ಶುಕ್ರವಾರ, ಸೆಪ್ಟೆಂಬರ್ 17, 2021
26 °C

ಗಜ್ಜರಿ, ಕೊತ್ತಂಬರಿ ಬೆಲೆ ಹೆಚ್ಚಳ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ಸಸ್ಯಹಾರ ಇರಲಿ, ಮಾಂಸಹಾರವೇ ಇರಲಿ ಅಡುಗೆಯಲ್ಲಿ ಕೊತ್ತಂಬರಿ ಇಲ್ಲದಿದ್ದರೆ ಸ್ವಾದವೇ ಇರದು. ಅಂತೆಯೇ ಕೊತ್ತಂಬರಿಗೆ ಬೇಡಿಕೆ ಇದ್ದೇ ಇದೆ. ಈ ವಾರ ಇಲ್ಲಿಯ ತರಕಾರಿ ಮಾರುಕಟ್ಟೆಯಲ್ಲಿ ಎಲ್ಲ ತರಕಾರಿಗಳ ಬೆಲೆ ಸ್ಥಿರವಾಗಿದ್ದರೂ ಕೊತ್ತಂಬರಿ ಹಾಗೂ ಗಜ್ಜರಿ ಬೆಲೆ ಮಾತ್ರ ಹೆಚ್ಚಳವಾಗಿದೆ.

ಬೆಳಗಾವಿ ಜಿಲ್ಲೆಯ ಘಟಪ್ರಭಾ ಹಾಗೂ ಕೃಷ್ಣಾ ನದಿ ದಂಡೆಯ ಮೇಲೆ ಬೆಳೆಯುವ ಘಮಘಮಿಸುವ ಕೊತ್ತಂಬರಿಗೆ ಬೀದರ್‌ ಜಿಲ್ಲೆಯಲ್ಲಿ ಅಧಿಕ ಬೇಡಿಕೆಯಿದೆ. ಅದಕ್ಕಾಗಿಯೇ ಈ ಬಾರಿಯೂ ಬೆಳಗಾವಿ ಜಿಲ್ಲೆಯಿಂದ ಕೊತ್ತಂಬರಿ ಬಂದಿದೆ.

ಗಜ್ಜರಿ ಹಾಗೂ ಕೊತ್ತಂಬರಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 3 ಸಾವಿರದಿಂದ ₹ 4 ಸಾವಿರ ಹೆಚ್ಚಳವಾಗಿದೆ. ಬೆಲೆ ಹೆಚ್ಚಾದರೂ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ.

ಗೃಹಿಣಿಯರ ನೆಮ್ಮದಿ ಕಸಿದಿದ್ದ ಈರುಳ್ಳಿ ಬೆಲೆ ಎರಡು ವಾರಗಳಿಂದ ಸ್ಥಿರವಾಗಿದೆ. ಗುಣಮಟ್ಟದ ಈರುಳ್ಳಿ ಮಾರುಕಟ್ಟೆಗೆ ನಿರಂತರವಾಗಿ ಬರುತ್ತಿದೆ. ಬೆಳ್ಳುಳ್ಳಿ ಬೆಲೆ ಮಾತ್ರ ಆರು ತಿಂಗಳಿಂದ ಸ್ವಲ್ವವೂ ಕಡಿಮೆಯಾಗಿಲ್ಲ. ಹೀಗಾಗಿ ಮನೆಗಳಲ್ಲಿ ಮಿತವಾಗಿ ಬಳಕೆಯಾಗುತ್ತಿದೆ. ಹೋಟೆಲ್‌ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಸಹ ಬಳಕೆ ಕಡಿಮೆಯಾಗಿದೆ. ಆದರೂ ಬೆಲೆ ಮಾತ್ರ ಕುಸಿದಿಲ್ಲ. ಈರುಳ್ಳಿ, ಮೆಣಸಿನಕಾಯಿ, ಆಲೂಗಡ್ಡೆ, ಬದನೆಕಾಯಿ, ಬೆಂಡೆ ಕಾಯಿ, ಹಿರೇಕಾಯಿ, ಎಲೆಕೋಸು, ಬೆಳ್ಳುಳ್ಳಿ, ಬೀನ್ಸ್‌, ಹೂಕೋಸು, ಸಬ್ಬಸಗಿ, ಬೀಟ್‌ರೂಟ್‌, ತೊಂಡೆಕಾಯಿ, ಕರಿಬೇವು, ಟೊಮೆಟೊ ಹಾಗೂ ಪಾಲಕ್‌ ಬೆಲೆ ಸ್ಥಿರವಾಗಿದೆ.

ಬಹುದಿನಗಳ ನಂತರ ಮೆಂತೆ ಸೊಪ್ಪಿನ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 1,500 ಕುಸಿದಿದೆ. ಪ್ರತಿ ಕೆ.ಜಿಗೆ ₹ 500 ತಲುಪಿ ಮಾರುಕಟ್ಟೆಯಲ್ಲಿ ತಲ್ಲಣ ಉಂಟು ಮಾಡಿದ್ದ ನುಗ್ಗೆಕಾಯಿ ಬೆಲೆ ಇದೀಗ ₹ 100ಗೆ ಇಳಿದರೂ ಜನಸಾಮಾನ್ಯರು ಸುಲಭವಾಗಿ ಖರೀದಿಸುವ ಬೆಲೆಯಲ್ಲಿ ಇಲ್ಲ. ಬೇಸಿಗೆಯಲ್ಲಿ ನುಗ್ಗೆಕಾಯಿ ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ. ಞನಗರದ ಮಾರುಕಟ್ಟೆಗೆ ಮಹಾರಾಷ್ಟ್ರದ ಸೋಲಾಪುರದಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಆವಕವಾದರೆ, ಉತ್ತರ ಪ್ರದೇಶದಿಂದ ಆಲೂಗಡ್ಡೆ ಬಂದಿದೆ. ಉಳಿದೆಲ್ಲ ತರಕಾರಿ ತೆಲಂಗಾಣದ ಜಿಲ್ಲೆಗಳಿಂದ ಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.