ಸೋಮವಾರ, ಮೇ 17, 2021
25 °C

ನಾಲ್ಕು ದಿನಗಳಲ್ಲಿ ಸಾರಿಗೆ ವ್ಯವಸ್ಥೆ ಸಹಜ ಸ್ಥಿತಿಗೆ: ಲಕ್ಷ್ಮಣ ಸವದಿ ವಿಶ್ವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ರಾಜ್ಯದಲ್ಲಿ ನಾಲ್ಕು ದಿನಗಳಲ್ಲಿ ಸಾರಿಗೆ ವ್ಯವಸ್ಥೆ ಸಹಜ ಸ್ಥಿತಿಗೆ ಬರಲಿದೆ. ಹೀಗಾಗಿ ಎಸ್ಮಾ ಜಾರಿ ಮಾಡುವ ಪ್ರಶ್ನೆಯೇ ಉದ್ಘವಿಸುವುದಿಲ್ಲ’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.

‘ಶುಕ್ರವಾರ 900 ಬಸ್‌, ಶನಿವಾರ 1500 ಸಂಚರಿಸಿವೆ. ಭಾನುವಾರ 2 ಸಾವಿರ ಬಸ್‌ಗಳು ಓಡಾಡಲಿವೆ. ಸೋಮವಾರದ ವೇಳೆ ನೌಕರರು ಕರ್ತವ್ಯದ ಮೇಲೆ ಹಾಜರಾಗುವ ವಿಶ್ವಾಸ ಇದೆ’ ಎಂದು ಹುಮನಾಬಾದ್‌ನಲ್ಲಿ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದರು.

‘ಕೆಲ ಚಾಲಕರು, ನಿರ್ವಾಹಕರು ಕರ್ತವ್ಯದ ಮೇಲೆ ಹಾಜರಾಗಲು ಸಿದ್ಧರಿದ್ದೇವೆ ಎಂದು ಕರೆಗಳನ್ನು ಮಾಡುತ್ತಿದ್ದಾರೆ. ನೌಕರರ ಸಂಘದ ಸದಸ್ಯರು ಬೆದರಿಕೆ ಹಾಕುತ್ತಿರುವ ಕಾರಣ ನೌಕರರು ಕೆಲಸಕ್ಕೆ ಹಾಜರಾಗಲು ಹಿಂಜರಿಯುತ್ತಿದ್ದಾರೆ. ನಾಲ್ಕು ದಿನಗಳ ಮುಷ್ಕರದಿಂದಾಗಿ ಈ ತಿಂಗಳು ಸಂಬಳ ಕೊಡಲು ಸಹ ನಿಗಮದ ಬಳಿ ಹಣ ಇಲ್ಲ. ಮತ್ತೆ ಸರ್ಕಾರ ನೆರವಿಗೆ ಬರಬೇಕಾಗಲಿದೆ’ ಎಂದರು.

‘ಮುಷ್ಕರದಿಂದ ಬಡವರು, ಮಧ್ಯಮ ವರ್ಗದವರು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಯಗಾದಿ ಹಬ್ಬಕ್ಕೆ ಊರಿಗೆ ಹೋಗುವವರಿಗೂ ಸಮಸ್ಯೆ ಕಾಡುತ್ತಿದೆ. ಜನಸಾಮಾನ್ಯರ ಕಷ್ಟ ಅರಿತು ಸಾರಿಗೆ ನೌಕರರು ತಕ್ಷಣ ಕರ್ತವ್ಯಕ್ಕೆ ಹಾಜರಾಗಬೇಕು’ ಎಂದು ಮನವಿ ಮಾಡಿದರು.

‘ಬೆಂಕಿ ಹತ್ತಿದಾಗ ತೆನೆ ಸುಟ್ಟುಕೊಳ್ಳುತ್ತಿರುವವರು ರಾಜಕೀಯದಲ್ಲಿ ಇದ್ದಾರೆ. ಇದು ಒಳ್ಳೆಯದಲ್ಲ. ಇನ್ನೊಬ್ಬರ ಮುಖಕ್ಕೆ ಮಸಿ ಬಳಿಯಲು ಯತ್ನಿಸಿದರೆ ನಮ್ಮ ಕೈಗೆ ತಗುಲಿರುತ್ತದೆ ಎನ್ನುವ ಅರಿವು ನಮಗಿರಬೇಕು. ಡಿ.ಕೆ.ಶಿವಕುಮಾರ ಪ್ರತಿಭಟನಾಕಾರರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಸಾರಿಗೆ ನೌಕರರು ವಿವೇಚನೆಯಿಂದ ನಿರ್ಧಾರ ಕೈಗೊಳ್ಳಬೇಕು’ ಎಂದರು.

‘ಸರ್ಕಾರ, ಸಾರಿಗೆ ನೌಕರರಿಗೆ ಬೆದರಿಕೆ ಹಾಕಿಲ್ಲ. ಆದರೆ ಸಾರ್ವಜನಿಕರಿಗೆ ತೊಂದರೆಯಾದರೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ’ ಎಂದು ಹೇಳಿದರು.

‘ಮುಷ್ಕರದಲ್ಲಿ ರಾಜಕೀಯ ಬೇಡ’
ಬೆಂಗಳೂರು:
ಸಾರಿಗೆ ನಿಗಮಗಳ ನೌಕರರು ನಡೆಸುತ್ತಿರುವ ಮುಷ್ಕರದ ವಿಚಾರದಲ್ಲಿ ವಿರೋಧ ಪಕ್ಷಗಳು ರಾಜಕೀಯ ಮಾಡಬಾರದು ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

‘ಸಾರಿಗೆ ನೌಕರರ ಜತೆ ಸರ್ಕಾರ ಹಲವು ಸುತ್ತಿನ ಮಾತುಕತೆ ನಡೆಸಿದೆ. ಆದರೂ, ಕೆಲವರ ಕೈವಾಡದಿಂದ ಮುಷ್ಕರ ನಡೆಯುತ್ತಿದೆ. ಇಂತಹ ದುರಿತ ಕಾಲದಲ್ಲಿ ಕಾಂಗ್ರೆಸ್‌ ನಾಯಕರು ಸಮಸ್ಯೆ ಬಗೆಹರಿಸುವ ಬದಲಿಗೆ ರಾಜಕೀಯ ಹೇಳಿಕೆ ನೀಡುತ್ತಿರುವುದು ದುರ್ದೈವದ ಸಂಗತಿ’ ಎಂದವರು ತಿಳಿಸಿದ್ದಾರೆ.

‘ಕೋಡಿಹಳ್ಳಿ ಚಂದ್ರಶೇಖರ್‌ ಜತೆ ಕೈಜೋಡಿಸಿರುವ ಕಾಂಗ್ರೆಸ್‌ ಮುಷ್ಕರದ ಬೆಂಕಿಯಲ್ಲಿ ಅಡುಗೆ ತಯಾರಿಸಲು ಹವಣಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ. ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಖುಷಿಪಡುವ ಪಟ್ಟಭದ್ರರನ್ನು ಬಂಧಿಸುವುದು ಅನಿವಾರ್ಯವಾಗಿತ್ತು’ ಎಂದು ಕೋಡಿಹಳ್ಳಿ ವಿರುದ್ಧದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು