ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕಮಾಂಡ್‌ ‘ಗ್ರೌಂಡ್‌ ರಿಯಾಲಿಟಿ’ ಸರ್ವೇ ಮಾಡಲಿ: ಸುಭಾಷ ಕಲ್ಲೂರ ಆಗ್ರಹ

Published 28 ನವೆಂಬರ್ 2023, 16:16 IST
Last Updated 28 ನವೆಂಬರ್ 2023, 16:16 IST
ಅಕ್ಷರ ಗಾತ್ರ

ಬೀದರ್: ‘ಬಿಜೆಪಿ ಹೈಕಮಾಂಡ್‌ ಗ್ರೌಂಡ್‌ ರಿಯಾಲಿಟಿ ಸರ್ವೇ ಮಾಡಬೇಕು. ಅನಂತರ ಬೀದರ್‌ ಲೋಕಸಭಾ ಕ್ಷೇತ್ರದ ಟಿಕೆಟ್‌ ಯಾರಿಗೆ ಕೊಡಬೇಕು ಎಂಬುದನ್ನು ನಿರ್ಧರಿಸಬೇಕು’ ಎಂದು ಬಿಜೆಪಿ ಹಿರಿಯ ಮುಖಂಡರೂ ಆದ ಮಾಜಿ ಶಾಸಕ ಸುಭಾಷ ಕಲ್ಲೂರ ಆಗ್ರಹಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಇಡೀ ಭಾರತದಲ್ಲಿ ಬಿಜೆಪಿಯ 150 ಹಾಲಿ ಸಂಸದರ ಟಿಕೆಟ್‌ಗಳು ಕಟ್‌ ಆಗುತ್ತವೆ. ಅಂತಿಮವಾಗಿ ಹೈಕಮಾಂಡ್‌ ಏನು ಹೇಳುತ್ತದೆ ಅದನ್ನು ಪಾಲಿಸುತ್ತೇವೆ’ ಎಂದರು.

ಕೆಲವರು ‘ಆಸ್ಮಾನ್‌’ ಮುಟ್ಟಿದ್ದವರಂತೆ ಮಾತನಾಡುತ್ತಿದ್ದಾರೆ. ಅವರಿಗೆ ಬುದ್ಧಿ ಬರಲೆಂದು ಈ ಪತ್ರಿಕಾಗೋಷ್ಠಿ ಕರೆಯಲಾಗಿದೆ. ಚುನಾವಣೆ ಬಂದಾಗ ಕಾರ್ಯಕರ್ತರನ್ನು ಬಳಸಿಕೊಳ್ಳುವುದು, ನಂತರ ಅವರನ್ನು ಕಡೆಗಣಿಸುವುದು ಸರಿಯಲ್ಲ ಎಂದರು.

2014, 2019ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಲೆಯಲ್ಲಿ ಭಗವಂತ ಖೂಬಾ ಅವರು ಬೀದರ್‌ ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ. ಈಗ ಅವರು ಕೇಂದ್ರದಲ್ಲಿ ಸಚಿವರೂ ಹೌದು. ಅವರು ಅವರ ಪಾಲಿನ ಕೆಲಸ ಮಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲೂ ಮೋದಿಯವರ ನಾಯಕತ್ವದಲ್ಲಿ ಪಕ್ಷ ಗೆದ್ದು ಪುನಃ ಅಧಿಕಾರಕ್ಕೆ ಬರಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಬಿ.ವೈ. ವಿಜಯೇಂದ್ರ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ನಂತರ ಯುವಕರಲ್ಲಿ ಭರವಸೆ ಮೂಡಿದೆ. ಬಿ.ಎಸ್‌. ಯಡಿಯೂರಪ್ಪನವರ ಎಲ್ಲಾ ಗುಣಗಳು ವಿಜಯೇಂದ್ರ ಅವರಲ್ಲಿವೆ. ಸಾಮರ್ಥ್ಯ, ಯೋಗ್ಯತೆ ಎರಡೂ ವಿಜಯೇಂದ್ರ ಅವರಿಗಿದೆ. ಇನ್ನೊಂದೆಡೆ 7 ಬಾರಿ ಶಾಸಕರಾಗಿರುವ ಆರ್‌.ಅಶೋಕ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಜೆಡಿಎಸ್‌ ಮೈತ್ರಿಯಿಂದ ಐದಾರೂ ಜಿಲ್ಲೆಗಳಲ್ಲಿ ಪಕ್ಷಕ್ಕೆ ಶಕ್ತಿ ಬಂದಿದೆ. ಮುಂದಿನ ಲೋಕಸಭಾ ಚುನಾವಣೆಯನ್ನು ಜೋಡೆತ್ತಿನ ಜೋಡಿಯಿಂದ ಗೆಲ್ಲುತ್ತೇವೆ ಎಂದು ಹೇಳಿದರು.

ಭಿನ್ನಾಭಿಪ್ರಾಯಗಳು ಸಹಜ. ಶಾಸಕರ ಅಭಿಪ್ರಾಯ ಕೂಡ ಬಹಳ ಮುಖ್ಯ. ಹೈಕಮಾಂಡ್‌ ಶಾಸಕರ ಅಭಿಪ್ರಾಯ ಪರಿಗಣಿಸಬೇಕು ಎಂದರು.

‘ಆಕಾಂಕ್ಷಿಯೆಂದು ಹಕ್ಕಿನಿಂದ ಹೇಳುವೆ’
‘ಬರುವ ಲೋಕಸಭೆ ಚುನಾವಣೆಯಲ್ಲಿ ನಾನು ಆಕಾಂಕ್ಷಿಯೆಂದು ಹಕ್ಕಿನಿಂದ ಹೇಳುವೆ. ಚುನಾವಣೆಗೆ ಟಿಕೆಟ್‌ ಆಕಾಂಕ್ಷಿಗಳಾಗುವುದು ನಿಜ. ಏನೇ ಇರಲಿ. ಬೀದರ್‌ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಪ್ರಚಂಡ ಬಹುಮತದಿಂದ ಗೆಲ್ಲಬೇಕು. ಯಾರಿಗೆ ಟಿಕೆಟ್‌ ಕೊಟ್ಟರೂ ಅದಕ್ಕಾಗಿ ಶಕ್ತಿಮೀರಿ ಕೆಲಸ ಮಾಡುತ್ತೇವೆ’ ಎಂದು ಮುಖಂಡ ನಾಗರಾಜ ಕರ್ಪೂರ ಹೇಳಿದರು.
‘ಮೋದಿ ಅವಧಿಯಲ್ಲಿ ನಾವ್ಯಾಕೆ ಸಂಸದರಾಗಬಾರದು?’
‘ಪ್ರಧಾನಿ ನರೇಂದ್ರ ಮೋದಿಯವರ ಅವಧಿಯಲ್ಲಿ ನಾವ್ಯಾಕೆ ಸಂಸದರಾಗಬಾರದು? ಅತ್ತರಷ್ಟೇ ಮಗುವಿಗೆ ತಾಯಿ ಹಾಲು ಕುಡಿಸುತ್ತಾಳೆ’ ಎಂದು ಮಾಜಿ ಶಾಸಕ ಗುಂಡಪ್ಪ ವಕೀಲ ಹೇಳಿದರು. ನಾವು ಭಗವಂತ ಖೂಬಾ ವಿರುದ್ಧ ಇಲ್ಲ. ಅವರನ್ನು ವಿರೋಧಿಸಿದರೆ ಪಕ್ಷವನ್ನು ವಿರೋಧಿಸಿದಂತೆ. ನಾವು ಪಕ್ಷಕ್ಕಾಗಿ ದುಡಿದಿದ್ದೇವೆ. ಮೇಲಿಂದ ಸೀನಿಯರ್‌ಗಳು. ಎಂಪಿ ಟಿಕೆಟ್‌ಗೆ ಕ್ಲೇಮ್‌ ಮಾಡುತ್ತಿದ್ದೇವೆ. ನಾವು ಎಂಟು ಜನರಷ್ಟೇ ಅಲ್ಲ. ಇನ್ನೂ ಹಲವು ಜನ ಆಕಾಂಕ್ಷಿಗಳಿದ್ದಾರೆ. ಆದರೆ ಪಕ್ಷ ಯಾರಿಗೆ ಟಿಕೆಟ್‌ ಕೊಟ್ಟರೂ ಕೆಲಸ ಮಾಡುತ್ತೇವೆ. ನಮಗೆ ಕೊಟ್ಟು ನೋಡಿ ಎಂದು ಹೇಳುತ್ತಿದ್ದೇವೆ. ಬರುವ ದಿನಗಳಲ್ಲಿ ಸಭೆ ನಡೆಸಿ ಪಕ್ಷಕ್ಕೆ ಕೋರುತ್ತೇವೆ ಎಂದರು.
‘ಯಾರನ್ನು ಯಾವಾಗ ರಾಜ ಮಾಡುತ್ತಾರೊ ಗೊತ್ತಿಲ್ಲ’ ‌
‘ಬಿಜೆಪಿಯಲ್ಲಿ ಯಾರನ್ನು ಯಾವಾಗ ರಾಜ ಮಾಡುತ್ತಾರೋ ಗೊತ್ತಿಲ್ಲ’ ಎಂದು ಬಿಜೆಪಿ ಮುಖಂಡ ಪದ್ಮಾಕರ್‌ ಪಾಟೀಲ ಮಾರ್ಮಿಕವಾಗಿ ಹೇಳಿದರು. ‘ಜಿಲ್ಲಾ ಪಂಚಾಯಿತಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಎಂಎಲ್‌ಎ ಎಲೆಕ್ಷನ್‌ನಲ್ಲಿ ಸೋತಿದ್ದೇನೆ. ಐದು ಕ್ಷೇತ್ರಗಳಲ್ಲಿ ಬಿಜೆಪಿ ಮರಾಠ ಸಮಾಜದವರಿಗೆ ಟಿಕೆಟ್‌ ಕೊಟ್ಟಿಲ್ಲ. ಬರುವ ಚುನಾವಣೆಯಲ್ಲಿ ಆ ಸಮಾಜಕ್ಕೆ ಸೇರಿದ ನನಗೆ ಟಿಕೆಟ್‌ ಕೊಡಬೇಕು. ನಾನು ಕೂಡ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ನಾನು ಪಕ್ಷಕ್ಕಾಗಿ 25 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಭಗವಂತ ಖೂಬಾ ‘ಗಲತ್‌ ಆದ್ಮಿ’ ಅಲ್ಲ. ಆದರೆ ನಾನು ಆಕಾಂಕ್ಷಿಯಾಗಿರುವೆ ಎಂದರು. ಮುಖಂಡರಾದ ಚನ್ನಬಸವ ಬಳತೆ ನಂದಕುಮಾರ ಸಾಳುಂಕೆ ಬಾಲಾಜಿ ಮಾತನಾಡಿ ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ. ಯಾರಿಗೆ ಟಿಕೆಟ್‌ ಕೊಟ್ಟರೂ ಅವರ ಗೆಲುವಿಗೆ ಶ್ರಮಿಸುತ್ತೇವೆ. ಆಕಾಂಕ್ಷಿಗಳು ಎಂದು ಹೇಳಿದ ನಂತರ ನಾವು ಭಗವಂತ ಖೂಬಾ ವಿರುದ್ಧ ಅಲ್ಲ. ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT