ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶು ವೈದ್ಯಕೀಯ ವಿವಿಯ ಘಟಿಕೋತ್ಸವ: 25 ಚಿನ್ನದ ಪದಕ ಗಳಿಸಿದ ಮೂವರು ವಿದ್ಯಾರ್ಥಿಗಳು

Published 17 ಅಕ್ಟೋಬರ್ 2023, 11:10 IST
Last Updated 17 ಅಕ್ಟೋಬರ್ 2023, 11:10 IST
ಅಕ್ಷರ ಗಾತ್ರ

ಬೀದರ್‌: ಇಲ್ಲಿನ ನಂದಿನಗರದ ಕರ್ನಾಟಕ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವದಲ್ಲಿ ಮೂವರು ವಿದ್ಯಾರ್ಥಿಗಳು 25 ಚಿನ್ನದ ಪದಕಗಳಿಗೆ ಭಾಜನರಾಗಿದ್ದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.

ಗದಗ ಪಶು ವೈದ್ಯಕೀಯ ಕಾಲೇಜಿನಲ್ಲಿ ಬಿವಿಎಸ್ಸಿ ಅಂಡ್‌ ಎಎಚ್‌ ಕೋರ್ಸ್‌ ಪೂರ್ಣಗೊಳಿಸಿರುವ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಅವಸರದಹಳ್ಳಿಯ ರಾಘವೇಶ ಎ.ಎನ್‌. 16 ಚಿನ್ನದ ಪದಕಗಳನ್ನು ಸ್ವೀಕರಿಸಿದರು. ಬೀದರ್‌ ಪಶು ವೈದ್ಯಕೀಯ ಕಾಲೇಜಿನ ಸಚಿನ್‌ ಹುದ್ದಾರ್‌ 5 ಹಾಗೂ ಬೆಂಗಳೂರು ವೈದ್ಯಕೀಯ ಕಾಲೇಜಿನ ವಸುಧಾ ಎನ್‌. ಅವರು 4 ಚಿನ್ನದ ಪದಕಗಳಿಗೆ ಭಾಜನರಾದರು.

ಮೂವರಿಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ಪದಕಗಳನ್ನು ಪ್ರದಾನ ಮಾಡಿ ಶುಭ ಕೋರಿದರು. ಮೂವರು ಪದಕ ಸ್ವೀಕರಿಸಿದಾಗ ಸಭಾಂಗಣದಲ್ಲಿ ಕರತಾಡನ ಮುಗಿಲು ಮುಟ್ಟಿತ್ತು. ಅವರು ವೇದಿಕೆಯಿಂದ ಕೆಳಗಿಳಿದು ಬರುವಾಗ ಗಣ್ಯರು, ಅಧಿಕಾರಿ, ಸಿಬ್ಬಂದಿ ವರ್ಗ ಕೈಕುಲುಕಿ ಅಭಿನಂದಿಸಿದರು. ಅವರ ಪೋಷಕರು ಅಪ್ಪಿಕೊಂಡು, ಮುತ್ತಿಟ್ಟು ಪ್ರೀತಿ ವ್ಯಕ್ತಪಡಿಸಿದರು.

‘ಇಷ್ಟೊಂದು ಗೋಲ್ಡ್‌ ಎಕ್ಸಪೆಕ್ಟ್‌ ಮಾಡಿರಲಿಲ್ಲ’...

‘ಗೋಲ್ಡ್‌ ಮೆಡಲ್‌ ಬರುತ್ತೆ ಎಂದು ನಾನು ಎಕ್ಸಪೆಕ್ಟ್‌ ಮಾಡಿದ್ದೆ. ಆದರೆ, 16 ಗೋಲ್ಡ್‌ ಮೆಡಲ್‌ ಬರುತ್ತೆ ಎಂದು ಎಕ್ಸಪೆಕ್ಟ್‌ ಮಾಡಿರಲಿಲ್ಲ. ನನ್ನ ತಂದೆ ತಾಯಿ, ನಾನು ಓದಿದ ಗದಗ ಪಶು ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರು ಹಾಗೂ ನನಗೆ ಸಪೋರ್ಟ್‌ ನೀಡಿದ ಗೆಳೆಯರನ್ನು ನೆನಪಿಸಿಕೊಳ್ಳಲು ಇಷ್ಟಪಡುತ್ತೇನೆ. ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತೇನೆ’. ಇದು 16 ಚಿನ್ನದ ಪದಕ ಗಳಿಸಿದ ರಾಘವೇಶ ಎ.ಎನ್‌. ಅವರು ಮಾಧ್ಯಮಗಳಿಗೆ ನೀಡಿದ ಮೊದಲ ಪ್ರತಿಕ್ರಿಯೆ.

ನಾನು ಕಲಿತ ಗದಗ ಕಾಲೇಜು ಹೊಸದು. ಹೊಸತಾದ ಕಾರಣ ಹೇಗಿರುತ್ತೋ, ಏನಾಗುತ್ತೋ ಎಂದು ಗೊತ್ತಿರಲಿಲ್ಲ. ಆದರೆ, ನಾನು ಹಾಕಿದಷ್ಟೇ ಶ್ರಮ, ನಮ್ಮ ಕಾಲೇಜಿನ ಲೆಕ್ಚರ್ಸ್‌ ಕೂಡ ಹಾಕಿದ್ದಾರೆ. ಪ್ರತಿಯೊಬ್ಬರೂ ಸಪೋರ್ಟ್‌ ಮಾಡಿದ್ದಾರೆ. ಅಕಡೆಮಿಕ್‌ ಅಲ್ಲದೇ ಪ್ರತಿಯೊಂದು ಚಟುವಟಿಕೆಗೆ ಬೆಂಬಲ ನೀಡಿದರು. ಇದರಿಂದಾಗಿ ಮೆಡಲ್‌ ಗಳಿಸಲು ಸಾಧ್ಯವಾಯಿತು ಎಂದರು.

‘ಜನಸೇವೆ ನನ್ನ ಬಯಕೆ’

‘ಪದವಿಯೊಂದಿಗೆ ಒಂದು ಚಿನ್ನದ ಪದಕ ಬರಬಹುದು ಎಂಬ ನಿರೀಕ್ಷೆ ಇತ್ತು. ಐದು ಪದಕಗಳು ಬಂದದ್ದರಿಂದ ಅತೀವ ಸಂತಸವಾಗಿದೆ. ಪಾಲಕರ ಪ್ರೋತ್ಸಾಹ, ಪ್ರಾಧ್ಯಾಪಕರ ಮಾರ್ಗದರ್ಶನ ಹಾಗೂ ಕಠಿಣ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ. ಓದು ಇಲ್ಲಿಗೆ ನಿಲ್ಲಿಸುವುದಿಲ್ಲ. ಸ್ನಾತಕೋತ್ತರ (ಎಂವಿಎಸ್ಸಿ- ವೆಟರ್ನರಿ ಸರ್ಜರಿ) ಅಧ್ಯಯನ ಮಾಡಲಿದ್ದೇನೆ. ಬಳಿಕ ಕೆಪಿಎಸ್‍ಸಿ ಪರೀಕ್ಷೆ ಬರೆಯಲಿದ್ದೇನೆ. ಉನ್ನತ ಅಧಿಕಾರಿಯಾಗಿ ಜನ ಸೇವೆ ಮಾಡಬೇಕು ಎನ್ನುವ ಬಯಕೆ ನನ್ನದಾಗಿದೆ’ ಎಂದು ಬೀದರ್ ಪಶು ವೈದ್ಯಕೀಯ ಕಾಲೇಜು ವಿದ್ಯಾರ್ಥಿ ಸಚಿನ್ ದುಂಡಪ್ಪ ಹುದ್ದಾರ್ ಹೇಳಿದರು.

ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಕುನ್ನಾಳ ಗ್ರಾಮದ ಸಚಿನ್ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ಎಸ್ಸೆಸ್ಸೆಲ್ಸಿಯಲ್ಲಿ ಶೇ 92 ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ 96 ರಷ್ಟು ಅಂಕ ಗಳಿಸಿದ್ದೆ. ನನ್ನ ತಂದೆ ದುಂಡಪ್ಪ ಕೃಷಿಕರಾಗಿದ್ದಾರೆ. ತಾಯಿ ಶ್ರೀದೇವಿ ಗೃಹಿಣಿ. ಎಲ್ಲರ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ ಎಂದರು.

‘ಸರ್ಜನ್‌ ಆಗುವ ಬಯಕೆ’

‘ನಾಲ್ಕು ಚಿನ್ನದ ಪದಕ ಬಂದದ್ದಕ್ಕೆ ಬಹಳ ಖುಷಿಯಾಗಿದೆ. ಸಮಯ ಸಿಕ್ಕಾಗಲೆಲ್ಲಾ ಓದುತ್ತಿದ್ದೆ. ಪರೀಕ್ಷೆ ಸುಲಭವಾಯಿ ಎದುರಿಸಲು ಸಾಧ್ಯವಾಯಿತು. ಕಾಲೇಜಿನಲ್ಲಿ ಉತ್ತಮವಾಗಿ ಪಾಠ ಹೇಳಿಕೊಟ್ಟರು. ತಂದೆ–ತಾಯಿ ಬೆಂಬಲ ಕೊಟ್ಟರು. ಸರ್ಜನ್‌ ಆಗುವುದು ನನ್ನ ಬಯಕೆ’ ಎಂದು ಬೆಂಗಳೂರು ಪಶು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ವಸುಧಾ ಎನ್‌. ತಿಳಿಸಿದರು.

ಮೂಲತಃ ಉಡುಪಿ ಜಿಲ್ಲೆಯವರಾದ ವಸುಧಾ ಪ್ರಾಥಮಿಕ, ಪ್ರೌಢಶಿಕ್ಷಣ ಪಡೆದದ್ದು ಬೆಂಗಳೂರಿನಲ್ಲಿ. ಬಿವಿಎಸ್ಸಿ ಅಂಡ್‌ ಎಎಚ್‌ ಕೋರ್ಸ್‌ ಪೂರ್ಣಗೊಳಿಸಿರುವ ವಸುಧಾ ಮುಂದೆ ಪಿಜಿ. ಕೋರ್ಸ್‌ ಸೇರುವ ನಿರೀಕ್ಷೆಯಲ್ಲಿದ್ದಾರೆ.

[object Object]
ಸಚಿನ್‌ ಹುದ್ದಾರ್‌
[object Object]
ವಸುಧಾ ಎನ್‌.
ನನ್ನ ಮಗ ದೇಶ ಸೇವೆ ಜನ ಸೇವೆ ಮಾಡಬೇಕೆಂಬ ಆಸೆ ಇತ್ತು. ಈಗ ಗುರಿ ಸಾಧಿಸಿದ್ದಾನೆ. ನಾನು ಅಂದುಕೊಂಡಂತೆ ಆಗಿದ್ದಕ್ಕೆ ಸಂತಸವಾಗಿದೆ.
–ನಾಗರಾಜು ರಾಘವೇಶ ಎ.ಎನ್‌. ಅವರ ತಂದೆ
ನನ್ನ ಮಗನೇ ನನಗೆ ಗೋಲ್ಡ್‌. ಈಗ 16 ಗೋಲ್ಡ್‌ ಬಂದದ್ದಕ್ಕೆ ಇನ್ನೂ ಖುಷಿಯಾಗಿದೆ. ಆತ ದೊಡ್ಡ ಸ್ಥಾನಕ್ಕೆ ಹೋಗುತ್ತಾನೆ ಎಂಬ ಭರವಸೆ ಇದೆ.
–ನಾಗಮ್ಮ ರಾಘವೇಶ ಎ.ಎನ್‌. ಅವರ ತಾಯಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT