ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಟ್ಟ ರಸ್ತೆ; ಸಂಚಾರ ಸಂಕಟ

ತೊಗಲೂರ: ರಸ್ತೆ ಸುಧಾರಣೆಗಾಗಿ ಏಪ್ರಿಲ್‌ 5ರಂದು ಉಪವಾಸ ಸತ್ಯಾಗ್ರಹ
Last Updated 4 ಮಾರ್ಚ್ 2021, 3:25 IST
ಅಕ್ಷರ ಗಾತ್ರ

ಹುಲಸೂರ: ತಾಲ್ಲೂಕಿನ ತೊಗಲೂರ ಗ್ರಾಮದಿಂದ ಗೋರಟಾ– ಮುಚಳಂಬ ಕ್ರಾಸ್‌ ವರೆಗಿನ ಸುಮಾರು 11 ಕಿ.ಮೀ ರಸ್ತೆಯು ತೀರಾ ಹದಗೆಟ್ಟಿದ್ದು, ಪ್ರಯಾಣಿಕರು ದಿನನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ತೊಗಲೂರ ಗ್ರಾಮದ ಜನ ಸುತ್ತಲಿನ ಹಳ್ಳಿಗಳಿಗೆ ಹಾಗೂ ತಾಲ್ಲೂಕು ಕೇಂದ್ರಕ್ಕೆ ಸಂಪರ್ಕಿಸಲು ಉತ್ತಮ ರಸ್ತೆ ಇಲ್ಲ. ರಸ್ತೆಯ ತುಂಬಾ ಜಲ್ಲಿಕಲ್ಲುಗಳು ಎದ್ದಿವೆ. ತಗ್ಗುಗುಂಡಿಗಳು ಬಿದ್ದಿವೆ. ಇದರಿಂದ ಶಾಲಾ ಮಕ್ಕಳು, ಸರ್ಕಾರಿ ನೌಕರರು, ತುರ್ತು ಪರಿಸ್ಥಿಯಲ್ಲಿ ಆಸ್ಪತ್ರೆಗೆ ಹೋಗಬೇಕಾದ ರೋಗಿಗಳು ಸಂಕಷ್ಟ ಎದುರಿಸಬೇಕಾಗಿದೆ.

ಹುಲಸೂರ ತಾಲ್ಲೂಕು ಕೇಂದ್ರಕ್ಕೆ ತೊಗಲೂರ ಕೇವಲ 8 ಕಿ.ಮೀ ಅಂತರದಲ್ಲಿದೆ. ಆದರೆ, ರಸ್ತೆ ಸಮಸ್ಯೆ ಕಾರಣ ಬೆಲೂರ ಮೂಲಕ 20 ಕಿ.ಮೀ ಸುತ್ತಿ ಬರಬೇಕು. ಇದರಿಂದ ಸಮಯದ ಜೊತೆಗೆ ಹಣ ವ್ಯಯ ಆಗುತ್ತದೆ ಎಂದು ಗ್ರಾಮಸ್ಥರು ದೂರುತ್ತಾರೆ.

ತೊಗಲೂರ ಗ್ರಾಮ ಪಂಚಾಯಿತಿ ಕೇಂದ್ರವೂ ಆಗಿದೆ. ಪಂಚಾಯಿತಿ ವ್ಯಾಪ್ತಿಗೆ ಸೇರಿದ ಕಾದ್ರಾಬಾದ ಗ್ರಾಮಸ್ಥರು ತೊಗಲೂರಿಗೆ ಬರ ಬೇಕಾದರೆ ಗುಂಡಿ ಬಿದ್ದ ರಸ್ತೆ ಮೂಲಕ ಬರಬೇಕು. ಸರ್ಕಾರಿ ಬಸ್‌ ಸೌಲಭ್ಯ ಇಲ್ಲದ್ದರಿಂದ ದ್ವಿಚಕ್ರ ವಾಹನ ಇಲ್ಲವೆ, ಖಾಸಗಿ ವಾಹನಗಳ ಮೊರೆ ಹೋಗಬೇಕು.

‘ಗೋರಟಾ– ಮುಚಳಂಬ ಕ್ರಾಸ್‌ದಿಂದ ತೊಗಲೂರ ಕಾದ್ರಬಾದ ಮೂಲಕ ಜವಳಗಾ (ಕೆ) ವರೆಗೂ ರಸ್ತೆ ದಾಂಬರೀಕರಣ ಆಗಬೇಕು. ಈ ಕುರಿತು ಜಿಲ್ಲಾಡಳಿತ ಸೇರಿದಂತೆ ಮುಖ್ಯಮಂತ್ರಿ ಅವರಿಗೂ ಮನವಿಪತ್ರ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ’ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕೆ.ಎಸ್‌.ಬಿರಾದಾರ,ಮಹೆಬೂಬ ಪಟೇಲ್‌,ಬಂಡೆಪ್ಪ ಎಸ್‌.ಮಂಠಾಳೆ,ವೆಂಕಟರಾವ ಶೇರಿಕಾರ ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಮ್ಮ ಹಳ್ಳಿ ಜನರ ಕೂಗು ಕೇಳುತ್ತಿಲ್ಲ. ಈ ರೀತಿ ನಿರ್ಲಕ್ಷ್ಯ ತೋರಿದಲ್ಲಿ ಸುತ್ತಲಿನ ಗ್ರಾಮದ ಜನರು ಸೇರಿ ಮಾರ್ಚ್‌ 31ರ ವರೆಗೂ ಈ ರಸ್ತೆ ನಿರ್ಮಾಣ ಕುರಿತು ಕ್ರಮ ಕೈಗೊಳ್ಳಬೇಕು. ಇದೇ ರೀತಿ ವಿಳಂಬ ತೋರಿದಲ್ಲಿ ಗೋರಟಾ– ಮುಚಳಂಬ ಕ್ರಾಸ್‌ (ಭಾಲ್ಕಿ– ಬಸವಕಲ್ಯಾಣ ರಸ್ತೆ)ನಲ್ಲಿ ಏಪ್ರಿಲ್‌ 5ರಂದು ಬೆಳಿಗ್ಗೆ 9 ಗಂಟೆಯಿಂದ ಆಮರಣ ಉಪವಾಸ ಸತ್ಯಾಗ್ರಹ ಆಂದೋಲನ ಮಾಡಲಾಗುವುದು’ ಎಂದು ಹುಲಸೂರ ತಾಲ್ಲೂಕು ರಚನೆ ಬಸವಕಲ್ಯಾಣ ಜಿಲ್ಲಾ ಕೇಂದ್ರ ಹೋರಾಟ ಸಂಘಟನೆಯ ಸಂಚಾಲಕ ಎಂ.ಜಿ ರಾಜೋಳೆ ಎಚ್ಚರಿಕೆ ನೀಡಿದ್ದಾರೆ.

ಹೋರಾಟಕ್ಕೆ ನಿರ್ಧಾರ
ತೊಗಲೂರ ರಸ್ತೆ ಸುಧಾರಣೆಗೆ ಆಗ್ರಹಿಸಿ ಗ್ರಾ.ಪಂ ಅಧ್ಯಕ್ಷ ರಾಜಶೇಖರ ಪಾಟೀಲ, ಉಪಾಧ್ಯಕ್ಷೆ ಲಕ್ಷ್ಮೀ ಬಾಯಿ ಧಬಾಲೆ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಸುತ್ತಲಿನ ಗ್ರಾಮಸ್ಥರು ಹೋರಾಟಕ್ಕೆ ಮಾಡಲು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT