ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್: ಪ್ರಶಸ್ತಿ ಹಣದಿಂದ ಶಾಲೆ ಅಂದ ಹೆಚ್ಚಿಸಿದ ಶಿಕ್ಷಕ

Published 4 ಜೂನ್ 2023, 0:19 IST
Last Updated 4 ಜೂನ್ 2023, 0:19 IST
ಅಕ್ಷರ ಗಾತ್ರ

ಔರಾದ್: ಶಿಕ್ಷಕರು ಮನಸ್ಸು ಮಾಡಿದರೆ ಏನೆಲ್ಲ ಮಾಡಲು ಸಾಧ್ಯ ಎನ್ನುವುದಕ್ಕೆ ತಾಲ್ಲೂಕಿನ ಎಕಲಾರ ಸರ್ಕಾರಿ ಶಾಲೆ ಸಾಕ್ಷಿಯಾಗಿದೆ.

ಎಕಲಾರ ಗ್ರಾಮದ ಪಾಲಕರಿಗೆ ಸರ್ಕಾರಿ ಶಾಲೆಯೆಂದರೆ ನಕಾರಾತ್ಮಕ ಭಾವ ಹೊಂದಿದ್ದರು. ಆದರೆ ಈಗ ಶಿಕ್ಷಕರ ಶ್ರಮದಿಂದ ಖಾಸಗಿ ಶಾಲೆ ಮಕ್ಕಳು ಸರ್ಕಾರಿ ಶಾಲೆ ಕಡೆ ತಿರುಗಿ ನೋಡುವಂತೆ ಆಗಿದೆ.

ಶಿಕ್ಷಕ ಜೈಸಿಂಗ್ ಠಾಕೂರ ಅವರಿಗೆ ಸರ್ಕಾರ 2019ರಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ₹ 50 ಸಾವಿರ ನಗದು ಬಹುಮಾನ ನೀಡಿದೆ. ಬಹುಮಾನದ ಹಣ ಬಳಸಿಕೊಂಡು ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾದ ವಾತಾವರಣ ಕಲ್ಪಿಸಿದ್ದಾರೆ.

ಶಾಲಾ ಆವರಣದಲ್ಲಿ ಕಲಿಕಾ ಪರಿಕರಗಳು, ಪಠ್ಯೇತರ ಚಟುವಟಿಕೆ, ಮಕ್ಕಳ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗುವಂತಹ ಗೋಡೆ ಬರಹ, ಚಿತ್ರ ಬಿಡಿಸುವ ಮೂಲಕ ಮಕ್ಕಳ ಕಲಿಕಾ ಆಸಕ್ತಿಯನ್ನು ಹೆಚ್ಚಿಸಿದ್ದು, ಪಾಲಕರು ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಖಾಸಗಿ ಕಾನ್ವೆಂಟ್ ಶಾಲೆಗೆ ಮೀರಿ ನಮ್ಮ ಶಾಲೆಯಲ್ಲಿ ಅತ್ಯುತ್ತಮ ಶೈಕ್ಷಣಿಕ ಸೌಲಭ್ಯ ಕಲ್ಪಿಸಲಾಗಿದೆ. ಈ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು, ಗ್ರಾಮಸ್ಥರ ಸಹಕಾರದಿಂದ ಪ್ರಗತಿ ಮಾಡಲು ಸಹಕಾರಿಯಾಗಿದೆ. ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಂಸ್ಕೃತಿಕ ಸಂಘದವರು ಆನ್‌ಲೈನ್‌ ಕ್ಲಾಸ್‌ಗೆ ಬೇಕಾದ ಸಾಮಗ್ರಿ ಕಲ್ಪಿಸಿಕೊಟ್ಟಿದ್ದಾರೆ. ಆದರ್ಶ ವಿದ್ಯಾಲಯದಲ್ಲಿ ಮೂಲೆ ಗುಂಪು ಸೇರಿದ ಬೆಂಚ್‌ಗಳನ್ನು ದುರಸ್ತಿಗೊಳಿಸಿ, ಈಗ ಅವು ನಮ್ಮ ಶಾಲೆ ಮಕ್ಕಳಿಗೆ ಉಪಯೋಗವಾಗುವಂತೆ ಮಾಡಿದ್ದೇವೆ ಎನ್ನುತ್ತಾರೆ ಶಿಕ್ಷಕ ಬಾಲಾಜಿ ಅಮರವಾಡಿ.

1ರಿಂದ 7ನೇ ತರಗತಿ ವರೆಗಿನ ನಮ್ಮ ಶಾಲೆಯಲ್ಲಿ 120 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಯಲ್ಲಿ ಒಟ್ಟು ಐದು ಕೊಠಡಿಗಳಿವೆ. ಒಂದು ಕೊಠಡಿಯನ್ನು ಗ್ರಂಥಾಲಯಕ್ಕೆ ಬಳಸಿಕೊಳ್ಳಲಾಗಿದೆ. ಇನ್ನು ಮೂರು ಕೊಠಡಿ ಹಳೆಯದಾಗಿವೆ. ಅವುಗಳನ್ನು ನೆಲಸಮಗೊಳಿಸಿ, ಹೊಸ ಕೊಠಡಿ ನಿರ್ಮಿಸಿಕೊಟ್ಟರೆ ತುಂಬಾ ಅನುಕೂಲವಾಗಲಿದೆ ಎಂದು ಮುಖ್ಯ ಶಿಕ್ಷಕ ಪ್ರಭುರಾವ ಬಾಳೂರೆ ತಿಳಿಸಿದ್ದಾರೆ.

ಕೋವಿಡ್ ಮೊದಲು ನಮ್ಮಲ್ಲಿ ಪ್ರವೇಶ ಪಡೆಯುವ ಮಕ್ಕಳ ಸಂಖ್ಯೆ ಕಡಿಮೆಯಿತ್ತು. ಶಾಲೆಗೆ ಹೊಸರೂಪ ನೀಡಿದ ಬಳಿಕ, ಮಕ್ಕಳ ದಾಖಲಾತಿ ಹೆಚ್ಚಾಗಿದೆ. ಖಾಸಗಿ ಶಾಲೆಗಳಿಗೆ ತೆರಳಿದ್ದ ಮಕ್ಕಳು ವಾಪಸ್ ಬರುತ್ತಿದ್ದಾರೆ. ಇದು ನಮಗೆ ಹೆಮ್ಮೆ ತರುವ ಸಂಗತಿ ಎಂದು ಶಿಕ್ಷಕ ಸಿಬ್ಬಂದಿ ಹೆಮ್ಮೆ ಪಡುತ್ತಾರೆ.

ಔರಾದ್ ತಾಲ್ಲೂಕಿನ ಎಕಲಾರ ಸರ್ಕಾರಿ ಶಾಲೆಯಲ್ಲಿ ಬಿಡಿಸಲಾದ ಚಿತ್ರದ ಜತೆ ವಿದ್ಯಾರ್ಥಿ
ಔರಾದ್ ತಾಲ್ಲೂಕಿನ ಎಕಲಾರ ಸರ್ಕಾರಿ ಶಾಲೆಯಲ್ಲಿ ಬಿಡಿಸಲಾದ ಚಿತ್ರದ ಜತೆ ವಿದ್ಯಾರ್ಥಿ
ಜೈಸಿಂಗ್ ಠಾಕೂರ್ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು
ಜೈಸಿಂಗ್ ಠಾಕೂರ್ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು

ನನಗೆ ಪ್ರಶಸ್ತಿ ಬಂದಿರುವ ಹಣ ಮಕ್ಕಳ ಕಲಿಕೆಗಾಗಿ ಬಳಕೆಯಾಗಿರುವುದು ಬಹಳ ಖುಷಿ ತಂದಿದೆ. ಶಾಲೆ ಮಕ್ಕಳೆಂದರೆ ನನ್ನ ಸ್ವಂತ ಮಕ್ಕಳಂತೆ

-ಜೈಸಿಂಗ್ ಠಾಕೂರ ರಾಜ್ಯ ಮಟ್ಟದ ಅತ್ಯುತ್ತಮ ಪ್ರಶಸ್ತಿ ಪುರಸ್ಕೃತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT