದಲ್ಲಿ ರೈತರಿಗೆ ಕಾಮಗಾರಿಗಳನ್ನು ನೀಡಲಾಗಿದೆ. ಅದರಲ್ಲಿ ಈ ರೇಷ್ಮೆ ಕಾಮಗಾರಿಯೂ ಒಂದು. ನರೇಗಾ ಮತ್ತು ರೇಷ್ಮೆ ಇಲಾಖೆಯಿಂದ ಸೌಲಭ್ಯ ಪಡೆದ ರೈತ ಸಂತಸದ ನಗು ಬೀರಿದ್ದಾನೆ.

ತಾಲ್ಲೂಕಿನ ತೋರಣಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ರೈತ ಅಶೋಕ ಮಾಧವರಾವ ಪಾಂಚವರೆ ಇದೀಗ ನರೇಗಾ ಯೋಜನೆ ಮತ್ತು ರೇಷ್ಮೆ ಇಲಾಖೆಯ ಸೌಲಭ್ಯ ಪಡೆದು, ಮಾದರಿಯಾಗಿ ಹೊರಹೊಮ್ಮಿದ್ದಾರೆ.

ನೀರಾವರಿ ಜಮೀನು ಹೊಂದಿದ್ದರೂ ಪ್ರಾರಂಭದಲ್ಲಿ ತೊಗರಿ, ಉದ್ದು, ಜೋಳ ಸೇರಿ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದರು. ಮಳೆ ಅಭಾವ ಮತ್ತು ಅತಿವೃಷ್ಟಿ ಪರಿಸ್ಥಿತಿ ಹೈರಾಣಾಗಿಸಿತ್ತು. ಆದರೂ ಕೃಷಿ ಬಿಡಲಿಲ್ಲ. ರೈತನಿಗೆ ಹೊಸದೊಂದು ಭರವಸೆ ಮೂಡಿಸಿದ್ದು ನರೇಗಾ ಯೋಜನೆ.

ಅಶೋಕ ಪಾಂಚವರೆ ಅವರಿಗೆ ಒಟ್ಟು 4 ಎಕರೆ 14 ಗುಂಟೆ ಜಮೀನಿದೆ. ಈ ನಾಲ್ಕು ಎಕರೆ ಜಮೀನಿನ ಪೈಕಿ ಒಂದು ಎಕರೆ 20 ಗುಂಟೆ ಜಮೀನಿನಲ್ಲಿ ರೇಷ್ಮೆ ಬೆಳೆ ಬೆಳೆದು, ಲಾಭದಾಯಕ ಕೃಷಿ ಮಾಡಬಹುದು ಎಂದು ತೋರಿಸಿ ಕೊಟ್ಟಿದ್ದಾರೆ.

ನರೇಗಾ ಯೋಜನೆಯಡಿ ಇದಕ್ಕೆ ವಿಶೇಷ ಪ್ರೋತ್ಸಾಹ ಧನವಿದೆ ಎಂಬ ಮಾಹಿತಿ ರೈತರಿಗೆ ಸಿಗುತ್ತಿದ್ದಂತೆ ತಡ ಮಾಡದೇ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಕ್ರಿಯಾ ಯೋಜನೆಯಲ್ಲಿ ರೇಷ್ಮೆ ಕಾಮಗಾರಿಯ ಹೆಸರು ನೋಂದಾಯಿಸಿದರು. ನಂತರ ಗ್ರಾಮ ಪಂಚಾಯಿತಿ ಹಾಗೂ ರೇಷ್ಮೆ ಇಲಾಖೆಯ ಸಹಭಾಗಿತ್ವದಲ್ಲಿ 2023-24ರಲ್ಲಿ ಕಾಮಗಾರಿ ಪ್ರಾರಂಭಿಸಲಾಯಿತು. ಒಟ್ಟು ನರೇಗಾ ಯೋಜನೆಯಿಂದ ₹61 ಸಾವಿರ ಕೂಲಿ ಪಾವತಿಸಲಾಗಿದೆ ಹಾಗೂ ರೇಷ್ಮೆ ಇಲಾಖೆಯಿಂದ ಶೆಡ್ ನಿರ್ಮಾಣ ಮಾಡಲು ₹1 ಲಕ್ಷ ಸಹಾಯಧನ ನೀಡಲಾಗಿದೆ.

ಜೊತೆಗೆ ಸ್ವಂತ ಹಣ ಸೇರಿಸಿ, ಇದೀಗ ರೇಷ್ಮೆ ಬೆಳೆದು ಸರಿಯಾಗಿ ನಿರ್ವಹಣೆ ಮಾಡಿ, ಎರಡು ಬಾರಿ ಇಳುವರಿ ಕೂಡ ಮಾಡಿದ್ದಾರೆ. ಸದ್ಯ ಮೂರನೇ ಇಳುವರಿ ಲಾಭದ ನಿರೀಕ್ಷೆಯಲ್ಲಿದ್ದಾರೆ.

ಅನುಷ್ಠಾನ ಪ್ರಕ್ರಿಯೆ: ‘ಆಳಾಗಿ ದುಡಿ ಅರಸನಾಗಿ ಉಣ್ಣು’ ಎಂಬ ಗಾದೆ ಮಾತಿನಂತೆ ಅಶೋಕ ಹಗಲಿರುಳು ಶ್ರಮ ಪಟ್ಟು, ಹೊಸದೊಂದು ರೇಷ್ಮೆ ತೋಟವನ್ನು ತಮ್ಮ ಜಮೀನಿಯಲ್ಲಿ ನಿರ್ಮಿಸಿಕೊಂಡಿದ್ದಾರೆ.

ಉದಗೀರ ತಾಲ್ಲೂಕಿನ ತೊಂಡಚೀರ ಎಂಬ ಗ್ರಾಮದಿಂದ ವ್ಹಿ 1 ದ್ವಿತಳಿಯ ಸುಮಾರು 5445 ರೇಷ್ಮೆ ಕಾಂಡವನ್ನು ತಂದು, ಸಾಲಿನಿಂದ ಸಾಲಿಗೆ 4x4 ಅಡಿ ಅಂತರದಲ್ಲಿ ನಾಟಿ ಮಾಡಿದ್ದಾರೆ.

ಬರೋಬ್ಬರಿ ನಾಲ್ಕರಿಂದ ಐದು ಅಡಿ ಎತ್ತರದ ಗಿಡಗಳನ್ನು ಬೆಳೆಸಿ, ಪೋಷಣೆ ಮಾಡಿದ್ದಾರೆ. ಜೊತೆಗೆ ಸುಂದರವಾದ ರೇಷ್ಮೆ ಶೆಡ್ ಕೂಡ ನಿರ್ಮಿಸಿಕೊಂಡು ರೇಷ್ಮೆ ಹುಳು ಸಾಕಲು ಪ್ರಾರಂಭಿಸಿದ್ದಾರೆ.

ರೇಷ್ಮೆ ಬೆಳೆದ ಪ್ರಾರಂಭದಿಂದಲೂ ರೈತನು ಅದನ್ನು ಮಗುವಿನಂತೆ ಪಾಲನೆ-ಪೋಷಣೆ ಮಾಡಿ, ಲಾಭದಾಯಕ ಕೃಷಿಯನ್ನು ಕಂಡುಕೊಂಡು ನಿರಂತರ ಆದಾಯ ಗಳಿಸತೊಡಗಿದ್ದಾರೆ. ಇದು ಒಂದು ಸಲ ನಾಟಿ ಮಾಡಿದರೆ ಕನಿಷ್ಠ 15 ವರ್ಷ ಈ ಬೆಳೆಯನ್ನು ಬೆಳೆಯಬಹುದು.

ಈ ತಳಿಯ ವಿಶೇಷ ಎಂದರೆ ಎಲೆಗಳು ದೊಡ್ಡಾಗಿದ್ದು ಸಾಲು ಸಾಲಿಗೆ ಅಂತರವಿರುತ್ತದೆ. ಇದರಿಂದ ಚೆನ್ನಾಗಿ ಇಳುವರಿ ಬರುತ್ತದೆ. ಇದೀಗ ಎರಡು ಬೆಳೆಯನ್ನು ಇಳುವರಿ ಮಾಡಿ, ಮೂರನೇ ಬೆಳೆ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ. ಗಿಡದಿಂದ ಗಿಡಕ್ಕೆ ಒಂದೂವರೆ ಅಡಿ ಅಂತರವಿದ್ದು, ಮೂರು ಸಾಲುಗಳು ನೇರವಾಗಿ ನಾಟಿ ಮಾಡಿ ಎಂಟು ಅಡಿ ಅಂತರ ಮಾಡಿದ್ದಾರೆ. ಇದರಿಂದ ಎಲೆಗಳು ಸಮೃದ್ಧವಾಗಿ ಬೆಳೆಯುತ್ತವೆ ಎನುತ್ತಾರೆ ಅಶೋಕ ಪಾಂಚವರೆ.

ಆದಾಯ: ಇಲ್ಲಿಯವರೆಗೆ 2 ಬೆಳೆಯಿಂದ ₹90 ಸಾವಿರ ಲಾಭ ಪಡೆದಿದ್ದಾರೆ. ರೈತ ಅಶೋಕ ಸತತವಾಗಿ ಬೆಳೆ  ಪಡೆಯಲು ರೇಷ್ಮೆ ತೋಟವನ್ನು ಎರಡು ಭಾಗಗಳಾಗಿ ವಿಂಗಡಿಸಿದ್ದಾರೆ. ಹೀಗಾಗಿ ಹಿಪ್ಪು ನೇರಳೆ ನಾಟಿ ಮಾಡಿದ ಪ್ರಥಮ ವರ್ಷದಲ್ಲಿ 2 ಬೆಳೆಗಳನ್ನು ಪಡೆಯಬಹುದು. ನಂತರದ ವರ್ಷದಲ್ಲಿ ವರ್ಷಕ್ಕೆ ಒಂದು ತೋಟದಿಂದ 4 ಬೆಳೆಯಂತೆ ಒಟ್ಟು ವಾರ್ಷಿಕ 8 ಬೆಳೆಯನ್ನು ಪಡೆಯಬಹುದು. ಒಂದು ಬೆಳೆಗೆ ಸರಾಸರಿ ₹50 ಸಾವಿರದಂತೆ ಒಟ್ಟು 8 ಬೆಳೆಗೆ ಒಂದು ವರ್ಷಕ್ಕೆ ಸುಮಾರು ₹4 ಲಕ್ಷ ಆದಾಯ ಪಡೆಯಬಹುದಾಗಿದೆ ಎಂದು ರೇಷ್ಮೆ ವಿಸ್ತರಣಾಧಿಕಾರಿ ಬಿ.ಜಿ.ಶಳಕೆ ತಿಳಿಸಿದ್ದಾರೆ.

ರಾಮನಗರಕ್ಕೆ ಹೋಗಿ ರೇಷ್ಮೆ ಮಾರಾಟ ಮಾಡಲು ಆಗುವುದಿಲ್ಲ. ಅದಕ್ಕಾಗಿ ಹತ್ತಿರದ ತಾಲ್ಲೂಕು ಹುಮನಾಬಾದ್‌ಗೆ ತೆರಳಿ ಮಾರಾಟ ಮಾಡುತ್ತಾರೆ. ಇದರಿಂದ ನಮ್ಮಂಥ ರೈತ ಕುಟುಂಬಗಳಿಗೆ ತುಂಬಾ ಅನೂಕೂಲವಾಗಲಿದೆ ಎಂದು ರೈತ ಅಶೋಕ ಪಾಂಚವರೆ ಸಂತಸ ವ್ಯಕ್ತಪಡಿಸಿದ್ದಾರೆ.

ಅಶೋಕ ಪಾಂಚವರೆ ಅವರ ಹೊಲದಲ್ಲಿ ರೇಷ್ಮೆ ಹುಳು ವೀಕ್ಷಿಸುತ್ತಿರುವ ಅಧಿಕಾರಿಗಳು
ಅಶೋಕ ಪಾಂಚವರೆ ಅವರ ಹೊಲದಲ್ಲಿ ರೇಷ್ಮೆ ಹುಳು ವೀಕ್ಷಿಸುತ್ತಿರುವ ಅಧಿಕಾರಿಗಳು
ನರೇಗಾ ಲಾಭ ಪಡೆದ ಸರ್ಕಾರದ ನಾಮಫಲಕ
ನರೇಗಾ ಲಾಭ ಪಡೆದ ಸರ್ಕಾರದ ನಾಮಫಲಕ
ನರೇಗಾ ಯೋಜನೆಯಡಿ ಮತ್ತು ರೇಷ್ಮೆ ಇಲಾಖೆ ಸಹಯೋಗದಲ್ಲಿ ರೇಷ್ಮೆ ಕೃಷಿ ಮಾಡಬಹುದು. ಇದರಿಂದ ರೈತರು ಆರ್ಥಿಕವಾಗಿ ಸಬಲರಾಗಬಹುದು
ಮಾಣಿಕರಾವ ಪಾಟೀಲ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ
ರೈತ ಅಶೋಕ ಅವರ ಒಂದು ಎಕರೆ ಜಮೀನಿನಲ್ಲಿ ಮೊದಲಿಗೆ 50 ಕೆ.ಜಿ ರೇಷ್ಮೆ ಗೂಡುಗಳಿದ್ದವು. ಇದರಿಂದ ಸುಮಾರು ₹50 ಸಾವಿರ ಲಾಭ ಪಡೆದಿದ್ದಾರೆ. ಇದು ಎರಡನೇ ಬೆಳೆಯಾಗಿದ್ದು ಈಗ ಅಂದಾಜು 150 ಮೊಟ್ಟೆಗಳನ್ನು ತಂದು, ರೇಷ್ಮೆ ಹುಳು ಸಾಕಾಣಿಕೆ ಮಾಡುತ್ತಿದ್ದಾರೆ. ಈಗ ಗೂಡು ಕಟ್ಟಿದೆ. ಇದರಿಂದ ಅವರಿಗೆ ಅಂದಾಜು 125 ಕೆ.ಜಿ. ಇಳುವರಿ ಬರಬಹುದು. ಸರಿಯಾದ ನಿರ್ವಹಣೆ ಮಾಡಿದರೆ ವರ್ಷಕ್ಕೆ ₹4 ಲಕ್ಷದವರೆಗೆ ಲಾಭ ಗಳಿಸಬಹುದು
ಬಿ.ಜಿ.ಶಳಕೆ, ರೇಷ್ಮೆ ವಿಸ್ತರಣಾಧಿಕಾರಿ
ನರೇಗಾ ಯೋಜನೆಯಡಿ ಹಾಗೂ ರೇಷ್ಮೆ ಇಲಾಖೆಯಡಿಯಲ್ಲಿ ರೇಷ್ಮೆ ಬೆಳೆ ಬೆಳೆಯಲು ಸಹಾಯಧನವನ್ನು ನೀಡಲಾಗುತ್ತದೆ. ಮಣ್ಣು ಮತ್ತು ನೀರು ರಕ್ಷಣೆ ಮಾಡುವ ಕಾಮಗಾರಿಗಳನ್ನೂ ಯೋಜನೆಯಡಿಯಲ್ಲಿ ಮಾಡಲಾಗುತ್ತಿದೆ
ಹಣಮಂತರಾಯ ಕೌಟಗೆ, ತಾ.ಪಂ. ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT