ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1967ರಿಂದ ಶರಣರ ಇತಿಹಾಸ ತಿರುಚುವ ಕೆಲಸ: ಶಿವಬಸವ ಸ್ವಾಮೀಜಿ

Published 31 ಜನವರಿ 2024, 15:29 IST
Last Updated 31 ಜನವರಿ 2024, 15:29 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ನಗರದಲ್ಲಿರುವ ಬಸವಾದಿ ಶರಣರ ಸ್ಮಾರಕಗಳ ಎದುರಲ್ಲಿ ಬಸವರಾಜ ಪಾಟೀಲ ಸೇಡಂ ಅವರ ಸಂಸ್ಥೆಯಿಂದ ಅಳವಡಿಸಿದ ಫಲಕಗಳಲ್ಲಿ ಶರಣರ ಕುರಿತಾಗಿ ತಪ್ಪು ಮಾಹಿತಿ ನೀಡಲಾಗಿದೆ’ ಎಂದು ಬೇಲೂರು ಶಿವಬಸವ ಸ್ವಾಮೀಜಿ ಆರೋಪಿಸಿದರು.

ನಗರದ ಕೆಇಬಿ ಪ್ರವಾಸಿ ಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಸವಾಭಿಮಾನಿಗಳ ಸಭೆಯ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಫಲಕಗಳ ಮೇಲ್ಭಾಗದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮತ್ತು ಕೃಷಿ ಸಮಿತಿ ಎಂಬ ಹೆಸರಿದೆ. ಅನೇಕ ಕಡೆ ತಪ್ಪು ಇತಿಹಾಸವಿದೆ ಎಂಬ ವಿಷಯದ ಬಗ್ಗೆ ಈ ಹಿಂದೆ ಸಮಿತಿಯ ಅಧ್ಯಕ್ಷರಾಗಿದ್ದ ಬಸವರಾಜ ಪಾಟೀಲ ಸೇಡಂ ಅವರನ್ನು ಸಂಪರ್ಕಿಸಿ ಚರ್ಚಿಸಲಾಗಿತ್ತು. ಆಗ ಅವರು ಅವರದೇ ಸಮಿತಿಯ ಇನ್ನೊಬ್ಬರ ಹೆಸರು ಹೇಳಿದ್ದಾರೆ. ತ್ರಿಪುರಾಂತ ಗವಿಮಠದಲ್ಲಿನ ಫಲಕದಲ್ಲಿ ಘನಲಿಂಗ ರುದ್ರಮುನಿಯವರು ಬಸವಣ್ಣನವರ ಪತ್ನಿ ಗಂಗಾಂಬಿಕೆಗೆ ಲಿಂಗ ದೀಕ್ಷೆ ನೀಡಿದ್ದಾರೆ ಎಂಬ ಉಲ್ಲೇಖವಿದೆ. ಕಾಲಮಾನದ ಬಗ್ಗೆ ಅರಿವು ಇಲ್ಲದ್ದರಿಂದ ಹೀಗೆ ಬರೆಯಲಾಗಿದೆ. ವೀರಶೆಟ್ಟಿ ಪಾಟೀಲ ಅವರ ಗ್ರಂಥದ ಆಧಾರದಲ್ಲಿ ಇಲ್ಲಿ ಮಾಹಿತಿ ನೀಡಿರುವುದು ಗೊತ್ತಾಗಿದೆ. ಹಿರಿಯ ಸಾಹಿತಿ ಮತ್ತು ಸಂಶೋಧಕರ ಗ್ರಂಥಗಳನ್ನು ಆಧಾರವಾಗಿಟ್ಟುಕೊಳ್ಳದ ಕಾರಣ ಇಂಥ ಪ್ರಮಾದವಾಗಿದೆ’ ಎಂದು ಪ್ರತಿಪಾದಿಸಿದರು.

‘ಶರಣರ ಇತಿಹಾಸವನ್ನು 1967ರಿಂದ ಈಚೆಗೆ ತಿರುಚುವ ಕಾರ್ಯ ನಡೆದಿದೆ. ಸೊಲ್ಲಾಪುರದಲ್ಲಿನ ಸಿದ್ಧರಾಮೇಶ್ವರರ ಗುಡಿ ಪಂಚಾಚಾರ್ಯರ ಕುತಂತ್ರದಿಂದ ಈಗ ಕೇವಲ ಸಿದ್ಧೇಶ್ವರ ದೇವಸ್ಥಾನ ಆಗಿದೆ. ಬಸವರಾಜ ಪಾಟೀಲ ಸೇಡಂ ಕಲ್ಯಾಣಕ್ಕೆ ಕಾಲಿಟ್ಟಾಗಿನಿಂದಲೂ ಇತಿಹಾಸ ತಿರುಚುವ ಕೆಲಸ ನಡೆದಿದೆ. ತಪ್ಪು ಮಾಹಿತಿ ನೀಡಿರುವ ಫಲಕಗಳನ್ನು ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯವರು ಕೂಡಲೇ ತೆಗೆಯಬೇಕು. ಇಲ್ಲದಿದ್ದರೆ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಅವರು ಎಚ್ಚರಿಸಿದರು.

ಉಸ್ತೂರಿ ಕೋರಣೇಶ್ವರ ಸ್ವಾಮೀಜಿ ಮಾತನಾಡಿ, ‘ಇತಿಹಾಸ ತಿರುಚಿದರೆ ಮತ್ತು ಮಹಾಪುರುಷರ ತೇಜೋವಧೆ ಮಾಡಿದರೆ ಆ ಸಮಾಜವನ್ನು ಹಾಳು ಮಾಡಬಹುದು ಎಂಬ ಮನಸ್ಥಿತಿಯವರು ಇಂಥ ಕೃತ್ಯ ಕೈಗೊಳ್ಳುತ್ತಿದ್ದಾರೆ. ಬಸವಣ್ಣ, ಅಕ್ಕಮಹಾದೇವಿ ಮತ್ತಿತರ ಶರಣರ ಬಗ್ಗೆ ತಪ್ಪು ಮಾಹಿತಿ ನೀಡುವುದು ನಿರಂತರವಾಗಿ ನಡೆದೇ ಇದೆ. ವೈಜ್ಞಾನಿಕ ಮತ್ತು ವೈಚಾರಿಕ ನಿಲುವು ಹೊಂದಿರುವ ಬಸವಣ್ಣನವರ ಬಗ್ಗೆ ವಸ್ತುನಿಷ್ಠ ಮಾಹಿತಿ ಅಗತ್ಯವಾಗಿದೆ. ಕೆಲವರು ಲಿಂಗಾಯತರಾದರೂ ಬಸವತತ್ವದ ಬಗ್ಗೆ ಓದಿಲ್ಲ. ಆದ್ದರಿಂದ ಈ ಬಗ್ಗೆ ಅಂಥವರಿಗೆ ಕಾಳಜಿ ಇಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಷ್ಟ್ರೀಯ ಬಸವದಳದ ತಾಲ್ಲೂಕು ಘಟಕದ ಅಧ್ಯಕ್ಷ ರವೀಂದ್ರ ಕೊಳಕೂರ ಮಾತನಾಡಿ, ‘ಶರಣರ ಅವಹೇಳನ ಮುಂದುವರಿದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ಬಸವ ಮಹಾಮನೆಯ ಸತ್ಯಕ್ಕತಾಯಿ, ಮುಖಂಡ ಆಕಾಶ ಖಂಡಾಳೆ, ಜಾಗತಿಕ ಲಿಂಗಾಯತ ಮಹಾಸಭಾ ಆಳಂದ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಲೋಹಾರ ಇದ್ದರು.

ಬಸವಕಲ್ಯಾಣದಲ್ಲಿ ಬುಧವಾರ ನಡೆದ ಬಸವಾಭಿಮಾನಿಗಳ ಸಭೆಯಲ್ಲಿ ಬೇಲೂರು ಶಿವಬಸವ ಸ್ವಾಮೀಜಿ ಕೋರಣೇಶ್ವರ ಸ್ವಾಮೀಜಿ ಸತ್ಯಕ್ಕತಾಯಿ ರವೀಂದ್ರ ಕೊಳಕೂರ ರಮೇಶ ಲೋಹಾರ ಇದ್ದರು
ಬಸವಕಲ್ಯಾಣದಲ್ಲಿ ಬುಧವಾರ ನಡೆದ ಬಸವಾಭಿಮಾನಿಗಳ ಸಭೆಯಲ್ಲಿ ಬೇಲೂರು ಶಿವಬಸವ ಸ್ವಾಮೀಜಿ ಕೋರಣೇಶ್ವರ ಸ್ವಾಮೀಜಿ ಸತ್ಯಕ್ಕತಾಯಿ ರವೀಂದ್ರ ಕೊಳಕೂರ ರಮೇಶ ಲೋಹಾರ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT