ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರ್ಯಾಂಡ್ ಬೆಂಗಳೂರು: ಪ್ರೀಪೇಯ್ಡ್ ಆಟೊ ಬೂತ್‌: ಮತ್ತಷ್ಟು ಸ್ಮಾರ್ಟ್‌ 

Last Updated 2 ಜನವರಿ 2023, 22:37 IST
ಅಕ್ಷರ ಗಾತ್ರ

ಬೆಂಗಳೂರು: ಹೆಚ್ಚಿನ ಪ್ರಯಾಣ ದರ ವಸೂಲಿಗೆ ಲಗಾಮು ಹಾಕಲು ನಗರದಲ್ಲಿ ಜಾರಿಗೆ ತರಲಾಗಿರುವ ಪ್ರೀಪೇಯ್ಡ್ ಆಟೊ ಬೂತ್‌ಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುತ್ತಿದ್ದು, ಸಂಚಾರ ಪೊಲೀಸರು ಹಾಗೂ ನಮ್ಮ ಮೆಟ್ರೊ ಆಡಳಿತ ಮಂಡಳಿಯವರು ಜಂಟಿಯಾಗಿ ನಿರ್ವಹಣೆ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

‘ಆಟೊರಿಕ್ಷಾ ಚಾಲಕರು ಹೆಚ್ಚಿನ ಹಣ ಕೇಳುತ್ತಾರೆ. ಕರೆದ ಸ್ಥಳಗಳಿಗೆ ಬರುವುದಿಲ್ಲ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ’ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿಬರುತ್ತಿದ್ದವು. ಇದಕ್ಕೆ ಪರಿಹಾರ ಎಂಬಂತೆ ಪ್ರೀಪೇಯ್ಡ್ ಆಟೊ ಬೂತ್ ತೆರೆದಿದ್ದ ಸಂಚಾರ ಪೊಲೀಸರು, ನಿಗದಿತ ಸ್ಥಳದಲ್ಲಿ ಆಟೊಗಳನ್ನು ನಿಲ್ಲಿಸಿ ಪ್ರಯಾಣಿಕರಿಗೆ ಸೇವೆ ಸಿಗುವಂತೆ ಮಾಡುತ್ತಿದ್ದರು.

ಕೋವಿಡ್ ಲಾಕ್‌ಡೌನ್ ಹಾಗೂ ನಂತರದ ದಿನಗಳಲ್ಲಿ ಹಲವು ಪ್ರೀಪೇಯ್ಡ್ ಆಟೊ ಬೂತ್‌ಗಳ ನಿರ್ವಹಣೆಯೇ ಸ್ಥಗಿತಗೊಂಡಿತ್ತು. ಚಾಲಕರ ಹೆಚ್ಚಿನ ಪ್ರಯಾಣ ದರ ವಸೂಲಿ ಯಥಾಪ್ರಕಾರ ಸಾಗಿತ್ತು. ಈ ಬಗ್ಗೆ ಸಾರ್ವಜನಿಕರಿಂದ ಮತ್ತಷ್ಟು ದೂರುಗಳು ಕೇಳಿಬಂದಿದ್ದರಿಂದ, ಪ್ರೀಪೇಯ್ಡ್ ಆಟೊ ಬೂತ್‌ಗಳನ್ನು ಬಲಪಡಿಸಲು ಪೊಲೀಸರು ಮುಂದಾಗಿದ್ದಾರೆ.

ಜನರು ಹೆಚ್ಚು ಸುತ್ತಾಡುವ ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣ, ರೈಲು ನಿಲ್ದಾಣ, ಎಂ.ಜಿ. ರಸ್ತೆ, ಜಯನಗರ, ಮಲ್ಲೇಶ್ವರ ಹಾಗೂ ಇತರೆ ಸ್ಥಳಗಳಲ್ಲಿ ಪ್ರೀಪೇಯ್ಡ್ ಆಟೊ ಬೂತ್‌ಗಳಿದ್ದವು. ಇದೀಗ ಅದೇ ಸ್ಥಳಗಳಲ್ಲಿ ಹೊಸ ವಿನ್ಯಾಸ ಹಾಗೂ ಆಧುನಿಕ ಸೌಲಭ್ಯವುಳ್ಳ ಸುಸಜ್ಜಿತ ಬೂತ್‌ಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಇದಕ್ಕೆ ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಂಚಾರ ಪೊಲೀಸರಿಂದ 16 ಬೂತ್: ಆಟೊರಿಕ್ಷಾ ಚಾಲಕರಿಂದ ಸಾರ್ವಜನಿಕರಿಗೆ ಆಗುತ್ತಿರುವ ಕಿರುಕುಳ ತಡೆಯಲು ಹಲವು ಕ್ರಮ ಕೈಗೊಂಡಿರುವ ಪೊಲೀಸರು, ನಗರದ 16 ಕಡೆ ಪ್ರೀಪೇಯ್ಡ್ ಆಟೊ ಬೂತ್‌ಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

‘ಮೆಜೆಸ್ಟಿಕ್‌ ಬಸ್ ನಿಲ್ದಾಣ, ಜಯನಗರ 4ನೇ ಹಂತದ ಬಿಡಿಎ ಕಾಂಪ್ಲೆಕ್ಸ್, ಮಲ್ಲೇಶ್ವರ ಸಂಪಿಗೆ ರಸ್ತೆಯ ಮಂತ್ರಿ ಮಾಲ್ ಬಳಿ ಇರುವ ಪ್ರೀಪೇಯ್ಡ್ ಆಟೊ ಬೂತ್‌ಗಳನ್ನು ವ್ಯವಸ್ಥಿತ ರೀತಿಯಲ್ಲಿ ಪುನರ್ ಆರಂಭಿಸಲಾಗಿದೆ. ಉಳಿದ ಸ್ಥಳಗಳಲ್ಲಿಯೂ ಸದ್ಯದಲ್ಲೇ ಬೂತ್ ತೆರೆಯಲಾಗುವುದು’ ಎಂದು ವಿಶೇಷ ಕಮಿಷನರ್ (ಸಂಚಾರ) ಎಂ.ಎ. ಸಲೀಂ ‘ಪ್ರಜಾವಾಣಿ’ಗೆ ತಿಳಿಸಿದರು.

ಮೆಟ್ರೊ ನಿಲ್ದಾಣಗಳ ಬಳಿ 4 ಬೂತ್: ನಗರದ ಮೆಟ್ರೊ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ನಿಲ್ದಾಣಕ್ಕೆ ಹೊಂದಿಕೊಂಡು ಪ್ರೀಪೇಯ್ಡ್ ಆಟೊ ಬೂತ್‌ಗಳನ್ನು ಆರಂಭಿಸಲಾಗುತ್ತಿದೆ.

‘ನಾಲ್ಕು ಮೆಟ್ರೊ ನಿಲ್ದಾಣಗಳ ಬಳಿ ಪ್ರಾಯೋಗಿಕವಾಗಿ ಬೂತ್ ತೆರೆಯಲಾಗುವುದೆಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ. ಸದ್ಯ ಎಂ.ಜಿ.ರಸ್ತೆಯಲ್ಲಿ ಒಂದು ಬೂತ್ ಕಾರ್ಯಾಚರಣೆ ಮಾಡಿದೆ’ ಎಂದು ಸಲೀಂ ಮಾಹಿತಿ ನೀಡಿದರು.

ಸಿಬ್ಬಂದಿ ನೇಮಕ, ನಿಗದಿತ ದರ ಜಾರಿ: ‘ಮಳೆ, ಗಾಳಿ, ಬಿಸಿಲಿಗೆ ತಡೆಯುವ ರೀತಿಯಲ್ಲಿ ಕೊಠಡಿ ಮಾದರಿಯಲ್ಲಿ ಬೂತ್‌ಗಳನ್ನು ರೂಪಿಸಲಾಗಿದೆ. ನಿತ್ಯವೂ ಮಧ್ಯಾಹ್ನದಿಂದ ರಾತ್ರಿ 9 ಗಂಟೆಯವರೆಗೆ ಬೂತ್‌ಗಳಲ್ಲಿ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಸಾರಿಗೆ ಇಲಾಖೆ ನಿಗದಿಪಡಿಸಿರುವ ದರದನ್ವಯ ಪ್ರಯಾಣಿಕರಿಗೆ ಆಟೊ ಸೇವೆ ಸಿಗುವಂತೆ ನೋಡಿಕೊಳ್ಳಲಿದ್ದಾರೆ’ ಎಂದು ಸಲೀಂ ಹೇಳಿದರು.

‘ಪ್ರಯಾಣದ ಸ್ಥಳ, ಅಂತರ ಹಾಗೂ ದರದ ವಿವರವುಳ್ಳ ರಶೀದಿ ಪ್ರಯಾಣಿಕರಿಗೆ ಸಿಗಲಿದೆ. ಇದರಿಂದಾಗಿ ನಿಗದಿತ ದರವನ್ನಷ್ಟೇ ಪ್ರಯಾಣಿಕರು ಪಾವತಿಸಬೇಕು. ಯಾರಾದರೂ ಹೆಚ್ಚಿನ ದರ ಕೇಳಿದರೆ, ರಶೀದಿಯನ್ನೇ ಪುರಾವೆಯನ್ನಾಗಿ ಇಟ್ಟಕೊಂಡು ದೂರು ನೀಡಬಹುದು’ ಎಂದರು.

ಆಟೊ ಚಾಲಕರ ನಿರಾಸಕ್ತಿ

ಸಂಚಾರ ಪೊಲೀಸರು ತೆರೆದಿರುವ ಪ್ರೀಪೇಯ್ಡ್ ಆಟೊ ಬೂತ್‌ಗಳ ಮೂಲಕ ಪ್ರಯಾಣಿಕರಿಗೆ ಸೇವೆ ನೀಡಲು ಚಾಲಕರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಬೂತ್‌ಗಳ ಎದುರು ನಿತ್ಯವೂ ಆಟೊಗಳ ಸಂಖ್ಯೆ ಕ್ಷೀಣಿಸುತ್ತಿದೆ. ಸಾರಿಗೆ ಇಲಾಖೆ ನಿಗದಿಪಡಿಸಿರುವ ಪ್ರಯಾಣ ದರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವ ಚಾಲಕರು, ‘ತೈಲ ಹಾಗೂ ಗ್ಯಾಸ್ ಬೆಲೆ ಹೆಚ್ಚಾಗಿದೆ. ನಿಗದಿತ ದರದಲ್ಲಿ ಸೇವೆ ನೀಡಿದರೆ, ಜೀವನ ನಡೆಸುವುದು ಕಷ್ಟ. ಹೀಗಾಗಿ, ಘಟಕಕ್ಕೆ ಹೋಗುವುದಿಲ್ಲ’ ಎನ್ನುತ್ತಿದ್ದಾರೆ.

‘ಸ್ಥಾಪನೆಗಿಂತ ಜಾರಿಗೆ ಒತ್ತು ನೀಡಿ’

‘ಪ್ರೀಪೇಯ್ಡ್ ಆಟೊ ಬೂತ್‌ ತೆರೆದಿರುವುದಾಗಿ ಹೇಳಿ ಪ್ರಚಾರ ಪಡೆಯುವುದು ಸುಲಭ. ಅದರ ಬದಲು, ಘಟಕದ ಮೂಲಕ ಪ್ರಯಾಣಿಕರಿಗೆ ಉತ್ತಮ ಸೇವೆ ಕೊಡಿಸಲು ಸಂಚಾರ ಪೊಲೀಸರು ಹೆಚ್ಚಿನ ಒತ್ತು ನೀಡಬೇಕು’ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಜಯನಗರ ನಿವಾಸಿ ರಾಜಶೇಖರ್, ‘ಬಸ್ ನಿಲ್ದಾಣ, ತಂಗುದಾಣ, ರೈಲು ನಿಲ್ದಾಣ, ಮೆಟ್ರೊ ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ಸುತ್ತಾಡುವ ಚಾಲಕರು ಹೆಚ್ಚಿನ ‍ಪ್ರಯಾಣ ದರ ವಸೂಲಿ ಮುಂದುವರಿಸಿದ್ದಾರೆ’ ಎಂದು ದೂರಿದರು.

ಆಟೊದವರ ಕಿರುಕುಳ: ದೂರು ನೀಡಿ

ಆಟೊ ಚಾಲಕರ ವಿರುದ್ಧದ ದೂರುಗಳನ್ನು ಸ್ವೀಕರಿಸಿ, ಕಾನೂನು ಕ್ರಮ ಜರುಗಿಸಲು ಸಂಚಾರ ಪೊಲೀಸರು ಸಹಾಯವಾಣಿ ತೆರೆದಿದ್ದಾರೆ. 080-22868444, 080-22868550 ನಂಬರ್‌ಗಳಿಗೆ ಕರೆ ಮಾಡಬಹುದು ಅಥವಾ ಸಂಬಂಧಪಟ್ಟ ಠಾಣೆಗೆ ದೂರು ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT