ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ವರ್ಷದಲ್ಲಿ 88 ಅಂತರಜಾತಿ ವಿವಾಹ

ನಗರ ಪ್ರದೇಶಗಳಲ್ಲೇ ಹೆಚ್ಚು, ಸಮಾಜ ಕಲ್ಯಾಣ ಇಲಾಖೆಯಿಂದ ₹ 60.10 ಲಕ್ಷ ಪ್ರೋತ್ಸಾಹಧನ
Last Updated 24 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಚಾಮರಾಜನಗರ: ಸಮಾಜ ದಲ್ಲಿರುವ ಅಸ್ಪೃಶ್ಯತೆ ನಿರ್ಮೂಲನೆ ಉದ್ದೇಶದಿಂದ ರಾಜ್ಯ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ಮೂಲಕ ಜಾರಿಗೆ ತಂದಿರುವ ಅಂತರಜಾತಿ ವಿವಾಹ ಯೋಜನೆ‌ ಅಡಿಯಲ್ಲಿ ಜಿಲ್ಲೆಯಾದ್ಯಂತ ಮೂರು ವರ್ಷಗಳಲ್ಲಿ 88 ಜೋಡಿಗಳು ಪ್ರೋತ್ಸಾಹಧನ ಪಡೆದಿವೆ.

ಯೋಜನೆಯ ಅನ್ವಯ, ಪರಿಶಿಷ್ಟ ಜಾತಿಯ ಪುರುಷರು ಬೇರೆ ಜಾತಿಯ ಹೆಣ್ಣುಮಕ್ಕಳನ್ನು ಮದುವೆಯಾದರೆ ₹ 2 ಲಕ್ಷ ಹಾಗೂ ಪರಿಶಿಷ್ಟ ಸಮುದಾಯ ಹೆಣ್ಣುಮಕ್ಕಳನ್ನು ಇತರೆ ಜಾತಿಯ ಪುರುಷರು ಮದುವೆಯಾದರೆ ₹ 3 ಲಕ್ಷ‌ಪ್ರೋತ್ಸಾಹಧನವನ್ನು ನೀಡಲಾಗುತ್ತದೆ.

2017–18ನೇ ಸಾಲಿನಿಂದ ಇಲ್ಲಿವರೆಗೆ 88 ಜೋಡಿಗಳು ಅಂತರಜಾತಿ ವಿವಾಹವಾಗಿದ್ದು, ಇಲಾಖೆ ₹ 60.10 ಲಕ್ಷ ಮೊತ್ತವನ್ನು ಪ್ರೋತ್ಸಾಹಧನವನ್ನಾಗಿ ನೀಡಿದೆ.

ಪರಿಷ್ಕರಣೆ: ಅಂತರಜಾತಿ ವಿವಾಹ ಯೋಜನೆಯು ಹಲವು ವರ್ಷಗಳ ಹಿಂದಿನಿಂದಲೇ ಜಾರಿಯಲ್ಲಿದ್ದರೂ ಪ್ರೋತ್ಸಾಹಧನವನ್ನು 2014 ಮತ್ತು 2016ರಲ್ಲಿ ಪರಿಷ್ಕರಿಸಲಾಗಿತ್ತು.

2014ರ ವರೆಗೂ ಪರಿಶಿಷ್ಟ ಜಾತಿಯ ಹೆಣ್ಣುಮಕ್ಕಳನ್ನು ಇತರ ಜಾತಿಯ ಪುರುಷರು ಮದುವೆಯಾದರೆ ₹ 50 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತಿತ್ತು. ನಂತರ ಇದನ್ನು ₹ 1 ಲಕ್ಷಕ್ಕೆ ಹೆಚ್ಚಿಸಲಾಗಿತ್ತು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ 2015–16ನೇ ಸಾಲಿನ ಬಜೆಟ್‌ನಲ್ಲಿ ಈ ಮೊತ್ತವನ್ನು ₹ 1 ಲಕ್ಷದಿಂದ ₹ 3 ಲಕ್ಷಕ್ಕೆ ಹಾಗೂ ಪರಿಶಿಷ್ಟ ಜಾತಿಯ ಪುರುಷರು ಬೇರೆ ಜಾತಿಯ ಹೆಣ್ಣುಮಕ್ಕಳನ್ನು ಮದುವೆಯಾದರೆ ನೀಡಲಾಗುತ್ತಿದ್ದ ಪ್ರೋತ್ಸಾಹಧನವನ್ನು ₹ 50 ಸಾವಿರದಿಂದ ₹ 2 ಲಕ್ಷಕ್ಕೆ ಹೆಚ್ಚಿಸುವುದಾಗಿ ಘೋಷಿಸಿತ್ತು.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಲಭ್ಯವಿರುವ ಅಂಕಿಅಂಶಗಳ ಪ್ರಕಾರ, 2017–18ರಲ್ಲಿ 39 ಜೋಡಿಗಳು, 2018–19ರಲ್ಲಿ 29 ಹಾಗೂ 2019–20ರಲ್ಲಿ ನವೆಂಬರ್‌ವರೆಗೆ 20 ಜೋಡಿಗಳು ಯೋಜನೆಯ ಅಡಿಯಲ್ಲಿ ಪ್ರೋತ್ಸಾಹಧನ ಪಡೆದಿವೆ.

ಚಾಮರಾಜನಗರದಲ್ಲಿ ಹೆಚ್ಚು: ಮೂರು ವರ್ಷಗಳ ಅಂಕಿಅಂಶಗಳನ್ನು ಗಮನಿಸಿದರೆ, ಚಾಮರಾಜನಗರ ತಾಲ್ಲೂಕಿನಲ್ಲಿ ಹೆಚ್ಚು. ಅಂದರೆ 39 ಅಂತರಜಾತಿ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿವೆ. ಕೊಳ್ಳೇಗಾಲ ಎರಡನೇ ಸ್ಥಾನದಲ್ಲಿದೆ. ಒಟ್ಟು 30 ಜೋಡಿಗಳು ಮದುವೆಯಾಗಿವೆ. ಮೂರು ವರ್ಷಗಳಲ್ಲಿ ಯಳಂದೂರಿನಲ್ಲಿ ಎರಡು ಜೋಡಿಗಳು ಮಾತ್ರ ಯೋಜನೆಯ ಫಲವನ್ನು ಪಡೆದಿವೆ.

ನಗರಪ್ರದೇಶಗಳಲ್ಲಿ ಜಾಗೃತಿ: ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಯೋಜನೆಯ ಬಗ್ಗೆ ಜಾಗೃತಿ ಇದ್ದ ಹಾಗೆ ಕಾಣಿಸುತ್ತದೆ. ಪ್ರೋತ್ಸಾಹಧನ ಪಡೆದವರಲ್ಲಿ ನಗರ ಪ್ರದೇಶಕ್ಕೆ ಸೇರಿದ ದಂಪತಿಯೇ ಹೆಚ್ಚು.

‘ಅಸ್ಪೃಶ್ಯತೆ ನಿರ್ಮೂಲನೆ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅಂತರಜಾತಿ ವಿವಾಹ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿಲ್ಲ. ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸುವವರಲ್ಲಿ ಬಹುತೇಕ ಮಂದಿ ನಗರ ಪ್ರದೇಶದವರು’ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮುನಿರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇತ್ತೀಚಿನ ದಿನಗಳಲ್ಲಿ ಅಂತರಜಾತಿ ವಿವಾಹದ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡುತ್ತಿದೆ. ಪರಿಶಿಷ್ಟ ಜಾತಿಯ ಹೆಣ್ಣುಮಕ್ಕಳಾಗಲಿ ಅಥವಾ ಪುರುಷರಾಗಲಿ ಪ್ರೋತ್ಸಾಹಧನ ಸಿಗುತ್ತದೆ ಎಂದು ಅಂತರಜಾತಿ ವಿವಾಹವಾಗುತ್ತಿಲ್ಲ. ಬಹುತೇಕರು ಮದುವೆಯಾದ ನಂತರವೇ ಅರ್ಜಿ ಸಲ್ಲಿಸುತ್ತಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ಒಳಪಂಗಡಗಳ ನಡುವೆ ನಡೆಯದ ವಿವಾಹ

ಪರಿಶಿಷ್ಟ ಜಾತಿ ಸಮುದಾಯದಲ್ಲಿ ಬರುವ 101 ಒಳಪಂಗಡಗಳೊಳಗೆ ಅಂತರಜಾತಿ ವಿವಾಹವಾದಲ್ಲಿ ಸಮಾಜ ಕಲ್ಯಾಣ ಇಲಾಖೆ ₹ 2 ಲಕ್ಷ ಸಹಾಯಧನ ಕೊಡುತ್ತದೆ. 2017ರ ಬಜೆಟ್‌ನಲ್ಲಿ ಇದನ್ನು ಘೋಷಿಸಲಾಗಿತ್ತು.

ಜಿಲ್ಲೆಯಲ್ಲಿ ಇದುವರೆಗೆ ಈ ಯೋಜನೆ ಅಡಿಯಲ್ಲಿ ಮದುವೆ ನಡೆದಿಲ್ಲ. 2018–19ನೇ ಸಾಲಿನಲ್ಲಿ ಚಾಮರಾಜನಗರ ತಾಲ್ಲೂಕಿನಲ್ಲಿ ಎರಡು ಪ್ರಸ್ತಾವನೆಗಳು ಮಾತ್ರ ಬಂದಿದ್ದು, ಮಂಜೂರಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ವಿಧವಾ ಮರುವಿವಾಹ: 1 ಪ್ರಕರಣ

ಪರಿಶಿಷ್ಟ ಜಾತಿಗೆ ಸೇರಿದ ವಿಧವೆಯರು ಮರುವಿವಾಹವಾದರೆ ಅವರಿಗೆ ₹ 3 ಲಕ್ಷದವರೆಗೆ ಪ್ರೋತ್ಸಾಹಧನ ನೀಡುವ ಯೋಜನೆಯನ್ನೂ ಇಲಾಖೆ ಜಾರಿಗೆ ತಂದಿದೆ. 2017ರ ಬಜೆಟ್‌ನಲ್ಲಿ ಈ ಯೋಜನೆಯನ್ನೂ ಘೋಷಿಸಲಾಗಿತ್ತು.

ಇದುವರೆಗೆ ಜಿಲ್ಲೆಯಲ್ಲಿ ಮೂರು ಅರ್ಜಿಗಳು ಬಂದಿವೆ. ಒಂದು ಅರ್ಜಿಯನ್ನು ವಿಲೇವಾರಿ ಮಾಡಲಾಗಿದ್ದು, ₹ 3 ಲಕ್ಷ ಹಣ ಮಂಜೂರು ಮಾಡಲಾಗಿದೆ.

‘ಈ ಯೋಜನೆಯನ್ನು ದುರ್ಬಳಕೆ ಮಾಡಿದ ಪ್ರಕರಣ ಮೈಸೂರಿನಲ್ಲಿ ವರದಿಯಾದ ನಂತರ ಇಲಾಖೆಯು ಫಲಾನುಭವಿಗಳ ಆಯ್ಕೆಯನ್ನು ಮಾಡುವಾಗ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದು, ಉಪನಿರ್ದೇಶಕರೇ ಅರ್ಜಿದಾರರ ಮನೆಗೆ ಭೇಟಿ ನೀಡಿ ವಸ್ತುಸ್ಥಿತಿ ತಿಳಿಸುವಂತೆ ಸೂಚಿಸಿದೆ. ಬಾಕಿ ಉಳಿದಿರುವ ಎರಡು ಅರ್ಜಿಗಳು ಪರಿಶೀಲನೆಯಲ್ಲಿವೆ’ ಎಂದು ಮುನಿರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT