ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಟಕಚಿಂಚೋಳಿ: ಟೊಮೆಟೊ ಬೆಳೆದು ₹2 ಲಕ್ಷ ಆದಾಯದ ನಿರೀಕ್ಷೆಯಲ್ಲಿರುವ ರೈತ

ನೆಲವಾಡ ಗ್ರಾಮದ ಯುವ ರೈತ ರಾಜಕುಮಾರ ಯಶೋಗಾಥೆ
Last Updated 31 ಜುಲೈ 2021, 6:57 IST
ಅಕ್ಷರ ಗಾತ್ರ

ಖಟಕಚಿಂಚೋಳಿ: ಸಮೀಪದ ನೆಲವಾಡ ಗ್ರಾಮದ ಯುವ ರೈತ ರಾಜಕುಮಾರ ತಮ್ಮ ಒಂದೂವರೆ ಎಕರೆ ಭೂಮಿಯಲ್ಲಿ ಟೊಮೆಟೊ ಬೆಳೆದು ಖರ್ಚು ವೆಚ್ಚ ಹೋಗಿ ಸುಮಾರು ₹2 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ.

ಪ್ರಕೃತಿ ವಿಕೋಪ, ಕೃಷಿ ಉತ್ಪನ್ನಗಳ ಬೆಲೆಯಲ್ಲಿ ಏರಿಳಿತ, ರೋಗ–ರುಜಿನಗಳ ಕಾಟ, ಉತ್ಪಾದನಾ ವೆಚ್ಚ ಹೆಚ್ಚಳದಿಂದಾಗಿ ಕೃಷಿ ಕ್ಷೇತ್ರದಿಂದ ಬಹಳಷ್ಟು ಜನ ವಿಮುಖರಾಗುತ್ತಿದ್ದಾರೆ. ಆದರೆ, ಯೋಜನಾಬದ್ಧ ಹಾಗೂ ಆಧುನಿಕ ಪದ್ಧತಿ ಅಳವಡಿಸಿಕೊಂಡ ಕೃಷಿಯಿಂದ ಅಧಿಕ ಲಾಭ ಗಳಿಸಬಹುದು ಎಂಬುದನ್ನು ಇವರು ಸಾಧ್ಯಮಾಡಿ ತೋರಿಸಿದ್ದಾರೆ.

‘ಲಾಕ್‌ಡೌನ್‌ ಸಮಯದಲ್ಲಿ ಟೊಮೆಟೊ ಬೆಲೆ ಸಂಪೂರ್ಣವಾಗಿ ಕುಸಿದಿತ್ತು. ಈಗ ಬೆಲೆ ಏರಿಕೆ ಕಾಣುತ್ತಿದೆ. ಹೀಗಾಗಿ ಟೊಮೆಟೊ ಬೆಳೆದ ರೈತರಿಗೆ ಒಳ್ಳೆಯ ಆದಾಯ ಸಿಗುತ್ತಿದೆ’ ಎಂದು ರೈತ ರಾಜಕುಮಾರ ಸಂತಸ ವ್ಯಕ್ತಪಡಿಸುತ್ತಾರೆ.

‘ಸದ್ಯ ಎರಡು ಬಾರಿ ಟೊಮೆಟೊ ಫಸಲು ತೆಗೆಯಲಾಗಿದೆ. ಪ್ರತಿ ಬಾರಿಯೂ 20-25 ಕ್ಯಾರೆಟ್ ಟೊಮೆಟೊ ಇಳುವರಿ ಬರುತ್ತಿವೆ. ಪ್ರತಿ ಕ್ಯಾರೆಟ್ ₹400-500 ಮಾರಾಟವಾಗುತ್ತಿದೆ. ಮುಂದೆಯೂ ಇನ್ನು 20 ಬಾರಿ ಇಳುವರಿ ಬರುತ್ತದೆ’ ಎಂದು ರಾಜಕುಮಾರ ಹೇಳುತ್ತಾರೆ.

‘ಸದ್ಯ ಸೋಂಕು ಹರಡುವಿಕೆ ಕಡಿಮೆ ಆಗಿರುವುದರಿಂದ ಎಲ್ಲ ವ್ಯಾಪಾರ ವಹಿವಾಟು ಮುಕ್ತವಾಗಿ ಸಾಗುತ್ತಿದೆ. ಎಲ್ಲೆಡೆಯಿಂದ ಖರೀದಿಸುವ ವ್ಯಾಪಾರಿಗಳು ಸಹ ಮಾರುಕಟ್ಟೆಗೆ ಬರುತ್ತಿದ್ದಾರೆ. ಅಲ್ಲದೇ ಕೆಲ ವ್ಯಾಪಾರಿಗಳು ರೈತರ ಹೊಲಗದ್ದೆಗಳಿಗೆ ತೆರಳಿ ಖರೀದಿಸುತ್ತಿರುವುದರಿಂದ ನಷ್ಟವಾಗುತ್ತಿಲ್ಲ’ ಎನ್ನುತ್ತಾರೆ ಅವರು.

‘ತೋಟಗಾರಿಕೆ ಬೆಳೆಗೆ ಕೊಳವೆಬಾವಿ ಮೂಲಕ ನೀರು ಪೂರೈಕೆ ಮಾಡುತ್ತಿದ್ದಾರೆ. ಇದರಿಂದ ಮಳೆಯನ್ನೇ ಆಶ್ರಯಿಸಿ ಬೆಳೆಯುವುದಿಲ್ಲ. ಸದ್ಯ ಟೊಮೆಟೊ ಉತ್ತಮ ಆದಾಯ ನೀಡುತ್ತಿದೆ. ಮುಂದೆ ಯಾವ ಬೆಳೆ ಸೂಕ್ತ ಎನ್ನುವುದನ್ನೂ ಇನ್ನೂ ನಿರ್ಧಾರ ಮಾಡಿಲ್ಲ’ ಎಂದು ಹೇಳುತ್ತಾರೆ.

‘ರೈತರು ಯಾವ ಬೆಳೆಗೆ ರೋಗ ಬರುತ್ತದೆ ಎನ್ನುವುದನ್ನು ತಿಳಿದುಕೊಂಡರೆ ಅದರ ನಿಯಂತ್ರಣ ಮಾಡಲು ಸುಲಭ. ಅನುಭವವೇ ನಮಗೆ ಪಾಠ ಕಲಿಸಿಕೊಡುತ್ತದೆ. ಈ ಮೂಲಕ ಕೃಷಿ ಚಟುವಟಿಕೆಯಲ್ಲಿ ಯಶಸ್ಸು ಸಾಧ್ಯ’ ಎಂಬುದು ಹಿರಿಯ ರೈತರ
ಅನುಭವದ ಮಾತಾಗಿದೆ.

‘ರೈತರು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಬೆಳೆ ಬೆಳೆಯಬೇಕು. ಒಂದೇ ಬೆಳೆಯ ಮೇಲೆ ಅವಲಂಬಿತರಾಗಬಾರದು. ವಿವಿಧ ಬಗೆಯ ಬೆಳೆ ಬೆಳೆದರೆ ನಷ್ಟವಾಗುವುದಿಲ್ಲ’ ಎಂದು ರೈತ ಮುಖಂಡ ನಿರ್ಮಲಕಾಂತ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT