ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತರಕಾರಿ: ಗ್ರಾಹಕರಿಗೆ ಬೆಲೆಯೇರಿಕೆ ಬಿಸಿ

ಮಳೆಯಿಂದ ಹಾಳಾದ ಬೆಳೆ, ತಗ್ಗಿದ ಆವಕ; ಕೊತ್ತಂಬರಿ, ನುಗ್ಗೆಕಾಯಿ ದ್ವಿಶತಕ
Published : 19 ಸೆಪ್ಟೆಂಬರ್ 2024, 6:11 IST
Last Updated : 19 ಸೆಪ್ಟೆಂಬರ್ 2024, 6:11 IST
ಫಾಲೋ ಮಾಡಿ
Comments

ಖಟಕಚಿಂಚೋಳಿ: ಕಳೆದ ಕೆಲವು ದಿನಗಳ ಹಿಂದೆ ನಿರಂತರವಾಗಿ ಸುರಿದ ಮಳೆಗೆ ತರಕಾರಿ ಬೆಳೆ ಹಾನಿಯಾಗಿದ್ದು ಇದೀಗ ಬಹುತೇಕ ಬೆಲೆ ಗಗನಕ್ಕೇರಿವೆ.

ಬೆಳ್ಳುಳ್ಳಿ ದರ ತ್ರಿಶತಕ ಬಾರಿಸಿದರೆ, ಕೊತಂಬರಿ, ನುಗ್ಗೆಕಾಯಿ ದ್ವಿಶತಕ ದಾಟಿ ಗ್ರಾಹಕರ ಕೈಗೆಟುಕದಂತೆ ಮುನ್ನುಗ್ಗುತ್ತಿವೆ.

ಕಳೆದ ವಾರ ಹಿರೇಕಾಯಿ ಪ್ರತಿ ಕೆ.ಜಿ ₹ 80ರಂತೆ ಮಾರಾಟವಾಗಿದೆ. ಆದರೆ ಈ ವಾರ ಚಿಲ್ಲರೆ ಮಾರುಕಟ್ಟೆಯಲ್ಲಿ ₹140 ದಾಟಿದೆ. ಚವಳೆಕಾಯಿ, ಮೆಂತ್, ಪಾಲಕ್ ಸೇರಿದಂತೆ ಬಹುತೇಕ ತರಕಾರಿಗಳ ಬೆಲೆ ಶತಕ ದಾಟಿದೆ. ಟೊಮೆಟೊ, ಆಲೂಗಡ್ಡೆ, ಮೆಣಸಿನಕಾಯಿ, ಹೂಕೋಸು, ಬೆಂಡೆಕಾಯಿ, ಗಜ್ಜರಿಗಳು ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿವೆ. 

‘ಆಲೂಗಡ್ಡೆ, ಟೊಮೆಟೊ ಪ್ರತಿ ಕ್ವಿಂಟಾಲ್‌ಗೆ ₹5 ಸಾವಿರ, ಬೆಂಡೆಕಾಯಿ, ಈರುಳ್ಳಿ ₹6 ಸಾವಿರ, ಚವಳೆಕಾಯಿ ₹8 ಸಾವಿರ, ಹೂಕೋಸು ₹8 ಸಾವಿರ, ಬದನೆಕಾಯಿ ₹5 ಸಾವಿರಕ್ಕೆ ಮಾರಾಟವಾಗುತ್ತಿವೆ’ ಎಂದು ತರಕಾರಿ ವ್ಯಾಪಾರಿ ಸುರೇಶ ಗೌರೆ ತಿಳಿಸಿದ್ದಾರೆ.

‘ಬೆಲೆ ಹೆಚ್ಚಾಗಿರುವುದರಿಂದ ಹೆಚ್ಚಿನ ಚೌಕಾಸಿ ನಡೆಯುತ್ತಿದೆ.  ಗ್ರಾಹಕರು, ವ್ಯಾಪಾರಿಗಳು ನಡುವೆ ಇರಿಸು, ಮುನಿಸು ಉಂಟಾಗುತ್ತಿದೆ. ವ್ಯಾಪಾರ ಮಾಡಲು ಬೇಸರವಾಗುತ್ತಿದೆ’ ಎನ್ನುತ್ತಾರೆ ವ್ಯಾಪಾರಿ ರಮೇಶ. 

‌ಮಹಾರಾಷ್ಟ್ರದ ನಾಸಿಕ್, ಸೋಲಾಪುರದಿಂದ ಈರುಳ್ಳಿ, ಬೆಳ್ಳುಳ್ಳಿ ಆವಕವಾಗಿದೆ. ಹೈದರಾಬಾದ್‌ನಿಂದ ಬೀನ್ಸ್, ಬೀಟ್‌ರೂಟ್‌, ಗಜ್ಜರಿ, ನುಗ್ಗೆಕಾಯಿ, ಡೊಣ್ಣಮೆಣಸಿನಕಾಯಿ, ತೊಂಡೆಕಾಯಿ, ಬೆಂಡೆಕಾಯಿ, ಚವಳೆಕಾಯಿ, ಪಡವಲಕಾಯಿ, ಹಾಗಲಕಾಯಿ, ಬೆಳಗಾವಿಯಿಂದ ಹಸಿ ಮೆಣಸಿನಕಾಯಿ ಹಾಗೂ ಕೊತಂಬರಿ ನಗರದ ಮಾರುಕಟ್ಟೆಗೆ ಬಂದಿದೆ.

‘ಜಿಲ್ಲೆಯ ಚಿಟಗುಪ್ಪ ಸೇರಿದಂತೆ ವಿವಿಧ ತಾಲ್ಲೂಕಿನಿಂದ ಬದನೆಕಾಯಿ, ಹೂಕೋಸು, ಎಲೆಕೋಸು, ಮೆಂತ್ಯೆ ಹಾಗೂ ಸಬ್ಬಸಗಿ ಸೊಪ್ಪು ನಗರದ ತರಕಾರಿ ಸಗಟು ಮಾರುಕಟ್ಟೆಗೆ ಬಂದಿವೆ’ ಎಂದು ವ್ಯಾಪಾರಿ ಅಹಮ್ಮದ್ ಪಾಷಾ ತಿಳಿಸಿದರು.

ಕಳೆದ ವಾರದಿಂದ ಅಡುಗೆ ಎಣ್ಣೆ ಬೆಲೆಯೂ ಏರಿಕೆಯಾಗಿದೆ. ರುಚಿ ಗೋಲ್ಡ್ ಪ್ರತಿ ಲೀಟರ್ ₹120 ರಂತೆ ಮಾರಾಟವಾದರೆ ಗೋಲ್ಡ್ ಡ್ರಾಪ್ ₹135, ಸನ್ ಫ್ಲಾವರ್ ₹140ಕ್ಕೆ ಮಾರಾಟವಾಗುತ್ತಿವೆ.

ದಸರಾ , ದೀಪಾವಳಿ ಸಮೀಪಿಸುತ್ತಿರುವುದರಿಂದ ತರಕಾರಿ, ಅಡುಗೆ ಎಣ್ಣೆ ಬೆಲೆ ಸದ್ಯಕ್ಕೆ ಇಳಿಕೆಯಾಗುವ ಯಾವುದೇ ಲಕ್ಷಣಗಳಿಲ್ಲ ಎಂದು ಗ್ರಾಹಕರು ಮಾತನಾಡುತ್ತಿರುವುದು ಕೇಳಿಬರುತ್ತಿದೆ.

ಹಿಂದೆ ವಾರಕ್ಕೆ ಬೇಕಾಗುವ ವಿವಿಧ ಬಗೆಯ ತರಕಾರಿಗಳನ್ನು ಖರೀದಿಸುತ್ತಿದ್ದೆ. ಆದರೆ ಸದ್ಯ ಬೆಲೆ ಏರಿಕೆಯಾಗಿರುವುದರಿಂದ ಪ್ರತಿ ದಿನಕ್ಕೆ ಬೇಕಾಗುವಷ್ಟೇ ಖರೀದಿಸುತ್ತಿದ್ದೇನೆ
ಸಪ್ನಾ ಗೃಹಿಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT