ಶುಕ್ರವಾರ, ಮಾರ್ಚ್ 5, 2021
18 °C
ಹಸಿರು ವಲಯ ಗಡಿ ಜಿಲ್ಲೆಗೆ ಆತಂಕ ಸೃಷ್ಟಿಸಿದ ಬೆಂಗಳೂರಿನ ಪೊಲೀಸ್‌ ಕಾನ್‌ಸ್ಟೆಬಲ್‌

18 ಜನ ಕ್ವಾರಂಟೈನ್‌, ಗ್ರಾಮದಲ್ಲಿ ಕಟ್ಟೆಚ್ಚರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಇದುವರೆಗೂ ಕೋವಿಡ್‌–19 ಮುಕ್ತವಾಗಿದ್ದ ಗಡಿ ಜಿಲ್ಲೆ ಚಾಮರಾಜನಗರವನ್ನೂ ಈಗ ಕೊರೊನಾ ಸೋಂಕಿನ ಆತಂಕ ಕಾಡಲಾರಂಭಿಸಿದೆ. ಸೋಂಕು ದೃಢಪಟ್ಟ ಬೆಂಗಳೂರಿನ ಪೊಲೀಸ್‌ ಕಾನ್‌ಸ್ಟೆಬಲ್‌ ಒಬ್ಬರು (ರೋಗಿ ಸಂಖ್ಯೆ 650) ಪತ್ನಿ ಹಾಗೂ ಮಗಳೊಂದಿಗೆ ಹನೂರು ತಾಲ್ಲೂಕಿನ ಬೆಳತ್ತೂರು ಗ್ರಾಮದಲ್ಲಿರುವ ಅತ್ತೆ ಮನೆಗೆ ಬಂದು ಹೋಗಿರುವುದು ಜಿಲ್ಲೆಯ ಜನರಲ್ಲಿ ಆತಂಕ ಹುಟ್ಟುಹಾಕಿದೆ. 

ವಿಷಯ ಗೊತ್ತಾಗುತ್ತಿದ್ದಂತೆಯೇ ಕಾರ್ಯಪ್ರವೃತ್ತವಾಗಿರುವ  ಜಿಲ್ಲಾಡಳಿತ, ಸೋಮವಾರ ರಾತ್ರಿಯೇ ಸೋಂಕಿತ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ 14 ಜನರು ಹಾಗೂ ಪರೋಕ್ಷವಾಗಿ ಸಂಪರ್ಕಕ್ಕೆ ಬಂದಿರುವ ನಾಲ್ವರನ್ನು ಚಾಮರಾಜನಗರದಲ್ಲಿರುವ ಕ್ವಾರಂಟೈನ್‌ ಕೇಂದ್ರದಲ್ಲಿ ಇರಿಸಿದೆ. ಪರೋಕ್ಷವಾಗಿ ಸಂಪರ್ಕಕ್ಕೆ ಬಂದಿರುವ ಇನ್ನೂ ಏಳು ಮಂದಿಯನ್ನು ಪತ್ತೆ ಹಚ್ಚಿದ್ದು, ಅವರನ್ನೂ ಕ್ವಾರಂಟೈನ್‌ನಲ್ಲಿ ಇರಿಸಲು ಸಿದ್ಧತೆ ನಡೆಸಿದೆ. ಸತ್ತೇಗಾಲ ಚೆಕ್‌ಪೋಸ್ಟ್‌ನಲ್ಲಿ ಸೋಂಕಿತ ವ್ಯಕ್ತಿಯನ್ನು ವಿಚಾರಣೆ ಮಾಡಿದ್ದ ಪೊಲೀಸ್‌ ಸಿಬ್ಬಂದಿಯನ್ನೂ ಕ್ವಾರಂಟೈನ್‌ಗೆ ಕಳುಹಿಸಲು ತೀರ್ಮಾನಿಸಿದೆ.

ಬೆಳತ್ತೂರು ಹಾಗೂ ಸಮೀಪದ ಉದ್ದನೂರು ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಿದ್ದು, ಮನೆಯಲ್ಲೇ ಇರುವಂತೆ ಗ್ರಾಮಸ್ಥರಿಗೆ ತಿಳಿವಳಿಕೆ ನೀಡಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಇಡೀ ಗ್ರಾಮಕ್ಕೆ ಸೋಂಕು ನಿವಾರಕವನ್ನು ಸಿಂಪ‍ಡಿಸಿದೆ. 

‘ಸರ್ಕಾರದ ಶಿಷ್ಟಾಚಾರದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ. ಹನೂರು ತಾಲ್ಲೂಕು ಹಾಗೂ ಜಿಲ್ಲೆಯ ಜನರು ಆತಂಕ, ಭಯ ಪಡೆಬೇಕಾದ ಅಗತ್ಯವಿಲ್ಲ. ಎಲ್ಲರೂ ಸಂಯಮದಿಂದ ಇರಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮನವಿ ಮಾಡಿದ್ದಾರೆ.

ಬೆಂಗಳೂರಿನ ಬೇಗೂರು ಠಾಣೆಯಲ್ಲಿ ಹೆಡ್‌ ಕಾನ್‌ಸ್ಟೆಬಲ್‌ ಆಗಿರುವ ಸೋಂಕಿತ ವ್ಯಕ್ತಿ, ತಮ್ಮ ಗಂಟಲ ದ್ರವವನ್ನು ಪರೀಕ್ಷೆಗಾಗಿ ಕೊಟ್ಟಿದ್ದರು. ಅದರ ವರದಿ ಬರುವ ಮೊದಲೇ ತಮ್ಮ ಪತ್ನಿ ಹಾಗೂ ಎಂಟು ವರ್ಷದ ಮಗಳನ್ನು ಬೆಳತ್ತೂರಿನಲ್ಲಿರುವ ಅತ್ತೆ ಮನೆಯಲ್ಲಿ ಬಿಟ್ಟು ಬರುವ ಉದ್ದೇಶದಿಂದ ಹಿರಿಯ ಅಧಿಕಾರಿಗಳ ಅನುಮತಿಯನ್ನೂ ಪಡೆಯದೇ ಕಾರಿನಲ್ಲಿ ಜಿಲ್ಲೆಗೆ ಬಂದಿದ್ದರು ಎಂದು ಗೊತ್ತಾಗಿದೆ.

ಬೆಂಗಳೂರಿಂದ ಕರೆ: ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ವಿವರಗಳನ್ನು ನೀಡಿದರು. 

‘ಸೋಮವಾರ ಬೆಳಿಗ್ಗೆ 9.15ರ ಸುಮಾರಿಗೆ ಪೊಲೀಸ್‌ ಕಾನ್‌ಸ್ಟೆಬಲ್‌ ಅವರು ಪತ್ನಿ ಹಾಗೂ ಎಂಟು ವರ್ಷದ ಮಗಳೊಂದಿಗೆ ಕಾರಿನಲ್ಲಿ ಸತ್ತೇಗಾಲ ಚೆಕ್‌ಪೋಸ್ಟ್‌ಗೆ ಬರುತ್ತಾರೆ. ಈ ಸಂದರ್ಭದಲ್ಲಿ ಪೊಲೀಸರು ವಿಚಾರಣೆ ಮಾಡಿದ್ದಾರೆ. ಇಲಾಖೆಯ ಗುರುತಿನ ಚೀಟಿ ತೋರಿಸಿದ್ದಾರೆ. ತುಂಬಾ ಪ್ರಯತ್ನದ ನಂತರ ಚೆಕ್‌ಪೋಸ್ಟ್‌ ದಾಟಿದ್ದಾರೆ. ವೈದ್ಯಕೀಯ ಪಾಸ್‌ ಎಂದು ದಾಖಲೆಯಲ್ಲಿ ನಮೂದಾಗಿದೆ’ ಎಂದು ಅವರು ಹೇಳಿದರು.  

‘10.15ರ ಸುಮಾರಿಗೆ ಬೆಳತ್ತೂರಿಗೆ ಅವರು ತಲುಪುತ್ತಾರೆ. ಅತ್ತೆ ಮನೆಯಲ್ಲಿ ಐವರು ಇದ್ದಾರೆ. ಮಧ್ಯಾಹ್ನ ಊಟ ಮಾಡಿದ ನಂತರ ಬೆಂಗಳೂರಿನಿಂದ ಕರೆ ಬಂದಾಗ ಅವರಿಗೆ ಕೋವಿಡ್‌–19 ಇರುವುದು ದೃಢಪಡುತ್ತದೆ. ತಕ್ಷಣವೇ ಪತ್ನಿ ಹಾಗೂ ಮಗಳೊಂದಿಗೆ ಬೆಂಗಳೂರಿಗೆ ವಾಪಸ್‌ ಹೋಗುತ್ತಾರೆ. 4.15 ಸುಮಾರಿಗೆ ಚೆಕ್‌ಪೋಸ್ಟ್‌ ಅನ್ನು ಅವರು ದಾಟಿದ್ದಾರೆ. ವಿಷಯ ಗೊತ್ತಾಗುತ್ತಿದ್ದಂತೆಯೇ ಅವರೊಂದಿಗೆ ನೇರ ಸಂಪರ್ಕಕ್ಕೆ ಬಂದಿದ್ದ ಅವರ ಕುಟುಂಬದ ಸದಸ್ಯರು ಹಾಗೂ ಸಂಬಂಧಿಕರು 14 ಮಂದಿಯನ್ನು ಹಾಗೂ ಸೋಂಕಿತ ವ್ಯಕ್ತಿ ಹೋದ ನಂತರ ಮನೆಗೆ ಬಂದಿದ್ದ ನಾಲ್ವರನ್ನು ಕರೆತಂದು ಚಾಮರಾಜನಗರದ ಅಂಬೇಡ್ಕರ್‌ ಭವನದಲ್ಲಿ ಸ್ಥಾಪಿಸಲಾ
ಗಿರುವ ಕ್ವಾರಂಟೈನ್‌ ಕೇಂದ್ರದಲ್ಲಿ ಇರಿಸಲಾಯಿತು. ಎಲ್ಲರನ್ನೂ ಪ್ರತ್ಯೇಕವಾದ ಕೊಠಡಿಗಳ ವ್ಯವಸ್ಥೆ ಮಾಡಿದೆ’ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. 

ಮುಂದೇನು?: ‘ಕೋವಿಡ್‌–19 ಚಿಕಿತ್ಸೆಗಾಗಿ ಸರ್ಕಾರ ರೂಪಿಸಿರುವ ಶಿಷ್ಟಾಚಾರಗಳನ್ನು ಪಾಲಿಸಲಾಗುತ್ತದೆ. ಎಲ್ಲ 18 ಮಂದಿಯ ಗಂಟಲ ಮಾದರಿ ದ್ರವಗಳನ್ನು ಮೂರು ಬಾರಿ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಮಂಗಳವಾರ ಮಾದರಿಗಳನ್ನು ಸಂಗ್ರಹಿಸಿದ್ದು, ಮೈಸೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. 5ನೇ ದಿನದಲ್ಲಿ ಎರಡನೇ ಬಾರಿ ಹಾಗೂ 14ನೇ ದಿನ ಮೂರನೇ ಬಾರಿ ಕಳುಹಿಸಲಾಗುತ್ತದೆ. 18 ಜನರಲ್ಲಿ ನಾಲ್ವರು 10 ವರ್ಷಕ್ಕಿಂತ ಕೆಳಗಿನವರು ಹಾಗೂ ಮೂವರು 60 ವರ್ಷಕ್ಕಿಂತ ಮೇಲಿನವರು ಇದ್ದಾರೆ. ಇವರಿಗೆ ಸೋಂಕು ತಗಲುವ ಸಾಧ್ಯತೆ ಹೆಚ್ಚಿರುವುದರಿಂದ ಇವರನ್ನು ಆಸ್ಪತ್ರೆಯಲ್ಲಿ ಇರಿಸಿ ಆರೋಗ್ಯದ ಮೇಲೆ ನಿಗಾ ಇಡಲಾಗುವುದು. ಸದ್ಯ ಯಾರಲ್ಲೂ ರೋಗ ಲಕ್ಷಣ ಕಂಡು ಬಂದಿಲ್ಲ’ ಎಂದು ಅವರು ವಿವರಿಸಿದರು.  

ಗ್ರಾಮಗಳಲ್ಲಿ ಕಟ್ಟೆಚ್ಚರ: ‘ಬೆಳತ್ತೂರು ಹಾಗೂ ಉದ್ದನ್ನೂರು ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಿದ್ದೇವೆ.
ಮನೆಯಿಂದ ಅನಗತ್ಯವಾಗಿ ಹೊರಗಡೆ ಬರಬೇಡಿ ಎಂದು ಎಲ್ಲರಿಗೂ ತಿಳಿಸಿದ್ದೇವೆ. ಗ್ರಾಮದಲ್ಲಿ ಮೂರು ಅಂಗಡಿಗಳಿದ್ದು, ಮುಚ್ಚುವಂತೆ ತಿಳಿಸಿದ್ದೇವೆ. ಗ್ರಾಮವನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಂಡಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. 

5 ಗಂಟೆಯಲ್ಲಿ ನಡೆದಿದ್ದೇನು?

ಕೋವಿಡ್‌ ಸೋಂಕಿತ ವ್ಯಕ್ತಿ ಬೆಳ್ಳತ್ತೂರಿನ ಮನೆಯಲ್ಲಿ ಇದ್ದುದು ಐದೇ ಗಂಟೆ. ಬೆಂಗಳೂರಿನಲ್ಲಿ ಪೊಲೀಸ್‌ ಸಿಬ್ಬಂದಿಯನ್ನು ತಪಾಸಣೆ ಮಾಡುವ ಸಂದರ್ಭದಲ್ಲಿ ಪರೀಕ್ಷೆಗಾಗಿ ಗಂಟಲ ದ್ರವ ಕೊಟ್ಟಿದ್ದರು. ವರದಿ ಬಂದಿರಲಿಲ್ಲ. ಇಲ್ಲಿಗೆ ಬರುವಾಗ ಸೋಂಕು ಇರುವುದು ಅವರಿಗೆ ಗೊತ್ತಿರಲಿಲ್ಲ. 

‘ಐದು ಗಂಟೆಗಳ ಅವಧಿಯಲ್ಲಿ ಅವರು ಹೆಚ್ಚು ಎಲ್ಲೂ ಸುತ್ತಾಡಿಲ್ಲ. ಅತ್ತೆ ಮನೆಯ ಎದುರಿಗೆ ಇರುವ ಸಂಬಂಧಿಕರ ಮನೆಗೆ ಹೋಗಿದ್ದಾರೆ. ಆ ಮನೆಯ 9 ತಿಂಗಳ ಮಗುವಿನೊಂದಿಗೆ ಕಾಲ ಕಳೆದಿದ್ದಾರೆ. ಇವರು ಬಂದಿರುವುದನ್ನು ಕಂಡು ಹಿಂದಿನ ಮನೆಯವರು ಬಂದಿದ್ದಾರೆ. ಮಧ್ಯಾಹ್ನ ಬೆಂಗಳೂರಿನಿಂದ ಕರೆ ಬಂದು ವಿಷಯ ಗೊತ್ತಾಗುತ್ತಿದ್ದಂತೆಯೇ ಗಡಿಬಿಡಿಯಲ್ಲಿ ಪತ್ನಿ ಹಾಗೂ ಮಗಳನ್ನು ಕರೆದುಕೊಂಡು ವಾಪಸ್‌ ಹೋಗಿದ್ದಾರೆ’ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು. 

‘ಅವರು ಪೆಟ್ರೋಲ್‌ ಬಂಕ್‌ ಹಾಗೂ ಮದ್ಯದದಂಗಡಿಗೆ ಹೋಗಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಅವರು ಇದುವರೆಗೆ ರಜಾದಲ್ಲಿದ್ದರು ಎಂದು ಗೊತ್ತಾಗಿದೆ. ರಜೆ ಮುಗಿಯುತ್ತಾ ಬಂದಿದ್ದರಿಂದ ಹೆಂಡತಿ ಹಾಗೂ ಮಗಳನ್ನು ಬೆಳತ್ತೂರಿನಲ್ಲಿ ಬಿಟ್ಟು ಹೋಗುವ ಉದ್ದೇಶವನ್ನು ಹೊಂದಿದ್ದರು ಎಂಬ ಮಾಹಿತಿ ಸಿಕ್ಕಿದೆ. ಬೆಂಗಳೂರಿನಲ್ಲಿ ಅವರಿಗೆ ಹೇಗೆ ಸೋಂಕು ತಗುಲಿತು ಎಂಬುದು ಗೊತ್ತಾಗಿಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಕ್ರಮಕ್ಕೆ ಪತ್ರ: ‘ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಿದ್ದರೂ, ವರದಿ ಬರುವುದಕ್ಕೆ ಮುಂಚಿತವಾಗಿ ಕಾನ್‌ಸ್ಟೆಬಲ್‌ ಅವರು  ಮೇಲಾಧಿಕಾರಿಗಳಿಗೆ ತಿಳಿಸಿದೆ ಬಂದಿದ್ದಾರೆ. ಇದು ಅಕ್ಷಮ್ಯ ನಡವಳಿಕೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್‌ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದೇನೆ’ ಎಂದರು.

ಚೆಕ್‌ಪೋಸ್ಟ್‌ ಸಿಬ್ಬಂದಿಯ ಲೋಪ

ಸರಿಯಾದ ದಾಖಲೆಗಳಿಲ್ಲದಿದ್ದರೂ ಚೆಕ್‌ಪೋಸ್ಟ್‌ನಲ್ಲಿ ಅವರನ್ನು ಬಿಡಲಾಗಿದೆ. ಇದರಲ್ಲಿ ಸಿಬ್ಬಂದಿಯ ಲೋಪ ಕಂಡು ಬರುತ್ತಿದೆ. ಎರಡು ಪಾಳಿಯಲ್ಲಿ 14 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಾಲ್ಕೈದು ಜನ ಅವರೊಂದಿಗೆ ನೇರ ಸಂಪರ್ಕಕ್ಕೆ ಬಂದಿದ್ದಾರೆ. ಅವರ ಆರೋಗ್ಯದ ಬಗ್ಗೆ ನಾವು ಈಗ ಕಾಳಜಿ ಮಾಡುತ್ತಿದ್ದೇವೆ. ಅವರನ್ನು ಕ್ವಾರಂಟೈನ್‌ ಮಾಡಬೇಕಾಗಿದೆ’ ಎಂದು ಡಾ.ಎಂ.ಆರ್.ರವಿ ಹೇಳಿದರು. 

ಚೆಕ್‌ಪೋಸ್ಟ್‌ ಇನ್ನಷ್ಟು ಬಿಗಿ: ಜಿಲ್ಲೆಯ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆಯನ್ನು ಇನ್ನಷ್ಟು ಬಿಗಿಗೊಳಿಸಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ಅವರು ಹೇಳಿದರು. 

‘ಸದ್ಯಕ್ಕೆ ನೇರ ಸಂಪರ್ಕಕ್ಕೆ ಬಂದಿರುವ ಸಿಬ್ಬಂದಿಯನ್ನು ಕ್ವಾರಂಟೈನ್‌ ಮಾಡುತ್ತೇವೆ. ಚೆಕ್‌ಪೋಸ್ಟ್‌ನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ಎಲ್ಲವನ್ನೂ ಕೂಲಕಂಷ ಪರಿ‌ಶೀಲನೆಗೆ ಒಳಪಡಿಸಲಾಗುವುದು’ ಎಂದು ಅವರು ಹೇಳಿದರು. 

–––

ಗಾಬರಿ ಪಡೆಯುವಂತಹದ್ದೇನೂ ಇಲ್ಲ. ಜಿಲ್ಲಾಡಳಿತ ಎಲ್ಲ ಮುನ್ನೆಚ್ಚರಿಕೆಯ ಕ್ರಮ ಕೈಗೊಂಡಿದೆ. ಜಿಲ್ಲೆಯ ಜನರು ವದಂತಿಗಳಿಗೆ ಕಿವಿ ಕೊಡಬಾರದು
ಡಾ.ಎಂ.ಆರ್‌.ರವಿ, ಜಿಲ್ಲಾಧಿಕಾರಿ 

––––

ಜಿಲ್ಲೆಯನ್ನು ಹಸಿರು ವಲಯವಾಗಿಯೇ ಉಳಿಸಿಕೊಳ್ಳಬೇಕಿದೆ. ಪರವೂರಿನಿಂದ ಬಂದವರು, ಅನುಮಾನಸ್ಪದ ವ್ಯಕ್ತಿಗಳ ಬಗ್ಗೆ ತಕ್ಷಣ ಮಾಹಿತಿ ನೀಡಬೇಕು
ಎಚ್‌.ಡಿ.ಆನಂದಕುಮಾರ್‌, ಎಸ್‌ಪಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು