ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಸಾಮಾನ್ಯ ಸೇವಾ ಕೇಂದ್ರಗಳಿಗೆ ಬೀಗಮುದ್ರೆ: ಜಿಲ್ಲಾಧಿಕಾರಿ ರಾಮಚಂದ್ರನ್

ಕಾರ್ಮಿಕರ ನೋಂದಣಿ, ಪರಿಹಾರ ಅರ್ಜಿ ಸಲ್ಲಿಕೆಗೆ ಅಧಿಕ ಸೇವಾ ಶುಲ್ಕ ವಸೂಲಿ
Last Updated 1 ಜುಲೈ 2021, 14:50 IST
ಅಕ್ಷರ ಗಾತ್ರ

ಬೀದರ್: ಕಟ್ಟಡ ಕಾರ್ಮಿಕರ ಹೆಸರು ನೋಂದಣಿ ಹಾಗೂ ಅಸಂಘಟಿತ ವಲಯದ ಕಾರ್ಮಿಕರಿಗೆ ಕೋವಿಡ್ ಕಾರಣ ಸರ್ಕಾರ ಘೋಷಿಸಿರುವ ₹ 2 ಸಾವಿರ ಪರಿಹಾರದ ಅರ್ಜಿ ಸಲ್ಲಿಕೆಗೆ ನಿಗದಿಗಿಂತ ಅಧಿಕ ಸೇವಾ ಶುಲ್ಕ ಪಡೆಯುತ್ತಿದ್ದ ಇಲ್ಲಿಯ ಎರಡು ಸಾಮಾನ್ಯ ಸೇವಾ ಕೇಂದ್ರ(ಸಿಎಸ್‍ಸಿ)ಗಳಿಗೆ ಅಧಿಕಾರಿಗಳು ಬೀಗಮುದ್ರೆ ಹಾಕಿದ್ದಾರೆ.

ಮೂರು ಕೇಂದ್ರಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಕಾರ್ಮಿಕ ಇಲಾಖೆ ಕಚೇರಿ ಕೆಳಗಿನ ನೆಲಮಹಡಿಯಲ್ಲಿ ಇರುವ ‘ಸನ್‍ಶೈನ್ ಸರ್ವಿಸ್’ ಹಾಗೂ ಅಂಬೇಡ್ಕರ್ ವೃತ್ತ ಸಮೀಪದ ವಾಜೀದ್ ಕಾಂಪ್ಲೆಕ್ಸ್‍ನಲ್ಲಿಯ ‘ಇ-ಸರ್ವಿಸ್ ಇಂಟರ್‍ನೆಟ್ ಆನ್‍ಲೈನ್ ಸರ್ವಿಸ್’ ಹೆಸರಿನ ಕೇಂದ್ರಗಳಿಗೆ ಬೀಗ ಹಾಕಿದರು. ಹಳೆಯ ಬಸ್ ನಿಲ್ದಾಣ ಬಳಿಯ ‘ಹೊಸ ಚಿಗುರು’ ಸಾಮಾನ್ಯ ಸೇವಾ ಕೇಂದ್ರದ ಮುಖ್ಯಸ್ಥರಿಗೆ ತಿಳಿವಳಿಕೆ ನೀಡಿದರು.

ಕಟ್ಟಡ ಕಾರ್ಮಿಕರ ನೋಂದಣಿ ಹಾಗೂ ಪರಿಹಾರ ಅರ್ಜಿ ಸಲ್ಲಿಕೆಗೆ ಜಿಲ್ಲೆಯ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ₹ 200 ರಿಂದ ರೂ. 1,000 ವರೆಗೂ ಶುಲ್ಕ ಪಡೆಯಲಾಗುತ್ತಿದೆ ಎನ್ನುವ ದೂರುಗಳ ಹಿನ್ನೆಲೆಯಲ್ಲಿ ಸಿಎಸ್‍ಸಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಬೀಗಮುದ್ರೆ ಹಾಕಲಾದ ಕೇಂದ್ರಗಳಲ್ಲಿ ಕಟ್ಟಡ ಕಾರ್ಮಿಕರ ನೋಂದಣಿ ಹಾಗೂ ಅಸಂಘಟಿತ ವಲಯದ ಕಾರ್ಮಿಕರ ಪರಿಹಾರ ಅರ್ಜಿ ಸಲ್ಲಿಸಲು ನಿಗದಿಗಿಂತ ಹೆಚ್ಚು ಸೇವಾ ಶುಲ್ಕ ಪಡೆಯುವುದು ಹಾಗೂ ಸಿಎಸ್‍ಸಿ ಐಡಿ ನಿಷ್ಕ್ರೀಯವಾಗಿದ್ದರೂ, ₹ 600 ವರೆಗೆ ಶುಲ್ಕ ಪಡೆದು ಸೇವಾ ಸಿಂಧುವಿನ ಸಿಟಿಝನ್ ಲಾಗಿನ್ ಮೂಲಕ ಲಾಗಿನ್ ಆಗಿ ಅರ್ಜಿ ಸಲ್ಲಿಸಿರುವುದು ಕಂಡು ಬಂದಿದೆ ಎಂದು ತಂಡದಲ್ಲಿದ್ದ ಅಧಿಕಾರಿಗಳು ಹೇಳಿದರು.

ಇನ್ನೊಂದು ಕೇಂದ್ರದಲ್ಲಿ ಅಧಿಕ ಸೇವಾ ಶುಲ್ಕ ಪಡೆಯುತ್ತಿರುವ ಬಗ್ಗೆ ಯಾವುದೇ ಮಾಹಿತಿ, ದಾಖಲೆಗಳು ಲಭ್ಯವಾಗಿಲ್ಲ. ಹೀಗಾಗಿ ಅಧಿಕ ಶುಲ್ಕ ಪಡೆಯದಂತೆ ಎಚ್ಚರಿಕೆ ನೀಡಲಾಗಿದೆ. ದೂರಿನ ಪ್ರಯುಕ್ತ ಈ ಸಂಸ್ಥೆಗೂ ನೋಟಿಸ್ ಜಾರಿ ಮಾಡಲಾಗುವುದು ಎಂದು ತಿಳಿಸಿದರು.

ಕಲಬುರ್ಗಿಯ ಕಾರ್ಮಿಕ ಉಪ ಆಯುಕ್ತ ಡಿ.ಜಿ. ನಾಗೇಶ, ಕಾರ್ಮಿಕ ಅಧಿಕಾರಿ ರಮೇಶ ಸುಂಬಡ, ತಹಶೀಲ್ದಾರ್ ಗಂಗಾದೇವಿ, ಸೇವಾ ಸಿಂಧು ಜಿಲ್ಲಾ ಯೋಜನಾ ವ್ಯವಸ್ಥಾಪಕ ವೀರೇಶ ಸ್ವಾಮಿ, ಸಾಮಾನ್ಯ ಸೇವಾ ಕೇಂದ್ರದ ಜಿಲ್ಲಾ ವ್ಯವಸ್ಥಾಪಕ ಸಚಿನ್ ಉಪ್ಪೆ, ಜಿಲ್ಲಾಧಿಕಾರಿ ಕಚೇರಿಯ ಸತೀಶ ವಾಲೆ, ಆರೋಗ್ಯ ನಿರೀಕ್ಷಕ ಸುಭಾಷ ಹಾಗೂ ಪೊಲೀಸರು ದಾಳಿಯಲ್ಲಿ ಪಾಲ್ಗೊಂಡಿದ್ದರು.

ಹೆಚ್ಚು ಶುಲ್ಕ ಪಡೆದರೆ ಕಾನೂನು ಕ್ರಮ
ಬೀದರ್:
ಸರ್ಕಾರದ ಸೇವೆಗಳಿಗೆ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚು ಶುಲ್ಕ ಪಡೆಯುವ ಸಾಮಾನ್ಯ ಸೇವಾ ಕೇಂದ್ರಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಎಚ್ಚರಿಕೆ ನೀಡಿದ್ದಾರೆ.

ಕೋವಿಡ್ ಕಾರಣ ಸರ್ಕಾರ ಅಸಂಘಟಿತ ವಲಯದ 11 ವರ್ಗಗಳ ಕಾರ್ಮಿಕರಿಗೆ ಘೋಷಿಸಿರುವ ₹ 2,000 ಪರಿಹಾರಕ್ಕಾಗಿ ಅರ್ಹ ಫಲಾನುಭವಿಗಳು ಸೇವಾ ಸಿಂಧು ತಂತ್ರಾಂಶದಲ್ಲಿ ನೇರವಾಗಿ ಇಲ್ಲವೇ ಸಿಟಿಜನ್ ಲಾಗಿನ್ ಮೂಲಕ ಅಗತ್ಯ ದಾಖಲೆಗಳೊಂದಿಗೆ ಉಚಿತ ಅರ್ಜಿ ಸಲ್ಲಿಸಬಹುದು. ಅಥವಾ ₹ 25 ಸೇವಾ ಶುಲ್ಕ ಪಾವತಿಸಿ ಗ್ರಾಮೀಣ ಪ್ರದೇಶದಲ್ಲಿ ಗ್ರಾಮ್ ಓನ್ ಕೇಂದ್ರ, ನಗರ ಪ್ರದೇಶದಲ್ಲಿ ಸೇವಾ ಸಿಂಧು ನಾಗರಿಕ ಸೇವಾ ಕೇಂದ್ರ ಇಲ್ಲವೇ ಸಾಮಾನ್ಯ ಸೇವಾ ಕೇಂದ್ರ (ಸಿಎಸ್‍ಸಿ) ಗಳ ಮೂಲಕ ಜುಲೈ 31 ರ ವರೆಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.

ಕಟ್ಟಡ ಕಾರ್ಮಿಕರು ನೋಂದಣಿ ಮತ್ತು ಅಸಂಘಟಿತ ವಲಯದ ಕಾರ್ಮಿಕರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಹೋದಾಗ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಸ್ವೀಕೃತಿ ಹಾಗೂ ಶುಲ್ಕದ ರಸೀದಿ ಪಡೆಯಬೇಕು. ನಿಗದಿಗಿಂತ ಹೆಚ್ಚು ಶುಲ್ಕ ಕೇಳಿದ್ದಲ್ಲಿ ತಮಗೆ, ಸೇವಾ ಸಿಂಧು ಜಿಲ್ಲಾ ಯೋಜನಾ ವ್ಯವಸ್ಥಾಪಕ (ಮೊ. ಸಂಖ್ಯೆ 6363256373), ಸಾಮಾನ್ಯ ಸೇವಾ ಕೇಂದ್ರದ ಜಿಲ್ಲಾ ವ್ಯವಸ್ಥಾಪಕ (9538753252/8660815121) ಅಥವಾ ಕಾರ್ಮಿಕ ಅಧಿಕಾರಿ (9972776880)ಗೆ ದೂರು ಸಲ್ಲಿಸಬೇಕು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT