ಶುಕ್ರವಾರ, ಜನವರಿ 15, 2021
21 °C

ಸಂಘಟನೆಗೆ ಬಿಜೆಪಿ ನಕಲು ಮಾಡುತ್ತಿರುವ ಕಾಂಗ್ರೆಸ್: ಸಚಿವ ಜಗದೀಶ ಶೆಟ್ಟರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಕಾಂಗ್ರೆಸ್‌ ಕುಟುಂಬ ರಾಜಕಾರಣದ ಪಕ್ಷ. ಕಾರ್ಯಕರ್ತರು ಎಷ್ಟೇ ಪರಿಶ್ರಮ ಪಟ್ಟರೂ ಪ್ರಧಾನಮಂತ್ರಿ ಆಗುವವರು ಒಂದೇ ಕುಟುಂಬದವರು. ಆದರೆ ಲಕ್ಷಾಂತರ ಕಾರ್ಯಕರ್ತರನ್ನು ಹೊಂದಿರುವ ಬಿಜೆಪಿ ಕೇಡರ್‌ ತಳಹದಿಯ ಪಕ್ಷವಾಗಿದೆ. ಸಾಮಾನ್ಯ ಕಾರ್ಯಕರ್ತರೂ ಉನ್ನತ ಸ್ಥಾನ ಪಡೆಯಲು ಇಲ್ಲಿ ಅವಕಾಶ ಇದೆ’ ಎಂದು ಬೃಹತ್ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಇಲ್ಲಿಯ ಪ್ರತಾಪನಗರದ ಬೆಲ್ದಾಳೆ ಫಂಕ್ಷನ್‌ ಹಾಲ್‌ನಲ್ಲಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಜನ ಸೇವಕರ ಸಮಾವೇಶವನ್ನು ಉದ್ಘಾಟಿಸಿ ಹಾಗೂ ಅದಕ್ಕೂ ಮೊದಲು ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದಾಗ ಗ್ರಾಮ ಪಂಚಾಯಿತಿಗಳಲ್ಲಿ ಸಂಘಟನೆ ಬಲಪಡಿಸಿದ್ದರು. ನಂತರ ಪಂಚಾಯಿತಿ ಮಟ್ಟದ ಕಾರ್ಯಕರ್ತರೇ ಅವರಿಗೆ ಶಕ್ತಿ ತುಂಬಿದರು. ಇದೇ ಮಾದರಿಯಲ್ಲಿ ಬಿಜೆಪಿ ಚುನಾವಣೆಯ ಪೂರ್ವದಲ್ಲಿ ನಡೆಸಿದ ಗ್ರಾಮ ಸ್ವರಾಜ್ ಕಾರ್ಯಕ್ರಮ ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವಂತೆ ಮಾಡಲು ಉತ್ತೇಜನ ನೀಡಿತು’ ಎಂದು ಅಭಿಪ್ರಾಯಪಟ್ಟರು.

‘ಜನವರಿ 17ರಂದು ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯಲ್ಲಿ ಗ್ರಾಮ ಸ್ವರಾಜ್‌ ಕಾರ್ಯಕ್ರಮ ನಡೆಯಲಿದ್ದು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

‘ಕಾಂಗ್ರೆಸ್‌ ಜನರ ವಿಶ್ವಾಸ ಕಳೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಪರ್ಯಾಯವಾದ ನಾಯಕತ್ವ ಕಾಂಗ್ರೆಸ್‌ನಲ್ಲಿ ಇಲ್ಲ. ಪ್ರಸ್ತುತ ಎಲ್ಲ ಚುನಾವಣೆಗಳಲ್ಲೂ ಆ ಪಕ್ಷಕ್ಕೆ ಹಿನ್ನಡೆಯಾಗುತ್ತಿದೆ’ ಎಂದು ತಿಳಿಸಿದರು.

ನಾನು ಸ್ಪರ್ಧಿ ಅಲ್ಲ: ‘ಬೆಳಗಾವಿ ಲೋಕಸಭಾ ಚುನಾವಣೆಯ ದಿನಾಂಕ ಪ್ರಕಟವಾಗಿಲ್ಲ. ನಾನು ಅಲ್ಲಿ ಸ್ಪರ್ಧಿಸುವುದೂ ಇಲ್ಲ. ನಾನು ರಾಜ್ಯ ಕೋರ್‌ ಕಮಿಟಿಯ ಸದಸ್ಯನಾಗಿದ್ದೇನೆ. ಅಭ್ಯರ್ಥಿಯ ಬಗ್ಗೆ ಕೋರ್‌ ಕಮಿಟಿಯಲ್ಲೂ ಚರ್ಚೆಯಾಗಿಲ್ಲ. ನಮ್ಮದು ಕಾಂಗ್ರೆಸ್‌ ತರ ಅಲ್ಲ. ರಾಜರಾಜೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಘೋಷಣೆ ಮಾಡಿ ಕೊನೆಯ ಕ್ಷಣದಲ್ಲಿ ಬೇರೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿತು. ಚುನಾವಣೆ ದಿನಾಂಕ ಪ್ರಕಟವಾದ ತಕ್ಷಣ ಪಕ್ಷ ಅಭ್ಯರ್ಥಿಯ ಹೆಸರು ಪ್ರಕಟಿಸಲಿದೆ’ ಎಂದು ಹೇಳಿದರು.

ಹಿಡಿದುಕೊಂಡು ಬರಲು ಆಗದು: ‘ಬೀದರ್‌ ಜಿಲ್ಲೆಗೆ ಕೈಗಾರಿಕೋದ್ಯಮಿಗಳನ್ನು ಹಿಡಿದುಕೊಂಡು ಬರಲು ಆಗುವುದಿಲ್ಲ. ಆದರೆ, ಕೈಗಾರಿಕೆ ಆರಂಭಿಸಲು ಅಗತ್ಯವಿರುವ ಪೂರಕ ವಾತಾವರಣ ಸೃಷ್ಟಿಸುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡಲಿದೆ’ ಎಂದು ಜಗದೀಶ ಶೆಟ್ಟರ್‌ ತಿಳಿಸಿದರು.

‘ಬೀದರ್‌ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ದಿಸೆಯಲ್ಲಿ ವಿಶೇಷ ಸಭೆ ನಡೆಸಲಾಗುವುದು. ಜನರ ಬೇಡಿಕೆಗಳಿಗೆ ಸ್ಪಂದಿಸಲಾಗುವುದು’ ಎಂದು ಹೇಳಿದರು.

ಶೇ 60 ಪಂಚಾಯಿತಿಗಳಲ್ಲಿ ಬಿಜೆಪಿಗೆ ಬಹುಮತ

‘ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶೇಕಡ 60 ರಷ್ಟು ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 5,670 ಪಂಚಾಯಿತಿಗಳಿವೆ. 2015ರಲ್ಲಿ ಬಿಜೆಪಿ 24,705 ಸ್ಥಾನಗಳನ್ನು ಗೆದ್ದಿದ್ದರೆ, ಈ ಬಾರಿ ಪಕ್ಷದ 45,246 ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ’ ಎಂದು ಶೆಟ್ಟರ್‌ ತಿಳಿಸಿದರು.

‘2015ರಲ್ಲಿ 1,934 ಪಂಚಾಯಿತಿಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದುಕೊಂಡಿತ್ತು. ಪ್ರಸ್ತುತ 3,147 ಪಂಚಾಯಿತಿಗಳಲ್ಲಿ ಬಹುಮತ ಪಡೆದಿದೆ. ಬೀದರ್‌ ಜಿಲ್ಲೆಯ 178 ಗ್ರಾಮ ಪಂಚಾಯಿತಿಗಳಿಗೆ 3,099 ಸದಸ್ಯರು ಚುನಾಯಿತರಾಗಿದ್ದು, ಅದರಲ್ಲಿ 1,987 ಸದಸ್ಯರು ಬಿಜೆಪಿಯವರು’ ಎಂದು ಹೇಳಿದರು.

‘ಬೀದರ್‌ ಜಿಲ್ಲೆಯಲ್ಲಿ 2015ರಲ್ಲಿ 85 ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಬಹುಮತ ಗಳಿಸಿತ್ತು. ಈ ಬಾರಿ 133 ಪಂಚಾಯಿತಿಗಳಲ್ಲಿ ಬಹುಮತ ದೊರಕಿದೆ’ ಎಂದು ತಿಳಿಸಿದರು.

ಮಹಿಳೆಯರಿಗೆ ಅವಕಾಶ ಕೊಡಿ: ‘ಪಂಚಾಯಿತಿ ಚುನಾವಣೆಯಲ್ಲಿ ಮಹಿಳೆಯರು ಗೆದ್ದರೂ ಪತಿಯಂದಿರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಹಾಗೂ ಸಭೆಗಳಲ್ಲಿ ಭಾಗವಹಿಸುವುದು ಆಗಬಾರದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

‘ಚುನಾಯಿತ ಪತ್ನಿಯರನ್ನು ಇಂತಹ ಸಭೆಗಳಿಗೆ ಕರೆದುಕೊಂಡು ಬಂದರೆ ಪಕ್ಷ ಹಾಗೂ ಮುಖ್ಯಮಂತ್ರಿ ಅವರ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಅರಿತುಕೊಳ್ಳಲು ಅವರಿಗೂ ಅನುಕೂಲವಾಗಲಿದೆ. ಪಂಚಾಯಿತಿ ಚುನಾವಣೆಯಲ್ಲಿ ಶೇಕಡ 50 ರಷ್ಟು ಸ್ಥಾನಗಳನ್ನು ಒದಗಿಸಿದರೂ ಕಾರ್ಯಕ್ರಮದಲ್ಲಿ ಕೇವಲ ಎರಡು ಸಾಲುಗಳಲ್ಲಿ ಮಾತ್ರ ಮಹಿಳೆಯರು ಪಾಲ್ಗೊಂಡಿರುವುದು ಬೇಸರ ಮೂಡಿಸಿದೆ’ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಮಾತನಾಡಿ, ‘ಗ್ರಾಮಗಳಲ್ಲಿರುವ ಶಾಲೆಗಳಿಗೆ ಶಿಕ್ಷಕರು ಸರಿಯಾಗಿ ಬರುತ್ತಾರೆಯೋ, ಇಲ್ಲವೋ ಎನ್ನುವುದರ ಮೇಲೂ ನಿಗಾ ಇಡುವ ಜವಾಬ್ದಾರಿ ಪಂಚಾಯಿತಿ ಸದಸ್ಯರ ಮೇಲಿದೆ. ಅಂದಾಗ ಮಾತ್ರ ಗ್ರಾಮ ಮಟ್ಟದಲ್ಲಿ ಶಿಕ್ಷಣದಲ್ಲಿ ಸುಧಾರಣೆ ಕಾಣಲು ಸಾಧ್ಯವಾಗಲಿದೆ’ ಎಂದರು.

ಸಂಸದ ಭಗವಂತ ಖೂಬಾ, ಬಿಜೆಪಿ ಕಲಬುರ್ಗಿ ವಿಭಾಗ ಪ್ರಮುಖ ಈಶ್ವರಸಿಂಗ್‌ ಠಾಕೂರ್ ಮಾತನಾಡಿದರು.

ಬಿಜೆಪಿ ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಸಂದೀಪ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಮಾನೆಗೋಪಾಳೆ, ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಬುಡಾ ಅಧ್ಯಕ್ಷ ಬಾಬು ವಾಲಿ, ಬಿಜೆಪಿ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ, ಡಿ.ಕೆ.ಸಿದ್ರಾಮ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಗುಂಡುರಡ್ಡಿ, ಶಕುಂತಲಾ ಬೆಲ್ದಾಳೆ, ಗುರುನಾಥ ಜ್ಯಾಂತಿಕರ್, ಹಣಮಂತ ಬುಳ್ಳಾ ಇದ್ದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್ ಸ್ವಾಗತಿಸಿದರು. ಅಶೋಕ ಹೊಕ್ರಾಣೆ ನಿರೂಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು