ಸೋಮವಾರ, ಜೂನ್ 14, 2021
21 °C

ಬೀದರ್‌: ಮುದುಡಿದ ನುಗ್ಗೆ, ಬಳಲಿದ ಬದನೆ, ಖಾಟು ಹೆಚ್ಚಿಸಿದ ಈರುಳ್ಳಿ...

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಗಣೇಶ ಭಕ್ತರ ಮನೆ ಸೇರುವ ಮೊದಲೇ ತರಕಾರಿ ಬೆಲೆ ನಿಯಂತ್ರಿಸಿದ್ದಾನೆ. ಸೊಪ್ಪು ಲಂಬೋದರನಿಗೆ ಅತ್ಯಂತ ಪ್ರಿಯವಾದ ಖಾದ್ಯ. ಕೋವಿಡ್‌ ಸೋಂಕು ಹರಡುವಿಕೆ ಸಂದರ್ಭದಲ್ಲಿ ಭಕ್ತರಿಗೆ ಮತ್ತಷ್ಟು ಆರ್ಥಿಕ ಹೊರೆ ಬೀಳದಿರಲಿ ಎಂದು ಭಾವಿಸಿದಂತೆ ಮಾರುಕಟ್ಟೆಯಲ್ಲಿ ಸೊಪ್ಪಿನ ಬೆಲೆ ಕುಸಿದಿದ್ದು, ವಿಘ್ನ ನಿವಾರಕ ತನ್ನ ಗ್ರಾಹಕರಿಗೆ ಶುಭ ಸಂದೇಶವನ್ನೇ ನೀಡಿದ್ದಾನೆ.

ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಹಾಗೂ ಹೂಕೋಸಿನ ಬೆಲೆ ಮಾತ್ರ ಸ್ಥಿರವಾಗಿದೆ. ಬಹುತೇಕ ಎಲ್ಲ ತರಕಾರಿಗಳ ಬೆಲೆ ಇಳಿದಿದೆ. ಕಳೆದ ವಾರ ಮಾರುಕಟ್ಟೆಯಲ್ಲಿ ಸೆಟೆದು ನಿಂತಿದ್ದ ನುಗ್ಗೆಕಾಯಿಗೆ ಬೇಡಿಕೆ ಕಡಿಮೆಯಾಗಿ ಮುದುಡಿಕೊಂಡಿದೆ. ಪ್ರತಿ ಕ್ವಿಂಟಲ್‌ ಬೆಲೆ ₹ 2,500 ವರೆಗೂ ಇಳಿಕೆಯಾಗಿದೆ. ಕಳೆದ ವಾರ ಬೆಲೆ ಏರಿಕೆಯಿಂದ ಹಿರಿ ಹಿರಿ ಹಿಗ್ಗಿದ್ದ ಹಿರೇಕಾಯಿ ₹ 1,500 ವರೆಗೂ ಕುಸಿತ ಕಂಡು ನಾಚಿ ನೀರಾಗಿದೆ. ಜಿಲ್ಲೆಯಲ್ಲಿ ಜಿಟಿ ಜಿಟಿಯಾಗಿ ನಿರಂತರವಾಗಿ ಸುರಿಯುತ್ತಿರುವ ಮಳೆ ಹಿರೇಕಾಯಿಯನ್ನು ಇನ್ನಷ್ಟು ಒದ್ದೆ ಮಾಡಿದೆ.

ಬೆಂಡೆಕಾಯಿ ಪ್ರತಿ ಕ್ವಿಂಟಲ್‌ಗೆ ಒಂದು ಸಾವಿರ ರೂಪಾಯಿ ವರೆಗೆ ಕುಸಿದು ಬೆಂಡಾಗಿದೆ. ತರಕಾರಿ ರಾಜ ಬದನೆಕಾಯಿ ಬೆಲೆ ₹ 500 ಕಡಿಮೆಯಾಗಿ ಕಿರೀಟ ಅಲುಗಾಡಲು ಶುರು ಮಾಡಿದೆ. ಆಲೂಗಡ್ಡೆ, ಗಜ್ಜರಿ, ಸಬ್ಬಸಗಿ, ಕರಿಬೇವು ಹಾಗೂ ಪಾಲಕ್‌ ಸೊಪ್ಪಿನ ಬೆಲೆ ಸಹ ಪ್ರತಿ ಕ್ವಿಂಟಲ್‌ಗೆ ₹1,500ರ ವರೆಗೆ ಕುಸಿದಿದೆ.

ಕಂದು ಬಣ್ಣದಲ್ಲಿ ನನ್ನನ್ನು ಬೀಟ್‌ ಮಾಡುವವರು ಯಾರೂ ಇಲ್ಲ ಎಂದು ಬೀಗುತ್ತಿದ್ದ ಬೀಟ್‌ರೂಟ್‌ ಬೆಲೆ ₹ 5 ಸಾವಿರದಿಂದ ₹ 2 ಸಾವಿರಕ್ಕೆ ಇಳಿದಿದೆ. ತರಕಾರಿ ಬೆಲೆ ಇಳಿಕೆ ಗ್ರಾಹಕರಿಗೆ ಖುಷಿ ತಂದರೂ ರೈತರ ಪಾಲಿಗೆ ಆರ್ಥಿಕ ನಷ್ಟ ತಂದೊಡ್ಡಿದೆ. ಟೊಮೆಟೊಗೆ ಸಾಗಣೆಯ ವೆಚ್ಚವೇ ಹೆಚ್ಚಾಗುತ್ತಿದೆ.

ಪ್ರತಿ ಕ್ವಿಂಟಲ್‌ಗೆ ಈರುಳ್ಳಿ ₹ 500 ಹಾಗೂ ಹಸಿ ಮೆಣಸಿನಕಾಯಿ ಬೆಲೆ 1,500 ಹೆಚ್ಚಾಗಿದೆ. ಹಬ್ಬದ ಬೇಡಿಕೆಯಿಂದಾಗಿ ಮೆಂತೆ ಸೊಪ್ಪು ₹ 1,500 ಕ್ಕೆ ಏರಿದೆ. ಹಬ್ಬದ ಸಂದರ್ಭದಲ್ಲಿ ನಾನಿರದ ಹೊರತು ಭೋಜನದ ಸ್ವಾದ ಹೆಚ್ಚಿಸಲು ಸಾಧ್ಯವಿಲ್ಲ ಎಂದು ಬೀಗುತ್ತಿರುವ ಕೊತಂಬರಿ ಪ್ರತಿ ಕ್ವಿಂಟಲ್‌ಗೆ ₹ 2,500 ಬೆಲೆ ಹೆಚ್ಚಿಸಿಕೊಂಡಿದೆ.

ಮಹಾರಾಷ್ಟ್ರದ ನಾಸಿಕ್‌ನಿಂದ ಈರುಳ್ಳಿ, ಸೋಲಾಪುರದಿಂದ ಬೆಳ್ಳುಳ್ಳಿ, ಹೈದರಾಬಾದ್‌ನಿಂದ ಹಸಿ ಮೆಣಸಿನಕಾಯಿ, ಆಲೂಗಡ್ಡೆ, ಬೀನ್ಸ್, ತೊಂಡೆಕಾಯಿ, ಬೆಂಡೆಕಾಯಿ, ಬೀಟ್‌ರೂಟ್, ಬೆಳಗಾವಿಯಿಂದ ಗಜ್ಜರಿ, ನುಗ್ಗೆಕಾಯಿ, ಬೆಂಗಳೂರು ಗ್ರಾಮೀಣ ಪ್ರದೇಶದಿಂದ ಟೊಮೆಟೊ, ಜಿಲ್ಲೆಯ ಚಿಟಗುಪ್ಪ, ಹುಮನಾಬಾದ್, ಭಾಲ್ಕಿ ಹಾಗೂ ಬೀದರ್ ತಾಲ್ಲೂಕಿನ ಗ್ರಾಮೀಣ ಪ್ರದೇಶದಿಂದ ಹಿರೇಕಾಯಿ, ಬದನೆಕಾಯಿ, ಹೂಕೋಸು, ಸಬ್ಬಸಗಿ, ಮೆಂತೆಸೊಪ್ಪು, ಪಾಲಕ್, ಕೋತಂಬರಿ ಹಾಗೂ ಕರಿಬೇವು ಮಾರುಕಟ್ಟೆಗೆ ಬಂದಿದೆ.

‘ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಮಳೆಯಾಗುತ್ತಿರುವ ಕಾರಣ ತರಕಾರಿ ನೀರು ಪಾಲಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ರೈತರು ಕೈಗೆ ಬಂದಷ್ಟು ಹಣ ಬರಲಿ ಎಂದು ತರಕಾರಿ ತಂದು ಮಾರುಕಟ್ಟೆಗೆ ಮಾರಾಟ ಮಾಡಿದ್ದಾರೆ. ಹೀಗಾಗಿ ಈ ವಾರ ತರಕಾರಿ ಬೆಲೆ ಕಡಿಮೆಯಾಗಿದೆ’ ಎಂದು ತರಕಾರಿ ವ್ಯಾಪಾರಿ ಶಿವಕುಮಾರ ಮಾಡಗೂಳ ಹೇಳುತ್ತಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.