ಶುಕ್ರವಾರ, ಮೇ 27, 2022
30 °C
ಹೊಲ, ಗದ್ದೆಗಳಿಂದ ನೀರು ಹೊತ್ತು ತರುವುದು ನಿತ್ಯದ ‍ಪರಿಪಾಠ

ಚಳಕಾಪುರ ವಾಡಿ: ನೀರಿಗೆ ನಿತ್ಯ ಪರದಾಟ

ಗಿರಿರಾಜ ಎಸ್.ವಾಲೆ Updated:

ಅಕ್ಷರ ಗಾತ್ರ : | |

Prajavani

ಖಟಕಚಿಂಚೋಳಿ: ಸಮೀಪದ ಚಳಕಾಪುರ ವಾಡಿ ಗ್ರಾಮದಲ್ಲಿ ನಾಲ್ಕೈದು ವರ್ಷಗಳಿಂದ ಶುದ್ಧ ಕುಡಿಯುವ ನೀರಿಗಾಗಿ ಜನರು ಪ್ರತಿದಿನ ಪರದಾಡುತ್ತಿದ್ದಾರೆ.

ಆದರೆ, ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕಣ್ಮುಚ್ಚಿಕೊಂಡು ಕುಳಿತುಕೊಂಡಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಚಳಕಾಪುರ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ಗ್ರಾಮದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಪ್ರತಿ ನಿತ್ಯ ಒಂದು ಕಿಲೋಮೀಟರ್ ದೂರದಿಂದ ನೀರು ತರಬೇಕಾಗುತ್ತಿದೆ. ಗ್ರಾಮದಲ್ಲಿ ಪೈಪಲೈನ್ ಅಳವಡಿಸಿದ್ದರೂ ಅಲ್ಲಲ್ಲಿ ಒಡೆದು ಹೋಗಿದೆ. ನೀರಿನ ಸಮಸ್ಯೆ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಮನಕ್ಕೆ ತಂದರೂ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ’ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.

ಗ್ರಾಮದಲ್ಲಿ ಕೂಲಿಕಾರರು, ಬಡವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ಅವರಿಗೆ ಪ್ರತಿದಿನ ನೀರು ತರುವುದೇ ಬಹು ದೊಡ್ಡ ಕೆಲಸವಾಗಿದೆ. ನೀರಿಗಾಗಿ ಕುಳಿತುಕೊಂಡರೆ ಕೆಲಸ ಸಿಗುವುದಿಲ್ಲ. ಕೆಲಸಕ್ಕೆ ಹೋದರೆ ಕುಡಿಯಲು ನೀರು ಸಿಗುವುದಿಲ್ಲ. ಹೀಗಾಗಿ ಜೀವನವೇ ಬೇಸರವೆನಿಸುತ್ತಿದೆ’ ಎಂದು ಗ್ರಾಮದ ಮಹಿಳೆಯರು ಅಸಮಾಧಾನ
ವ್ಯಕ್ತಪಡಿಸುತ್ತಾರೆ.

‘ಸದ್ಯ ಬೇಸಿಗೆ ಪ್ರಾರಂಭವಾಗಿದೆ. ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೆಳಿಗ್ಗೆಯೇ ನೀರು ತಂದು ಕೆಲಸಕ್ಕೆ ಹೋಗೋಣ ಎಂದರೆ ವಿದ್ಯುತ್ ಇರುವುದಿಲ್ಲ. ಹೀಗಾಗಿ ನೀರಿಗಾಗಿ ಹೊಲಗದ್ದೆಗಳಿಗೆ ಹೋಗಿ ಬಾವಿಯಿಂದ ನೀರು ತೆಗೆದುಕೊಂಡು ತರುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಮುಖಂಡ ಮಲ್ಲಾರಿ ಬಿರಾದಾರ ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಪಂಚಾಯಿತಿಯಲ್ಲಿ ಪ್ರತಿ ವರ್ಷ ಗ್ರಾಮಕ್ಕೆ ಕೊಳವೆ ಬಾವಿ ಕೊರೆಯಲು ಹಾಗೂ ಪೈಪ್‌ಲೈನ್ ಅಳವಡಿಕೆಗೆ ಹಣ ಮೀಸಲಿಡುತ್ತಾರೆ. ಆದರೆ ನಮ್ಮ ಗ್ರಾಮದಲ್ಲಿ ಯಾವುದೇ ರೀತಿಯ ಕಾಮಗಾರಿ ನಡೆದಿಲ್ಲ. ಹೀಗಾಗಿ ಆ ಹಣ ದುರ್ಬಳಕೆ ಆಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ’ ಎಂದು ಗ್ರಾಮದ ಮುಖಂಡ ಅನಿಲ ಜಾಧವ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಗ್ರಾಮದಲ್ಲಿ ಶುದ್ಧ ನೀರು ಬರುತ್ತಿಲ್ಲ. ಬಂದರೂ ಕುಡಿಯಲು ಯೋಗ್ಯವಲ್ಲದ ಕಲುಷಿತ ನೀರು ಬರುತ್ತಿದೆ. ಯುವಕರು ದೂರದಿಂದ ಸೈಕಲ್, ದ್ವಿಚಕ್ರ ವಾಹನ ಮೂಲಕ ನೀರು ತರುತ್ತಾರೆ. ಹಿರಿಯರಿಗೆ ನೀರು ತರಲು ತುಂಬಾ ತೊಂದರೆಯಾಗುತ್ತಿದೆ. ಒಂದೆರಡು ದಿನ ಯಾರಾದರೂ ಕೊಡಬಹುದು. ಪ್ರತಿ ದಿನ ಯಾರೂ ಕೊಡುತ್ತಾರೆ’ ಎಂದು ಹಿರಿಯರು ಅಳಲನ್ನು ತೋಡಿಕೊಳ್ಳುತ್ತಾರೆ.

ನಾಲ್ಕೈದು ವರ್ಷಗಳ ಹಿಂದೆ ಗ್ರಾಮದಲ್ಲಿ ನೀರು ಸಂಗ್ರಹ ತೊಟ್ಟಿ ನಿರ್ಮಿಸಲಾಗಿದೆ. ಒಂದು ವರ್ಷದಿಂದ ಅದನ್ನು ಸ್ವಚ್ಛಗೊಳಿಸಿಲ್ಲ. ಅದರಲ್ಲಿ ಕ್ರಿಮಿಕೀಟಗಳು ಹೆಚ್ಚಾಗಿವೆ. ಇದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಮನಕ್ಕೆ ಬಂದರೂ ಇತ್ತ ಗಮನ ಹರಿಸದೆ ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು