ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಂಡ್ರೆ ಪರಿವಾರದ ವಿರುದ್ಧ ಹಲವು ಕೊಲೆ ಆರೋಪ: ಸಚಿವ ಭಗವಂತ ಖೂಬಾ

ದಲಿತನ ಹತ್ಯೆ, ಸುರೇಶ ಖೇಡ ಕೊಲೆ ಹೇಗೆ ನಡೆದಿದೆ?–ಕೇಂದ್ರ ಸಚಿವ ಭಗವಂತ ಖೂಬಾ ಪ್ರಶ್ನೆ
Published 18 ಏಪ್ರಿಲ್ 2024, 15:50 IST
Last Updated 18 ಏಪ್ರಿಲ್ 2024, 15:50 IST
ಅಕ್ಷರ ಗಾತ್ರ

ಬೀದರ್‌: ‘ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಕಾಂಗ್ರೆಸ್‌ ಅಭ್ಯರ್ಥಿ ಸಾಗರ್‌ ಖಂಡ್ರೆ ಪರಿವಾರದ ವಿರುದ್ಧ ಅನೇಕ ಕೊಲೆ ಆರೋಪಗಳಿವೆ. ಅವುಗಳಿಗೆ ಖಂಡ್ರೆದ್ವಯರು ಉತ್ತರ ಕೊಡಬೇಕು’ ಎಂದು ಬೀದರ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ ಆಗ್ರಹಿಸಿದರು.

ನಗರದ ಗಣೇಶ ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಮ್ಮ ಭಾಷಣದುದ್ದಕ್ಕೂ ಖಂಡ್ರೆ ಪರಿವಾರದವರ ವಿರುದ್ಧ ವಾಕ್ಪ್ರಹಾರ ನಡೆಸಿದರು.

‘ಭಾಲ್ಕಿಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿ ಹತ್ಯೆ ಯಾರ ಅಂಗಳದಲ್ಲಿ ನಡೆದಿದೆ? ಸಾಗರ್‌ ಖಂಡ್ರೆಯವರು ಈ ಪ್ರಶ್ನೆಯನ್ನು ಅವರ ತಂದೆಗೆ ಕೇಳಬೇಕು. ಜಿಲ್ಲೆಯ ದಲಿತರಿಗೆ ಉತ್ತರಿಸಬೇಕು. ಸುರೇಶ ಖೇಡ ನಿಮ್ಮ ಮನೆ (ಖಂಡ್ರೆ) ಅಂಗಳದಲ್ಲಿ ಜೀವ ಬಿಟ್ಟಿದ್ದಾರೆ. ನಿಮ್ಮ ತಂದೆ ಮೇಲೆ ಎಫ್‌ಐಆರ್‌ ಆಗಿತ್ತು. ಆಗ ಅವರು ಪರಾರಿಯಾಗಿದ್ದರು. ನೀವು ವಕೀಲರಲ್ಲವೇ ಹಾಗಿದ್ದರೆ ಅದಕ್ಕೆ ಉತ್ತರ ಕೊಡಿ’ ಎಂದು ಸಾಗರ್‌ ಖಂಡ್ರೆಗೆ ಒತ್ತಾಯಿಸಿದರು.

‘ಹೈಕೋರ್ಟ್‌ ಈಶ್ವರ ಖಂಡ್ರೆಯವರಿಗೆ ₹5 ಲಕ್ಷ ದಂಡ ಏಕೆ ಹಾಕಿದೆ ಎನ್ನುವುದು ಗೊತ್ತಿದೆಯೇ? ಯಾಕೆಂಬುದು ಜಿಲ್ಲೆ ಜನರಿಗೆ ತಿಳಿಸಬೇಕು. ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಖಂಡ್ರೆ ಪರಿವಾರದವರು ನನ್ನ ಮೇಲೆ ಅನವಶ್ಯಕ ಆರೋಪಗಳನ್ನು ಮಾಡುತ್ತಿದ್ದಾರೆ. ಬಹಿರಂಗ ಚರ್ಚೆಗೆ ಕರೆಯುತ್ತಿದ್ದಾರೆ. ಇದು ಹಾಸ್ಯಾಸ್ಪದ’ ಎಂದರು.

‘ನಕಲಿ ಬಸ್‌ ಟಿಕೆಟ್‌ ಮುದ್ರಿಸಿದ ಹಗರಣ ಯಾರ ಅವಧಿಯಲ್ಲಿ ನಡೆದಿದೆ. ಕಾರಂಜಾ ಯೋಜನೆ ಇನ್ನೂ ನಡೀತಾನೆ ಇದೆ. ರೈತರ ಹೊಲಗಳಿಗೇಕೆ ನೀರು ಹರಿದಿಲ್ಲ. ಪ್ರತಿವರ್ಷ ಕಾಲುವೆಗಳ ದುರಸ್ತಿ ನಡೆಯುತ್ತಲೇ ಇದೆ. ಏನಿದು ನಿಮ್ಮ ರಾಜಕಾರಣ?’ ಎಂದು ಪ್ರಶ್ನಿಸಿದರು.

‘ಎಂಜಿಎಸ್‌ಎಸ್‌ಕೆ ನಿಮ್ಮ ಕಾಕನವರ ಅಧೀನದಲ್ಲಿದೆ. ಏನೂ ಇಲ್ಲದ ವ್ಯಕ್ತಿ ಸಾವಿರಾರು ಕೋಟಿ ರೂಪಾಯಿ ಒಡೆಯರಾಗಿದ್ದು ಹೇಗೆ? ರೈತರ ಕಬ್ಬಿನ ಹಣ ಪೋಲಾಗಿದೆ. ನಿಮ್ಮ ಕರಿ ಕಲ್ಲಿನ ಕೌಂಪಾಂಡ್‌ಗಳು ಬೆಳೆದಿವೆ. ಬೀದರ್‌ ಡಿಸಿಸಿ ಬ್ಯಾಂಕ್‌ ಇವರ ತೆಕ್ಕೆಗೆ ಹೋದ ನಂತರ ಮೊದಲ ಸಲ ಐ.ಟಿ. ದಾಳಿ ನಡೆದಿದೆ. ಸುಮ್ಮನೆ ದಾಳಿ ನಡೆಯುವುದಿಲ್ಲ. ಏನಾದರೂ ಮಾಹಿತಿ ಆಧರಿಸಿಯೇ ಮಾಡಿರಬಹುದು’ ಎಂದು ಹೇಳಿದರು.

‘ಹುಡುಗ ಸಾಗರ್‌ ಖಂಡ್ರೆಗೆ ಇನ್ನೂ ಫಸಲ್‌ ಬಿಮಾ ಯೋಜನೆಯ ಬಗ್ಗೆ ಗೊತ್ತಿಲ್ಲ. ಕ್ರೈಸ್ಟ್‌ ವಿ.ವಿ.ಯಲ್ಲಿ ಓದಿದವರಿಗೆ ರೈತರ ಬಗ್ಗೆ ಮಾತನಾಡಿ ನಗೆಪಾಟಲಿಗೀಡಾಗಿದ್ದಾರೆ. ₹1200 ಕೋಟಿ ರೈತರ ಖಾತೆಗೆ ಜಮೆ ಆಗಿದೆ ಎನ್ನುವುದು ನಿಮಗೆ ತಿಳಿದಿರಲಿ’ ಎಂದರು.

‘ನಾನು ಜಿಲ್ಲೆಗೆ ಏನು ಮಾಡಿದ್ದೇನೆ ಎಂದು ಪದೇ ಪದೇ ಪ್ರಶ್ನಿಸುತ್ತಿದ್ದಾರೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಜಿಲ್ಲೆಗೆ ₹1 ಲಕ್ಷ ಕೋಟಿಗೂ ಹೆಚ್ಚಿನ ಅನುದಾನ ತಂದು ಕೆಲಸ ಮಾಡಿಸಿದ್ದೇನೆ. ಪ್ರತಿಯೊಬ್ಬ ನಾಗರಿಕನಿಗೆ ಸಾಮಾಜಿಕ ಸುರಕ್ಷತಾ ಯೋಜನೆಯ ಪ್ರಯೋಜನ ಸಿಕ್ಕಿದೆ. ಮೂಲಸೌಕರ್ಯ ನಾಲ್ಕು ಪಟ್ಟು ಹೆಚ್ಚಾಗಿದೆ. 2014ರ ಮುಂಚೆ ಬೀದರ್‌ ಹಿಂದುಳಿದ ಜಿಲ್ಲೆಯಾಗಿತ್ತು. ಈಗ ಹಾಗಿಲ್ಲ. ಮುಂದಿನ ಐದು ವರ್ಷಗಳಲ್ಲಿ ಬೀದರ್‌ ಜಿಲ್ಲೆಯನ್ನು ಅಭಿವೃದ್ಧಿ ಪಟ್ಟಿಗೆ ಸೇರಿಸುವ ಗ್ಯಾರಂಟಿ ಕೊಡುವೆ. ಕಣ್ಣು, ಕಿವಿಯಿಲ್ಲದ ಖಂಡ್ರೆಯವರು ಅನವಶ್ಯಕ ಆರೋಪಗಳನ್ನು ಮಾಡುವುದರಲ್ಲಿ ಕಾಲಹರಣ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

ಜೆಡಿಎಸ್‌ ಮುಖಂಡ ಬಂಡೆಪ್ಪ ಕಾಶೆಂಪುರ್‌ ಮಾತನಾಡಿ, ‘ಬಿಜೆಪಿ–ಜೆಡಿಎಸ್‌ ಅಭ್ಯರ್ಥಿಗಳು ಎಲ್ಲ 28 ಸ್ಥಾನಗಳಲ್ಲಿ ಗೆಲ್ಲಲಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಒಂದು ಸ್ಥಾನದಲ್ಲಿ ಗೆದ್ದಿತ್ತು. ಈ ಸಲ ಆ ಸ್ಥಾನವೂ ಕಳೆದುಕೊಳ್ಳಲಿದೆ. ಒಬ್ಬ ಮಂತ್ರಿಯೂ ಚುನಾವಣೆಗೆ ಸ್ಪರ್ಧಿಸಲು ಧೈರ್ಯ ತೋರಿಲ್ಲ. ತಮ್ಮ ಕುರ್ಚಿ ಗಟ್ಟಿ ಇಟ್ಟುಕೊಂಡು ಮಕ್ಕಳನ್ನು ಚುನಾವಣೆಗೆ ನಿಲ್ಲಿಸಿದ್ದಾರೆ’ ಎಂದು ಕುಟುಕಿದರು.

ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಮಾತನಾಡಿ, ‘ಭಾಲ್ಕಿಯಲ್ಲಿ ಮನೆ ಮನೆಗೆ ತಿರುಗಿ ಭಿಕ್ಷೆ ಬೇಡಿ ಕಟ್ಟಿದ ಸಂಸ್ಥೆಯನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ತೋಳ್ಬಲದಿಂದ ಡಿಸಿಸಿ ಬ್ಯಾಂಕ್‌ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಹಣ ಬಲ ಇರುವವರಿಗೆ ಜನ ಬೆಂಬಲಿಸಬೇಕಾ? ಅಥವಾ ಜನ ನಾಯಕರನ್ನು ಬೆಂಬಲಿಸಬೇಕಾ ಎಂಬುದನ್ನು ಜನ ನಿರ್ಧರಿಸಬೇಕು’ ಎಂದು ಈಶ್ವರ ಖಂಡ್ರೆಯವರು ಹೆಸರು ಪ್ರಸ್ತಾಪಿಸದೆ ಹೇಳಿದರು.

ಜೆಡಿಎಸ್‌ ಜಿಲ್ಲಾಧ್ಯಕ್ಷ ರಮೇಶ ಪಾಟೀಲ ಸೋಲಪೂರ, ಶಾಸಕರಾದ ಡಾ.ಶೈಲೇಂದ್ರ ಕೆ. ಬೆಲ್ದಾಳೆ, ಶರಣು ಸಲಗರ, ಅವಿನಾಶ ಜಾಧವ್‌, ಶಶಿಲ್‌ ನಮೋಶಿ, ಮುಖಂಡರಾದ ರೇವಣಸಿದ್ದಪ್ಪ ಜಲಾದೆ, ಕಿರಣ್‌ ಪಾಟೀಲ, ಸೂರ್ಯಕಾಂತ ನಾಗಮಾರಪಳ್ಳಿ, ಪ್ರಕಾಶ ಖಂಡ್ರೆ, ಸುಭಾಷ ಗುತ್ತೇದಾರ್‌, ಎಂ.ಜಿ.ಮುಳೆ, ಈಶ್ವರ ಸಿಂಗ್‌ ಠಾಕೂರ್‌, ಜೈಕುಮಾರ ಕಾಂಗೆ, ಶಿವಾನಂದ ಮಂಠಾಳಕರ, ಬಾಬುವಾಲಿ, ರೌಫೋದ್ದಿನ್‌ ಕಚೇರಿವಾಲೆ, ರಾಜಶೇಖರ ನಾಗಮೂರ್ತಿ, ಡಿ.ಕೆ. ಸಿದ್ರಾಮ, ಐಲಿನ್‌ ಜಾನ್‌ ಮಠಪತಿ, ಲತಾ, ಮಲ್ಲಿಕಾರ್ಜುನ ಖೂಬಾ, ಪೀರಪ್ಪ ಯರನಳ್ಳೆ ಮತ್ತಿತರರು ಹಾಜರಿದ್ದರು.

ಬೀದರ್‌ನ ಹರಳಯ್ಯಾ ವೃತ್ತದಲ್ಲಿ ಗುರುವಾರ ಬಿಜೆಪಿ ರೋಡ್‌ ಶೋ ನಡೆದಾಗ ಮುಖಂಡರು ಕಾರ್ಯಕರ್ತರ ಮೇಲೆ ಜೆಸಿಬಿ ಮೂಲಕ ಹೂಮಳೆಗರೆಯಲಾಯಿತು – ಪ್ರಜಾವಾಣಿ ಚಿತ್ರಗಳು
ಬೀದರ್‌ನ ಹರಳಯ್ಯಾ ವೃತ್ತದಲ್ಲಿ ಗುರುವಾರ ಬಿಜೆಪಿ ರೋಡ್‌ ಶೋ ನಡೆದಾಗ ಮುಖಂಡರು ಕಾರ್ಯಕರ್ತರ ಮೇಲೆ ಜೆಸಿಬಿ ಮೂಲಕ ಹೂಮಳೆಗರೆಯಲಾಯಿತು – ಪ್ರಜಾವಾಣಿ ಚಿತ್ರಗಳು
ಪಾಪನಾಶ ಶಿವಲಿಂಗಕ್ಕೆ ಖೂಬಾ ಪೂಜೆ
ಓಡೋಡಿ ಹೋಗಿ ನಾಮಪತ್ರ ಸಲ್ಲಿಕೆ ಕೇಂದ್ರ ಸಚಿವ ಭಗವಂತ ಖೂಬಾ ಅವರು ನಗರದಲ್ಲಿ ಗುರುವಾರ ನಾಮಪತ್ರ ಸಲ್ಲಿಕೆಗೂ ಮುನ್ನ ನಗರದ ಪಾಪನಾಶ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಆನಂತರ ನಗರದ ಗಣೇಶ ಮೈದಾನದಲ್ಲಿ ಏರ್ಪಡಿಸಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಅವರ ಭಾಷಣ ಮುಗಿದಾಗ ಮಧ್ಯಾಹ್ನ 2.45 ಆಗಿತ್ತು. ಕೆಲಕಾಲ ರೋಡ್‌ ಶೋನಲ್ಲಿ ಭಾಗವಹಿಸಿದ ಅವರು ನಾಮಪತ್ರ ಸಲ್ಲಿಕೆಯ ಅವಧಿ ಮುಗಿಯುತ್ತಿದೆ ಎಂದು ಗೊತ್ತಾಗುತ್ತಿದ್ದಂತೆ ತೆರೆದ ವಾಹನದಿಂದ ಕೆಳಗಿಳಿದು ಚುನಾವಣಾಧಿಕಾರಿ ಕಚೇರಿಗೆ ಓಡೋಡಿ ಹೋಗಿ ನಾಮಪತ್ರ ಸಲ್ಲಿಸಿದರು. ಖೂಬಾ ಅವರಿಗಿಂತ ಮೊದಲೇ ಅಲ್ಲಿಗೆ ತೆರಳಿದ ಬಿಜೆಪಿ ಮುಖಂಡರಾದ ಈಶ್ವರ ಸಿಂಗ್‌ ಠಾಕೂರ್‌ ಪ್ರಕಾಶ ಖಂಡ್ರೆ ಸುಭಾಷ ಗುತ್ತೇದಾರ್‌ ಜೆಡಿಎಸ್‌ ಮುಖಂಡರಾದ ಬಂಡೆಪ್ಪ ಕಾಶೆಂಪುರ್‌ ರಮೇಶ ಪಾಟೀಲ ಸೋಲಪೂರ ಅವರು ಖೂಬಾ ಅವರ ಅನುಪಸ್ಥಿತಿಯಲ್ಲಿ ಅವರ ಹೆಸರಿನ ನಾಮಪತ್ರ ಸಲ್ಲಿಸಿದರು. ಆನಂತರ ಖೂಬಾ ಅವರು ಅಲ್ಲಿಗೆ ಹೋಗಿ ಅವರ ಪಕ್ಷದ ಶಾಸಕರು ಮುಖಂಡರೊಂದಿಗೆ ಇನ್ನೆರಡು ಪ್ರತಿ ನಾಮಪತ್ರ ಸಲ್ಲಿಸಿದರು. ಗುರುವಾರ ಒಂದೇ ದಿನ ಒಟ್ಟು ಮೂರು ನಾಮಪತ್ರ ಸಲ್ಲಿಸಿದರೆ ಏ.15ರಂದು ಒಂದು ಪ್ರತಿ ನಾಮಪತ್ರ ಸಲ್ಲಿಸಿದ್ದರು.
ಭರ್ಜರಿ ರೋಡ್‌ ಶೋ; ಜೆಸಿಬಿಯಿಂದ ಹೂಮಳೆ
ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರು ಬೀದರ್‌ ನಗರದಲ್ಲಿ ಗುರುವಾರ ಭರ್ಜರಿ ರೋಡ್‌ ಶೋ ನಡೆಸಿದರು. ನಗರದ ಗಣೇಶ ಮೈದಾನದಲ್ಲಿ ಬಹಿರಂಗ ಪ್ರಚಾರ ಮುಗಿದ ನಂತರ ಖೂಬಾ ಹಾಗೂ ಜೆಡಿಎಸ್‌ ಬಿಜೆಪಿ ಮೈತ್ರಿ ಪಕ್ಷಗಳ ಮುಖಂಡರು ತೆರೆದ ವಾಹನದಲ್ಲಿ ರೋಡ್‌ ಶೋ ನಡೆಸಿದರು. ಪ್ರಚಾರ ಸಭೆ ಮಧ್ಯಾಹ್ನ 2.45ಕ್ಕೆ ಮುಗಿದಿತ್ತು. ಮಧ್ಯಾಹ್ನ 3ರೊಳಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಇತ್ತು. ಕೆಲಕಾಲ ರೋಡ್‌ ಶೋ ನಡೆಸಿದ ಖೂಬಾ ಅವರು ಸಮಯ ಮೀರಿದ ವಿಷಯ ತಿಳಿದು ಅರ್ಧಕ್ಕೆ ವಾಹನದಿಂದ ಇಳಿದು ಹೋದರು. ಅವರ ಅನುಪಸ್ಥಿತಿಯಲ್ಲಿ ಮುಖಂಡರು ರೋಡ್‌ ಶೋ ನಡೆಸಿದರು. ರೋಡ್‌ ಶೋ ಹಾದು ಹೋಗುವ ಮಾರ್ಗದ ಹರಳಯ್ಯಾ ವೃತ್ತದಲ್ಲಿ ಜೆಸಿಬಿಗಳ ಮೇಲೆ ನಿಂತು ಮುಖಂಡರು ಕಾರ್ಯಕರ್ತರ ಮೇಲೆ ಹೂಮಳೆಗರೆಯಲಾಯಿತು. ನಾಮಪತ್ರ ಸಲ್ಲಿಕೆಗೆ ಹೆಚ್ಚಿನ ಸಮಯವಿರದ ಕಾರಣ ಗಣೇಶ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರೋಡ್‌ ಶೋ ನಡೆಸಿದರು. ಅಪಾರ ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
‘ಸುಳ್ಳು ಹೇಳುವುದರಲ್ಲಿ ತಂದೆ ಮಗ ನಿಸ್ಸೀಮರು’
‘ಸುಳ್ಳು ಹೇಳುವುದರಲ್ಲಿ ತಂದೆ (ಈಶ್ವರ ಖಂಡ್ರೆ) ಮಗ (ಸಾಗರ್‌ ಖಂಡ್ರೆ) ನಿಸ್ಸೀಮರು. ಸಾಕಷ್ಟು ಕೆಲಸ ಮಾಡಿರುವ ನನಗೆ ಬಹಿರಂಗ ಸವಾಲು ಚರ್ಚೆಗೆ ಕರೆದಿದ್ದಾರೆ. ನನಗೆ ಜನಸೇವೆಯಷ್ಟೇ ಗೊತ್ತು. ಈಶ್ವರ ಖಂಡ್ರೆಯವರು ನುಡಿದಂತೆ ನಡೆಯಬೇಕು ಎಂದು ಹೇಳುತ್ತಾರೆ. ಆದರೆ ಕಪಟ ರಾಜಕಾರಣ ಹೊರತುಪಡಿಸಿ ಅವರಿಗೆ ಬೇರೇನೂ ಗೊತ್ತಿಲ್ಲ’ ಎಂದು ಭಗವಂತ ಖೂಬಾ ಟೀಕಿಸಿದರು.
‘ಹುಮನಾಬಾದ್‌ಗೆ ಸ್ವಾತಂತ್ರ್ಯ ಸಿಕ್ಕಿದೆ’
‘ಹುಮನಾಬಾದ್‌ ಹಾಳಾಗುತ್ತಿದೆ ಎಂದು ವಿರೋಧಿಗಳು ಆರೋಪಿಸಿದ್ದಾರೆ. ಆದರೆ ಹುಮನಾಬಾದ್‌ಗೆ ಸ್ವಾತಂತ್ರ್ಯ ಸಿಕ್ಕಿದೆ. ಹುಮನಾಬಾದ್‌ನಲ್ಲಿ ಯಾರಾದರೂ ಹೊಸ ಬಟ್ಟೆ ಹಾಕಿಕೊಂಡಿದ್ದರೆ ಕಾಂಗ್ರೆಸ್‌ನವರು ಸ್ಕ್ಯಾನ್‌ ಮಾಡಿ ನೋಡುತ್ತಿದ್ದರು. ಈಗ ಪರಿಸ್ಥಿತಿ ಹಾಗಿಲ್ಲ. ಎಲ್ಲರಿಗೂ ಸ್ವಾತಂತ್ರ್ಯ ಸಿಕ್ಕಿದೆ. ಕಾಂಗ್ರೆಸ್‌ ಮುಖಂಡರಿಗೆ ಹುಚ್ಚು ಹಿಡಿದಿದೆ’ ಎಂದು ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ ಅವರು ಹುಮನಾಬಾದ್‌ ಪಾಟೀಲ ಕುಟುಂಬದವರ ಹೆಸರು ಪ್ರಸ್ತಾಪಿಸದೆ ವಾಗ್ದಾಳಿ ನಡೆಸಿದರು.
‘ಸಮಾಜವಾದಿಯಲ್ಲ ಮಜಾವಾದಿ’
‘ಪ್ರಧಾನಿ ನರೇಂದ್ರ ಮೋದಿಯವರು ವಿಲಾಸಿ ಜೀವನ ನಡೆಸುತ್ತಿದ್ದಾರೆ ಎಂದು ಸಮಾಜವಾದಿಯೊಬ್ಬರು ಹೇಳಿದ್ದಾರೆ. ಆದರೆ ಅವರು ಸಮಾಜವಾದಿಯಲ್ಲ ಮಜಾವಾದಿ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಪಾಟೀಲ ಅವರು ಆಳಂದ ಶಾಸಕ ಬಿ.ಆರ್‌. ಪಾಟೀಲ ಅವರ ಹೆಸರು ಪ್ರಸ್ತಾಪಿಸದೆ ವಾಗ್ದಾಳಿ ನಡೆಸಿದರು. ‘ಕಾಂಗ್ರೆಸ್‌ ಕಾಲದಲ್ಲಿ ಭಾರತ ಬಡ ದೇಶವಾಗಿತ್ತು. ಈಗ ಭಾರತ ಜಗತ್ತಿನ ಅರ್ಥ ವ್ಯವಸ್ಥೆಯಲ್ಲಿ ಐದನೇ ಸ್ಥಾನದಲ್ಲಿದೆ. ಮೂಲಸೌಕರ್ಯ ಹೆಚ್ಚಾಗಿದೆ. ಅರ್ಧ ದೆಹಲಿಯಲ್ಲಿ ಕಾಂಗ್ರೆಸ್‌ನವರ ಸಮಾಧಿಗಳಿವೆ. ಆದರೆ ಮೋದಿಯವರು ಹೊಸ ಸಂಸತ್ತು ಅನುಭವ ಮಂಟಪ ಮಾದರಿಯಲ್ಲಿ ಕಟ್ಟಡ ನಿರ್ಮಿಸಿದ್ದಾರೆ. ಮೋದಿಯವರಿಗೆ ಸಂಸಾರವಿಲ್ಲ ಎಂದು ಹೇಳಿದ್ದಾರೆ. ಅವರಿಗೆ ಇಡೀ ದೇಶವೇ ಪರಿವಾರ’ ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT