ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವಾಡ: ಡಿಜಿಟಲ್ ಗ್ರಂಥಾಲಯಕ್ಕಿಲ್ಲ ಅಂತರ್ಜಾಲ

Published 14 ಜನವರಿ 2024, 6:44 IST
Last Updated 14 ಜನವರಿ 2024, 6:44 IST
ಅಕ್ಷರ ಗಾತ್ರ

ಜನವಾಡ(ಬೀದರ್ ತಾಲ್ಲೂಕು): ಇಂಟರ್‌ನೆಟ್‌ ಸಮಸ್ಯೆಯಿಂದಾಗಿ ಬೀದರ್ ತಾಲ್ಲೂಕಿನ ಚಟ್ನಳ್ಳಿ ಗ್ರಾಮಸ್ಥರಿಗೆ ‘ಡಿಜಿಟಲ್ ಲೈಬ್ರರಿ’ ಲಾಭ ಸಿಗದಂತಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ ರಾಜ್ ಇಲಾಖೆಯಿಂದ ಗ್ರಾಮದ ನವೀಕೃತ ಗೋದಾಮಿನಲ್ಲಿ ಐದು ತಿಂಗಳ ಹಿಂದೆ ಡಿಜಿಟಲ್ ಲೈಬ್ರರಿ ಶುರು ಮಾಡಲಾಗಿದೆ. ಆದರೆ, ಇಂಟರ್‌ನೆಟ್‌ ಸಂಪರ್ಕವನ್ನೇ ಕಲ್ಪಿಸದ ಕಾರಣ ಕಂಪ್ಯೂಟರ್‌ಗಳು ಉಪಯೋಗಕ್ಕೆ ಬರುತ್ತಿಲ್ಲ.

ಕೇಂದ್ರದಲ್ಲಿ ಅಳವಡಿಸಿದ ನಾಲ್ಕು ಕಂಪ್ಯೂಟರ್‌ಗಳಲ್ಲಿ ಒಂದಕ್ಕೂ ಇಂಟರ್ನೆಟ್ ಸಂಪರ್ಕ ಕೊಡಲಾಗಿಲ್ಲ. ಶಿಕ್ಷಣಕ್ಕೆ ಸಂಬಂಧಿಸಿದ ಆ್ಯಪ್ ಬಳಸಲು ಮಕ್ಕಳಿಗೆ ಕೊಡಲಾಗಿದ್ದ ಎರಡು ಮೊಬೈಲ್‍ಗಳಲ್ಲಿ ಒಂದು ಕಳವು ಆಗಿದೆ. ಏಳು ತಿಂಗಳಿಂದ ಗ್ರಂಥಾಲಯಕ್ಕೆ ದಿನಪತ್ರಿಕೆಗಳೂ ಬರುತ್ತಿಲ್ಲ. ಹೀಗಾಗಿ ಡಿಜಿಟಲ್ ಲೈಬ್ರರಿ ಬಳಕೆಗಾಗಿ ಕೇಂದ್ರಕ್ಕೆ ಕೂಡಲೇ ಇಂಟರ್‌ನೆಟ್‌ ಸಂಪರ್ಕ ಕಲ್ಪಿಸಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಘಾಳೆಪ್ಪ ಚಟ್ನಳ್ಳಿ ಒತ್ತಾಯಿಸಿದ್ದಾರೆ.

8 ಸಾವಿರ ಪುಸ್ತಕ: ಕೇಂದ್ರದಲ್ಲಿ ನಾಲ್ಕು ಕಂಪ್ಯೂಟರ್, ಒಂದು ಟಿವಿ, ಮೊಬೈಲ್, ಎಂಟು ಸಾವಿರ ಪುಸ್ತಕಗಳು ಇವೆ ಎಂದು ತಿಳಿಸುತ್ತಾರೆ ಗ್ರಂಥಪಾಲಕ ತುಳಜಪ್ಪ ಮಾಲೇಕಾರ್. ‘ಇಂಟರ್‌ನೆಟ್‌ ಸಂಪರ್ಕಕ್ಕೆ ಸಂಬಂಧಿಸಿದಂತೆ ಪಂಚಾಯಿತಿಯವರ ಗಮನ ಸೆಳೆಯಲಾಗಿದೆ. ಎರಡು ಮೊಬೈಲ್‍ಗಳ ಪೈಕಿ ಒಂದು ಮೊಬೈಲ್ ಕಳುವಾದ ಬಗ್ಗೆ ಠಾಣೆಗೆ ದೂರು ಕೊಡಲಾಗಿದೆ’ ಎಂದು ತಿಳಿಸಿದರು.

‘ನಾಲ್ಕು ವರ್ಷದಿಂದ ಸ್ವತಃ ದಿನಪತ್ರಿಕೆಗಳ ಬಿಲ್ ಪಾವತಿಸುತ್ತಾ ಬಂದಿರುವೆ. ಅಲ್ಪಸಂಬಳ ಇರುವ ಕಾರಣ ಕೈಯಿಂದ ದಿನಪತ್ರಿಕೆ ಹಣ ಕೊಡಲು ಆಗುತ್ತಿಲ್ಲ. ಹೀಗಾಗಿ 2023ರ ಜೂನ್‍ನಿಂದ ಗ್ರಂಥಾಲಯಕ್ಕೆ ದಿನಪತ್ರಿಕೆ ಬರುತ್ತಿಲ್ಲ’ ಎಂದು ತಿಳಿಸಿದರು.

ಸುಸಜ್ಜಿತ ಕಟ್ಟಡ: ಚಟ್ನಳ್ಳಿ ಡಿಜಿಟಲ್ ಲೈಬ್ರರಿ ಕಟ್ಟಡ ತಾಲ್ಲೂಕಿನ ಗ್ರಂಥಾಲಯಗಳ ಸುಸಜ್ಜಿತ ಕಟ್ಟಡಗಳಲ್ಲಿ ಒಂದಾಗಿದೆ. ಕಟ್ಟಡಕ್ಕೆ ಸೀಲಿಂಗ್ ಮಾಡಲಾಗಿದೆ. ವಿದ್ಯುತ್ ದೀಪ, ಫ್ಯಾನ್ ಅಳವಡಿಸಲಾಗಿದೆ. ಕೆಳಗಡೆ ಮ್ಯಾಟ್ ಹಾಸಲಾಗಿದೆ. ಗೋಡೆಗಳ ಮೇಲೆ ಬಿಡಿಸಿದ ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್, ಎ.ಪಿ.ಜೆ. ಅಬ್ದುಲ್ ಕಲಾಂ ಚಿತ್ರಗಳು ಗಮನ ಸೆಳೆಯುತ್ತಿವೆ. ಕೇಂದ್ರದಲ್ಲಿ ಓದುಗರಿಗಾಗಿ ರೌಂಡ್ ಟೇಬಲ್ ಹಾಗೂ 28 ಕುರ್ಚಿಗಳು ಇವೆ.

ಡಿಜಿಟಲ್ ಲೈಬ್ರರಿಗೆ ಶೀಘ್ರ ಇಂಟರ್ನೆಟ್ ಸಂಪರ್ಕ ಕಲ್ಪಿಸಲಾಗುವುದು. ದಿನಪತ್ರಿಕೆ ಖರೀದಿಗೆ ಗ್ರಂಥ ಪಾಲಕರಿಗೆ ತಿಳಿಸಿದ್ದು, ಪಂಚಾಯಿತಿ ಅದರ ವೆಚ್ಚ ಪಾವತಿಸಲಿದೆ
ಪ್ರೇಮಿಲಾ ನಿನ್ನೇಕರ್, ಪಿಡಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT