ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಥಮ ಪಿಯುಗೆ ಕಾಡಲಿದೆ ಕೊಠಡಿಗಳ ಕೊರತೆ

ಕಾಲೇಜುಗಳಲ್ಲಿ ಹೆಚ್ಚಿದ ಹಾಜರಾತಿ, ತರಗತಿಯಲ್ಲಿ 15ರಿಂದ 20 ವಿದ್ಯಾರ್ಥಿಗಳಿಗೆ ಅವಕಾಶ
Last Updated 8 ಜನವರಿ 2021, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಜನವರಿ 1ರಿಂದ ಶೈಕ್ಷಣಿಕ ವರ್ಷ ಆರಂಭವಾದ ಬಳಿಕ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ದ್ವಿತೀಯ ಪಿಯು ವಿದ್ಯಾರ್ಥಿಗಳ ಹಾಜರಾತಿ ದಿನೇ ದಿನೇ ಹೆಚ್ಚುತ್ತಿದೆ.

ಇತ್ತ, ರಾಜ್ಯ ಸರ್ಕಾರ ಇದೇ 15ರಿಂದ ಪ್ರಥಮ ಪಿಯುಸಿ ತರಗತಿಗಳನ್ನು ಆರಂಭಿಸಲು ಯೋಚಿಸುತ್ತಿದ್ದು, ತರಗತಿಗಳು ಶುರುವಾದರೆ ವಿಧ್ಯಾರ್ಥಿಗಳಿಗೆ ಕೊಠಡಿಗಳ ಕೊರತೆ ಎದುರಾಗಲಿದೆ.

ಸದ್ಯ ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ದ್ವಿತೀಯ ಪಿಯುಸಿ ತರಗತಿಗಳನ್ನು ನಡೆಸಲಾಗುತ್ತಿದೆ. ಒಂದು ಕೊಠಡಿಯಲ್ಲಿ 15ರಿಂದ 20 ವಿದ್ಯಾರ್ಥಿಗಳನ್ನು ಮಾತ್ರ ಕೂರಿಸಲಾಗುತ್ತಿದೆ. ಒಂದು ಡೆಸ್ಕ್‌ನಲ್ಲಿ ಇಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಈಗಾಗಲೇ, ಪ್ರಥಮ ಪಿಯುಸಿ ತರಗತಿಗಳಿಗೆ ಮೀಸಲಾಗಿರುವ ಕೊಠಡಿಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಇದೇ 15ರಿಂದ ಮೊದಲ ವರ್ಷದ ವಿದ್ಯಾರ್ಥಿಗಳಿಗೂ ತರಗತಿಗಳು ಆರಂಭಗೊಂಡರೆ ಕೊಠಡಿಗಳ ಕೊರತೆ ಉಂಟಾಗಲಿದೆ. ಇದಕ್ಕಾಗಿ ಪರ್ಯಾಯ ದಾರಿ ಕಂಡುಕೊಳ್ಳಬೇಕಾಗಿದೆ ಎಂದು ಹೇಳುತ್ತಾರೆಪಿಯು ಶಿಕ್ಷಣ ಇಲಾಖೆ ಅಧಿಕಾರಿಗಳು.

ಕಾಲೇಜುಗಳ ಪಕ್ಕದಲ್ಲೇ ಇರುವ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಕೊಠಡಿಗಳನ್ನು ಬಳಸಿಕೊಳ್ಳುವ ಬಗ್ಗೆ ಉನ್ನತ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ ಎಂದು ಹೇಳುತ್ತಾರೆ ಅವರು.

‘ಸದ್ಯ ಒಂದು ತರಗತಿಯಲ್ಲಿ 20ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಕೂರಿಸುತ್ತಿಲ್ಲ. ಹಾಗಾಗಿ, ಹೆಚ್ಚು ಕೊಠಡಿಗಳ ಅಗತ್ಯವಿದೆ. ಪ್ರಥಮ ಪಿಯು ಆರಂಭದ ಬಗ್ಗೆ ಇಲಾಖೆಯಿಂದ ಇದುವರೆಗೆ ಸೂಚನೆ ಬಂದಿಲ್ಲ. ಒಂದು ವೇಳೆ ಆರಂಭಗೊಂಡರೆ ಹೆಚ್ಚುವರಿ ಕೊಠಡಿಗಳು ಬೇಕಾಗುತ್ತವೆ’ ಎಂದು ಪಿಯು ಇಲಾಖೆ ಉಪನಿರ್ದೇಶಕ ಡಿ.ಎಸ್‌.ಕೃಷ್ಣಮೂರ್ತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಶೇ 79ರಷ್ಟು ಹಾಜರಾತಿ: ಈ ಮಧ್ಯೆ, ಕಾಲೇಜುಗಳು ಆರಂಭಗೊಂಡು ಒಂದು ವಾರದ ಅವಧಿಯಲ್ಲಿ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಗಣನೀಯ ಏರಿಕೆ ಕಂಡು ಬಂದಿದ್ದು, ಶುಕ್ರವಾರ ಶೇ 79ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ.

ಜಿಲ್ಲೆಯ 61 ಪಿಯು ಕಾಲೇಜುಗಳಲ್ಲಿ 6,118 ವಿದ್ಯಾರ್ಥಿಗಳು ದ್ವಿತೀಯ ಪಿಯುಗೆ ದಾಖಲಾದ್ದಾರೆ. ಕಾಲೇಜು ಆರಂಭದ ದಿನ ಹಾಜರಾತಿ ಪ್ರಮಾಣ ಶೇ 24ರಷ್ಟಿತ್ತು. ನಂತರದ ದಿನಗಳಲ್ಲಿ ತರಗತಿಗಳಿಗೆ ಹಾಜರಾಗುವವರ ಸಂಖ್ಯೆ ಹೆಚ್ಚಿದ್ದು, ಶುಕ್ರವಾರ 4,847 ವಿದ್ಯಾರ್ಥಿಗಳು ಕಾಲೇಜಿಗೆ ಬಂದು ಪಾಠ ಕೇಳಿದ್ದಾರೆ.

ಸರ್ಕಾರಿ ಕಾಲೇಜುಗಳಲ್ಲಿ 2,224 ಮಂದಿ, ಅನುದಾನಿತ ಕಾಲೇಜುಗಳಲ್ಲಿ 529 ಹಾಗೂ ಖಾಸಗಿ ಪಿಯು ಕಾಲೇಜುಗಳಲ್ಲಿ 2,094 ವಿದ್ಯಾರ್ಥಿಗಳು ಹಾಜರಾಗಿದ್ದಾರೆ.

‘ಮೊದಲ ಎರಡು ದಿನಗಳ ಕಾಲ ವಿದ್ಯಾರ್ಥಿಗಳು ಕಡಿಮೆ ಸಂಖ್ಯೆಯಲ್ಲಿದ್ದರು. ಆ ಬಳಿಕ ಹಾಜರಾತಿ ಚೇತರಿಸಿಕೊಂಡಿದೆ. ಶುಕ್ರವಾರ ಇದು ಶೇ 79ಕ್ಕೆ ತಲುಪಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ’ ಎಂದು ಕೃಷ್ಣಮೂರ್ತಿ ಅವರು ಹೇಳಿದರು.

‘ಇನ್ನೂ ಎಲ್ಲ ಹಾಸ್ಟೆಲ್‌ಗಳು ಆರಂಭವಾಗಿಲ್ಲ. ಬಸ್‌ ಪಾಸ್‌ ವ್ಯವಸ್ಥೆ ಆಗಿಲ್ಲ. ಈ ಕಾರಣಗಳಿಂದ ಎಲ್ಲ ವಿದ್ಯಾರ್ಥಿಗಳು ಹಾಜರಾಗುತ್ತಿಲ್ಲ’ ಎಂದು ಅವರು ಮಾಹಿತಿ ನೀಡಿದರು.

ಒಬ್ಬ ವಿದ್ಯಾರ್ಥಿನಿಗೆ ಸೋಂಕು

ಈ ಮಧ್ಯೆ, ಕಾಲೇಜುಗಳು ಆರಂಭಗೊಂಡ ನಂತರ ಜಿಲ್ಲೆಯಲ್ಲಿ ಈವರೆಗೆ ಒಬ್ಬ ವಿದ್ಯಾರ್ಥಿನಿಗೆ ಕೋವಿಡ್‌ ಇರುವುದು ದೃಢಪಟ್ಟಿದೆ. ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಆಕೆ ಈಗ ಹೋಂ ಐಸೊಲೇಷನ್‌ನಲ್ಲಿದ್ದಾರೆ.

‘ಜನವರಿ 1ರಂದು ಕಾಲೇಜು ಆರಂಭಗೊಂಡ ಎರಡು ದಿನಗಳ ನಂತರ ಚಾಮರಾಜನಗರ ತಾಲ್ಲೂಕಿನ ಕಾಲೇ‌ಜೊಂದರ ವಿದ್ಯಾರ್ಥಿನಿಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಕೆಮ್ಮುತ್ತಿದ್ದ ಆಕೆಗೆ ಪರೀಕ್ಷೆ ಮಾಡಿದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ. ವಿದ್ಯಾರ್ಥಿನಿಯ ಜೊತೆಗಿದ್ದವರ ಕೋವಿಡ್‌ ಪರೀಕ್ಷೆ ಮಾಡಲಾಗಿದ್ದು, ಎಲ್ಲರ ವರದಿ ನೆಗೆಟಿವ್‌ ಬಂದಿವೆ. ಅವರು ಕೂಡ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ’ ಎಂದು ಕೃಷ್ಣಮೂರ್ತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT