ಶನಿವಾರ, ಮಾರ್ಚ್ 6, 2021
31 °C

ಸ್ವಾಮಿ ಜ್ಯೋತಿರ್ಮಯಾನಂದಜಿ ಕಾರ್ಯ ಶ್ಲಾಘನೀಯ: ಸಚಿವ ಪ್ರಭು ಚವಾಣ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಗೋವುಗಳ ರಕ್ಷಣೆ ಮತ್ತು ದೇಸಿ ಜಾನುವಾರು ತಳಿಗಳನ್ನು ಉಳಿಸಿ, ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸ್ವಾಮಿ ಜ್ಯೋತಿರ್ಮಯಾನಂದಜಿ ಕಾರ್ಯ ಶ್ಲಾಘನೀಯ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಬಣ್ಣಿಸಿದರು.

ಇಲ್ಲಿಯ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿವೇಕ ಭವನದಲ್ಲಿ ಮಂಗಳವಾರ ನಡೆದ ಗೋಶಾಲೆ ವಾರ್ಷಿಕೋತ್ಸವ ಹಾಗೂ ‘ಗೋ ರಥ ಗೋ ಸೇವೆ’ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾನು ನಾಡಿನ ಹಲವೆಡೆ ಪ್ರವಾಸ ಕೈಗೊಂಡಿದ್ದೇನೆ. ಸ್ವಾಮೀಜಿಯವರು ಧಾರ್ಮಿಕ ಕಾರ್ಯಗಳೊಟ್ಟಿಗೆ ಬಹಳಷ್ಟು ತಾಳ್ಮೆ ಮತ್ತು ಶ್ರಮ ಬಯಸುವ ಗೋವುಗಳ ಸಾಕುವ ಕೆಲಸ ಮಾಡುತ್ತಿದ್ದಾರೆ. ಧರ್ಮ ಗುರುಗಳು ತಮ್ಮ ಧಾರ್ಮಿಕ ಕೆಲಸಗಳ ನಡುವೆ ಏನೆಲ್ಲ ಮಾಡಬಹುದೆಂದು ತೋರಿಸಿದ್ದಾರೆ’ ಎಂದು ಬಣ್ಣಿಸಿದರು.

‘ಕೇವಲ ಎರಡು ಗೋವುಗಳಿಂದ ಆರಂಭವಾದ ಈ ಗೋಶಾಲೆಯಲ್ಲಿ ಇಂದು 100ಕ್ಕೂ ಹೆಚ್ಚು ಗೋವುಗಳಿವೆ. ದೇಸಿ ತಳಿಗಳ ಸಂರಕ್ಷಣೆ ಮತ್ತು ಸಂವರ್ಧನೆಯಲ್ಲಿ ತೊಡಗಿಸಿಕೊಂಡು ಯುವಕರು ಸ್ವಾವಲಂಬಿಯಾಗಲು ಗೋಶಾಲೆ ಪ್ರೇರಣೆ ನೀಡುತ್ತಿದೆ’ ಎಂದು ತಿಳಿಸಿದರು.

‘ಗೋವುಗಳು ಇನ್ನು ಮುಂದೆ ಕಟುಕರ ಪಾಲಾಗಬಾರದು. ಕಾನೂನು ಬಾಹಿರ ಸಾಗಣೆ ತಡೆಯಲು ಹಾಗೂ ಗೋವುಗಳಿಗೆ ರಕ್ಷಣೆ ಒದಗಿಸುವ ಉದ್ದೇಶದಿಂದ ರಾಜ್ಯದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ ಜಾರಿಗೆ ತರಲಾಗಿದೆ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗೋಶಾಲೆ ಪ್ರಗತಿಗೆ ಕೈಜೋಡಿಸಿದ 45 ಗೋ ಸೇವಕರನ್ನು ಸನ್ಮಾನಿಸಲಾಯಿತು. ಇದಕ್ಕೂ ಮೊದಲು ಗೋರಥಕ್ಕೆ ಸಚಿವ ಪ್ರಭು ಚವಾಣ್‌ ಚಾಲನೆ ನೀಡಿದರು.
.
ಸಂಸದ ಭಗವಂತ ಖೂಬಾ ಮಾತನಾಡಿ, ‘ರಾಮಕೃಷ್ಣ ವಿವೇಕಾನಂದ ಆಶ್ರಮದ ಜ್ಯೋತಿರ್ಮಯಾನಂದ ಸ್ವಾಮೀಜಿ ಮುಂದಾಳತ್ವದಲ್ಲಿ ಯುವಕರು ಸಹ ಗೋಸೇವೆಗೆ ಮುಂದಾಗಿರುವುದು ಶ್ಲಾಘನೀಯ’ ಎಂದರು.

‘ಬರುವ ದಿನಗಳಲ್ಲಿ ಇನ್ನಷ್ಟು ಗೋಶಾಲೆಗಳನ್ನು ತೆರೆಯಲು ಸರ್ಕಾರ ನೆರವು ಒದಗಿಸಲಿದೆ’ ಎಂದು ಹೇಳಿದರು. 

ಆಶ್ರಮದ ಜ್ಯೋತಿರ್ಮಯಾನಂದ ಸ್ವಾಮೀಜಿ ಮಾತನಾಡಿ, ‘ಅಜ್ಞಾನದಿಂದ ನಮ್ಮ ಮೂಲವನ್ನು ಮರೆಯುತ್ತಿದ್ದೇವೆ. ಕೃಷಿಕರು ಗೋ ಸಾಕಾಣಿಕೆ ಮೂಲಕ ಆರ್ಥಿಕ ಪ್ರಗತಿ ಸಾಧಿಸಬೇಕು’ ಎಂದು ಹೇಳಿದರು.

ಶಾಸಕ ರಹೀಂ ಖಾನ್, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್ ಮಲ್ಕಾಪುರೆ, ಅರವಿಂದಕುಮಾರ ಅರಳಿ, ಕೆಎಸ್ಐಐಡಿಸಿ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಬುಡಾ ಅಧ್ಯಕ್ಷ ಬಾಬು ವಾಲಿ, ಜಿಲ್ಲಾಧಿಕಾರಿ ರಾಮಚಂದ್ರನ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್. .ನಾಗೇಶ, ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಪಾಲ್ಗೊಂಡಿದ್ದರು. ಹಿರಿಯ ಉದ್ಯಮಿ ಗುರುನಾಥ ಕೊಳ್ಳೂರ ಅಧ್ಯಕ್ಷತೆ ವಹಿಸಿದ್ದರು.

ಪತ್ರಕರ್ತ ಸದಾನಂದ ಜೋಶಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು